ಕನ್ನಡ ಸುದ್ದಿ  /  Karnataka  /  Mysuru News Bahuroopi Natakotsava In Mysuru Rangayana 17 Drama Performance From Different Language Mar 6 To Mar 11th Rst

ಮೈಸೂರಿನ ರಂಗಾಯಣದಲ್ಲಿ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಸಂಭ್ರಮ ಆರಂಭ; 17 ವಿವಿಧ ಭಾಷೆಯ ನಾಟಕಗಳ ಪ್ರದರ್ಶನಕ್ಕೆ ವೇದಿಕೆ ಸಜ್ಜು

ಮೈಸೂರಿನ ರಂಗಾಯಣದ ವತಿಯಿಂದ ನಡೆಯುವ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ಇಂದಿನಿಂದ (ಮಾರ್ಚ್‌ 6) ಚಾಲನೆ ದೊರೆತಿದೆ. ಪ್ರತಿ ವರ್ಷದಂತೆ ಈ ವರ್ಷವು ವಿವಿಧ ಭಾಷೆಯ ನಾಟಕಗಳು ಪ್ರದರ್ಶನಗೊಳ್ಳಲಿವೆ. ʼಇವ ನಮ್ಮವ ಇವ ನಮ್ಮವʼ ಎಂಬ ಶೀರ್ಷಿಕೆಯೊಂದಿಗೆ ಈ ಬಾರಿಯ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಅನಾವರಣಗೊಳ್ಳುತ್ತಿದೆ.

ಮೈಸೂರಿನ ರಂಗಾಯಣದಲ್ಲಿ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಸಂಭ್ರಮ ಆರಂಭ
ಮೈಸೂರಿನ ರಂಗಾಯಣದಲ್ಲಿ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಸಂಭ್ರಮ ಆರಂಭ

ಮೈಸೂರು: ದೇಶದ ಪ್ರತಿಷ್ಠಿತ ರಂಗಸಂಸ್ಥೆಗಳಲ್ಲಿ ಒಂದಾಗಿರುವ ಮೈಸೂರಿನ ರಂಗಾಯಣದಲ್ಲಿ ಇಂದಿನಿಂದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಆರಂಭವಾಗುತ್ತಿದೆ. ನಾಡಿನ ಹಿರಿಯ ರಂಗಕರ್ಮಿ ಬಿವಿ ಕಾರಂತರ ಕನಸಿನ ಕೂಸಾಗಿರುವ ರಂಗಾಯಣ ಸಂಸ್ಥೆಯಲ್ಲಿ ಮಾರ್ಚ್ 6ರಿಂದ 11ರವರೆಗೆ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಆಯೋಜನೆ ಮಾಡಲಾಗಿದೆ.

ಜಗದ್ಗುರು ಬಸವಣ್ಣನವರ ವಚನದ ಸಾಲಿನ ʼಇವ ನಮ್ಮವ ಇವ ನಮ್ಮವʼ ಎಂಬ ಶೀರ್ಷಿಕೆಯೊಂದಿಗೆ ಈ ಬಾರಿಯ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಅನಾವರಣಗೊಳ್ಳುತ್ತಿದೆ.

ಮಾರ್ಚ್‌ 6 ರಿಂದ 11ರವರೆಗೆ ನಾಟಕೋತ್ಸವ

ಇಂದಿನಿಂದ ಬರುವ 11ರವರೆಗೆ ನಡೆಯಲಿರುವ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದಲ್ಲಿ ಮಾರ್ಚ್ 6ರ ಸಂಜೆ ಜನಪದ ಸಂಭ್ರಮ ಆಯೋಜನೆ ಮಾಡಲಾಗಿದೆ. ಹಿರಿಯ ಜಾನಪದ ಗಾಯಕ ಡಾ ಮಳವಳ್ಳಿ ಮಹದೇವಸ್ವಾಮಿ ಜನಪದ ಸಂಭ್ರಮ ಉದ್ಘಾಟನೆ ಮಾಡಲಿದ್ದಾರೆ.

ಮಾರ್ಚ್ 7ರಂದು ಬಹುರೂಪಿ ಚಲನಚಿತ್ರೋತ್ಸವಕ್ಕೆ ಅಂತರರಾಷ್ಟ್ರೀಯ ವನ್ಯಜೀವಿ ಛಾಯಾಗ್ರಾಹಕ ಡಾ. ಲೋಕೇಶ್ ಮೊಸಳೆ ಚಾಲನೆ ನೀಡಲಿದ್ದಾರೆ.

ಸಂಜೆ ವನರಂಗದಲ್ಲಿ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಉದ್ಘಾಟನಾ ಸಮಾರಂಭ ನಡೆಯಲಿದೆ. ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿಯವರು ಉದ್ಘಾಟನೆ ನೆರವೇರಿಸಲಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಹಾಗು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ ಎಚ್‌ಸಿ ಮಹದೇವಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್. ತಂಗಡಗಿ, ಸಂಸದ ಪ್ರತಾಪ್ ಸಿಂಹ, ಶಾಸಕ ಹರೀಶ್ ಗೌಡ ಸೇರಿದಂತೆ ಇನ್ನಿತರ ಪ್ರಮುಖರು ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಹತ್ತು ತಿಂಗಳಾದರೂ ರಂಗಾಯಣಕ್ಕೆ ನಿರ್ದೇಶಕರನ್ನು ನೇಮಕ ಮಾಡಿಲ್ಲ. ಹಾಗಾಗಿ ಅಧಿಕಾರಿಗಳ ನೇತೃತ್ವದಲ್ಲಿ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ನಡೆಯುತ್ತಿರುವುದು ವಿಶೇಷವಾಗಿದೆ.

17 ವಿವಿಧ ಭಾಷೆಗಳ ನಾಟಕ ಪ್ರದರ್ಶನ

ಈ ಬಾರಿಯ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದಲ್ಲಿ ವಿವಿಧ ಭಾಷೆಗಳ ಒಟ್ಟು 17 ನಾಟಕಗಳ ಪ್ರದರ್ಶನಕ್ಕೆ ವೇದಿಕೆ ಸಿದ್ಧವಾಗಿದೆ ಈ ಬಾರಿಯ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದಲ್ಲಿ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಮಣಿಪುರ, ಕೇರಳ ಹಾಗು ಮಹಾರಾಷ್ಟ್ರ ರಾಜ್ಯಗಳ 6 ನಾಟಕಗಳು, ಕನ್ನಡ ಭಾಷೆಯ 10 ಹಾಗು ತುಳು ಭಾಷೆಯ ಒಂದು ನಾಟಕ ಸೇರಿದಂತೆ ಒಟ್ಟು 17 ನಾಟಕಗಳು ಪ್ರದರ್ಶನ ಕಾಣಲಿವೆ. ರಂಗಾಯಣದ ಭೂಮಿಗೀತ, ವನರಂಗದ ಜೊತೆಗೆ ಕಲಾಮಂದಿರ, ಕಿರುರಂಗಮಂದಿರದಲ್ಲಿ ನಾಟಕಗಳು ಪ್ರದರ್ಶನಗೊಳ್ಳಲಿವೆ.

ಇದರ ಜೊತೆಗೆ ವಿಚಾರ ಸಂಕಿರಣ, ಕರಕುಶಲ ಮೇಳ, ಪುಸ್ತಕ ಮಾರಾಟ, ಚಲನಚಿತ್ರೋತ್ಸವ ಮೊದಲಾದ ಕಾರ್ಯಕ್ರಮಗಳು ಈ ಬಾರಿಯ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದಲ್ಲಿ ಅನಾವರಣಗೊಳ್ಳಲಿವೆ. ಇದಕ್ಕಾಗಿ ಮೈಸೂರಿನ ರಂಗಾಯಣ ಸಂಸ್ಥೆಯ ಆವರಣದಲ್ಲಿ ಸಕಲ ಸಿದ್ದತೆ ಮಾಡಲಾಗಿದೆ. ರಂಗಾಸಕ್ತರು ಕೂಡ ನಾಟಕಗಳನ್ನು ವೀಕ್ಷಿಸುವ ತವಕದಲ್ಲಿದ್ದಾರೆ.

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point

ವಿಭಾಗ