ಸುತ್ತೂರಿನಲ್ಲಿ ಹೆಚ್ಚುತ್ತಿರುವ ಮಣಿಪುರ- ಮೇಘಾಲಯ ಮಕ್ಕಳು: ಹಿಂಸಾಚಾರ ಬಳಿಕ ಶಿಕ್ಷಣ ಅರಸಿ ಮಕ್ಕಳ ಬರುವಿಕೆ ಕೊಂಚ ಹೆಚ್ಚು
Manipur Crisis ಮಣಿಪುರದಲ್ಲಿ ಇನ್ನೂ ಹಿಂಸಾಚಾರ ನಿಂತಿಲ್ಲ. ಮಕ್ಕಳು ಶಿಕ್ಷಣಕ್ಕೆ ಪರದಾಡುವ ಸ್ಥಿತಿ ಹಲವೆಡೆ ಅಲ್ಲಿದೆ. ಈಗಾಗಲೇ ಮೈಸೂರು ಜಿಲ್ಲೆಯ ಸುತ್ತೂರು ಜೆಎಸ್‌ಎಸ್ ಉಚಿತ ಶಾಲೆ(jss free school suttur) ಯಲ್ಲಿ ಈಶಾನ್ಯ ರಾಜ್ಯಗಳ ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಈಗ ಮತ್ತಷ್ಟು ಮಕ್ಕಳು ಬಂದಿದ್ಧಾರೆ.
ಮೈಸೂರು:ದೂರದ ಮಣಿಪುರಕ್ಕೂ ಮೈಸೂರಿನ ಸುತ್ತೂರಿಗೂ ನಂಟು ಇದೆ. ಅದು ಧಾರ್ಮಿಕ ನಂಟೇನು ಅಲ್ಲ. ಬದಲಿಗೆ ಶೈಕ್ಷಣಿಕ ನಂಟು.
ಮಣಿಪುರದಲ್ಲಿ ನಾಲ್ಕು ತಿಂಗಳಿನಿಂದ ಹಿಂಸಾಚಾರದ ಪ್ರಕರಣಗಳು ನಿರಂತರವಾಗಿ ನಡೆಯುತ್ತಲೇ ಇವೆ. ಅಲ್ಲಿನ ಸಹಸ್ರಾರು ಮಕ್ಕಳಿಗೆ ಶಿಕ್ಷಣವೂ ಸಮರ್ಪವಾಗಿ ಸಿಗುತ್ತಿಲ್ಲ. ಅಂತಹ ಕೆಲವು ಮಕ್ಕಳು ಶಿಕ್ಷಣ ಅರಸಿ ಮೈಸೂರು ಜಿಲ್ಲೆಯ ಸುತ್ತೂರಿಗೆ ಆಗಮಿಸುತ್ತಿದ್ದಾರೆ.
ಈಗಾಗಲೇ ಮಣಿಪುರ ಹಾಗೂ ಮೇಘಾಲಯದಿಂದ ಹದಿಮೂರು ಮಕ್ಕಳು ಸುತ್ತೂರಿನ ಜೆಎಸ್‌ಎಸ್ ಶಿಕ್ಷಣ ಸಂಸ್ಥೆ ನಡೆಸುವ ಉಚಿತ ಶಾಲೆಯಲ್ಲಿ ಪ್ರವೇಶ ಪಡೆದಿದ್ಧಾರೆ. ಅವರಲ್ಲಿ ಹನ್ನೊಂದು ಬಾಲಕರು ಹಾಗೂ ಇಬ್ಬರು ಬಾಲಕಿಯರು. ಬೇರೆ ಬೇರೆ ತರಗತಿಗಳಿಗೆ ಈ ಮಕ್ಕಳು ಪ್ರವೇಶ ಪಡೆದಿದ್ದಾರೆ. ಈ ಹಿಂದೆಯೇ ಮಣಿಪುರ, ಮೇಘಾಲಯ ಸೇರಿದಂತೆ ಭಾರತದ ನಾನಾ ಭಾಗಗಳಿಂದ 110 ಮಕ್ಕಳು ಶಿಕ್ಷಣ ಪಡೆಯುತ್ತಿದ್ಧಾರೆ.
ಎಷ್ಟು ಮಕ್ಕಳಿದ್ದಾರೆ
ಮೈಸೂರಿನಿಂದ 28 ಕಿ.ಮಿ. ದೂರದಲ್ಲಿರುವ ಕಪಿಲಾ ತೀರದ ಪುಟ್ಟ ಗ್ರಾಮ ಸುತ್ತೂರು ಮಠದಿಂದ ಖ್ಯಾತಿ. ಅದರ ಜತೆಗೆ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯದ್ದೇ ಉಚಿತ ವಸತಿ ಶಾಲೆಯಿಂದಲೂ ಜನಪ್ರಿಯವಾಗಿದೆ. ಶಿಕ್ಷಣ ಅರಸಿ ಮಕ್ಕಳು ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯದಿಂದಲೂ ಬರುತ್ತಿದ್ದಾರೆ. ಈಶಾನ್ಯ ರಾಜ್ಯಗಳ ಮಕ್ಕಳೇ ಅವರಲ್ಲಿ ಅಧಿಕ.
ಸದ್ಯ ಇಲ್ಲಿ ಈಶಾನ್ಯ ರಾಜ್ಯಗಳ 37 ಬಾಲಕರು ಹಾಗೂ 73 ಬಾಲಕಿಯರು ವ್ಯಾಸಂಗ ಮಾಡುತ್ತಿದ್ದಾರೆ, ಇದರಲ್ಲಿ ಮಣಿಪುರದ 12, ಜಾರ್ಖಂಡ್‌ನ 10, ಆಂಧ್ರಪ್ರದೇಶದ 5, ಮಹಾರಾಷ್ಟ್ರದ 4, ತಮಿಳುನಾಡು ಹಾಗೂ ತೆಲಂಗಾಣದ ತಲಾ ಇಬ್ಬರು ಹಾಗೂ ಹರಿಯಾಣ ಮತ್ತು ಅರುಣಾಚಲ ಪ್ರದೇಶದ ತಲಾ ಒಬ್ಬರು ಬಾಲಕರು ವ್ಯಾಸಂಗ ಮಾಡುತ್ತಿದ್ದಾರೆ.
ಬಾಲಕಿಯರಲ್ಲಿ ಮೇಘಾಲಯದಿಂದ 47, ಮಣಿಪುರದಿಂದ 16, ಜಾರ್ಖಂಡ್‌ನಿಂದ 03, ಆಂಧ್ರಪ್ರದೇಶದಿಂದ 06 ಹಾಗೂ ರಾಜಸ್ತಾನದಿಂದ ಒಬ್ಬ ವಿದ್ಯಾರ್ಥಿನಿ ಇದ್ದಾರೆ. ಈಗ 13 ಮಕ್ಕಳು ಬಂದಿರುವುದು ಸೇರಿ ಮಣಿಪುರ ಹಾಗೂ ಮೇಘಾಲಯದ ಮಕ್ಕಳ ಸಂಖ್ಯೆಯೇ 75 ದಾಟಿದೆ.
ಮಣಿಪುರ ಭಾಗದಲ್ಲಿ ಗಲಾಟೆ ಈ ಬಾರಿ ಜೋರಾಗಿಯೇ ಇದೆ. ಇದರಿಂದ ನಮ್ಮ ಮಕ್ಕಳಿಗೆ ಸರಿಯಾಗಿ ಶಿಕ್ಷಣ ಸಿಗುತ್ತಿಲ್ಲ. ಈಗಾಗಲೇ ನಮ್ಮ ಭಾಗದ ಮಕ್ಕಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದುದರಿಂದ ನಾವೂ ಇಲ್ಲಿಗೆ ಬಂದಿದ್ದೇವೆ. ಇಲ್ಲಿನ ವಾತಾವರಣ, ಶಿಕ್ಷಣದ ಕ್ರಮ ಚೆನ್ನಾಗಿದೆಯೇ. ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ವಿಶ್ವಾಸವಿದೆ ಎಂದು ಅವರು ಹೇಳುತ್ತಾರೆ.
ಮಣಿಪುರದ ನಂಟು
ಅದು 2000ದ ಸಮಯ. ಮಣಿಪುರ, ಮೇಘಾಲಯ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಮತಾಂತರ ಸೇರಿದಂತೆ ಹಲವು ವಿವಾದಗಳು ಜೋರಾಗಿದ್ದವು. ಆಗಲೂ ಇದೇ ರೀತಿ ಅಲ್ಲಿ ಶಾಂತಿ ಇರಲಿಲ್ಲ. ಸಾಕಷ್ಟು ಗೊಂದಲದಿಂದಾಗಿ ಪೋಷಕರು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎನ್ನುವ ಆಶಯದೊಂದಿಗೆ ಸುತ್ತೂರು ಹುಡುಕಿಕೊಂಡು ಬಂದರು. ಆ ಭಾಗದ ಕೆಲವರು ಮೈಸೂರಿನಲ್ಲಿ ನಡೆದಿದ್ದ ರೈತ ಸಮಾವೇಶಕ್ಕೆ ಆಗಮಿಸಿದ್ದರು. ಆಗ ಇಲ್ಲಿನ ಶಾಲೆ ಬಗ್ಗೆ ಕೆಲವರಿಗೆ ತಿಳಿದಿತ್ತು. ಇನ್ನು ಕೆಲವರಿಗೆ ಪರಿಚಯಸ್ಥರು ತಿಳಿಸಿದ ಮಾಹಿತಿಯೇ ಅವರನ್ನು ಇಲ್ಲಿಗೆ ಬರುವಂತೆ ಮಾಡಿತು. ಪ್ರತಿ ವರ್ಷ ಐದರಿಂದ ಹತ್ತು ಮಕ್ಕಳು ಶಿಕ್ಷಣ ಬಯಸಿ ಇಲ್ಲಿಗೆ ಬರ ತೊಡಗಿದರು. ಇದರಿಂದ ಈಶಾನ್ಯ ರಾಜ್ಯಗಳ ನಂಟು ಸುತ್ತೂರು ಶಾಲೆಯೊಂದಿಗೆ ಬೆಳೆದಿದೆ. ಈವರೆಗೂ ಮಕ್ಕಳು ಶಿಕ್ಷಣ ಪಡೆದುಕೊಂಡು ತಮ್ಮಲ್ಲಿ ಉನ್ನತ ಶಿಕ್ಷಣ ಪಡೆದು ಬದುಕು ಕಟ್ಟಿಕೊಂಡಿದ್ಧಾರೆ. ಇನ್ನೂ ಕೆಲವರು ಬೇರೆ ಬೇರೆ ಕಡೆ ಶಿಕ್ಷಣ ಪಡೆಯುತ್ತಿದ್ದಾರೆ.
ಕನ್ನಡ ಕಲಿತಿದಾರೆ
ಇಲ್ಲಿಗೆ ಬಂದ ಮಕ್ಕಳು ಆರೇ ತಿಂಗಳಲ್ಲಿ ಸ್ಪಷ್ಟವಾಗಿ ಕನ್ನಡ ಮಾತನಾಡಲು ಕಲಿಯುತ್ತಾರೆ. ಬರೆಯುವುದನ್ನೂ ಕಲಿತಿದ್ಧಾರೆ. ಅಲ್ಲದೇ ತಮ್ಮ ಮನೆಯವರಿಗೂ ಕನ್ನಡ ಹೇಳಿ ಕೊಟ್ಟಿದ್ದಾರೆ. ಕನ್ನಡದ ಹಾಡುಗಳನ್ನು ಹಾಡುತ್ತಾರೆ. ಅಲ್ಲದೇ ತಮ್ಮ ಭಾಷೆಗಳನ್ನು ಇಲ್ಲಿನ ಮಕ್ಕಳಿಗೆ ಕಲಿಸಿದ್ದಾರೆ. ಎಷ್ಟೋ ಕನ್ನಡದ ಮಕ್ಕಳು ಮಣಿಪುರಿ, ಮೇಘಾಲಯದ ಖಾಸಿ ಸಹಿತ ಹಲವು ಭಾಷೆಗಳನ್ನು ಕಲಿತಿದ್ದಾರೆ.
ಬೆಳಿಗ್ಗೆ ಹಾಗೂ ಸಂಜೆಯ ಪ್ರಾರ್ಥನೆಗಳು, ನಂತರ ಪಾಠ ಪ್ರವಚನಗಳ ಸಹಿತ ಕನ್ನಡದಲ್ಲಿಯೇ ಚಟುವಟಿಕೆ ನಡೆಯುವುದರಿಂದ ಮಕ್ಕಳಿಗೆ ಕಲಿಕೆ ಸುಲಭ. ಪ್ರತಿ ತರಗತಿ ಹಾಗೂ ಹಾಸ್ಟೆಲ್‌ಗಳಲ್ಲಿರುವ ಕೇರ್‌ಟೇಕರ್‌ಗಳೂ ಇವರಿಗೆ ಭಾಷೆ ಕಲಿಸುತ್ತಾರೆ. ಆಸಕ್ತಿಯಿಂದ ಅವರೂ ಕಲಿಯುತ್ತಾರೆ ಎನ್ನುವುದು ಸುತ್ತೂರಿನ ಶಿಕ್ಷಣ ಸಂಸ್ಥೆಗಳ ಸಂಯೋಜನಾಧಿಕಾರಿ ಜಿ.ಎಲ್.ತ್ರಿಪುರಾಂತಕ ಅವರ ಹೇಳಿಕೆ.
ಆರು ದಶಕದ ಶಾಲೆ
ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕು ಎನ್ನುವ ಆಶಯದೊಂದಿಗೆ ಸುತ್ತೂರು ಮಠದಿಂದ 1962 ರಲ್ಲಿ ಆರಂಭಿಸಿರುವ ವಸತಿ ಶಾಲೆಯಿದು. ಆರಂಭದಲ್ಲಿ ಮಕ್ಕಳು ಕಡಿಮೆ ಇದ್ದರು. ದೂರ ಎನ್ನುವ ಕಾರಣಕ್ಕೆ ಮಕ್ಕಳು ಇಲ್ಲಿಗೆ ಬರುತ್ತಿರಲಿಲ್ಲ.
2002 ರಲ್ಲಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಹಂಗರಹಳ್ಳಿಯಲ್ಲಿ ಮಕ್ಕಳ ಜೀತ ಪ್ರಕರಣ ಬೆಳಕಿಗೆ ಬಂದು ಭಾರೀ ಸದ್ದು ಮಾಡಿತ್ತು. ಈ ವೇಳೆ ಸುತ್ತೂರಿನ ವಸತಿ ಶಾಲೆಯನ್ನು ಸಂಪೂರ್ಣ ಉಚಿತ ಶಾಲೆಯಾಗಿ ಪರಿವರ್ತಿಸಲಾಯಿತು. ಹಂಗರಹಳ್ಳಿ ಸೇರಿದಂತೆ ಹಲವು ಗ್ರಾಮಗಳ ಮಕ್ಕಳು ಇಲ್ಲಿ ಶಿಕ್ಷಣ ಅರಸಿ ಬಂದರು. ಅಲ್ಲಿಂದ ಈ ಶಾಲೆಗೆ ಬರುವ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ. ಸುತ್ತೂರು ಅಕ್ಕಪಕ್ಕದ ಗ್ರಾಮಗಳಿಂದಲೂ ಒಂದು ಸಾವಿರಕ್ಕೂ ಅಧಿಕ ಮಕ್ಕಳು ಶಾಲೆಗೆ ಬರುತ್ತಾರೆ.
ಸದ್ಯ ನಾಲ್ಕು ಸಾವಿರ ಮಕ್ಕಳು ಇಲ್ಲಿ ಪ್ರತಿ ವರ್ಷ ಶಿಕ್ಷಣ ಪಡೆಯವಷ್ಟರ ಮಟ್ಟಿಗೆ ಬೆಳೆದಿದೆ. ಇದರಲ್ಲಿ ಒಂದು ಸಾವಿರಕ್ಕೂ ಅಧಿಕ ಹೆಣ್ಣು ಮಕ್ಕಳೇ ಇದ್ಧಾರೆ. ಊಟ, ವಸತಿ ಸಂಪೂರ್ಣ ಉಚಿತವಾಗಿದ್ದು. ಶಾಲೆಯ ಶುಲ್ಕ ಸೇರಿ ಸಣ್ಣ ಪುಟ್ಟ ಶುಲ್ಕವನ್ನು ನಿರ್ವಹಣೆಗಾಗಿ ಪಡೆಯಲಾಗುತ್ತದೆ. ಅದೂ ಅತಿ ಕಡಿಮೆ. ಒಂದರಿಂದ ಹತ್ತನೇ ತರಗತಿವರೆಗೆ ಇಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಕನ್ನಡ ಹಾಗೂ ಇಂಗ್ಲೀಷ್ ಮಾಧ್ಯಮ ಶಿಕ್ಷಣವೂ ಇದೆ.
ಜೆಎಸ್ಎಸ್ ಮಠದ ಹಿಂದಿನ ಪೀಠಾಧ್ಯಕ್ಷರಾದ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ ಕನಸಿನೊಂದಿಗೆ ಆರಂಭಗೊಂಡ ವಸತಿ ಶಾಲೆ ಈಗಿನ ಪೀಠಾಧ್ಯಕ್ಷರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಒತ್ತಾಸೆಯೊಂದಿಗೆ ಶಿಕ್ಷಣ ಕ್ರಾಂತಿಯಲ್ಲೇ ನಿರತವಾಗಿದೆ. ಕುವೆಂಪು ಅವರ ಸರ್ವ ಜನಾಂಗದ ತೋಟವೂ ಆಗಿ ಮಾರ್ಪಟ್ಟಿದೆ.