ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಕಾರು ಪಲ್ಟಿ, ವಾಜಮಂಗಲ ಗ್ರಾಮದಲ್ಲಿ ಅಂಬೇಡ್ಕರ್ ಭಾವಚಿತ್ರ ಹರಿದು ವಿಕೃತಿ
ಕನ್ನಡ ಸುದ್ದಿ  /  ಕರ್ನಾಟಕ  /  ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಕಾರು ಪಲ್ಟಿ, ವಾಜಮಂಗಲ ಗ್ರಾಮದಲ್ಲಿ ಅಂಬೇಡ್ಕರ್ ಭಾವಚಿತ್ರ ಹರಿದು ವಿಕೃತಿ

ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಕಾರು ಪಲ್ಟಿ, ವಾಜಮಂಗಲ ಗ್ರಾಮದಲ್ಲಿ ಅಂಬೇಡ್ಕರ್ ಭಾವಚಿತ್ರ ಹರಿದು ವಿಕೃತಿ

ಮೈಸೂರು ಅಪರಾಧ ಸುದ್ದಿಗಳು: ಚಾಮುಂಡಿ ಬೆಟ್ಟದಲ್ಲಿ ಕಾರೊಂದು ಪಲ್ಟಿಯಾಗಿರುವ ಘಟನೆ ನಡೆದಿದೆ. ಮೈಸೂರು ತಾಲೂಕಿನ ವಾಜಮಂಗಲ ಗ್ರಾಮದಲ್ಲಿ ಬಿ ಆರ್ ಅಂಬೇಡ್ಕರ್ ಭಾವಚಿತ್ರವನ್ನು ಕಿಡಿಗೇಡಿಗಳು ಹರಿದು ಹಾಕಿದ್ದಾರೆ. ಮತ್ತೊಂದೆಡೆ, ಕಾವೇರಿ ನದಿಗೆ ಸ್ನಾನಕ್ಕೆಂದು ಇಳಿದ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ತಿ ನರಸೀಪುರದಲ್ಲಿ ನಡೆದಿದೆ.

ಚಾಮುಂಡಿ ಬೆಟ್ಟದಲ್ಲಿ ಕಾರು ಪಲ್ಟಿ, ವಾಜಮಂಗಲದಲ್ಲಿ ಅಂಬೇಡ್ಕರ್ ಭಾವಚಿತ್ರ ಹರಿದು ವಿಕೃತಿ
ಚಾಮುಂಡಿ ಬೆಟ್ಟದಲ್ಲಿ ಕಾರು ಪಲ್ಟಿ, ವಾಜಮಂಗಲದಲ್ಲಿ ಅಂಬೇಡ್ಕರ್ ಭಾವಚಿತ್ರ ಹರಿದು ವಿಕೃತಿ

ಮೈಸೂರು: ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಕಾರೊಂದು ಪಲ್ಟಿಯಾಗಿರುವ ಘಟನೆ ನಡೆದಿದೆ. ಆದರೆ, ಕಾರಿನಲ್ಲಿದ್ದವರು ಅದೃಷ್ಟವಶಾತ್ ಯಾವುದೇ ಅಪಾಯವಾಗದೆ ಪಾರಾಗಿದ್ದಾರೆ. ಬೆಂಗಳೂರಿನಿಂದ ನಾಡಿನ ಅಧಿದೇವತೆ ಚಾಮುಂಡೇಶ್ವರಿಯ ದರ್ಶನಕ್ಕೆ ಆಗಮಿಸಿದ್ದ ಕುಟುಂಬವಿದ್ದ ಕಾರು ಅಪಘಾತಕ್ಕೀಡಾಗಿದೆ. ಚಾಮುಂಡಿ ಬೆಟ್ಟದಿಂದ ವಾಪಸ್ಸಾಗುವಾಗ ವೇಳೆ ಕಾರು ಪಲ್ಟಿಯಾಗಿದೆ. ರಸ್ತೆಯ ತಡೆಗೋಡೆಗೆ ಡಿಕ್ಕಿಯಾಗಿ ಕಾರು ಪಲ್ಟಿಯಾಗಿದೆ. ಘಟನೆಯಿಂದ ಯಾರಿಗೂ ಗಾಯಗಳಾಗಿಲ್ಲ. ಈ ಸಂಬಂಧ ಸಿದ್ದಾರ್ಥನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.

ಅತ್ತ ಮೈಸೂರು ತಾಲೂಕಿನ ವಾಜಮಂಗಲ ಗ್ರಾಮದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಭಾವಚಿತ್ರವನ್ನು ಕಿಡಿಗೇಡಿಗಳು ಹರಿದು ಹಾಕಿದ ಘಟನೆ ನಡೆಸಿದೆ. ಅಂಬೇಡ್ಕರ್ ನಾಮಫಲಕ, ಬೋರ್ಡ್ ಹಾಗೂ ಫ್ಲೆಕ್ಸ್‌ಗಳನ್ನು ಹರಿದು ಅದಕ್ಕೆ ಸಗಣಿಯಿಂದ ಹೊಡೆದು ವಿಕೃತಿ ಮೆರೆದಿದ್ದಾರೆ. ಘಟನೆಯಿಂದ ವಾಜಮಂಗಲ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಸ್ಥಳಕ್ಕೆ ಮೈಸೂರು ಜಿಲ್ಲಾ ಎಸ್‌ಪಿ ಹಾಗೂ ಮೇಗಳಾಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಾಜಮಂಗಲ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಡೆಸಲಾಗಿದೆ.

ಸ್ನಾನಕ್ಕೆ ನೀರಿಗಿಳಿದ ಯುವಕ ನೀರುಪಾಲು

ಸ್ನಾನಕ್ಕೆಂದು ಕಾವೇರಿ ನದಿಗೆ ಇಳಿದಿದ್ದ ಯುವಕ ನೀರು ಪಾಲಾಗಿರುವ ಘಟನೆ ತಿ ನರಸೀಪುರ ತಾಲೂಕಿನ ಬನ್ನೂರಿನಲ್ಲಿ ನಡೆದಿದೆ. ಘಟನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ನಿವಾಸಿ ಮನ್ಸೂರ್ (19) ಮೃತಪಟ್ಟಿದ್ದಾನೆ. ಕೋಳಿ ಅನ್‌ಲೋಡ್ ಮಾಡಲು 8 ಮಂದಿ ಸ್ಥಳಕ್ಕೆ ಬಂದಿದ್ದರು. ಈ ಪೈಕಿ ಮನ್ಸೂರ್ ಕಾವೇರಿ ನದಿಗೆ ಇಳಿದಿದ್ದಾನೆ. ಘಟನೆ ಸಂಬಂಧ ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕ್ಯಾಂಡಲ್ ಹಿಡಿದು ಪ್ರತಿಭಟನೆ

ಮೈಸೂರಿನ ಎಸ್‌ಪಿ ಕಚೇರಿ ಬಳಿ ರಸ್ತೆ ಅಗಲೀಕರಣಕ್ಕಾಗಿ 40 ಮರಗಳನ್ನು ಕಡಿದ ವಿಚಾರವಾಗಿ ಗ್ರಾಹಕರ ಪರಿಷತ್ ವತಿಯಿಂದ ಕ್ಯಾಂಡಲ್ ಹಿಡಿದು ಪ್ರತಿಭಟನೆ ನಡೆಸಲಾಗಿದೆ. ಪ್ರತಿಭಟನಕಾರರಿಗೆ ಶಾಸಕ ಶ್ರೀ ವತ್ಸ ಸಾಥ್ ನೀಡಿದ್ದಾರೆ. ಮರ ಕಡಿದ ಜಾಗದಲ್ಲಿ ಕ್ಯಾಂಡಲ್‌ ಹಚ್ಚಿ ಪ್ರತಿಭಟನೆ ನಡೆಸಲಾಗಿದ್ದು, ರಸ್ತೆಯ ಎರಡು ಬದಿಯಲ್ಲಿ ನಿಂತು ಕ್ಯಾಂಡಲ್ ಹಿಡಿದು ಪ್ರತಿಭಟನೆ ಮಾಡಿದ್ದಾರೆ. ರೈತರು, ಯುವಕರು, ಯುವತಿಯರು ಸೇರಿದಂತೆ ಅನೇಕ ಸಂಘ ಸಂಸ್ಥೆಗಳ ಪ್ರಮುಖರು ಪ್ರತಿಭಟನೆಯಲ್ಲಿ ಭಾಗಿಯಾದರು.

'ಮರ'ಮೇಧ ವಿರೋಧಿ ಅಭಿಯಾನಕ್ಕೆ ಸಂಸದ ಯದುವೀರ್‌ ಒಡೆಯರ್‌ ಸಾಥ್‌

ಕರ್ನಾಟಕ ಸಾಂಸ್ಕೃತಿಕ ಹಾಗೂ ಪಾರಂಪರಿಕ ರಾಜಧಾನಿ ಮೈಸೂರಿನಲ್ಲಿ ನಡೆಯುತ್ತಿರುವ ಮರಗಳ ಮಾರಣಹೋಮವನ್ನು ತೀವ್ರವಾಗಿ ಖಂಡಿಸಿರುವ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಈ ಸಂಬಂಧ ನಿರ್ಧಾರ ಮರು ಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ನಜರಾಬಾದ್‌ ವ್ಯಾಪ್ತಿಯ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ವೃತ್ತದ ಬಳಿ 40 ಮರಗಳನ್ನು ಕಡಿದಿರುವ ಬಗ್ಗೆ ಇನ್ನಷ್ಟು ಮರಗಳಿಗೆ ಕೊಡಲಿ ಬೀಳುವ ಸಾಧ್ಯತೆ ಹಿನ್ನೆಲೆಯಲ್ಲಿ ಪತ್ರಿಕಾ ಪ್ರಕಟಣೆ ನೀಡಿರುವ ಯದುವೀರ್‌ ಒಡೆಯರ್‌, ಮರ ಮೇಧ ನಿಲ್ಲಿಸಲು ನಡೆಯುತ್ತಿರುವ ಅಭಿಯಾನಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಅಭಿವೃದ್ಧಿ ಹೆಸರಿನಲ್ಲಿ ಮರಗಳನ್ನು ಕಡಿಯುವುದು ಸಾಧುವಲ್ಲ. ಪರಿಸರ ಹಾಗೂ ಪ್ರಕೃತಿಯನ್ನು ಸಂರಕ್ಷಿಸಿಕೊಂಡೇ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ. ಯಾವುದೇ ಕಾರಣಕ್ಕೂ ನಾವು ಮರಗಳನ್ನು ಕಡಿಯಲು ಬಿಡುವುದಿಲ್ಲ. ಒಂದು ವೇಳೆ ಈ ರೀತಿಯ ಕ್ರಮಗಳನ್ನು ಕೈಗೊಳ್ಳಲೇಬೇಕಾಗುತ್ತದೆ ಎಂದು ತಿಳಿಸಿದರೆ ಇದಕ್ಕೆ ಪರ್ಯಾಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಂಸದರು ತಿಳಿಸಿದ್ದಾರೆ.

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.