ಮೈಸೂರು ವಿಶ್ವವಿದ್ಯಾಲಯ ಘಟಿಕೋತ್ಸವ; 139 ವಿದ್ಯಾರ್ಥಿನಿಯರಿಗೆ ಚಿನ್ನದ ಪದಕ, ಭೂಮಿಕಾಗೆ 18 ಸ್ವರ್ಣ
Mysore University 105th convocation: ಮೈಸೂರು ವಿಶ್ವವಿದ್ಯಾಲಯ 105ನೇ ಘಟಿಕೋತ್ಸವದಲ್ಲಿ 139 ವಿದ್ಯಾರ್ಥಿನಿಯರಿಗೆ ಚಿನ್ನದ ಪದಕ ಪಡೆದಿದ್ದಾರೆ. ಎಂಎಸ್ಸಿ ವಿದ್ಯಾರ್ಥಿನಿ ಭೂಮಿಕಾ ಅವರು 18 ಗೋಲ್ಡ್ ಮೆಡಲ್ಗೆ ಕೊರೊಳೊಡ್ಡಿದ್ದಾರೆ.

ಮೈಸೂರು: ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾಲಯ 105ನೇ ವಾರ್ಷಿಕ ಘಟಿಕೋತ್ಸವ ಸಂಪನ್ನಗೊಂಡಿತು. ಚಿನ್ನದ ಪದಕ, ಪದವಿ, ಬಹುಮಾನ ಪಡೆಯುವಲ್ಲಿ ವಿದ್ಯಾರ್ಥಿನಿಯರೇ ಪ್ರಾಬಲ್ಯ ಮೆರೆದಿದ್ದಾರೆ. ಅದಕ್ಕೆ ಸಾಕ್ಷಿ ಭೂಮಿಕಾ 18 ಚಿನ್ನದ ಪದಕಗಳನ್ನು ಗೆದ್ದಿರುವುದು. ಇವರೊಂದಿಗೆ ವಿವಿನಾ ಸ್ವೀಡಲ್ ಥೋರಸ್, ಸಿ ಕಾವ್ಯ, ಸೀಮಾ ಸಾಂಭ ಹೆಗಡೆ 10ಕ್ಕೂ ಹೆಚ್ಚು ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.
ಮೈಸೂರು ವಿಶ್ವವಿದ್ಯಾನಿಲಯದ ಕ್ರಾಫರ್ಡ್ ಹಾಲ್ ಸಭಾಂಗಣದಲ್ಲಿ ನಡೆದ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ವಿದ್ಯಾರ್ಥಿನಿಯರ ಪಾರಮ್ಯ ಕಂಡು ಬಂತು. ಆದರೆ ಘಟಿಕೋತ್ಸವಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಗೈರಾಗಿದ್ದರು. ಉನ್ನತ ಶಿಕ್ಷಣ ಸಚಿವ ಡಾ. ಎಂಸಿ ಸುಧಾಕರ್, ವಿವಿ ಕುಲಪತಿ ಪ್ರೊಫೆಸರ್ ಎನ್ಕೆ ಲೋಕನಾಥ್, ಗೌರವ ಡಾಕ್ಟರೇಟ್ ಪುರಸ್ಕೃತರಾದ ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕಿ ಸುಧಾಮೂರ್ತಿ, ಡಾ ಎಸಿ ಷಣ್ಮುಗಂ, ಶಾಹೀನ್ ಮಜೀದ್ ಇದ್ದರು.
ಯಾರಿಗೆಷ್ಟು ಬಹುಮಾನ?
ಭೂಮಿಕಾ (ಎಂಎಸ್ಸಿ, ರಸಾಯನ ವಿಜ್ಞಾನ): 18 ಚಿನ್ನದ ಪದಕ, 4 ನಗದು ಬಹುಮಾನ.
ಯುಎ ಕಾವ್ಯಶ್ರೀ (ಸ್ನಾತಕೋತ್ತರ ಪದವಿ - ಅರ್ಬನ್ ಅಂಡ್ ರೀಜನಲ್ ಪ್ಲಾನಿಂಗ್): 16 ಚಿನ್ನದ ಪದಕ
ಸೀಮಾ ಸಾಂಬಾ ಹೆಗಡೆ (ಸಂಸ್ಕೃತ): 13 ಚಿನ್ನದ ಪದಕ, 1 ನಗದು ಬಹುಮಾನ - ಐಎಎಸ್ ಅಧಿಕಾರಿಯಾಗುವ ಕನಸು ಹೊಂದಿದ್ದಾರೆ.
ಸಿ ಕಾವ್ಯ (ಎಂಎ, ಕನ್ನಡ): 11 ಚಿನ್ನದ ಪದಕ, 5 ನಗದು ಬಹುಮಾನ.
ವಿವಿನಾ ಸ್ವೀಡಲ್ ಥೋರಸ್ (ಎಂಎಸ್ಸಿ, ಸಸ್ಯವಿಜ್ಞಾನ): 10 ಚಿನ್ನದ ಪದಕ, 2 ನಗದು ಬಹುಮಾನ.
ಪದವಿ-ಚಿನ್ನದ ಪದಕ, ಬಹುಮಾನ ಪಡೆದವರು
ಪದವಿ ಗಳಿಸಿದವರು: 31,689 ಅಭ್ಯರ್ಥಿಗಳು (ಈ ಪೈಕಿ 20,222 ಮಹಿಳೆಯರು)
ಪಿಎಚ್‌ಡಿ ಪದವಿ ಪಡೆದವರ ಸಂಖ್ಯೆ: 304 ಮಂದಿ (139 ಮಹಿಳೆಯರು).
ಚಿನ್ನದ ಪದಕ ಮತ್ತು ಬಹುಮಾನ ಪಡೆದವರ ಸಂಖ್ಯೆ; 413 ಚಿನ್ನದ ಪದಕ, 208 ಬಹುಮಾನವನ್ನು 216 ಮಂದಿ ಪಡೆದರು. (ಈ ಪೈಕಿ 139 ವಿದ್ಯಾರ್ಥಿನಿಯರು)
ಹೆಣ್ಣುಮಕ್ಕಳ ಸಾಧನೆಗೆ ಸುಧಾಮೂರ್ತಿ ಸಂತಸ
ಸಮಾರಂಭದಲ್ಲಿ ಇನ್ಫೋಸಿಸ್ ಪ್ರತಿಷ್ಠಾನದ ಸಂಸ್ಥಾಪಕಿ ಡಾ. ಸುಧಾಮೂರ್ತಿ ಅವರು ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು, 2020ರಲ್ಲಿ ನನಗೆ ಗೌರವ ಡಾಕ್ಟರೇಟ್ ಘೋಷಣೆ ಮಾಡಲಾಗಿತ್ತು. ಕೋವಿಡ್ ಕಾರಣದಿಂದ ಗೌರವ ಡಾಕ್ಟರೇಟ್ ಸ್ವೀಕಾರ ಮಾಡಲು ಸಾಧ್ಯವಾಗಿರಲಿಲ್ಲ. ಈಗ ಸ್ವೀಕಾರ ಮಾಡಿದ್ದೇನೆ. ಪ್ರತಿಭಾನ್ವಿತ ವಿದ್ಯಾರ್ಥಿಗಳ ಜೊತೆ ಗೌರವ ಡಾಕ್ಟರೇಟ್ ಸ್ವೀಕಾರ ಮಾಡಿದ್ದು ಅಪಾರ ಸಂತಸ ತಂದಿದೆ ಎಂದರು. ಇದೇ ವೇಳೆ ಶಿಕ್ಷಣದಲ್ಲಿ ಹೆಣ್ಣುಮಕ್ಕಳ ಸಾಧನೆಯ ಕುರಿತು ಸಂತಸ ವ್ಯಕ್ತಪಡಿಸಿದ್ದಾರೆ.
ಶಿಕ್ಷಣದಲ್ಲಿ ಹೆಣ್ಣು ಮಕ್ಕಳ ಈ ಸಾಧನೆ ತುಂಬಾ ಸಂತಸ ತಂದಿದೆ. ಒಬ್ಬೊಬ್ಬ ವಿದ್ಯಾರ್ಥಿಗಳು 18, 16ಗೋಲ್ಡ್ ಮೆಡಲ್ ಪಡೆದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯ ಪುರಾತನ ಇತಿಹಾಸ ಹೊಂದಿದೆ. ಇಲ್ಲಿ ಗೌರವ ಡಾಕ್ಟರೇಟ್ ಪಡೆದಿದ್ದು ಖುಷಿ ತಂದಿದೆ. ಹೆಣ್ಣು ಮಕ್ಕಳ ಸಾಧನೆಯಿಂದ ದೇಶಕ್ಕೆ ಒಳಿತಾಗುತ್ತದೆ ಎಂದು ಹೇಳಿದ್ದಾರೆ.
