Mysuru Dasara 2023: ಮೈಸೂರು ದಸರಾ ವೆಬ್‌ಸೈಟ್ ಮತ್ತು ಪೋಸ್ಟರ್ ಬಿಡುಗಡೆ, ಸಾಮಾಜಿಕ ಸಂದೇಶದ ಸ್ತಬ್ಧಚಿತ್ರ ರೂಪಿಸಲು ಸಚಿವರ ಸೂಚನೆ
Mysuru Dasara 2023: ಮೈಸೂರು ಅರಮನೆ ಮಂಡಳಿಯಲ್ಲಿ ಹಮ್ಮಿಕೊಂಡಿದ್ದ ದಸರಾ ಉಪ ಸಮಿತಿಗಳ ಸಭೆಯಲ್ಲಿ ಮೈಸೂರು ದಸರಾ ಪೋಸ್ಟರ್, ಲೋಗೋವನ್ನು ಅನಾವರಣಗೊಳಿಸಲಾಗಿದೆ. ಅದೇ ರೀತಿ ಮೈಸೂರು ದಸರಾದ ವೆಬ್‌ಸೈಟ್ ಅನ್ನೂ ಲೋಕಾರ್ಪಣೆ ಮಾಡಲಾಗಿದೆ.
ಮೈಸೂರು ದಸರಾ 2023ರ ಸಿದ್ಧತೆ ಭರದಿಂದ ಸಾಗಿದ್ದು, ಇಂದು (ಅ.3) ದಸರಾ ಪೋಸ್ಟರ್‌ಗಳು, ಲೋಗೋವನ್ನು ಅನಾವರಣಗೊಳಿಸಲಾಗಿದೆ. ಅದೇ ರೀತಿ ಮೈಸೂರು ದಸರಾ ವೆಬ್‌ಸೈಟ್ ಅನ್ನೂ ಲೋಕಾರ್ಪಣೆ ಮಾಡಲಾಗಿದೆ.
ಟ್ರೆಂಡಿಂಗ್ ಸುದ್ದಿ
ಮೈಸೂರು ಅರಮನೆ ಮಂಡಳಿಯಲ್ಲಿ ಹಮ್ಮಿಕೊಂಡಿದ್ದ ದಸರಾ ಉಪ ಸಮಿತಿಗಳ ಸಭೆಯಲ್ಲಿ ಈ ಎಲ್ಲ ಕಾರ್ಯಗಳು ನೆರವೇರಿವೆ. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೈಸೂರು ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ನಾಡಹಬ್ಬ ದಸರಾ ಮಹೋತ್ಸವದ ಪ್ರಯುಕ್ತ ಹಮ್ಮಿಕೊಂಡಿರುವ ಎಲ್ಲಾ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ರೂಪಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಬಾರಿ ಅತ್ಯಂತ ಸರಳವೂ ಹಾಗೂ ಅದ್ದೂರಿಯೂ ಅಲ್ಲದ ಸಾಂಪ್ರದಾಯಿಕ ದಸರಾವನ್ನು ಆಚರಿಸುತ್ತಿದ್ದು, ಸಾಂಪ್ರದಾಯಿಕ ದಸರಾ ಆಚರಣೆಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಹಾಗೂ ಕಾರ್ಯಕ್ರಮಗಳನ್ನು ಕ್ರಮಬದ್ಧವಾಗಿ ಆಯೋಜಿಸಿ ಎಂದು ಸಚಿವ ಮಹದೇವಪ್ಪ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಈಗಾಗಲೇ 18 ವಿವಿಧ ದಸರಾ ಉಪ ಸಮಿತಿಗಳನ್ನು ರಚಿಸಲಾಗಿದ್ದು, ಈ ಬಾರಿ ಹಿಂದಿನ ಅರಮನೆಯ ವೈಭವವನ್ನು ಮರಳಿ ತರುವ ನಿಟ್ಟಿನಲ್ಲಿ 250 (ಸೆರಮೊನಿ ಡ್ರೆಸ್) ಸಮವಸ್ತ್ರಗಳಿಗಾಗಿ ಟೆಂಡರ್ ಕರೆಯಲಾಗಿದೆ. ಜಿಲ್ಲಾಮಟ್ಟದಲ್ಲಿ ರೈತ ದಸರಾವನ್ನು ಆಯೋಜಿಸಿ. ರೈತ ದಸರಾದಲ್ಲಿ ರೈತರಿಗೆ ಉಪಯೋಗವಾಗುವ ಮಣ್ಣಿನ ಫಲವತ್ತತೆ, ಮಿಶ್ರ ಬೆಳೆ, ಪರ್ಯಾಯ ಬೆಳೆ ಹಾಗೂ ಆರ್ಥಿಕ ಅಭಿವೃದ್ಧಿ, ಜಿಡಿಪಿ ಮುಂತಾದ ವಿಚಾರಗಳನ್ನು ಒಳಗೊಂಡ ವಿಚಾರ ಸಂಕಿರಣಗಳನ್ನು ಆಯೋಜಿಸಿ ಎಂದು ತಿಳಿಸಿದರು.
ಈ ವೇಳೆ ಸಾಂಸ್ಕೃತಿಕ, ಕ್ರೀಡಾ, ಲಲಿತಕಲಾ, ಕವಿಗೋಷ್ಠಿ, ಗ್ರಾಮೀಣ ದಸರಾ, ಯೋಗಾದಸರಾ ಮಹಿಳಾ ಹಾಗೂ ಮಕ್ಕಳ ದಸರಾ, ಆಹಾರ ಮೇಳ ಚಲನ ಚಿತ್ರೋತ್ಸವ, ಯುವ ಸಂಭ್ರಮ ಹಾಗೂ ಯುವ ದಸರಾ ಸೇರಿದಂತೆ ವಿವಿಧ ದಸರಾ ಉಪ ಸಮಿತಿಗಳ ಅಧಿಕಾರಿಗಳೊಟ್ಟಿಗೆ/ಸದಸ್ಯರೊಟ್ಟಿಗೆ ಚರ್ಚಿಸಿದರು.
ನಂತರ ದಸರಾ ಸಾಂಸ್ಕೃತಿಕ ಉಪಸಮಿತಿಯ ವತಿಯಿಂದ ಪೋಸ್ಟರ್ ಬಿಡುಗಡೆ ಹಾಗೂ ದಸರಾ ವೆಬ್ ಸೈಟ್ ಗೆ ಚಾಲನೆ ನೀಡಲಾಯಿತು.
ಸಭೆಯಲ್ಲಿ ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ್ ತಂಗಡಗಿ, ಕೆಡಿಪಿ ಸದಸ್ಯರಾದ ಡಾ.ಯತೀಂದ್ರ ಸಿದ್ದರಾಮಯ್ಯ,ಅಪರ ಮುಖ್ಯ ಕಾರ್ಯದರ್ಶಿಗಳಾದ ಮಂಜುಳಾ, ಜಿಲ್ಲಾಧಿಕಾರಿಗಳಾದ ಡಾ. ಕೆ ವಿ ರಾಜೇಂದ್ರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಕೆ.ಎಂ ಗಾಯತ್ರಿ, ಮೈಸೂರು ಮಹಾನಗರ ಪಾಲಿಕೆಯ ಆಯುಕ್ತ ಆಶಾದ್ ಊರ್ ರೆಹಮಾನ್ ಶರೀಫ್ ಸೇರಿ ದಸರಾ ಉಪ ಸಮಿತಿಗಳ ನೋಡಲ್ ಅಧಿಕಾರಿಗಳು, ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಸಾಮಾಜಿಕ ಸಂದೇಶ ಸಾರುವ ಸ್ತಬ್ಧಚಿತ್ರ ಸಿದ್ಧಪಡಿಸಿ ಎಂದ ಡಾ.ಹೆಚ್.ಸಿ.ಮಹದೇವಪ್ಪ
ಸಮಾಜದಲ್ಲಿ ಸಾಮರಸ್ಯ, ಸೌಹರ್ದತೆ ಬೀರುವ ಮತ್ತು ಸಾಂವಿಧಾನಿಕ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಅರಿವು ಮೂಡಿಸಿ ಸಾಮಾಜಿಕ ಸಂದೇಶ ಸಾರುವ ಅರ್ಥಪೂರ್ಣವಾದ ಸ್ತಬ್ಧಚಿತ್ರಗಳನ್ನು ದಸರಾ ಉತ್ಸವದ ಮೆರವಣಿಗೆಗೆ ಸಿದ್ಧಪಡಿಸಬೇಕು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗದಲ್ಲಿ ದಸರಾ ಮೆರವಣಿಗೆಯಲ್ಲಿ ಭಾಗವಹಿಸುವ ಸ್ತಬ್ಧಚಿತ್ರಗಳ ಸಿದ್ಧತೆ ಸಂಬಂಧ ವಿವಿಧ ಜಿಲ್ಲೆಗಳ ನೋಡೆಲ್ ಅಧಿಕಾರಿಗಳು ಹಾಗೂ ಕಲಾವಿದರೊಂದಿಗೆ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಸಚಿವರು, ಸಮಾಜದ ಪರಿವರ್ತನೆ ಅನುಕೂಲವಾಗುವಂಥ ಪರಿಕಲ್ಪನೆ ಅಡಿಯಲ್ಲಿ ಸ್ತಬ್ಧಚಿತ್ರಗಳನ್ನು ರೂಪಿಸಿ ಎಂದು ಸಲಹೆ ನೀಡಿದರು.
ಕಲೆ ಎಂಬುದು ಒಂದು ಸೃಜನಶೀಲ ಕ್ರಿಯೆಯಾಗಿದ್ದು, ಜನರ ಮನಸ್ಸಿಗೆ ಮುದ ನೀಡುವ ಹಾಗೂ ಪ್ರಫುಲ್ಲವಾಗಿಸುವ ಶಕ್ತಿ ಹೊಂದಿದೆ. ಈ ಹಿನ್ನೆಲೆಯಲ್ಲಿ ಐತಿಹಾಸಿಕ ಚರಿತ್ರೆ, ಸ್ವಾತಂತ್ರ್ಯ ಹೋರಾಟ, ಸಾಂಸ್ಕೃತಿಕ ಬದುಕು, ಸಂಗೀತ, ಸಾಹಿತ್ಯ ಸೇರಿದಂತೆ ಸಾಮಾಜಿಕ ಸಂದೇಶ ನೀಡುವ ಸ್ತಬ್ಧಚಿತ್ರಗಳನ್ನು ಅಚ್ಚುಕಟ್ಟಾಗಿ ಸಿದ್ಧಪಡಿಸಬೇಕು ಎಂದು ತಿಳಿಸಿದರು.
ನಾರಾಯಣ ಗುರು ಸಮಾನತೆಗಾಗಿ ಶ್ರಮಿಸಿದರು. ದೇಶದಲ್ಲೇ ಮೊದಲು ಮಹಿಳೆಯರಿಗೆ ಶಿಕ್ಷಣವನ್ನು ಸಾವಿತ್ರಿ ಬಾಯಿ ಫುಲೆ ನೀಡಿದರು. ಸಮೃದ್ಧ ಭಾರತ ನಿರ್ಮಾಣಕ್ಕೆ ಡಾ.ಬಿ.ಆರ್. ಅಂಬೇಡ್ಕರ್ ಸಂವಿಧಾನ ರಚಿಸಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಶಿಕ್ಷಣ, ನೀರಾವರಿ, ಕೃಷಿ ಕ್ಷೇತ್ರಕ್ಕೆ ಕೊಡುಗೆ ನೀಡಿ ಸಾಮಾಜಿಕ ನ್ಯಾಯದ ಪರ ಆಡಳಿತ ನಡೆಸಿದರು. ಹೀಗೆ ದೇಶದ ಹಲವಾರು ಮಹಾನ್ ಸಮಾಜ ಸುಧಾರಕರ ಬದುಕು, ಹೋರಾಟವನ್ನು ತಿಳಿಸಿಕೊಡುವ ಕೆಲಸವಾಗಬೇಕು ಎಂದರು.
ಜಿಲ್ಲಾವಾರು ಐತಿಹಾಸಿಕ ಘಟನೆಗಳನ್ನು ಸಾರುವಂಥ ಸ್ತಬ್ಧಚಿತ್ರಗಳಿಗೂ ಆದ್ಯತೆ ನೀಡಿ
ಪ್ರತಿ ಜಿಲ್ಲೆಗೆ ಅದರದೇ ಆದಂತಹ ಐತಿಹಾಸಿಕ ಘಟನೆಗಳು ಇರುತ್ತವೆ. ವಿಭಿನ್ನ ಆಚಾರ, ವಿಚಾರಗಳು, ಕಲೆ, ಸಂಸ್ಕೃತಿಗಳನ್ನು ಒಳಗೊಂಡಿರುತ್ತವೆ. ಐತಿಹಾಸಿಕ ಮಾಹಿತಿ ಜೊತೆಗೆ ಜೀವಂತವಾಗಿ ನಡೆದಿರುವಂತೆ ಘಟನೆಗಳನ್ನು ಬಿಂಬಿಸುವ ಶಿಸ್ತುಬದ್ಧ ಎಲ್ಲರ ಕಣ್ಮನ ಸೆಳೆಯುವ ಕಲಾಕೃತಿ ಒಳಗೊಂಡಿರಲಿ ಎಂದು ತಿಳಿಸಿದರು.
ಕಲಾವಿದರು ಸಂಪೂರ್ಣವಾಗಿ ತೊಡಗಿಸಿಕೊಂಡು ಸೃಜನಶೀಲತೆಯಿಂದ ಉತ್ತಮವಾದ ಸ್ತಬ್ಧಚಿತ್ರಗಳನ್ನು ಸಿದ್ಧಪಡಿಸಿ. ನಿಮಗೆ ಅಗತ್ಯವಿರುವ ಎಲ್ಲಾ ಸೌಕರ್ಯಗಳನ್ನು ಒದಗಿಸಿಕೊಡಲಾಗುವುದು. ಪ್ರಶಸ್ತಿ ಪತ್ರವನ್ನು ವಿಭಾಗೀಯ ಮಟ್ಟದಲ್ಲಿ ನೀಡುವುದು ಹಾಗೂ ಕಲಾವಿದರಿಗೂ ಪ್ರತ್ಯೇಕ ಪ್ರಶಸ್ತಿ ನೀಡುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.
ಸ್ತಬ್ಧಚಿತ್ರದ ಜೊತೆಗೆ ಆಯಾ ಜಿಲ್ಲೆಯ ಕಲಾತಂಡಗಳನ್ನು ನಿಯೋಜಿಸುವುದು. ಅಕ್ಕಪಕ್ಕದಲ್ಲಿ ಸಂಬಂಧಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿ ಮಾತ್ರ ಇರಬೇಕು. ಅನವಶ್ಯಕವಾಗಿ ಯಾರಿಗೂ ಅವಕಾಶ ನೀಡಬಾರದು. ಸ್ತಬ್ಧಚಿತ್ರದ ಅಳತೆಯಲ್ಲಿ ಯಾವುದೇ ಕಾರಣಕ್ಕೂ ವ್ಯತ್ಯಾಸ ಇರಬಾರದು. ಅಗಲ, ಎತ್ತರ, ಉದ್ದವು ಜಿಲ್ಲಾಡಳಿತ ನಿಗದಿಪಡಿಸಿದ ಅಳತೆಯನ್ನು ಮೀರಬಾರದು ಎಂದು ಸೂಚಿಸಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಜಿಲ್ಲಾ ಪಂಚಾಯತ್ ಸಿಇಒ ಕೆ.ಎಂ.ಗಾಯಿತ್ರಿ, ಉಪ ಕಾರ್ಯದರ್ಶಿ ಡಾ.ಎಂ.ಕೃಷ್ಣರಾಜು ಮುಂತಾದವರು ಉಪಸ್ಥಿತರಿದ್ದರು.
ವಿಭಾಗ