ನಾಡಹಬ್ಬ ದಸರಾ ಉದ್ಘಾಟನೆಗೆ ಕ್ಷಣಗಣನೆ; ಮೈಸೂರು ಅರಮನೆ ಆವರಣ, ಚಾಮುಂಡಿ ಬೆಟ್ಟದಲ್ಲಿ ಸಕಲ ಸಿದ್ದತೆ-mysuru dasara 2024 preparation for nada habba dasara inauguration in chamundi hills and mysore palace jra ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ನಾಡಹಬ್ಬ ದಸರಾ ಉದ್ಘಾಟನೆಗೆ ಕ್ಷಣಗಣನೆ; ಮೈಸೂರು ಅರಮನೆ ಆವರಣ, ಚಾಮುಂಡಿ ಬೆಟ್ಟದಲ್ಲಿ ಸಕಲ ಸಿದ್ದತೆ

ನಾಡಹಬ್ಬ ದಸರಾ ಉದ್ಘಾಟನೆಗೆ ಕ್ಷಣಗಣನೆ; ಮೈಸೂರು ಅರಮನೆ ಆವರಣ, ಚಾಮುಂಡಿ ಬೆಟ್ಟದಲ್ಲಿ ಸಕಲ ಸಿದ್ದತೆ

ಅಕ್ಟೋಬರ್‌ 3ರ ಗುರುವಾರ ಬೆಳಗ್ಗೆ ವೃಶ್ಚಿಕ ಲಗ್ನದಲ್ಲಿ ನಾಡಿನ ಹಿರಿಯ ಸಾಹಿತಿ ಡಾ.ಹಂಪ ನಾಗರಾಜಯ್ಯ ಅವರು ದಸರಾ ಮಹೋತ್ಸವ ಉದ್ಘಾಟಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಚಾಮುಂಡಿ ಬೆಟ್ಟದಲ್ಲಿ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.

ದಸರಾ ಉದ್ಘಾಟನೆಗೆ ಕ್ಷಣಗಣನೆ; ಮೈಸೂರು ಅರಮನೆ ಆವರಣ, ಚಾಮುಂಡಿ ಬೆಟ್ಟದಲ್ಲಿ ಸಕಲ ಸಿದ್ದತೆ
ದಸರಾ ಉದ್ಘಾಟನೆಗೆ ಕ್ಷಣಗಣನೆ; ಮೈಸೂರು ಅರಮನೆ ಆವರಣ, ಚಾಮುಂಡಿ ಬೆಟ್ಟದಲ್ಲಿ ಸಕಲ ಸಿದ್ದತೆ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಚಾಮುಂಡಿ ಬೆಟ್ಟದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಸಕಲ ಸಿದ್ದತೆ ನಡೆದಿದೆ. ವಾಟರ್ ಪ್ರೂಫ್ ಪೆಂಡಾಲ್ ನಿರ್ಮಿಸಿ, ನೂರಾರು ಆಸನಗಳನ್ನು ಅಳವಡಿಸಲಾಗಿದೆ. ಜಿಲ್ಲಾಧಿಕಾರಿ ಲಕ್ಷ್ಮಿಕಾಂತರೆಡ್ಡಿ ಸಿದ್ದತಾ ಕಾರ್ಯಗಳ ಪರಿಶೀಲನೆ ನಡೆಸಿದ್ದಾರೆ. ಅವರೊಂದಿಗೆ ಚಾಮುಂಡೇಶ್ವರಿ ದೇಗುಲದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಅಕ್ಟೋಬರ್‌ 3ರ ಗುರುವಾರ (ನಾಳೆ) ಬೆಳಗ್ಗೆ 9:15ರಿಂದ 9:40ರೊಳಗಿನ ಶುಭ ವೃಶ್ಚಿಕ ಲಗ್ನದಲ್ಲಿ ನಾಡಿನ ಹಿರಿಯ ಸಾಹಿತಿ ಡಾ.ಹಂಪ ನಾಗರಾಜಯ್ಯ ಅವರಿಂದ ದಸರಾ ಮಹೋತ್ಸವ ಉದ್ಘಾಟನೆಗೊಳ್ಳಲಿದೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ ಎಚ್‌ಸಿ ಮಹದೇವಪ್ಪ ಸೇರಿದಂತೆ ಹಲವು ಸಚಿವರು, ಶಾಸಕರು ದಸರಾ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.

ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ಹತ್ತು ದಿನಗಳ ವಿಶೇಷ ಪೂಜಾ ಕೈಂಕರ್ಯಗಳ ನೆರವೇರಲಿದ್ದು, ಇದಕ್ಕೂ ಸಕಲ ಸಿದ್ದತೆ ಮಾಡಲಾಗಿದೆ. ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಹತ್ತು ದಿನಗಳ ಕಾಲ ವಿಶೇಷ ಪೂಜೆ ನಡೆಯಲಿದೆ. ಶಕ್ತಿ ದೇವತೆ ಚಾಮುಂಡೇಶ್ವರಿ ಅಮ್ಮನವರಿಗೆ ಪ್ರತಿನಿತ್ಯವೂ ವಿವಿಧ ಬಗೆಯ ಅಲಂಕಾರ ನಡೆಯಲಿದೆ ಎಂದು ಚಾಮುಂಡೇಶ್ವರಿ ದೇಗುಲದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ಮಾಹಿತಿ ನೀಡಿದ್ದಾರೆ.

ಅರಮನೆ ಆವರಣದಲ್ಲಿ ಸಿದ್ಧತಾ ಕಾರ್ಯ

ಅತ್ತ ಮೈಸೂರು ಅರಮನೆ ಆವರಣದಲ್ಲೂ ಸಿದ್ದತಾ ಕಾರ್ಯ ಭರದಿಂದ ಸಾಗಿದೆ. ಅರಮನೆ ಮುಂಭಾಗದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಆಕರ್ಷಕ ವೇದಿಕೆ ನಿರ್ಮಾಣ ಮಾಡಲಾಗಿದೆ. ಸಾರ್ವಜನಿಕರು ಕಾರ್ಯಕ್ರಮಗಳನ್ನು ವೀಕ್ಷಿಸಲು ಅನುಕೂಲವಾಗುವಂತೆ ಆಸನಗಳನ್ನು ಇಡಲಾಗಿದೆ. ವಿಜಯದಶಮಿ ಜಂಬೂಸವಾರಿ ಮೆರವಣಿಗೆಗೂ ಅಧಿಕಾರಿಗಳ ವರ್ಗ ಈಗಿನಿಂದಲೇ ಸಿದ್ದತೆ ನಡೆಸಿದೆ.

ಖಾಸಗಿ ದರ್ಬಾರ್‌ಗೆ ರಾಜಮನೆತನ ಸಜ್ಜು

ದಸರಾ ಮಹೋತ್ಸವದ ಅಂಗವಾಗಿ ಮೈಸೂರು ಅರಮನೆಯಲ್ಲಿ ರಾಜಮನೆತನದ ಖಾಸಗಿ ದರ್ಬಾರ್ ನಡೆಯುವ ಹಿನ್ನೆಲೆಯಲ್ಲಿ ರಾಜ ಪರಿವಾರದಲ್ಲಿ ಸಂಭ್ರಮ ಮನೆ ಮಾಡಿದೆ. ಜಗತ್ಪ್ರಸಿದ್ಧ ಅರಮನೆಯ ದರ್ಬಾರ್ ಹಾಲ್‌ನಲ್ಲಿ ಖಾಸಗಿ ದರ್ಬಾರ್ ನಡೆಯಲಿದೆ. ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ರಿಂದ ಖಾಸಗಿ ದರ್ಬಾರ್ ನಡೆಯಲಿದೆ. ಯದುವೀರ್ ಒಡೆಯರ್ ಸಂಸದರಾಗಿ ಆಯ್ಕೆಯಾದ ಬಳಿಕ ಈ ಬಾರಿಯ ಖಾಸಗಿ ದರ್ಬಾರ್ ವಿಶೇಷ ಮಹತ್ವ ಪಡೆದುಕೊಂಡಿದೆ. ಖಾಸಗಿ ದರ್ಬಾರ್ ವೇಳೆ ರಾಜಪೋಷಾಕಿನಲ್ಲಿ ಯದುವೀರ್ ಒಡೆಯರ್ ಕಂಗೊಳಿಸಲಿದ್ದಾರೆ.

ಸುತ್ತೂರಿಗೆ ಭೇಟಿ ನೀಡಿದ ಹಂಪಾ ನಾಗರಾಜಯ್ಯ

ನಾಡಹಬ್ಬ ದಸರಾ ಮಹೋತ್ಸವದ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಈ ನಡುವೆ ದಸರಾ ಉದ್ಘಾಟಕ ಹಂಪಾ ನಾಗರಾಜಯ್ಯ ಸುತ್ತೂರಿಗೆ ಭೇಟಿ ನೀಡಿದ್ದಾರೆ. ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಕಪಿಲ‌ ನದಿ ತೀರದಲ್ಲಿರುವ ಸುತ್ತೂರು ಶ್ರೀಮಠಕ್ಕೆ ಭೇಟಿ ನೀಡಿದ ಹಿರಿಯ ಸಾಹಿತಿಗೆ, ಸುತ್ತೂರು ಶ್ರೀಮಠದಿಂದ ಭವ್ಯ ಸ್ವಾಗತ ಕೋರಲಾಯ್ತು. ಸುತ್ತೂರು ಶ್ರೀಗಳೊಂದಿಗೆ ಸಮಾಲೋಚನೆ ನಡೆಸಿ ಹಂಪಾ ನಾಗರಾಜಯ್ಯ ಆಶೀರ್ವಾದ ಪಡೆದುಕೊಂಡರು.

ನಾಳೆ‌ ಚಾಮುಂಡಿ ಬೆಟ್ಟದಲ್ಲಿ ನಾಡಹಬ್ಬ ದಸರಾ ಉದ್ಘಾಟನೆ ಮಾಡಲಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಉದ್ಘಾಟಕರನ್ನು ಕರೆತರಲಾಗಿದೆ. ಟಿ ನರಸೀಪುರ, ನಂಜನಗೂಡು ತಹಶೀಲ್ದಾರ್ ಸಾಹಿತಿಯನ್ನು ಕರೆತಂದಿದ್ದಾರೆ.

mysore-dasara_Entry_Point