ಮೈಸೂರು ದಸರಾ: ಅರಮನೆಯಲ್ಲಿ ರಾಜಮನೆತನದ ಖಾಸಗಿ ದರ್ಬಾರ್‌ಗೆ ಸಕಲ ಸಿದ್ಧತೆ; ನವರಾತ್ರಿಯ ಕಾರ್ಯಕ್ರಮಗಳ ಸಂಪೂರ್ಣ ವಿವರ
ಅಕ್ಟೋಬರ್ 3ರಂದು ಶರನ್ನವರಾತ್ರಿಯ ಶುಭಾರಂಭದ ದಿನ. ಹೀಗಾಗಿ ಮೈಸೂರು ಅರಮನೆಯಲ್ಲಿ ರಾಜಮನೆತನದ ಖಾಸಗಿ ದರ್ಬಾರ್ ಆರಂಭವಾಗಲಿದ್ದು, ಕಾರ್ಯಕ್ರಮಕ್ಕೆ ಸಿದ್ಧತೆ ನಡೆದಿದೆ. ನವರಾತ್ರಿಯಲ್ಲಿ ಮೈಸೂರು ಅರಮನೆಯಲ್ಲಿ ನಡೆಯಲಿರುವ ಕಾರ್ಯಕ್ರಮಗಳ ವಿವರ ಇಲ್ಲಿದೆ.
ಐತಿಹಾಸಿಕ ಮೈಸೂರು ಅರಮನೆಯಲ್ಲಿ ನಡೆಯುವ ರಾಜಮನೆತನದ ಖಾಸಗಿ ದರ್ಬಾರ್ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ನಡೆದಿದೆ. ಹೀಗಾಗಿ ರಾಜಮನೆತನದಲ್ಲಿ ಸಂಭ್ರಮ ಮನೆ ಮಾಡಿದೆ. ನವರಾತ್ರಿ ಹಿನ್ನೆಲೆಯಲ್ಲಿ ರಾಜವಂಶಸ್ಥರಿಂದ ಅರಮನೆಯಲ್ಲಿ ಖಾಸಗಿ ದರ್ಬಾರ್ ನಡೆಯುತ್ತಿದೆ. ಶರನ್ನವರಾತ್ರಿಯ ಶುಭಾರಂಭದ ದಿನವಾಗಿರುವುದರಿಂದ ನಾಳೆ ದರ್ಬಾರ್ ಆರಂಭವಾಗಲಿದೆ. ಅದ್ಧೂರಿ ದಸರಾ ಮಹೋತ್ಸವಕ್ಕೂ ನಾಳೆ ಚಾಲನೆ ಸಿಗಲಿದೆ.
ಅಕ್ಟೋಬರ್ 3ರಂದು ಶರನ್ನವರಾತ್ರಿಯ ಶುಭಾರಂಭದ ದಿನವಾಗಿದೆ. ಹೀಗಾಗಿ ಬೆಳಗ್ಗೆ ಮೊದಲಿಗೆ ಎಣ್ಣೆ ಶಾಸ್ತ್ರ ಕಾರ್ಯ ನೆರವೇರಲಿದೆ. ಬೆಳಗ್ಗೆ 5.45ರಿಂದ 6.10ರ ಒಳಗಿನ ಶುಭ ಮುಹೂರ್ತದಲ್ಲಿ ರತ್ನಖಚಿತ ಸಿಂಹಾಸನಕ್ಕೆ ಸಿಂಹದ ಮುಖ ಜೋಡಣೆ ಮಾಡಲಾಗುತ್ತದೆ. ಬೆಳಗ್ಗೆ 7.45ರಿಂದ 8.45ರ ಒಳಗೆ ಚಾಮುಂಡಿ ತೊಟ್ಟಿಯಲ್ಲಿ ಯದುವಂಶದ ಮಹಾರಾಜ ಯದುವೀರ್ ಅವರಿಗೆ ಕಂಕಣಧಾರಣೆ ಮಾಡಲಾಗುತ್ತದೆ. ಬೆಳಗ್ಗೆ 10.30ಕ್ಕೆ ಸವಾರಿ ತೊಟ್ಟಿಗೆ ಪಟ್ಟದ ಆನೆ, ಕುದುರೆ, ಹಸುಗಳು ಆಗಮಿಸಲಿವೆ. ಬೆಳಗ್ಗೆ 11ಕ್ಕೆ ಕಳಸ ಪೂಜೆ ಮತ್ತು ಸಿಂಹಾಸನ ಪೂಜೆ ನೆರವೇರಲಿದೆ.
11.35ರಿಂದ 12.05 ರ ಒಳಗೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಸಿಂಹಾಸನಾರೋಹಣದ ಮೂಲಕ ಖಾಸಗಿ ದರ್ಬಾರ್ ಆರಂಭವಾಗಲಿದೆ. ಮಧ್ಯಾಹ್ನ 1.05ರಿಂದ 1.30 ರ ಒಳಗೆ ಮೈಸೂರು ಅರಸರ ಕುಲದೇವತೆಯಾಗಿರುವ ಚಾಮುಂಡೇಶ್ವರಿ ಅಮ್ಮನವರ ಮೂರ್ತಿಯನ್ನು ಚಾಮುಂಡಿ ತೊಟ್ಟಿಯಿಂದ ಕನ್ನಡಿ ತೊಟ್ಟಿಗೆ ತರಲಾಗುತ್ತದೆ.
ಅಕ್ಟೋಬರ್ 9ರ ಸಂಪ್ರದಾಯಗಳು
ಅಕ್ಟೋಬರ್ 9ರ ಬುಧವಾರ ಬೆಳಗ್ಗೆ 10.05ರಿಂದ 10.35 ರ ಒಳಗೆ ಸಂಪ್ರದಾಯಬದ್ದವಾಗಿ ವಿದ್ಯಾ ದೇವತೆ ಸರಸ್ವತಿಯ ಪೂಜೆ ನೆರವೇರಲಿದೆ. ಅಕ್ಟೋಬರ್ 10 ಗುರುವಾರ ರಾತ್ರಿ ಖಾಸಗಿ ದರ್ಬಾರ್ ಮುಗಿದ ಬಳಿಕ ಕನ್ನಡಿ ತೊಟ್ಟಿಯಲ್ಲಿ ಕಾಳರಾತ್ರಿ ಪೂಜೆ ನೆರವೇರಲಿದೆ.
ಅಕ್ಟೋಬರ್ 9ರಂದು ದುರ್ಗಾಷ್ಟಮಿ -ಮಹಾನವಮಿ ಆಚರಣೆ
ಅಕ್ಟೋಬರ್ 11ರಂದು ಶುಕ್ರವಾರ ದುರ್ಗಾಷ್ಟಮಿಯ ವಿಧಿಗಳು ನಡೆಯಲಿವೆ. ಅಕ್ಟೋಬರ್ 11ರಂದು ಶುಕ್ರವಾರವೇ ಮಹಾನವಮಿ ಆಚರಣೆಗಳೂ ನಡೆಯಲಿವೆ. ಅಂದು ಬೆಳಗ್ಗೆ 6 ಗಂಟೆಗೆ ಚಾಮುಂಡಿ ತೊಟ್ಟಿಯಲ್ಲಿ ಚಂಡಿ ಹೋಮ ನೆರವೇರಲಿದೆ. ಪಟ್ಟದ ಆನೆ, ಕುದುರೆ, ಹಸುಗಳು ಅರಮನೆಯ ಆನೆ ಬಾಗಿಲಿಗೆ ಆಗಮಿಸಲಿವೆ. 6.40 ರಿಂದ 7.10 ರ ಒಳಗೆ ಖಾಸಾ ಆಯುಧಗಳನ್ನು ಆನೆ ಬಾಗಿಲು ಮೂಲಕ ಶ್ರೀ ಕೋಡಿ ಸೋಮೇಶ್ವರ ದೇವಾಲಯಕ್ಕೆ ಕೊಂಡೊಯ್ಯಲಾಗುತ್ತದೆ. ಬೆಳಗ್ಗೆ 7.30ರಿಂದ 8 ಗಂಟೆ ಒಳಗೆ ಕೋಡಿ ಸೋಮೇಶ್ವರ ದೇವಾಲಯದಿಂದ ಖಾಸಾ ಆಯುಧಗಳನ್ನು ಆನೆ ಬಾಗಿಲ ಮುಖಾಂತರ ಅರಮನೆಯ ಕಲ್ಯಾಣ ಮಂಟಪಕ್ಕೆ ತರಲಾಗುತ್ತದೆ.
ಬೆಳಗ್ಗೆ 9.05ಕ್ಕೆ ಚಂಡಿ ಹೋಮ ಪೂರ್ಣಹುತಿ ನೆರವೇರಿಸಲಾಗುತ್ತದೆ. 11.45ಕ್ಕೆ ಪಟ್ಟದ ಆನೆ, ಕುದುರೆ, ಹಸುಗಳು ಆನೆ ಬಾಗಿಲಿಗೆ ಆಗಮಿಸಲಿವೆ. 12.20ರಿಂದ 12.45ರ ಒಳಗೆ ಅರಮನೆಯ ಕಲ್ಯಾಣ ಮಂಟಪದಲ್ಲಿ ರಾಜಮನೆತನದ ಸಂಪ್ರದಾಯದಂತೆ ಯದುವೀರ್ ಒಡೆಯರ್ ಅವರಿಂದ ಆಯುಧ ಪೂಜೆಯ ವಿಧಿಗಳು ನೆರವೇರಲಿವೆ.
ಸಂಜೆ ಖಾಸಗಿ ದರ್ಬಾರ್ ಮುಗಿದ ನಂತರ ಸಿಂಹಾಸನಕ್ಕೆ ಅಳವಡಿಸಿದ್ದ ಸಿಂಹದ ಮುಖವನ್ನು ಬೇರ್ಪಡಿಸಲಾಗುತ್ತದೆ. ಬಳಿಕ ಮಹಾರಾಜರು ಖಾಸಗಿ ಮನೆಯಲ್ಲಿ ದೇವರ ದರ್ಶನ ಪಡೆಯುತ್ತಾರೆ. ಆ ಬಳಿಕ ಅರಮನೆಯಲ್ಲಿ ದಫ್ತಾರ್ ಪೂಜೆ ನೆರವೇರಲಿದೆ. ನಂತರ ಮಹಾರಾಜ ಮತ್ತು ಮಹಾರಾಣಿಯವರಿಂದ ಅಮಲ ದೇವತಾ ಸನ್ನಿಧಿಯಲ್ಲಿ ದೇವರ ದರ್ಶನ ಪಡೆಯುತ್ತಾರೆ.
ವಿಜಯದಶಮಿ
ಅಕ್ಟೋಬರ್ 12ರ ಶನಿವಾರ ವಿಜಯದಶಮಿಯ ಪೂಜಾ ಕೈಂಕರ್ಯಗಳು ನೆರವೇರಲಿವೆ. ಅಂದು ಬೆಳಗ್ಗೆ 9.45ಕ್ಕೆ ಪಟ್ಟದ ಆನೆ, ಹಸು, ಕುದುರೆಗಳು ಅರಮನೆಯ ಆನೆ ಬಾಗಿಲಿಗೆ ಆಗಮಿಸಲಿವೆ. 10.15ಕ್ಕೆ ಉತ್ತರ ಪೂಜೆ ಆರಂಭವಾಗಲಿದೆ. 11.20 ರಿಂದ 11.45ರ ಒಳಗೆ ವಿಜಯಯಾತ್ರೆ ಹಾಗೂ ಶಮಿ ಪೂಜೆಯ ವಿಧಿಗಳು ನೆರವೇರಲಿವೆ. ವಿಜಯಯಾತ್ರೆ ಮುಗಿದ ಬಳಿಕ ಚಾಮುಂಡೇಶ್ವರಿ ಅಮ್ಮನವರ ಮೂರ್ತಿಯನ್ನು ಕನ್ನಡಿ ತೊಟ್ಟಿಯಿಂದ ಚಾಮುಂಡಿ ತೊಟ್ಟಿಗೆ ಮರಳಿಸಲಾಗುತ್ತದೆ. ಆ ಬಳಿಕ ವಿಶ್ವವಿಖ್ಯಾತ ಜಂಬೂಸವಾರಿಗೆ ಮೈಸೂರು ಸಾಕ್ಷಿಯಾಗಲಿದೆ.