ನಂಜನಗೂಡು: ಮಹಿಳೆಯರ ಬಗ್ಗೆ ಅಶ್ಲೀಲ ಚಿತ್ರ ಬಿಡಿಸಿ, ಕಾಮಪ್ರಚೋದಕ ಚೀಟಿ ಮನೆ ಮುಂದಿಡುತ್ತಿದ್ದ ಸೈಕೋನನ್ನು ಪೊಲೀಸರಿಗೆ ಒಪ್ಪಿಸಿದ ಜನ
Mysuru Crime: ನಂಜನಗೂಡು ತಾಲೂಕು ಹುಲ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯರ ಬಗ್ಗೆ ಅಶ್ಲೀಲ ಚಿತ್ರ ಬಿಡಿಸಿ, ಕಾಮಪ್ರಚೋದಕ ಚೀಟಿ ಮನೆ ಮುಂದಿಡುತ್ತಿದ್ದ ಸೈಕೋನನ್ನು ಹಿಡಿದ ಗ್ರಾಮಸ್ಥರು ಆತನನ್ನು ಪೊಲೀಸರಿಗೆ ಒಪ್ಪಿಸಿದರು.
Mysuru Crime: ಗ್ರಾಮದಲ್ಲಿರುವ ಮಹಿಳೆಯರು, ಯುವತಿಯರ ಕುರಿತಾಗಿ ಕಾಮ ಪ್ರಚೋದಕ ಬರಹ ಬರೆದು ಅಶ್ಲೀಲ ಚಿತ್ರ ಬಿಡಿಸಿದ ಚೀಟಿಗಳನ್ನು ಮನೆಗಳ ಮುಂದೆ ಇಟ್ಟು ಹೋಗುತ್ತಿದ್ದ ಸೈಕೋನನ್ನು ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಹುಲ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಮುಖಂಡ ಶಿವಣ್ಣ (54 ವರ್ಷ) ಎಂಬಾತ ಈ ಕೃತ್ಯವೆಸಗುತ್ತಿದ್ದಾಗಲೇ ಗ್ರಾಮಸ್ಥರ ಕೈಗೆ ಸಿಕ್ಕಿಹಾಕಿಕೊಂಡಿದ್ದ. ಸಾರ್ವಜನಿಕರಿಂದ ಧರ್ಮದೇಟು ತಿಂದ ಶಿವಣ್ಣನನ್ನು ಗ್ರಾಮಸ್ಥರು ಬಳಿಕ ಪೊಲೀಸರಿಗೊಪ್ಪಿಸಿ, ಕೇಸ್ ದಾಖಲಿಸುವಂತೆ ಮನವಿ ಮಾಡಿದ್ದರು. ಹುಲ್ಲಹಳ್ಳಿ ಪೊಲೀಸರು ಶಿವಣ್ಣನನ್ನು ಬಂಧಿಸಿದ್ದಾರೆ. ಗ್ರಾಮಸ್ಥರು ನೀಡಿದ ದೂರು ಆಧರಿಸಿ ಎಫ್‌ಐಆರ್ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ.
ಮಹಿಳೆಯರು, ಯುವತಿಯರ ನೆಮ್ಮದಿ ಕೆಡಿಸಿದ್ದ ಸೈಕೋ
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕು ಹುಲ್ಲಹಳ್ಳಿ ಗ್ರಾಮದ ವರದರಾಜಸ್ವಾಮಿ ಬಡಾವಣೆಯಲ್ಲಿ ಈ ಕೃತ್ಯ ಬೆಳಕಿಗೆ ಬಂದಿದೆ. ಗ್ರಾಮದ ವಿವಾಹಿತ ಮಹಿಳೆಯರು ಮತ್ತು ಅವಿವಾಹಿತ ಯುವತಿಯರ ನೆಮ್ಮದಿ ಕೆಡಿಸಿದ್ದ ಪ್ರಕರಣವನ್ನು ಗ್ರಾಮಸ್ಥರೇ ಇತ್ಯರ್ಥಗೊಳಿಸಿದ್ದು, ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿ ಶಿವಣ್ಣ ಕಳೆದ ಕೆಲವು ದಿನಗಳಿಂದ ಗ್ರಾಮದ ಮಹಿಳೆಯರು ಮತ್ತು ಯುವತಿಯರ ಬಗ್ಗೆ ಅಸಭ್ಯವಾಗಿ ಬರೆದು, ಅಶ್ಲೀಲ ಲೈಂಗಿಕ ಚಿತ್ರಗಳನ್ನು ಬಿಡಿಸಿ ಆ ಚೀಟಿಯನ್ನು ಆಯಾ ಯುವತಿಯರು, ಮಹಿಳೆಯರ ಮನೆ ಎದುರು ಇಟ್ಟು ಹೋಗುತ್ತಿದ್ದ. ಪರಿಣಾಮ, ಆ ಯುವತಿಯರು ಮತ್ತು ಮಹಿಳೆಯರ ಮೇಲೆ ಕುಟುಂಬ ಸದಸ್ಯರು ಸಂದೇಹ ಪಡುವಂತಾಯಿತು. ಅಕ್ರಮ ಸಂಬಂಧ ವಿಷಯಗಳು ಪ್ರಸ್ತಾಪವಾಗಿ ಮನೆಯಲ್ಲಿ ನೆಮ್ಮದಿ ಹಾಳಾಯಿತು. ನಿತ್ಯ ಜಗಳಗಳು ಶುರುವಾದವು.
ಈ ಕೃತ್ಯವೆಸಗುತ್ತಿದ್ದವರು ಯಾರು ಎಂಬುದು ಗೊತ್ತಾಗದೇ ಮಹಿಳೆಯರು, ಯುವತಿಯರು ಮತ್ತು ಗ್ರಾಮಸ್ಥರು ಕಂಗಾಲಾಗಿದ್ದರು. ಮಾನಸಿಕ ಕಿರುಕುಳಕ್ಕೆ ಒಳಗಾಗಿ ಒಬ್ಬ ಮಹಿಳೆ ಆತ್ಮಹತ್ಯೆಗೂ ಯತ್ನಿಸಿದ್ದರು. ಇದರಿಂದ ಕಂಗೆಟ್ಟ ನಾವೆಲ್ಲರೂ ಆರೋಪಿಯನ್ನು ರೆಡ್‌ಹ್ಯಾಂಡ್ ಆಗಿ ಹಿಡಿಯಬೇಕು ಎಂದು ಕಾಯುತ್ತಿದ್ದೆವು. ಸೋಮವಾರ ರಾತ್ರಿ ಅಶ್ಲೀಲ ಚಿತ್ರದ ಚೀಟಿ ಇಡಲು ಮನೆಯೊಂದರ ಮುಂದೆ ಬಂದ ಸೈಕೋಪಾತ್‌ನನ್ನು ನಾವು ಹಿಡಿದೆವು. ಸಾಕ್ಷಿ ಸಮೇತ ಸಿಕ್ಕಿಬಿದ್ದ ವ್ಯಕ್ತಿ ಗ್ರಾಮದ ಮುಖಂಡನೇ ಆಗಿರುವುದು ವಿಪರ್ಯಾಸ. ಸೈಕಲ್ ಮೇಲೆ ಬಂದ ವ್ಯಕ್ತಿ ಮನೆ ಎದುರು ಚೀಟಿ ಇಡುವಾಗಲೇ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾನೆ ಎಂದು ಗ್ರಾಮಸ್ಥ ಅಪ್ಪು ತಿಳಿಸಿದ್ದಾರೆ.
ಗ್ರಾಮದ ಮುಖಂಡನಿಂದಲೇ ಸೈಕೋ ಕೃತ್ಯ
ಗ್ರಾಮದಲ್ಲಿ ಸಮಸ್ಯೆಗಳಾದಾಗ ಪರಿಹಾರಕ್ಕಾಗಿ ಯಾವ ಮುಖಂಡನ ಎದುರು ಗ್ರಾಮಸ್ಥರು ನಿಲ್ಲುತ್ತಿದ್ದರೋ ಆತನೇ ಈ ಸೈಕೋ ಕೃತ್ಯವೆಸಗಿರುವುದು ಗ್ರಾಮಸ್ಥರನ್ನು ಕಂಗೆಡುವಂತೆ ಮಾಡಿದೆ. ವರದರಾಜಸ್ವಾಮಿ ಬಡಾವಣೆ ನಿವಾಸಿ ಹಾಗೂ ಗ್ರಾಮದ ಮುಖಂಡ ಶಿವಣ್ಣ (54) ಈ ಕೃತ್ಯವೆಸಗಿದ ಆರೋಪಿ. ಕಳೆದ ಮೂರ್ನಾಲ್ಕು ವರ್ಷಗಳಿಂದ ಆತ ಈ ರೀತಿ ಸೈಕೋ ಕೃತ್ಯ ಎಸಗುತ್ತಿದ್ದು, ಇದುವರೆಗೂ ಸಿಕ್ಕಿಬಿದ್ದಿರಲಿಲ್ಲ. ಇದುವರೆಗೂ ಗ್ರಾಮದ 50ಕ್ಕೂ ಹೆಚ್ಚು ಮನೆಗಳ ಎದುರು ಈ ರೀತಿ ಅಶ್ಲೀಲ ಚಿತ್ರ, ಬರಹದ ಚೀಟಿ ಇಟ್ಟು ಕಿರುಕುಳಕೊಟ್ಟಿದ್ದ ಎಂದು ಗ್ರಾಮಸ್ಥರು ಹೇಳಿಕೊಂಡಿದ್ದಾರೆ.
ಈತನ ಕೃತ್ಯದ ಪರಿಣಾಮ ಕೆಲವು ಕುಟುಂಬಗಳಲ್ಲಿ ವೈಮನಸ್ಸು ಉಂಟಾಗಿದ್ದವು. ವಿವಾಹ ಸಂಬಂಧ ಹಾಳಾದವು. ಮದುವೆ ಆಗಬೇಕಾಗಿದ್ದ ಯುವತಿಯರ ಹೆಸರು ಹಾಳಾಯಿತು. ಗ್ರಾಮಸ್ಥರ ಒಳಿತು ಬಯಸಬೇಕಾಗಿದ್ದ ಗ್ರಾಮದ ಮುಖಂಡನ ಈ ಕೃತ್ಯ ಗ್ರಾಮದ ಜನರ ಆಕ್ರೋಶ, ಅಸಮಾಧಾನಕ್ಕೆ ಕಾರಣವಾಯಿತು. ನಾನಾ ರೀತಿಯ ನೋವು ಅನುಭವಿಸಿದ್ದ ಗ್ರಾಮಸ್ಥರು ಇದೀಗ ಪೊಲೀಸ್ ದೂರು ದಾಖಲಿಸಿದ್ದು, ಶಿವಣ್ಣನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಶಿವಣ್ಣನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.