ಕನ್ನಡ ಸುದ್ದಿ  /  Karnataka  /  Mysuru News 26.55 Lakh Indelible Ink Bottles Supply By Mysore Paints Varnish Limited For Lok Sabha Elections Rgs

Mysuru News: ಮುಂಬರುವ ಲೋಕಸಭಾ ಚುನಾವಣೆಗೆ ಮೈಲ್ಯಾಕ್‌ನಿಂದ 26.55 ಲಕ್ಷ ಅಳಿಸಲಾಗದ ಶಾಯಿ ಬಾಟಲುಗಳ ಪೂರೈಕೆ

Mysuru News: ಶೀಘ್ರದಲ್ಲೇ ಲೋಕಸಭೆ ಚುನಾವಣೆ ನಡೆಯುತ್ತಿದ್ದು ಮೈಸೂರು ಪೇಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್ ವತಿಯಿಂದ 26.55 ಲಕ್ಷ ಅಳಿಸಲಾಗದ ಶಾಯಿ ಬಾಟಲುಗಳನ್ನು ಪೂರೈಕೆ ಮಾಡಲಾಗಿದೆ. ವಿಶ್ವದ 30ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಅಳಿಸಲಾಗದ ಶಾಯಿ ಪೂರೈಕೆ ಮಾಡುತ್ತಾ ಬಂದಿರುವ ಮೈಸೂರು ಪೇಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್, ಜಾಗತಿಕ ಮಟ್ಟದಲ್ಲೂ ಗಮನ ಸೆಳೆದಿದೆ.

ಮೈಸೂರು ಪೇಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್
ಮೈಸೂರು ಪೇಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್

Mysuru News: ಮುಂಬರುವ ಲೋಕಸಭಾ ಚುನಾವಣೆಗೆ ಮೈಸೂರಿನ ಪ್ರತಿಷ್ಠಿತ ಮೈಲ್ಯಾಕ್‌ನಿಂದ 26.55 ಲಕ್ಷ ಅಳಿಸಲಾಗದ ಶಾಯಿ ಬಾಟಲುಗಳನ್ನು ಪೂರೈಕೆ ಮಾಡಲಾಗಿದೆ. ಅಳಿಸಲಾಗದ ಶಾಯಿ ತಯಾರಿಸುವ ದೇಶದ ಏಕಮಾತ್ರ ಸಂಸ್ಥೆಯಾಗಿರುವ ಮೈಸೂರು ಪೇಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್ ವತಿಯಿಂದ ಮುಂಬರುವ ಲೋಕಸಭಾ ಚುನಾವಣೆಗೆ 10 ಎಂಎಲ್ ಪ್ರಮಾಣದ ಒಟ್ಟು 26.55 ಲಕ್ಷ ಅಳಿಸಲಾಗದ ಶಾಯಿ ಬಾಟಲುಗಳನ್ನು ಪೂರೈಕೆ ಮಾಡಲಾಗಿದೆ.

10 ಎಂಎಲ್‌ನ ಒಂದು ಬಾಟಲಿಯಿಂದ ಒಟ್ಟು 700 ಮತದಾರರ ಬೆರಳಿಗೆ ಅಳಿಸಲಾಗದ ಶಾಯಿಯ ಗುರುತು ಹಾಕಬಹುದಾಗಿದೆ. ಇದೇ ಮಾರ್ಚ್ 15ರೊಳಗೆ ದೇಶದ ಎಲ್ಲಾ ರಾಜ್ಯಗಳ ಚುನಾವಣಾ ಆಯುಕ್ತರ ಕಚೇರಿಗಳ ಬೇಡಿಕೆಗೆ ಅನುಗುಣವಾಗಿ ಅಳಿಸಲಾಗದ ಶಾಯಿ ಬಾಟಲುಗಳನ್ನು ಪೂರೈಕೆ ಮಾಡುವಂತೆ ಆದೇಶ ನೀಡಲಾಗಿತ್ತು. ಹಾಗಾಗಿ ದೂರದ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಗೋವಾ, ಅರುಣಾಚಲ ಪ್ರದೇಶ, ತ್ರಿಪುರ, ನಾಗಲ್ಯಾಂಡ್, ಮಿಜೋರಾಂ ಸೇರಿದಂತೆ ದೇಶದ ಬಹುತೇಕ ರಾಜ್ಯಗಳಿಗೆ ಈಗಾಗಲೇ ಅಳಿಸಲಾಗದ ಶಾಯಿ ಪೂರೈಕೆ ಮಾಡುವಲ್ಲಿ ಮೈಲ್ಯಾಕ್‌ ಆಡಳಿತ ವರ್ಗ ಯಶಸ್ವಿಯಾಗಿದೆ.

ಅಂದ ಹಾಗೇ ಕಳೆದ ಡಿಸೆಂಬರ್‌ನಲ್ಲೇ ಅಳಿಸಲಾಗದ ಶಾಯಿ ಬಾಟಲುಗಳ ಪೂರೈಕೆಗೆ ಭಾರತದ ಚುನಾವಣಾ ಆಯೋಗ ಬೇಡಿಕೆ ಇಟ್ಟಿತ್ತು. ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಒಟ್ಟು 26.55 ಲಕ್ಷ ಅಳಿಸಲಾಗದ ಶಾಯಿ ಬಾಟಲುಗಳನ್ನು ದೇಶದ ಎಲ್ಲಾ ರಾಜ್ಯಗಳಿಗೂ ಪೂರೈಕೆ ಮಾಡುತ್ತಿರುವುದರಂದ ಮೈಲ್ಯಾಕ್ ಬರೋಬ್ಬರಿ 55 ಕೋಟಿಯಷ್ಟು ವಹಿವಾಟು ನಡೆಸಿರುವುದರಿಂದ ಹೆಚ್ಚಿನ ಆದಾಯವೂ ದೊರೆತಿದೆ.

ಕಳೆದ 1937ರಲ್ಲಿ ಅಂದಿನ ಮೈಸೂರು ಸಂಸ್ಥಾನದ ಜನಾನುರಾಗಿ ಆಳರಸರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದರ್ಶಿತ್ವದ ಫಲವಾಗಿ ಮೈಲ್ಯಾಕ್ ತಲೆ ಎತ್ತಿತು. ಸ್ವಾತಂತ್ರ್ಯ ನಂತರದ ದಿನಗಳಲ್ಲಿ ಮೈಸೂರು ಸರ್ಕಾರದ ಅಧೀನಕ್ಕೆ ಒಳಪಟ್ಟ ಮೈಲ್ಯಾಕ್ ಮುಂದಿನ ದಿನಗಳಲ್ಲಿ ಮೈಸೂರು ಲ್ಯಾಕ್ ಅಂಡ್ ಪೇಂಟ್ಸ್ ಲಿಮಿಟೆಡ್ ಎಂದು ಮರು ನಾಮಕರಣಗೊಂಡಿತು. ಕಳೆದ 1989 ರಿಂದ ಇಲ್ಲಿ ವಾರ್ನಿಷ್ ಉತ್ಪಾದನೆ ಕೂಡಾ ಆರಂಭ ಮಾಡಲಾಯಿತು. ಆ ಬಳಿಕ ಮೈಸೂರು ಪೇಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್ ಎಂದು ಮರು ನಾಮಕರಣ ಮಾಡಲಾಯಿತು.

ವಿಶ್ವದ 30ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಅಳಿಸಲಾಗದ ಶಾಯಿ ಪೂರೈಕೆ ಮಾಡುತ್ತಾ ಬಂದಿರುವ ಮೈಸೂರು ಪೇಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್, ಜಾಗತಿಕ ಮಟ್ಟದಲ್ಲೂ ಗಮನ ಸೆಳೆದಿದೆ. ಕಾಂಬೋಡಿಯಾ, ಬರ್ಕಿನಾ, ಫಾಸೋ, ಸಿಯೆರಾ ಲಿಯನ್, ಫಿಜಿ ಐಲ್ಯಾಂಡ್ಸ್, ಪಪುವಾ ನ್ಯೂಗಿನ್ನಿಯಾ, ಟರ್ಕಿ, ಸೌತ್ ಆಫ್ರಿಕಾ, ಮಂಗೋಲಿಯಾ ಸೇರಿದಂತೆ ವಿಶ್ವದ 30ಕ್ಕೂ ಹೆಚ್ಚು ದೇಶಗಳಿಗೆ ಅಳಿಸಲಾಗದ ಶಾಯಿ ಪೂರೈಕೆ ಮಾಡುತ್ತಿರುವ ದೇಶದ ಏಕೈಕ ಸಂಸ್ಥೆ ಎಂಬ ಹೆಗ್ಗಳಿಕೆಗೂ ಮೈಸೂರು ಪೇಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್ ಪಾತ್ರವಾಗಿದೆ.

ನಮ್ಮ ದೇಶದಲ್ಲಿ ನಡೆಯುವ ಗ್ರಾಮ ಪಂಚಾಯತಿ, ತಾಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ, ಮಹಾನಗರ ಪಾಲಿಕೆ, ನಗರಸಭೆ, ಪಟ್ಟಣಪಂಚಾಯ್ತಿ, ಪುರಸಭೆ, ವಿಧಾನಸಭೆ, ಲೋಕಸಭೆ ಸೇರಿದಂತೆ ಎಲ್ಲಾ ಹಂತದ ಚುನಾವಣೆಗಳಿಗೂ ಅಳಿಸಲಾಗದ ಶಾಯಿ ಪೂರೈಕೆ ಮಾಡುತ್ತಿರುವ ಮೈಸೂರು ಪೇಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್ ಸರ್ಕಾರಿ ಸ್ವಾಮ್ಯಕ್ಕೆ ಒಳಪಟ್ಟಿದೆ. ಆದರೂ ವರ್ಷದಿಂದ ವರ್ಷಕ್ಕೆ ಹೆಚ್ಚಿನ ಲಾಭ ಗಳಿಸುವ ಮೂಲಕ ಗಮನ ಸೆಳೆದಿದೆ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡುತ್ತಿರುವ ಮೈಲ್ಯಾಕ್ ಮುಂಬರುವ ಲೋಕಸಭಾ ಚುನಾವಣೆಗೂ ತನ್ನದೇ ಆದ ಮಹತ್ವದ ಜವಾಬ್ದಾರಿಯನ್ನು ನಿಭಾಯಿಸುವ ಮೂಲಕ ಪ್ರಮುಖ ಪಾತ್ರ ವಹಿಸುತ್ತಿದೆ.