ಕನ್ನಡ ಸುದ್ದಿ  /  Karnataka  /  Mysuru News Celebrations In Siddramanahundi Siddramaiah Karnataka Next Chief Minister Political News In Kannada Uks

Mysuru News: ಸಿದ್ದರಾಮನಹುಂಡಿಯಲ್ಲಿ ಸಂಭ್ರಮ ಮತ್ತು ಸಿದ್ದರಾಮಯ್ಯ ಸಿಎಂ ಆಗುವ ನಿರೀಕ್ಷೆ

Mysuru News: ಸಿದ್ದರಾಮಯ್ಯ ಇನ್ನೇನು ಸಿಎಂ ಆಗಿಯೇ ಬಿಟ್ಟರು ಎಂದು ಬುಧವಾರ ಅವರ ಹುಟ್ಟೂರಿನಲ್ಲಿ ಭರ್ಜರಿ ಸಂಭ್ರಮಾಚರಣೆ ನಡೆಯಿತು. ಅವರ ಹೋರ್ಡಿಂಗ್‌ಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು ಘೋಷಣೆ ಕೂಗಿ ಖುಷಿಪಟ್ಟರು. ಆದರೆ, ಇನ್ನೂ ಮುಖ್ಯಮಂತ್ರಿ ಯಾರು ಎಂಬುದು ಅಂತಿಮವಾಗಿಲ್ಲ.

ಸಿದ್ದರಾಮಯ್ಯ ಹುಟ್ಟೂರಿನಲ್ಲಿ ಅವರ ಭಾವಚಿತ್ರಕ್ಕೆ ಅಭಿಮಾನಿಗಳು ಹಾಗೂ ಗ್ರಾಮಸ್ಥರು ಹಾಲಿನ ಅಭಿಷೇಕ ಮಾಡಿ ಸಂಭ್ರಮಿಸಿದರು.
ಸಿದ್ದರಾಮಯ್ಯ ಹುಟ್ಟೂರಿನಲ್ಲಿ ಅವರ ಭಾವಚಿತ್ರಕ್ಕೆ ಅಭಿಮಾನಿಗಳು ಹಾಗೂ ಗ್ರಾಮಸ್ಥರು ಹಾಲಿನ ಅಭಿಷೇಕ ಮಾಡಿ ಸಂಭ್ರಮಿಸಿದರು.

ಮೈಸೂರು: ಕರ್ನಾಟಕ ಸಿಎಂ ಸ್ಥಾನಕ್ಕೆ ನಡೆಯುತ್ತಿದ್ದ ಹಗ್ಗಜಗ್ಗಾಟ ಮುಂದುವರಿದಿದೆ. ಆದರೆ, ಬುಧವಾರ (ಮೇ 17) ಸಿದ್ದರಾಮಯ್ಯ ಸಿಎಂ ಆಗುವುದು ಬಹುತೇಕ ಖಚಿತ ಎಂಬ ಸುದ್ದಿ ಹರಡಿದ ಕಾರಣ, ಸಿದ್ದರಾಮನ ಹುಂಡಿಯಲ್ಲಿ ಸಂಭ್ರಮ ಮುಗಿಲು ಮುಟ್ಟಿತ್ತು.

ಸಿದ್ದರಾಮಯ್ಯ ಅವರ ಭಾವಚಿತ್ರಕ್ಕೆ ಅಭಿಮಾನಿಗಳು ಹಾಗೂ ಗ್ರಾಮಸ್ಥರು ಹಾಲಿನ ಅಭಿಷೇಕ ಮಾಡಿ ಸಂಭ್ರಮಿಸಿದರು. ಈ ಪೋಸ್ಟರ್‌ನಲ್ಲಿ ಸಿದ್ದರಾಮಯ್ಯ ಅವರ ಮೊಮ್ಮಗ ಪ್ರಧಾನ್‌ ಭಾವಚಿತ್ರ ಸಹ ಇರುವುದು ವಿಶೇಷ.

ಸಿದ್ದರಾಮಯ್ಯ ಜತೆ ಜಾತ್ರೆಯಲ್ಲಿ ವೀರಕುಣಿತ ಮಾಡಿದ ಕರಗೇಗೌಡರವರು ವೀರ ಕುಣಿತ ಮಾಡಿ ಸಂಭ್ರಮಿಸಿದರು. ʻಈ ಬಾರಿ ಸಿಎಂ ಸಿದ್ದರಾಮಯ್ಯ ಜತೆ ವೀರ ಕುಣಿತ ಮಾಡಲು ಸಿದ್ದವಾಗುತ್ತಿದ್ದೇನೆ. ಫಲಿತಾಂಶ ಬಂದ ದಿನದಿಂದ ಟೆನ್ಶನ್ ಇತ್ತು. ಈಗ ತುಂಬಾ ಖುಷಿಯಾಗಿದೆʼ ಎಂದು ಅವರು ತಿಳಿಸಿದ್ದಾರೆ.

ಕೆಲ ತಿಂಗಳ ಹಿಂದೆ ಸಿದ್ದರಾಮನಹುಂಡಿಯ ಹಬ್ಬವೊಂದರಲ್ಲಿ ಗ್ರಾಮಸ್ಥರೊಂದಿಗೆ ಸಿದ್ದರಾಮಯ್ಯ ವೀರ ಕುಣಿತ ಮಾಡಿದ್ದು ಎಲ್ಲರ ಗಮನ ಸೆಳೆದಿದ್ದರು. ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು.

ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ 135+1 ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಬಹುಮತ ಪಡೆದಿದೆ. ಇನ್ನು, ಮೈಸೂರು ಜಿಲ್ಲೆಯಲ್ಲಿಯೂ 11 ಕ್ಷೇತ್ರಗಳ ಪೈಕಿ 8 ಸ್ಥಾನಗಳಲ್ಲಿ ಕಾಂಗ್ರೆಸ್‌ ಗೆದ್ದಿದೆ. ಇತ್ತೀಚಿನ ದಶಕಗಳ ಇತಿಹಾಸದಲ್ಲಿ ಕಾಂಗ್ರೆಸ್‌ಗೆ ಇದು ಬೃಹತ್‌ ಸಾಧನೆಯೇ ಸರಿ. ಅಲ್ಲದೆ ಮುಂದಿನ ಮುಖ್ಯಮಂತ್ರಿ ಆಗುತ್ತಿದ್ದಾರೆ ಎನ್ನಲಾದ ಸಿದ್ದರಾಮಯ್ಯ ಅವರು ಸಹ ಮೈಸೂರಿನವರೇ ಆಗಿರುವುದು ವಿಶೇಷ. ಮೈಸೂರು ಜಿಲ್ಲೆಯ ಇಬ್ಬರು ಶಾಸಕರಾದ ತನ್ವೀರ್ ಸೇಠ್ ಹಾಗೂ ಎಚ್‌.ಸಿ.ಮಹದೇವಪ್ಪ ಈ ಬಾರಿ ಸಚಿವ ಸ್ಥಾನದ ರೇಸ್‌ನಲ್ಲಿದ್ದಾರೆ. ಇಬ್ಬರೂ ಹಿರಿಯ ಶಾಸಕರು ಹಾಗೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ಎಚ್.ಸಿ.ಮಹದೇವಪ್ಪ ಅವರು ಈಗಾಗಲೇ ಸಚಿವರಾಗಿ ಅನುಭವ ಸಹ ಹೊಂದಿದ್ದಾರೆ. ಆದ್ದರಿಂದ ಮೈಸೂರಿಗೆ ಕನಿಷ್ಟ ಪಕ್ಷ ಒಂದು ಸಚಿವ ಸ್ಥಾನವಾದರೂ ಸಿಗುತ್ತದೆ ಎಂಬ ನಿರೀಕ್ಷೆ ಇದೆ.

ಇನ್ನು ಸಿಎಂ ಸ್ಥಾನದ ಬಗ್ಗೆ ಬುಧವಾರ (ಮೇ 17) ಮಾತನಾಡಿರುವ ಎಚ್.‌ಸಿ.ಮಹದೇವಪ್ಪ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತಿರೋದು ನನಗೆ ಖುಷಿ ತಂದಿದೆ. ಡಿಕೆ ಶಿವಕುಮಾರ್ ಸೇರಿ ಅನೇಕ ನಾಯಕರು ಸಿಎಂ ಆಕಾಂಕ್ಷಿಗಳಾಗಿದ್ದಾರೆ. ಆದರೆ ಒಬ್ಬರಿಗೆ ಸಿಎಂ ಸ್ಥಾನ ಕೊಡಲು ಸಾಧ್ಯ. ವರಿಷ್ಠರು ಎಲ್ಲವನ್ನೂ ಅಳೆದು ತೂಗಿ ತೀರ್ಮಾನ ಮಾಡಿದ್ದಾರೆ. ಅವಲೋಕನದ ಬಳಿಕವೇ ಸಿದ್ದರಾಮಯ್ಯಗೆ ಹೊಣೆ ನೀಡಲಾಗಿದೆ. ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಅಂತ ಬಯಸುವುದರಲ್ಲಿ ತಪ್ಪಿಲ್ಲ. ಆದರೆ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದಿದ್ದಾರೆ.

ಸಿದ್ದರಾಮಯ್ಯ ಅವರ ಮಾಸ್ ಲೀಡರ್ ಶಿಪ್, ಕ್ಲೀನ್ ಇಮೇಜ್ ಜನರಿಗೆ ನಂಬಿಕೆ ಮೂಡಿಸಿತ್ತು. ಡಿಕೆ ಶಿವಕುಮಾರ್ ಶಿಸ್ತಿನ ಸಿಪಾಯಿಯಾಗಿ ಕೊಟ್ಟ ಕಾರ್ಯಕ್ರಮಗಳನ್ನು ಸಂಘಟಿತವಾಗಿ ಅನುಷ್ಟಾನಕ್ಕೆ ತಂದೆವು. ಹೀಗಾಗಿ 135 ಸ್ಥಾನ ಕಾಂಗ್ರೆಸ್ ಗೆಲ್ಲಲು ಕಾರಣವಾಯ್ತು ಎಂದು ತಿಳಿಸಿದರು.

ಉಪಮುಖ್ಯಮಂತ್ರಿ ವಿಚಾರದಲ್ಲಿ ಸ್ಟ್ರಿಕ್ಟ್ ಆಗಿ ಹೇಳಬೇಕೆಂದರೇ ಡಿಸಿಎಂ ಹುದ್ದೆ ಸಾಂವಿಧಾನಿಕ ಅಲ್ಲ. ಅವರಿಗೊಂದು ಇವರಿಗೊಂದು ಅಂತ ಕೊಟ್ಟು ಡಿಸಿಎಂ ಸ್ಥಾನದ ಮಹತ್ವ ಹಾಳಾಗಬಾರದು. ಡಿಸಿಎಂ ಹುದ್ದೆಗೆ ಅಂತ ಮಹತ್ವವೇನೂ ಇಲ್ಲ. ನಾನು ಸಚಿವನಾಗಬೇಕಾ ಇಲ್ವಾ ಅನ್ನೋದನ್ನು ಸಿದ್ದರಾಮಯ್ಯನವರೇ ತೀರ್ಮಾನ ಮಾಡಬೇಕು ಎಂದು ಹೇಳಿದರು.

(ವರದಿ - ಧಾತ್ರಿ ಮೈಸೂರು)

IPL_Entry_Point