ಐಎಫ್‌ಎಸ್ ಅಧಿಕಾರಿ ಶಾಶ್ವತಿ ಮಿಶ್ರ ಮಾದರಿ ಆದೇಶ; ಎಷ್ಟೇ ಒತ್ತಡ ಬಂದರೂ ಮೈಸೂರಲ್ಲಿ ಪ್ರಮುಖ ರಸ್ತೆಯ ಮರ ಕಡಿಯಲು ಅವಕಾಶ ನೀಡಲಿಲ್ಲ
ಮೈಸೂರಿನಲ್ಲಿ ಕ್ಷಣ ಮಾತ್ರದಲ್ಲಿ ಭಾರೀ ಪ್ರಮಾಣದ ಮರಗಳನ್ನು ರಸ್ತೆಗಾಗಿ ಉರುಳಿಸಲಾಯಿತು. ಈ ವೇಳೆ ಒಂದೂವರೆ ದಶಕದ ಹಿಂದೆ ಇಂತಹುದ್ದೇ ಸನ್ನಿವೇಶ ಎದುರಾದಾಗ ಆಗ ಡಿಸಿಎಫ್ ಆಗಿದ್ದ ಶಾಶ್ವತಿ ಮಿಶ್ರ ಅವರು ನಡೆದುಕೊಂಡ ರೀತಿ, ನೀಡಿದ ತೀರ್ಪು ಒಬ್ಬ ಅಧಿಕಾರಿಯ ಬದ್ದತೆ ತೋರುತ್ತದೆ.

ಇದು ಹದಿನೈದು ವರ್ಷದ ಹಿಂದೆ ಮೈಸೂರಿನಲ್ಲಿ ಮರ ಕಡಿತ ಯತ್ನದ ಘಟನೆ. ಆಗ ಮೈಸೂರು ಮೇಯರ್ ಆಗಿದ್ದವರು ಸಂದೇಶ್ ಸ್ವಾಮಿ. ಮೈಸೂರಿನ ಕಾರಂಜಿಕೆರೆ, ಆಡಳಿತಾತ್ಮಕ ತರಬೇತಿ ಸಂಸ್ಥೆ ದಾಟಿಕೊಂಡು ಚಾಮುಂಡಿಬೆಟ್ಟಕ್ಕೆ ಹೋಗುವ ಹಾಗೂ ಕುರುಬಾರಹಳ್ಳಿಯ ಲಲಿತಮಹಲ್ ಹೊಟೇಲ್ ಗೇಟ್ ವರೆಗೆ ರಸ್ತೆ ಅಗಲೀಕರಣ ಮಾಡುವ ಪ್ರಸ್ತಾಪ ಬಂದಿತ್ತು. ಅದಕ್ಕಾಗಿ ಎಟಿಐ ಎದುರಿನ ಹತ್ತಾರು ಮರಗಳನ್ನು ಕಡಿದು ರಸ್ತೆ ಅಗಲೀಕರಣ ಮಾಡಲು ಸೂಚಿಸಲಾಯಿತು. ಆಗ ಮೈಸೂರು ವಿಭಾಗದ ಡಿಸಿಎಫ್ ಆಗಿದ್ದವರು ದಕ್ಷ ಹಾಗೂ ಪ್ರಾಮಾಣಿಕ ಐಎಫ್‌ಎಸ್ ಅಧಿಕಾರಿ ಶಾಶ್ವತಿ ಮಿಶ್ರ( Saswati Mishra). ಅರಣ್ಯ ಇಲಾಖೆಗೆ ಅನುಮತಿ ನೀಡುವಂತೆ ಪತ್ರ ಹೋಯಿತು. ಅವರು ಅನುಮತಿ ಕೊಡಲಿಲ್ಲ. ಭಾರೀ ಒತ್ತಡ ಬಂದಿತು. ಈ ರಸ್ತೆಯಲ್ಲಿ ಸಂಚರಿಸುವ ಮರಳು ಲಾರಿಗಳಿಂದ ಭಾರೀ ಅಪಘಾತಗಳು ಆಗುತ್ತಿವೆ. ಅಪಘಾತ ತಪ್ಪಿಸಲು ರಸ್ತೆ ಅಗಲೀಕರಣ ಮಾಡಿ.ಮರ ಕಡಿದು ಹಾಕಿ ಎಂದು ಹಲವರು ಒತ್ತಾಯಿಸಿದರು. ಇದಕ್ಕೆ ಶಾಶ್ವತಿ ಮಿಶ್ರ ಅವರು ಸುತಾರಾಂ ಒಪ್ಪಲಿಲ್ಲ. ಕೊನೆಗೆ ಒತ್ತಡ ಹೆಚ್ಚಾದಾಗ ಮೈಸೂರಿನ ಲಲಿತಮಹಲ್ ಹೊಟೇಲ್ ಗೇಟ್ ಬಳಿ ಸಾರ್ವಜನಿಕ ಅಹವಾಲು ಸಭೆ ಮಾಡಿದರು. ಜನರ ಅಹವಾಲು ಆಲಿಸಿದರು. ಪರ, ವಿರೋಧ ಎರಡೂ ಅಭಿಪ್ರಾಯ ಬಂದವು. ಅಲ್ಲಿಯೇ ತೀರ್ಪು ಬರೆದು ಪ್ರಕಟಿಸಿ ಮರ ಕಡಿಯುವುದಿಲ್ಲ. ಬೇಕಾದರೆ ಮರಳು ಲಾರಿ ಮಾರ್ಗ ಬದಲಿಸಿ. ಇದು ಹೆರಿಟೇಜ್ ರಸ್ತೆ. ಮರಗಳೂ ಕೂಡ ಭಾರಿ ಮಹತ್ವ ಹೊಂದಿವೆ. ಈ ರಸ್ತೆಯನ್ನು ಮರಗಳ ಸಹಿತ ಯಥಾರೀತಿಯಾಗಿ ಉಳಿಸಿ ಎಂದು ಅಭಿಪ್ರಾಯ ದಾಖಲಿಸಿದರು. ಕೊನೆಗೆ ಆ ರಸ್ತೆ ಹಾಗೇಯೇ ಉಳಿಯಿತು. ಮೈಸೂರು ನಗರ ಪಾಲಿಕೆಯವರು ರಸ್ತೆಯನ್ನು ಯಥಾರೀತಿಯಾಗಿ ಉಳಿಸಿ ಸೈಕಲ್ ಟ್ರಾಕ್ ಕೂಡ ಮಾಡಿದರು. ಜನ ಈಗಲೂ ಈ ರಸ್ತೆಯಲ್ಲಿ ಮರದ ನೆರಳಿನಲ್ಲಿ ಸಂಚರಿಸುತ್ತಾರೆ. ಮರಗಳು ಈಗಲು ಇಲ್ಲಿ ನೆರಳು ಕೊಡುತ್ತಿವೆ. ಮರಳು ವಾಹನಗಳೂ ಇಲ್ಲಿ ಬರೋಲ್ಲ. ಒಬ್ಬ ಅಧಿಕಾರಿ ಮನಸು ಮಾಡಿದರೆ ಏನು ಮಾಡಬಹುದು ಎನ್ನುವುದಕ್ಕೆ ಇದಕ್ಕಿಂತ ಉದಾಹರಣೆ ಬೇಕಿಲ್ಲ. ಅವರ ಹೆಸರು ಮೈಸೂರಿನಿಂದ ಶಾಶ್ವತವಾಗಿಯೇ ಉಳಿದಿದೆ. ಮರ ಕಡಿಯುವ ಬೇಡಿಕೆ ಹೆಚ್ಚಿದಾಗ ಆಗಲೂ ಮೈಸೂರಿನಲ್ಲಿ ಪರಿಸರವಾದಿಗಳ ಹೋರಾಟ ಆಗಲೂ ಪ್ರಬಲವಾಗಿತ್ತು.
ಮೈಸೂರಿನಲ್ಲಿ ಹೇಳದೇ ಕೇಳದೇ ಮೂರು ದಿನದ ಹಿಂದೆ ಭಾರೀ ಗಾತ್ರದ ಮರಗಳನ್ನು ಕಡಿದು ಹಾಕಲಾಗಿದೆ. ಅದೂ ಮೈಸೂರಿನ ಅತ್ಯಂತ ಹಳೆಯ ರಸ್ತೆಯಾದ ಎಸ್ಪಿ ಕಚೇರಿ ಸಮೀಪದ ರಸ್ತೆಯಲ್ಲಿ ಬೆಳೆದು ನಿಂತಿದ್ದ ಮರಗಳು ನೆಲಕ್ಕೆ ಉರುಳಿವೆ. ಮೈಸೂರು ಮಹಾನಗರ ಪಾಲಿಕೆ ಅನುಮತಿ ಕೇಳಿದ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಮರ ತೆರವುಗೊಳಿಸಲು ಅನುಮತಿ ನೀಡಿದ್ದಾರೆ. ಈಗ ಎಲ್ಲೆಡೆ ಸಸಿ ನೆಡಿ, ಹವಾಮಾನ ವೈಪರಿತ್ಯ ತಡೆಯಿರಿ, ಅಭಿವೃದ್ದಿಯನ್ನು ಪರಿಸರ ಒಳಗೊಳ್ಳುವಿಕೆಯಿಂದ ಮಾಡಿ ಎಂದೇ ತಿಳಿಸಲಾಗುತ್ತಿದೆ. ಹೀಗಿದ್ದರೂ ಮೈಸೂರಿನ ಅರಣ್ಯ ಇಲಾಖೆಯವರಿಗೆ ಕನಿಷ್ಠ ಮರಗಳ ಬಗ್ಗೆ ಅಭಿಮಾನವೂ ಇಲ್ಲದೇ ತೆಗೆದು ಹಾಕಲು ಅನುಮತಿ ಕೊಟ್ಟಿದ್ದಾರೆ. ಮೈಸೂರಿನಲ್ಲಿ ಈಗ ಡಿಸಿಎಫ್ ಆಗಿರುವ ಡಾ.ಕೆ.ಎನ್.ಬಸವರಾಜ ಅವರು ಮರ ಕಡಿಯಲು ಅನುಮತಿ ನೀಡಿದ್ದನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.
ನಾವು ಯಾವುದನ್ನೂ ಹಠಾತ್ ಆಗಿ ಮಾಡಿಲ್ಲ. ಎಂಟು ತಿಂಗಳಿನಿಂದಲೂ ಮರ ಕಡಿಯಲು ಬೇಡಿಕೆ ಇತ್ತು. ಅನುಮತಿ ನೀಡಿರಲಿಲ್ಲ. ಈಗ ಕಾನೂನು ಬದ್ದವಾಗಿ ನಲವತ್ತು ಮರ ಕಡಿಯಲು ತಿಳಿಸಲಾಗಿತ್ತು. ಆನಂತರ ಈ ಪ್ರಕ್ರಿಯೆ ನಡೆದಿದೆ ಎಂದು ಮೈಸೂರು ಡಿಸಿಎಫ್ ಡಾ.ಕೆ.ಎನ್.ಬಸವರಾಜ ಹೇಳುತ್ತಾರೆ.
ಈಗಾಗಲೇ ಮೈಸೂರಿನಲ್ಲಿ ಪರಿಸರ ಬಳಗ, ಗ್ರಾಹಕರ ಪರಿಷತ್ ಸಹಿತ ನಾನಾ ಸಂಘಟನೆಗಳು ಹೋರಾಟ ರೂಪಿಸಿವೆ. ಒಂದು ಸುತ್ತಿನ ಪ್ರತಿಭಟನೆ ನಡೆದಿದ್ದು,. ಮೋಂಬತ್ತಿ ಚಳವಳಿಯನ್ನೂ ಹಮ್ಮಿಕೊಂಡಿವೆ.
ಅರಣ್ಯ ಇಲಾಖೆಯವರು ಸಸಿ ನೆಡಲು ಕೋಟ್ಯಂತರ ರೂ. ಖರ್ಚು ಮಾಡುತ್ತಾರೆ. ಮರ ಬೆಳೆಯಲು ವರ್ಷಗಳೇ ಬೇಕು. ಹೀಗೆ ಬೆಳೆದ ಮರಗಳನ್ನು ಗಂಟೆಯಲ್ಲಿಯೇ ಉರುಳಿಸಲಾಗಿದೆ. ಹಸುರಿನ ಊರು ಮೈಸೂರಿನಲ್ಲಿ ಅರಣ್ಯ ಇಲಾಖೆಯವರು ಈ ರೀತಿ ನಡೆದುಕೊಂಡಿದ್ದನ್ನು ಯಾರೂ ಒಪ್ಪುವುದಿಲ್ಲ. ಇದರ ವಿರುದ್ದ ಹೋರಾಟ ಮುಂದುವರಿಯಲಿದೆ ಎಂದು ಪರಿಸರ ಬಳಗದ ಪ್ರಧಾನ ಕಾರ್ಯದರ್ಶಿ ಪರುಶರಾಮೇಗೌಡ ಹೇಳುತ್ತಾರೆ.
ಮರ ಕಡಿತಲೆ: ಸಚಿವ ಈಶ್ವರ ಖಂಡ್ರೆ ಸೂಚನೆಗೂ ಬೆಲೆಯಿಲ್ಲ
ಅನಗತ್ಯ ಮರ ಕಡಿತಲೆಗೆ ಪ್ರಸಕ್ತ ವಿಧಿಸಲಾಗುತ್ತಿರುವ ದಂಡ ಮತ್ತು ಶಿಕ್ಷೆಯ ಪ್ರಮಾಣವನ್ನು ಹತ್ತುಪಟ್ಟು ಹೆಚ್ಚಿಸಲು ಅನುವಾಗುವಂತೆ ವೃಕ್ಷ ಸಂರಕ್ಷಣಾ ಕಾಯಿದೆ 1976ಕ್ಕೆ ತಿದ್ದುಪಡಿ ತರಲು ಕ್ರಮ ವಹಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ.
ತತ್ಸಂಬಂಧ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಅರಣ್ಯ ಪಡೆ ಮುಖ್ಯಸ್ಥರಿಗೆ ಸೂಚನೆ ನೀಡಿರುವ ಸಚಿವರು, “ದೊಡ್ಡ ಸಂಖ್ಯೆಯಲ್ಲಿ ಮರಗಳನ್ನು ಕಡಿಯುವುದು, ಮಾನವ ಹತ್ಯೆ ಮಾಡಿದಂತೆ ಅಥವಾ ಅದಕ್ಕಿಂತ” ಎಂದು ಘನ ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿರುವುದನ್ನು ಉಲ್ಲೇಖಿಸಿದ್ದಾರೆ. ಅಕ್ರಮವಾಗಿ ಕತ್ತರಿಸಿದ ಪ್ರತಿ ಮರಕ್ಕೆ 1 ಲಕ್ಷ ರೂ. ದಂಡ ವಿಧಿಸಿರುವ ವಿಚಾರದಲ್ಲಿ ಕರುಣೆ ತೋರುವ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿರುವುದನ್ನೂ ತಮ್ಮ ಟಿಪ್ಪಣಿಯಲ್ಲಿ ಉಲ್ಲೇಖಿಸಿರುವ ಸಚಿವರು, ಅಕ್ರಮ ಮರಗಳ ಕಡಿತಲೆಗೆ ವಿಧಿಸುವ ದಂಡದ ಪ್ರಮಾಣ ಹೆಚ್ಚಳದ ಅಗತ್ಯ ಪ್ರತಿಪಾದಿಸಿದ್ದಾರೆ.
ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಸವಾಲುಗಳನ್ನು ಇಡೀ ವಿಶ್ವ ಎದುರಿಸುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ, ಇರುವ ಒಂದೇ ಭೂಮಿಯನ್ನು ರಕ್ಷಿಸಿ, ಸುರಕ್ಷಿತವಾಗಿ ಮುಂದಿನ ಪೀಳಿಗೆಗೆ ಹಸ್ತಾಂತರಿಸಲು, ಪ್ರಕೃತಿ, ಪರಿಸರ ಉಳಿಸುವುದು ನಮ್ಮೆಲ್ಲರ ಹೊಣೆಯಾಗಿದೆ.ಸಂಸ್ಕೃತದಲ್ಲಿ “ಧರ್ಮೋ ರಕ್ಷತಿ ರಕ್ಷಿತಃ’ ಎಂಬ ಮಾತಿದೆ. ಈಗ ಇದನ್ನು “ವೃಕ್ಷೋ ರಕ್ಷತಿ ರಕ್ಷಿತಃ’ ಎಂದು ಬದಲಾಯಿಸಿಕೊಳ್ಳಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಹತ್ತಾರು, ನೂರಾರು ವರ್ಷದಿಂದ ಬೆಳೆದ ಮರಗಳನ್ನು ಸಂರಕ್ಷಿಸದಿದ್ದರೆ ಮುಂದೆ ದೊಡ್ಡ ಅಪಾಯ ಎದುರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ವೃಕ್ಷ ಸಂರಕ್ಷಣಾ ಕಾಯಿದೆಗೆ ತಿದ್ದುಪಡಿ ತರಲು ಕ್ರಮ ವಹಿಸುವಂತೆ ಆದೇಶ ನೀಡಿ ತಿಂಗಳ ಒಳಗೆ ಮೈಸೂರಿನಲ್ಲಿ ಭಾರೀ ಮರಗಳ ಹನನವಾಗಿದೆ.

ವಿಭಾಗ