ಮೈಸೂರು ವಿಜಯನಗರದ ಬಳಿ ಕಾಣಿಸಿಕೊಂಡ ಹೆಬ್ಬಾವು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟ ಸ್ನೇಕ್ ಶ್ಯಾಮ್, ಮಗ ಸೂರ್ಯ ಕೀರ್ತಿ
ಮೈಸೂರು: ಮಂಗಳವಾರ ರಾತ್ರಿ ನಗರದ ವಿಜಯನಗರ 2ನೇ ಹಂತದ ಬಳಿ ಕಾಣಿಸಿಕೊಂಡ ಸುಮಾರು 10 ಅಡಿ ಉದ್ದದ ಹೆಬ್ಬಾವನ್ನು ಹಾವು ಸಂರಕ್ಷಕ ಸ್ನೇಕ್ ಶ್ಯಾಮ್ ಕಾಪಾಡಿ ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬಂದಿದ್ದಾರೆ. ಶ್ಯಾಮ್ ಹಾವು ಹಿಡಿದಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಮೈಸೂರಿನ ವಿಜಯನಗರದಲ್ಲಿ ಕಾಣಿಸಿಕೊಂಡಿದ್ದ ಹೆಬ್ಬಾವನ್ನು ಸ್ನೇಕ್ ಶ್ಯಾಮ್ ಹಾಗೂ ಅವರ ಪುತ್ರ ಸೂರ್ಯ ಕೀರ್ತಿ ರಕ್ಷಿಸಿದ್ದು ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬಂದಿದ್ದಾರೆ. ರಾತ್ರಿ ವೇಳೆ ರಸ್ತೆ ದಾಟುತ್ತಿದ್ದ ಹೆಬ್ಬಾವನ್ನು ನೋಡಿ ಸಾರ್ವಜನಿಕರು ಸ್ನೇಕ್ ಶ್ಯಾಮ್ ಅವರಿಗೆ ಮಾಹಿತಿ ನೀಡಿದ್ದು ತಮ್ಮ ಪುತ್ರನೊಂದಿಗೆ ಬಂದು ಹಾವನ್ನು ಹಿಡಿದಿದ್ದಾರೆ.
ನಗರದ ವಿಜಯನಗರ 2ನೇ ಹಂತದ ಬಳಿ ರಸ್ತೆ ದಾಟುತ್ತಿದ್ದ ಹೆಬ್ಬಾವು
ಮಂಗಳವಾರ ಸಂಜೆ ವಿಜಯನಗರ 2ನೇ ಹಂತರ ಯೋಗಾನರಸಿಂಹ ದೇವಸ್ಥಾನ ಬಳಿ ಸುಮಾರು 10 ಅಡಿಯ ಹೆಬ್ಬಾವೊಂದು ರಸ್ತೆ ದಾಟುತ್ತಿದ್ದನ್ನು ಜನರು ಗಮನಿಸಿದ್ದಾರೆ. ಕೆಲವರು ಗಾಬರಿಯಿಂದ ಅಲ್ಲಿಂದ ಓಡಿದರೆ, ಕೆಲವರು ಹೆಬ್ಬಾವಿನ ವಿಡಿಯೋ ಮಾಡಿದ್ದಾರೆ. ಕೂಡಲೇ ಸ್ನೇಕ್ ಕ್ಯಾಚರ್ ಶ್ಯಾಮ್ ಅವರಿಗೆ ಮಾಹಿತಿ ನೀಡಿದ್ದಾರೆ. ಅದು ಮಂಡಲದ ಹಾವು ಎಂದು ಕೆಲವರು ವಾದಿಸಿದರೆ ಇಲ್ಲ, ಹೆಬ್ಬಾವು ಎಂದು ಜನರು ಚರ್ಚೆ ಮಾಡುತ್ತಿದ್ದಂತೆ ಸ್ಥಳಕ್ಕೆ ಶ್ಯಾಮ್, ತಮ್ಮ ಮಗ ಸೂರ್ಯ ಕೀರ್ತಿ ಅವರೊಂದಿಗೆ ಬಂದಿದ್ದಾರೆ. ಆದರೆ ಹಾವು ಸಮೀಪದಲ್ಲೇ ಇದ್ದ ಸಂಜೀವಯ್ಯ ಸ್ಕೂಲ್ ಒಳಗೆ ಸೇರಿಕೊಂಡಿದ್ದು ಶ್ಯಾಮ್, ಪೊಲೀಸರಿಗೆ ವಿಷಯ ತಿಳಿಸಿ ಹಾವನ್ನು ಹಿಡಿದಿದ್ದಾರೆ.
ಸ್ನೇಕ್ ಶ್ಯಾಮ್ ಹಾವು ಹಿಡಿಯುವುದನ್ನು ನೋಡಲು ಸ್ಥಳದಲ್ಲಿ ಜನಸಂದಣಿಯೇ ತುಂಬಿತ್ತು. ನಂತರ ಜನರಿಗೆ ಧನ್ಯವಾದ ಹೇಳಿದ ಶ್ಯಾಮ್ ಹಾವನ್ನು ಬ್ಯಾಗ್‌ನಲ್ಲಿ ಕೊಂಡೊಯ್ದು ಸುರಕ್ಷಿತವಾದ ಸ್ಥಳಕ್ಕೆ ಬಿಟ್ಟು ಬಂದಿದ್ದಾರೆ. ಮನುಷ್ಯ ದುರಾಸೆಯಿಂದ ಕಾಡನ್ನು ಆಕ್ರಮಿಸಿಕೊಳ್ಳುತ್ತಿದ್ದಾನೆ. ಆವಾಸ ಸ್ಥಾನವನ್ನು ಕಳೆದುಕೊಳ್ಳುತ್ತಿರುವ ಪ್ರಾಣಿಗಳು ಆಹಾರವನ್ನು ಅರಸಿ ನಗರಕ್ಕೆ ಲಗ್ಗೆ ಇಡುತ್ತಿದೆ ಎಂದು ಸ್ನೇಕ್ ಶ್ಯಾಮ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಾಲ್ಯದಿಂದ ಈವರೆಗೂ ಸುಮಾರು 40 ಸಾವಿರಕ್ಕೂ ಹೆಚ್ಚು ಹಾವುಗಳನ್ನು ಹಿಡಿದಿರುವ ಶ್ಯಾಮ್
ಶ್ಯಾಮ್ ನಿಜವಾದ ಹೆಸರು ಎಂಎಸ್ ಬಾಲಸುಬ್ರಹ್ಮಣ್ಯ. ಮೈಸೂರಿನಲ್ಲಿ ಹುಟ್ಟಿ ಬೆಳೆದು ಬಾಲಸುಬ್ರಹ್ಮಣ್ಯ ಅವರಿಗೆ ಚಿಕ್ಕಂದಿನಲ್ಲೇ ಪ್ರಾಣಿ, ಪಕ್ಷಿಗಳೆಂದರೆ ಪ್ರೀತಿ. ಅದರಲ್ಲೂ ಅಕ್ಕಪಕ್ಕದವರ ಮನೆಗೆ ಹಾವು ಬಂದರೆ ಇವರೇ ಹೋಗಿ ಹಿಡಿಯುತ್ತಿದ್ದರು. ಹಾವಿಗೆ ಏನೂ ಸಮಸ್ಯೆ ಮಾಡದಂತೆ ಎಲ್ಲರನ್ನೂ ಮನವಿ ಮಾಡಿ ಅದನ್ನು ದೂರದ ಸ್ಥಳಕ್ಕೆ ಬಿಟ್ಟು ಬರುತ್ತಿದ್ದರು. ಇವರು ಹಾವು ಹಿಡಿಯುವುದನ್ನು ನೋಡಿ ಎಲ್ಲರೂ ಇವರಿಗೆ ಸ್ನೇಕ್ ಶ್ಯಾಮ್ ಎಂದೇ ಕರೆಯಲು ಆರಂಭಿಸಿದರು. ಶ್ಯಾಮ್, ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದರು. ಶಾಲಾ ಮಕ್ಕಳನ್ನು ಪಿಕಪ್, ಡ್ರಾಪ್ ಮಾಡುತ್ತಿದ್ದ ಶ್ಯಾಮ್, ಜೊತೆ ಜೊತೆಗೆ ಹಾವು ಸಂರಕ್ಷಕರಾಗಿ ಕೂಡಾ ಹೆಸರು ಗಳಿಸಿದ್ದಾರೆ. ಇದುವರೆಗೂ ಸುಮಾರು 40 ಸಾವಿರಕ್ಕೂ ಹೆಚ್ಚು ಹಾವು ಹಿಡಿದಿದ್ದಾರೆ.
2013 ರಲ್ಲಿ ಬಿಜೆಪಿ ನೇತೃತ್ವದಲ್ಲಿ ನಡೆದ ಚುನಾವಣೆಯಲಿ ಶ್ಯಾಮ್ ಮೈಸೂರು ನಗರ ಪಾಲಿಕೆಗೆ ಆಯ್ಕೆಯಾದರು. ಆದರೆ ಪಕ್ಷ ವಿರೋಧಿ ಚಟುವಟಿಕೆಗಳಿಂದ ಅವರನ್ನು ಪಕ್ಷದಿಂದ ಹೊರ ಕಳಿಸಲಾಗಿತ್ತು. ಬಿಗ್ ಬಾಸ್ ಸೀಸನ್ 10 ರಲ್ಲಿ ಸ್ಪರ್ಧಿಯಾಗಿದ್ದ ಶ್ಯಾಮ್ , ಮೊದಲ ವಾರವೇ ಎಲಿಮಿನೇಟ್ ಆಗಿ ಹೊರಬಂದಿದ್ದರು. ಖ್ಯಾತ ನ್ಯಾಷನಲ್ ಜಿಯೋಗ್ರಫಿಕ್, ಡಿಸ್ಕವರಿ ಚಾನೆಲ್‌ನಲ್ಲಿ ಶ್ಯಾಮ್ ಅವರ ಸಂದರ್ಶನ ಪ್ರಸಾರವಾಗಿದೆ.