Lunar Eclipse 2022: ಚಂದ್ರ ಗ್ರಹಣ ಹಿನ್ನೆಲೆ ಮಂಗಳವಾರ ಭಕ್ತರಿಗೆ ಚಾಮುಂಡೇಶ್ವರಿ ದೇವಿಯ ದರ್ಶನವಿಲ್ಲ
ನವೆಂಬರ್ 8, ಮಂಗಳವಾರದಂದು ಚಂದ್ರ ಗ್ರಹಣ ಬಂದಿರುವ ಹಿನ್ನೆಲೆಯಲ್ಲಿ ಮಧ್ಯಾಹ್ನ 1 ಗಂಟೆಯ ನಂತರ ಭಕ್ತರಿಗೆ ಮೈಸೂರಿನ ಚಾಮುಂಡೇಶ್ವರಿ ದೇವಿಯ ದರ್ಶನಕ್ಕೆ ಅವಕಾಶವಿರುವುದಿಲ್ಲ.

ಮೈಸೂರು: ನವೆಂಬರ್ 8, ಮಂಗಳವಾರದಂದು ಚಂದ್ರ ಗ್ರಹಣ ಬಂದಿರುವ ಹಿನ್ನೆಲೆಯಲ್ಲಿ ಮಧ್ಯಾಹ್ನ 1 ಗಂಟೆಯ ನಂತರ ಭಕ್ತರಿಗೆ ಮೈಸೂರಿನ ಚಾಮುಂಡೇಶ್ವರಿ ದೇವಿಯ ದರ್ಶನಕ್ಕೆ ಅವಕಾಶವಿರುವುದಿಲ್ಲ.
"ದಿನಾಂಕ 8-11-2022ನೇ ಮಂಗಳವಾರದಂದು ರಾಹುಗ್ರಸ್ತ ಗ್ರಸ್ತೋದಯ ಚಂದ್ರಗ್ರಹಣ ಮಧ್ಯಾಹ್ನ 1 ಗಂಟೆಯಿಂದ ಪ್ರಾರಂಭವಾಗುವುದರಿಂದ ಈ ದೇವಾಲಯದ ರೂಢಿ ಸಂಪ್ರದಾಯದಂತೆ ಸ್ಪರ್ಶಕಾಲ ಹಾಗೂ ಮೋಕ್ಷ ಕಾಲಗಳಲ್ಲಿ ವಿಶೇಷ ಪೂಜೆಗಳು ನಡೆಯುವುದರಿಂದ ಭಕ್ತಾದಿಗಳಿಗೆ ಸದರಿ ದಿನದಂದು ಮಧ್ಯಾಹ್ನ 1 ಗಂಟೆಯ ವರೆಗೆ ಮಾತ್ರ ದರ್ಶನದ ವ್ಯವಸ್ಥೆ ಇರುತ್ತದೆ. ಭಕ್ತಾದಿಗಳು ದೇವಾಲಯದ ಆಡಳಿತದೊಂದಿಗೆ ಸಹಕರಿಸಿ" ಎಂದು ಶ್ರೀ ಚಾಮುಂಡೇಶ್ವರಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆ ಹೊರಡಿಸಿದ್ದಾರೆ.
ಭಾರತದ ಯಾವ ನಗರಗಳಲ್ಲಿ ಗ್ರಹಣ ಗೋಚರಿಸುತ್ತದೆ?
ಭಾರತದಲ್ಲಿ ಪೂರ್ಣ ಚಂದ್ರ ಗ್ರಹಣವು ಪೂರ್ವ ಭಾಗಗಳಲ್ಲಿ ಮಾತ್ರ ಗೋಚರಿಸಲಿದೆ. ಭಾಗಶಃ ಗ್ರಹಣವು ಭಾರತದ ಹೆಚ್ಚಿನ ಭಾಗಗಳಿಂದ ಗೋಚರಿಸುತ್ತದೆ. ಕೊಹಿಮಾ, ಅಗರ್ತಲಾ, ಗುವಾಹಟಿ, ಕೋಲ್ಕತ್ತಾ, ಭುವನೇಶ್ವರ, ಸಿಲಿಗುರಿ, ಪಟನಾ ಮತ್ತು ರಾಂಚಿಯ ಜನರು ಸಂಪೂರ್ಣ ಚಂದ್ರ ಗ್ರಹಣ ಕಣ್ತುಂಬಿಕೊಳ್ಳಬಹುದು. ದೆಹಲಿ, ಅಹಮದಾಬಾದ್, ಬೆಂಗಳೂರು, ಮುಂಬೈ, ನಾಗ್ಪುರ, ಶ್ರೀನಗರ, ನೋಯ್ಡಾ, ಗುರುಗ್ರಾಮ, ಚಂಡೀಗಢ, ಹೈದರಾಬಾದ್, ಚೆನ್ನೈ, ಸೂರತ್, ಪುಣೆ, ಜೈಪುರ, ಲಕ್ನೋ, ಮಧುರೈ, ಉದಯಪುರ ಮುಂತಾದ ಇತರ ನಗರಗಳು ಮತ್ತು ಭಾರತದ ಪಶ್ಚಿಮ, ದಕ್ಷಿಣ ಮತ್ತು ಉತ್ತರ ಭಾಗಗಳಲ್ಲಿನ ಹೆಚ್ಚಿನ ನಗರಗಳು ಭಾಗಶಃ ಗ್ರಹಣಕ್ಕೆ ಸಾಕ್ಷಿಯಾಗಲಿವೆ.
ಚಂದ್ರೋದಯದ ಸಮಯದಿಂದ ಜನರು ಈ ವಿದ್ಯಮಾನವನ್ನು ವೀಕ್ಷಿಸಲು ಸಾಧ್ಯವಾಗುತ್ತದೆ. ಆದರೆ, ಭಾಗಶಃ ಮತ್ತು ಸಂಪೂರ್ಣ ಗ್ರಹಣದ ಆರಂಭದ ಹಂತವು ಗೋಚರಿಸುವುದಿಲ್ಲ ಏಕೆಂದರೆ ಭಾರತದಲ್ಲಿ ಎಲ್ಲೆಡೆ ಚಂದ್ರನು ದಿಗಂತದ ಕೆಳಗೆ ಇರುವಾಗ ಎರಡೂ ಘಟನೆಗಳು ಪ್ರಾರಂಭವಾಗುತ್ತವೆ ಎಂದು ನಾಸಾ ಮಾಹಿತಿ ನೀಡಿದೆ.
ಯಾವ ಸಮಯದಲ್ಲಿ ಗ್ರಹಣ ಗೋಚರವಾಗುತ್ತದೆ?
ಭಾಗಶಃ ಚಂದ್ರಗ್ರಹಣವು ಮಧ್ಯಾಹ್ನ 02:40 ಕ್ಕೆ ಮತ್ತು ಸಂಪೂರ್ಣ ಚಂದ್ರಗ್ರಹಣವು ಮಧ್ಯಾಹ್ನ 03:47 ಕ್ಕೆ ಪ್ರಾರಂಭವಾಗುತ್ತದೆ. ಪೂರ್ಣ ಚಂದ್ರಗ್ರಹಣವು ಸಂಜೆ 04:29 ಕ್ಕೆ ಗೋಚರಿಸುತ್ತದೆ. ಪೂರ್ಣ ಚಂದ್ರಗ್ರಹಣವು ಸಂಜೆ 5:11 ಕ್ಕೆ ಕೊನೆಗೊಳ್ಳುತ್ತದೆ. ಒಟ್ಟು ಹಂತದ ಅವಧಿಯು 1 ಗಂಟೆ 24 ನಿಮಿಷಗಳವರೆಗೆ ಇರುತ್ತದೆ ಮತ್ತು ಭಾಗಶಃ ಹಂತವು 3 ಗಂಟೆ 38 ನಿಮಿಷಗಳವರೆಗೆ ಇರುತ್ತದೆ ಎಂದು ನಾಸಾ ಮಾಹಿತಿ ನೀಡಿದೆ.
ಗ್ರಹಣದ ಸೂತಕದ ಸಮಯ
ಚಂದ್ರಗ್ರಹಣ ಎನ್ನುವುದು ಖಗೋಳ ವಿದ್ಯಮಾನವಾದರೂ ಭಾರತದಲ್ಲಿ ಈ ಸಮಯದಲ್ಲಿ ಬಹುತೇಕರು ಸೂತಕದ ಕ್ಷಣವೆಂದು ಪರಿಗಣಿಸುತ್ತಾರೆ. ಆಹಾರ, ನೀರು ತ್ಯಜಿಸಿ ಗ್ರಹಣ ಹಿಡಿಯುತ್ತಾರೆ. ದ್ರಿಕ್ ಪಂಚಾಂಗದ ಪ್ರಕಾರ ಸೂತಕ ಸಮಯವು ನವೆಂಬರ್ 8 ರಂದು ಬೆಳಿಗ್ಗೆ 09:36 ಕ್ಕೆ ಪ್ರಾರಂಭವಾಗುತ್ತದೆ ಮತ್ತು ನವೆಂಬರ್ 8 ರಂದು ಸಂಜೆ 06:18 ಕ್ಕೆ ಕೊನೆಗೊಳ್ಳುತ್ತದೆ. ಮಕ್ಕಳು, ವೃದ್ಧರು ಮತ್ತು ಅನಾರೋಗ್ಯದ ಜನರು ಎಚ್ಚರಿಕೆಯಿಂದ ಇರಬೇಕು. ಈ ವರ್ಗದವರು ನವೆಂಬರ್ 8 ರಂದು ಮಧ್ಯಾಹ್ನ 03:11 ರಿಂದ 06:18 ರವರೆಗೆ ಸೂತಕ ಪಾಲಿಸಬೇಕು ಎಂದು ಪಂಚಾಂಗ ತಿಳಿಸಿದೆ. ಹಿಂದೂ ಸಂಪ್ರದಾಯಗಳ ಪ್ರಕಾರ, ಸೂತಕವನ್ನು ಚಂದ್ರ ಗ್ರಹಣದ ಮೊದಲು ಅಶುಭ ಸಮಯವೆಂದು ಪರಿಗಣಿಸಲಾಗುತ್ತದೆ.

ವಿಭಾಗ