Mysore News: ಮೈಸೂರು ಉದಯಗಿರಿ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣ; 15ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ
ಮೈಸೂರಿನಲ್ಲಿ ಧರ್ಮ ಅವಹೇಳನದ ಪೋಸ್ಟ್ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದವರು ಠಾಣೆ ಮೇಲೆ ಕಲ್ಲು ತೂರಿದ ಪ್ರಕರಣದ ತನಿಖೆ ಚುರುಕುಗೊಂಡಿದ್ದು ಹಲವರನ್ನು ವಶಕ್ಕೆ ಪಡೆಯಲಾಗಿದೆ.

ಮೈಸೂರು: ದೆಹಲಿ ವಿಧಾನಸಭೆ ಚುನಾವಣೆ ಬಳಿಕ ಅವಹೇಳನಕಾರಿ ಪೋಸ್ಟ್ ಹಾಕಿದ್ದ ವ್ಯಕ್ತಿ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುವ ವೇಳೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟ ಮಾಡಿ ಪೊಲೀಸರನ್ನು ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 15ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಸೋಮವಾರ ರಾತ್ರಿ ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಮೇಲೆ ಒಂದು ಕೋಮಿನ ಜನರು ಕಲ್ಲುತೂರಾಟ ನಡೆಸಿದ್ದರು. ಈ ಪ್ರಕರಣದಲ್ಲಿ ಹಲವು ಮಂದಿ ಪೊಲೀಸರಿಗೂ ಗಾಯವಾಗಿತ್ತು. ಎರಡು ದಿನದಿಂದಲೂ ಮೈಸೂರು ನಗರ ಪೊಲೀಸರು ವಿಡಿಯೋಗಳನ್ನು ಆಧರಿಸಿ ಕಲ್ಲು ಎಸೆದವರು ಹಾಗೂ ದೊಂಬಿಗೆ ಮುಂದಾದವರ ಪಟ್ಟಿ ಮಾಡಿ ಅವರ ವಿರುದ್ದ ಎಫ್‌ಐಆರ್ ದಾಖಲಿಸಿದ್ದರು. ಈಗ ಅವರನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.
ಕಲ್ಲು ತೂರಾಟ ಘಟನೆಯ ತನಿಖೆಯನ್ನು ಕೈಗೊಂಡ ಮೈಸೂರು ಪೊಲೀಸರು ಕಲ್ಲುತೂರಾಟ ನಡೆಸಿದ 15ಕ್ಕೂ ಹೆಚ್ಚು ಮಂದಿಯನ್ನು ವಷಕ್ಕೆ ಪಡೆದು ಹೆಚ್ಚಿನ ವಿಚಾರಣೆಯನ್ನು ನಡೆಸುತ್ತಿದ್ದಾರೆ. ಈ ಘಟನೆಯ ತನಿಖೆಯನ್ನು ಮೈಸೂರಿನ ಸಿಸಿಬಿ ಪೊಲೀಸರಿಗೆ ವಹಿಸಲಾಗಿದ್ದು, ತನಿಖೆ ಕೈಗೊಂಡಿರುವ ಸಿಸಿಬಿ ಎಸಿಪಿ ಸಂದೇಶ್ ಕುಮಾರ್, ಇನ್ಸ್‌ಪೆಕ್ಟರ್ ಗಳಾದ ಪೂವಯ್ಯ, ಮೋಹನ್ ಹಾಗೂ ಸಿಬ್ಬಂದಿ ಹಲವು ಆಯಾಮಗಳಲ್ಲಿ ತನಿಖೆ ನಡೆಸಿ ಘಟನೆಗೆ ಕಾರಣರಾದ 15ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಈ ಘಟನೆಗೆ ಮೌಲ್ವಿಯೊಬ್ಬರ ಪ್ರಚೋದನಕಾರಿ ಭಾಷಣವೇ ಪ್ರಮುಖ ಕಾರಣ ಎನ್ನಲಾಗುತ್ತಿದ್ದು ಪೊಲೀಸರು ವೀಡಿಯೋ, ಆಡಿಯೋಗಳನ್ನು ಪಡೆದು ತನಿಖೆಯನ್ನು ನಡೆಸುತ್ತಿದ್ದಾರೆ. ಉದಯಗಿರಿ ಪೊಲೀಸ್ ಠಾಣೆಯ ಮೇಲಿನ ಪ್ರಕರಣ ಸಂಬಂಧ ಇದುವರೆಗೂ ಕಲ್ಲುತೂರಾಟ ನಡೆಸಿದವರ ಮೇಲೆ ನಿಗಾ ಇರಿಸಿ ಒಬ್ಬೊಬ್ಬರನ್ನೂ ವಶಕ್ಕೆ ಪಡೆಯಲಾಗುತ್ತಿದೆ.
ಮುಂಜಾಗ್ರತಾ ಕ್ರಮವಾಗಿ ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ ಮಾಡಲಾಗಿದೆ. ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಉಂಟಾಗಿದ್ದ ಉದ್ವಿಗ್ನ ಪರಿಸ್ಥಿತಿ ಇದೀಗ ತಿಳಿಯಾಗಿದ್ದು ಸಹಜ ಸ್ಥಿತಿಗೆ ಮರಳಿದೆ.
ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯ ಮೇಲೆ ಮುಸ್ಲಿಂ ಯುವಕರಿಂದ ದಾಳಿ ನಡೆದಿರುವ ಪ್ರಕರಣದಲ್ಲಿ ಭಾಗಿಯಾಗಿ ರಾತ್ರಿ ಪೊಲೀಸರ ಮೇಲೆ ಕಲ್ಲು ತೂರಿ ಬೆಳಗಾಗುವಷ್ಟರಲ್ಲಿ ಕಣ್ಮರೆಯಾಗಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಆರೋಪಿಗಳ ಮನೆ ಕದ ತಟ್ಟಿದ ಪೊಲೀಸರಿಗೆ ಆಶ್ಚರ್ಯ ಆಗಿದೆ. ಆರೋಪಿಗಳನ್ನು ಹಿಡಿಯಲು ಹೋದ ಪೊಲೀಸರು ಕೆಲವು ಕಡೆ ಬರಿಗೈಯಲ್ಲಿ ವಾಪಸ್ ಆಗಿದ್ದಾರೆ. ಏಕೆಂದರೆ ಕಲ್ಲು ತೂರಾಟದಲ್ಲಿ ಭಾಗಿಯಾಗಿದ್ದ ಕೆಲವರು ಮನೆಯಲ್ಲಿ ಇಲ್ಲ. ಆದರೆ ಗಲಾಟೆ ನಡೆದ ಸ್ಥಳದಲ್ಲಿನ ಟವರ್ ಲೊಕೇಶನ್ ಆಧಾರದಲ್ಲಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಮೊಬೈಲ್ ನಂಬರ್ ಆಧರಿಸಿ ಆರೋಪಿಗಳ ಮನೆಗಳಲ್ಲಿ ಶೋಧ ಮುಂದುವರಿದಿದೆ. ಆದರೆ ಮೊಬೈಲ್ ಮನೆಯಲ್ಲೇ ಇಟ್ಟು ಊರು ಬಿಟ್ಟಿರುವವರು ಯಾರ ಕೈಗೂ ಸಿಗುತ್ತಿಲ್ಲ ಹೀಗಾಗಿ ಆರೋಪಿಗಳ ಪತ್ತೆ ಕಾರ್ಯಾಚರಣೆಗೆ ಆರಂಭದಲ್ಲೇ ಹಿನ್ನಡೆಯಾಗಿದೆ. ಸದ್ಯ ಪ್ರಕರಣ ಕೈಗೆತ್ತಿಕೊಂಡಿರುವ ಸಿಸಿಬಿ ಪೊಲೀಸರು ಆರೋಪಿಗಳ ಪಟ್ಟಿ ಮಾಡಿ ವಶಕ್ಕೆ ಪಡೆಯುತ್ತಿದೆ.
ಉದಯಗಿರಿ ಪೊಲೀಸ್ ಠಾಣೆ ಮುಖ್ಯ ರಸ್ತೆಯ 10ಕ್ಕೂ ಹೆಚ್ಚು ಸಿಸಿ ಟಿವಿಗಳ ಡಿವಿಆರ್ ವಶಕ್ಕೆ ಪಡೆದಿದ್ದು ಅದರಲ್ಲಿನ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಗಳ ಪತ್ತೆ ಕಾರ್ಯ ಶುರು ಮಾಡಿದ್ದಾರೆ.
ಘಟನೆ ನಡೆದಿರುವುದು ರಾತ್ರಿಯಾಗಿರುವುದರಿಂದ ಅಲ್ಲಿ ಯಾರು ಇದ್ದರು ಎನ್ನುವುದು ನಿಖರವಾಗಿ ತಿಳಿಯುತ್ತಿಲ್ಲ. ಕೆಲವರ ಪಟ್ಟಿ ಮಾಡಿಕೊಂಡು ಅವರ ಮಾಹಿತಿ ಕಲೆ ಹಾಕಿ ವಶಕ್ಕೆ ಪಡೆಯಲಾಗಿದೆ. ಕೆಲವರು ಊರು ಬಿಟ್ಟು ಹೋಗಿದ್ದಾರೆ. ಮನೆಯವರಿಂದ ಮಾಹಿತಿ ವಶಕ್ಕೆ ಪಡೆಯುತ್ತಿದ್ದೇವೆ. ಠಾಣೆಗೆ ಕಲ್ಲು ತೂರಿದವರು, ಪೊಲೀಸರ ಮೇಲೆ ದಾಳಿ ಮಾಡಿ ಸಾರ್ವಜನಿಕ ಸೇವೆಗೆ ಅಡ್ಡಿಪಡಿಸಿದವರ ವಿರುದ್ದ ಕಾನೂನು ಕ್ರಮ ಆಗಲಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
