ಪತ್ನಿಯನ್ನ ಕೊಲೆ ಮಾಡಿ ಮೃತದೇಹ ಸಂಪ್‌ನಲ್ಲಿ ಹಾಕಿದ ಪತಿ; ಮೈಸೂರಿನ ಆಲನಹಳ್ಳಿ ಬಡಾವಣೆಯಲ್ಲಿ ಘಟನೆ
ಗಂಡನೇ ಹೆಂಡತಿಯನ್ನು ಕೊಂದು, ಮೃತದೇಹವನ್ನು ಸಂಪ್‌ನಲ್ಲಿ ಹಾಕಿರುವ ಘಟನೆ ಮೈಸೂರಿನ ಆಲನಹಳ್ಳಿ ಬಡಾವಣೆಯಲ್ಲಿ ನಡೆದಿದೆ. 35 ವರ್ಷದ ಬಸಮ್ಮಣಿ ಮೃತ ದುರ್ದೈವಿ. ಚೌಡಪ್ಪ, ಬಸಮ್ಮಣಿ ದಂಪತಿಗೆ ಎರಡು ಮಕ್ಕಳಿದ್ದು ಅಪ್ಪ–ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಎಂಬಂತೆ, ತಾಯಿ ಕಳೆದುಕೊಂಡು ಮಕ್ಕಳು ಅನಾಥರಾಗಿದ್ದಾರೆ.
ಮೈಸೂರು: ಪತ್ನಿಯನ್ನು ಕೊಲೆ ಮಾಡಿದ ಪತಿ, ಮೃತದೇಹವನ್ನು ಸಂಪ್ ಒಳಗೆ ಹಾಕಿದ ಘಟನೆ ಮೈಸೂರಿನ ಆಲನಹಳ್ಳಿ ಬಡಾವಣೆಯ 5ನೇ ಕ್ರಾಸ್‌ನಲ್ಲಿ ನಡೆದಿದೆ. 35 ವರ್ಷದ ಬಸಮ್ಮಣಿ ಮೃತ ದುರ್ದೈವಿ. 55 ವರ್ಷದ ಚೌಡಪ್ಪ ತನ್ನ ಪತ್ನಿಯನ್ನು ಕೊಲೆ ಮಾಡಿ ಮನೆಯ ಸಂಪ್ ಒಳಗೆ ಹಾಕಿದ್ದಾನೆ. ಚೌಡಪ್ಪ ಹಾಗೂ ಬಸಮ್ಮಣಿ ದಂಪತಿಗೆ 12 ವರ್ಷದ ಪುತ್ರಿ ಹಾಗೂ 2 ವರ್ಷದ ಪುತ್ರ ಇದ್ದಾರೆ. ಇದೀಗ ಅಪ್ಪನ ಕೃತ್ಯದಿಂದಾಗಿ ಮಕ್ಕಳು ಹೆತ್ತ ಅಮ್ಮನನ್ನೇ ಕಳೆದುಕೊಂಡಿದ್ದಾರೆ.
ಮನೆಯಲ್ಲಿ ಪ್ರತಿನಿತ್ಯ ಕ್ಷುಲ್ಲಕ ಕಾರಣಗಳಿಗೆ ಜಗಳ ಮಾಡುತ್ತಿದ್ದ ಚೌಡಯ್ಯ ಇದೀಗ ಪತ್ನಿಯನ್ನು ಕೊಲೆ ಮಾಡಿದ್ದಾನೆ. ಘಟನಾ ಸ್ಥಳಕ್ಕೆ ಆಲನಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಸ್ಥಳ ಮಹಜರು ಮಾಡಿದ್ದಾರೆ. ಸ್ಥಳಕ್ಕೆ ಡಿಸಿಪಿ ಮುತ್ತುರಾಜ್ ಕೂಡ ಭೇಟಿದ್ದಾರೆ.
ಮೃತ ಬಸಮ್ಮಣಿಗೆ ಗಂಡ ಚೌಡಪ್ಪ, ಅತ್ತೆ ಗೌರಮ್ಮ ಕಿರುಕುಳ ನೀಡುತ್ತಿದ್ದರೆಂಬ ಆರೋಪ ಕೇಳಿ ಬಂದಿವೆ. ಪ್ರತಿನಿತ್ಯ ಕಿರುಕುಳ ಕೊಟ್ಟು ಊಟವನ್ನು ಕೊಡದೆ ಜಗಳ ಮಾಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ.
ಕೊಲೆಯಾದ ಮನೆಯಲ್ಲಿ ನಿತ್ಯ ಜಗಳ ನಡೆಯುತ್ತಿದ್ದ ಬಗ್ಗೆ ನೆರೆಯ ಮನೆಯವರು ಮಾಹಿತಿ ನೀಡಿದ್ದಾರೆ. ಪತ್ನಿಯ ತವರೂರು ಶೆಟ್ಟನಾಯಕನ ಹಳ್ಳಿಗೂ ಕಳಿಸದೆ ದಿನನಿತ್ಯ ಕಿರುಕುಳ ಕೊಡುತ್ತಿದ್ದ ಎಂದು ಅಕ್ಕಪಕ್ಕದ ಮನೆಯವರು ಹೇಳಿದ್ದಾರೆ. ಸದ್ಯ ಕೊಲೆ ಆರೋಪಿ ಚೌಡಪ್ಪ ಮತ್ತು ಚೌಡಪ್ಪ ತಾಯಿ ಗೌರಮ್ಮರನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದೀಗ ತಂದೆಯ ದುಡುಕು ನಿರ್ಧಾರದಿಂದ ತಾಯಿಯನ್ನು ಕಳೆದುಕೊಂಡ ಇಬ್ಬರು ಮಕ್ಕಳ ಆಕ್ರಂದನ ಮುಗಿಲು ಮುಟ್ಟಿದೆ. ತಮ್ಮ ಅಪ್ಪನಿಂದಲೇ ಅಮ್ಮನನ್ನು ಕಳೆದುಕೊಂಡ ಮಕ್ಕಳು ಅನಾಥರಾಗಿದ್ದಾರೆ.