ಗುಂಡ್ಲುಪೇಟೆ : ಹಠಾತ್ ಹೃದಯಾಘಾತದಿಂದ 10ನೇ ತರಗತಿ ವಿದ್ಯಾರ್ಥಿನಿ ಸಾವು
ಕನ್ನಡ ಸುದ್ದಿ  /  ಕರ್ನಾಟಕ  /  ಗುಂಡ್ಲುಪೇಟೆ : ಹಠಾತ್ ಹೃದಯಾಘಾತದಿಂದ 10ನೇ ತರಗತಿ ವಿದ್ಯಾರ್ಥಿನಿ ಸಾವು

ಗುಂಡ್ಲುಪೇಟೆ : ಹಠಾತ್ ಹೃದಯಾಘಾತದಿಂದ 10ನೇ ತರಗತಿ ವಿದ್ಯಾರ್ಥಿನಿ ಸಾವು

ಈಕೆ ವಾಯು ವಿಹಾರ ಮಾಡುತ್ತಿದ್ದ ವೇಳೆ ಏಕಾಏಕಿ ಕುಸಿದು ಬಿದ್ದಳು. ತಕ್ಷಣ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೂ ಬಾಲಕಿಯ ಜೀವ ಉಳಿಯಲಿಲ್ಲ.

ಗುಂಡ್ಲುಪೇಟೆಯಲ್ಲಿ ಹಠಾತ್ ಹೃದಯಾಘಾತದಿಂದ ಮೃತಪಟ್ಟ ಫಿಲಿಶ್
ಗುಂಡ್ಲುಪೇಟೆಯಲ್ಲಿ ಹಠಾತ್ ಹೃದಯಾಘಾತದಿಂದ ಮೃತಪಟ್ಟ ಫಿಲಿಶ್

ಗುಂಡ್ಲುಪೇಟೆ: ಎಸ್ಎಸ್ಎಲ್‌ಸಿ ವಿದ್ಯಾರ್ಥಿನಿಯೋರ್ವಳು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಪಟ್ಟಣದ ಸಿಎಂಎಸ್ ಅನಾಥಾಲಯದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ. ಪಟ್ಟಣದ ನಿರ್ಮಲ ಕಾನ್ವೆಂಟ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಫಿಲಿಶ್ (15) ಮೃತ ದುರ್ದೈವಿ. ಈಕೆ ವಾಯು ವಿಹಾರ ಮಾಡುತ್ತಿದ್ದ ವೇಳೆ ಏಕಾಏಕಿ ಕುಸಿದು ಬಿದ್ದಳು. ತಕ್ಷಣ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ತಪಾಸಣೆ ನಡೆಸಿದಾಗ ಹೃದಯಾಘಾತದಿಂದ ಸಾವನ್ನಪ್ಪಿರುವುದು ದೃಢಪಟ್ಟಿತು.

ಫಿಲಿಶ್ ಮೂಲತಃ ಬೆಂಗಳೂರಿನ ನಿವಾಸಿಯಾಗಿದ್ದು, ತಂದೆ ಪ್ರಭು ಕಳೆದ ಐದಾರು ವರ್ಷಗಳ ಹಿಂದೆ ಸಿಎಂಎಸ್ ಅನಾಥಾಲಯಕ್ಕೆ ತಂದು ಬಿಟ್ಟಿದ್ದರು ಎಂದು ನಿಲಯ ಪಾಲಕರಾದ ಸೆಲ್ವರಾಜ್ ಮಾಹಿತಿ ನೀಡಿದ್ದಾರೆ. ಬಾಲಕಿ ಆರೋಗ್ಯವಾಗಿದ್ದು ದಿಢೀರ್ ಕುಸಿದು ಬಿದ್ದು ಹೃದಯಾಘಾತವಾಗಿರುವುದು ನಮಗೆಲ್ಲರಿಗೂ ಆಘಾತ ತಂದಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಬಾಲಕಿಯ ಮೃತದೇಹವನ್ನು ಪಟ್ಟಣದ ಶವಾಗಾರಕ್ಕೆ ರವಾನಿಸಿ, ಮರಣೋತ್ತರ ಪರೀಕ್ಷೆ ನಡೆಸಿ ನಂತರ ವಾರಸುದಾರರಿಗೆ ಹಸ್ತಾಂತರಿಸಲಾಯಿತು.

ಹಠಾತ್ ಹೃದಯಾಘಾತದ ಸಾವು ತಪ್ಪಿಸಲು ತ್ವರಿತ ಚಿಕಿತ್ಸೆ: ಯೋಜನೆ ರೂಪಿಸಿದ ಆರೋಗ್ಯ ಇಲಾಖೆ

ಕರ್ನಾಟಕದಲ್ಲಿ ಇತ್ತೀಚೆಗೆ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅದನ್ನು ತಪ್ಪಿಸಲು ಆರೋಗ್ಯ ಇಲಾಖೆ ಯೋಜನೆ ರೂಪಿಸಿದೆ. ನಟ ಪುನೀತ್ ರಾಜ್‌ಕುಮಾರ್ ಹೆಸರಿನಲ್ಲಿ ರೂಪಿಸಿದ್ದ ಯೋಜನೆಯನ್ನು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಘೋಷಿಸಿದ್ದರು. ಈ ಯೋಜನೆಯ ಪ್ರಾಯೋಗಿಕ ಅನುಷ್ಠಾನಕ್ಕೆ ಇದೀಗ ರಾಜ್ಯ ಸರ್ಕಾರ ಮುಂದಾಗಿದೆ. ರಾಜ್ಯದ 10 ಜಿಲ್ಲಾಸ್ಪತ್ರೆಗಳು ಮತ್ತು 45 ಆರೋಗ್ಯ ಕೇಂದ್ರಗಳಲ್ಲಿ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದೆ.

ಹೃದಯಘಾತ ಸಂಭವಿಸಿದ ಸಂದರ್ಭದಲ್ಲಿ ತುರ್ತು ಚಿಕಿತ್ಸೆ ಒದಗಿಸಲು ತಾಲ್ಲೂಕು ಆಸ್ಪತ್ರೆಗಳಿಗೆ ಎಇಡಿ ಸಾಧನಗಳನ್ನು ಪೂರೈಸಲಾಗಿದೆ. ಅಗತ್ಯ ಔಷಧಿಗಳನ್ನೂ ಉಚಿತವಾಗಿ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.

Whats_app_banner