ಇದೊಂಥರಾ ಅಪ್ಡೇಟೆಡ್ ಮೋಸ; ತಾವೇ ಸರ್ಕಾರದ ಲೆಟರ್ಹೆಡ್, ಐಡಿ ಕಾರ್ಡ್ ಸಿದ್ದಪಡಿಸಿ ಲಕ್ಷ ಲಕ್ಷ ಪೀಕಿದ ವಂಚಕರ ಬಂಧನ
ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಮೈಸೂರಿನ ಹಲವರಿಂದ ಲಕ್ಷ ಲಕ್ಷವನ್ನು ಹಣ ಕಿತ್ತಿರುವ ಇಬ್ಬರು ವಂಚಕರನ್ನು ಮೈಸೂರಿನ ಉದಯಗಿರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೈಸೂರು: ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ವಂಚಿಸುತ್ತಿರುವವರ ಜಾಲ ದಿನದಿಂದ ದಿನಕ್ಕೆ ವಿಸ್ತರಿಸುತ್ತಿದೆ. ಉದ್ಯೋಗದ ಆಮೀಷಕ್ಕೆ ಒಳಗಾಗಿ ಮೋಸ ಹೋಗುತ್ತಿರುವವರ ಸಂಖ್ಯೆಯೂ ಏರುತ್ತಿದೆ. ಒಬ್ಬೊಬ್ಬರು ಒಂದೊಂದು ಶೈಲಿಯಲ್ಲಿ ವಂಚನೆಯ ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ. ಎಷ್ಟೋ ಮಂದಿ ಆಸ್ತಿ ಮಾರಿ, ಬ್ಯಾಂಕ್ ಸಾಲ ತೆಗೆದುಕೊಂಡು ವಂಚಕರ ಬಾಯಿಗೆ ತುರುಕಿದ್ದಾರೆ. ಇದೀಗ ಕೆಲಸದ ಭರವಸೆ ನೀಡಿ ಅಪ್ಡೇಟೆಡ್ ವಂಚನೆಯೊಂದು ಮೈಸೂರಲ್ಲಿ ನಡೆದಿದೆ.
ಹೌದು, ಸರ್ಕಾರಿ ಆದೇಶ, ನೇಮಕಾತಿ ಪತ್ರ, ನಡಾವಳಿ, ನಿರಾಕ್ಷೇಪಣ, ಪ್ರಮಾಣಪತ್ರ, ಐಡಿ ಕಾರ್ಡ್ ಎಲ್ಲವನ್ನೂ ನೀಡಿರುವ ವಂಚಕರು, ಮೈಸೂರಿನ ಹಲವರ ಬಳಿ ಲಕ್ಷ ಲಕ್ಷ ಹಣ ಪೀಕಿದ್ದಾರೆ. ಆದರೆ, ಸರ್ಕಾರಿ ಉದ್ಯೋಗ ಸಿಕ್ಕೇ ಬಿಡ್ತು ಅಂತ ಖುಷಿಯಲ್ಲಿ ಇದ್ದವರಿಗೆ ಸಿಕ್ಕಿದ್ದು ನಕಲಿ ಆದೇಶದ ಪ್ರತಿ. ಎಲ್ಲಾ ದಾಖಲೆಗಳನ್ನು ಸರ್ಕಾರವೇ ನೀಡಿರುವಂತೆ ನಂಬಿಸಿದ್ದಾರೆ. ತಾನೇ ಕೆಲಸ ಕೊಡಿಸಿರುವುದಾಗಿ ನಂಬಿಸಿ ಮೋಸ ಮಾಡಿದ್ದು, ಲಕ್ಷ ಲಕ್ಷ ಪಡೆದಿದ್ದಾರೆ.
ಯಾವ್ಯಾವ ಇಲಾಖೆಯ ಲೆಟರ್ಹೆಡ್ಗಳು ಮಾಡಿದ್ದರು?
ಮೈಸೂರಿನ ಪ್ರಮೋದ್ ಮತ್ತು ಕುಮಾರ್ ಎಂಬವರು ಈ ವಂಚನೆ ಮಾಡಿದ್ದಾರೆ. ಉದ್ಯೋಗಾಕಾಂಕ್ಷಿಗಳು ನೀಡಿದ ದೂರಿನ ಅನ್ವಯ ಇಬ್ಬರು ವಂಚಕರನ್ನು ವಶಕ್ಕೆ ಪಡೆದಿರುವ ಮೈಸೂರಿನ ಉದಯಗಿರಿ ಠಾಣೆ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಮಂಡ್ಯದ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಅಟೆಂಡರ್, ಡಾಟಾ ಎಂಟ್ರಿ ನೇಮಕಾತಿಯ ಗ್ರೂಪ್ ಡಿ ಹುದ್ದೆಗಳನ್ನು ಕೊಡಿಸುವುದಾಗಿ ಮೋಸ ಮಾಡಿದ್ದಾರೆ.
ಅಲ್ಲದೆ, ಮಂಡ್ಯ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿ, ಬೆಂಗಳೂರಿನಲ್ಲಿರುವ ಕರ್ನಾಟಕ ಸರ್ಕಾರ ಆರೋಗ್ಯ ಕುಟುಂಬ ಕಲ್ಯಾಣ ಸೇವೆ ಆಯುಕ್ತಾಲಯದ ಲೆಟರ್ಹೆಡ್ ನೀಡಿರುವ ವಂಚಕರು, ಉದ್ಯೋಗಾಕಾಂಕ್ಷಿಗಳಿಗೆ ಸರ್ಕಾರದ ಖಜಾನೆಯಿಂದಲೇ ಚಲನ್ ರೆಫರೆನ್ಸ್ ನಂಬರ್ ಮೆಸೇಜ್ ಬರುವಂತೆ ನೋಡಿಕೊಂಡಿದ್ದರು. 2020ರಿಂದಲೂ ಈ ಗ್ಯಾಂಗ್ ನಂಬಿಸಿಕೊಂಡು ಬಂದಿದೆ. ಅಂದಿನಿಂದ 2023ರ ಆಗಸ್ಟ್ 17ರ ತನಕ ಒಂದೊಂದೇ ಆದೇಶ ಪ್ರತಿ ಕೊಡುತ್ತಾ ನಂಬಿಸಿದ್ದರು.
ಆದರೆ, ಯಾವಾಗಿನಿಂದ ಕೆಲಸ ಸೇರಬೇಕು ಎಂದು ಕೇಳಿದಾಗ ಉತ್ತರ ನೀಡದೆಯೇ ಸುಮ್ಮನಾಗಿದ್ದ ವಂಚಕರ ನಡೆದ ಅನುಮಾನ ಮೂಡಿಸಿದ ಕಾರಣ ಮೋಸ ಹೋಗಿದ್ದೇವೆ ಎಂದು ತಿಳಿದ ಉದ್ಯೋಗಾಕಾಂಕ್ಷಿಗಳು ದೂರು ನೀಡಿದರು. ಈ ಖತರ್ನಾಕ್ ವಂಚಕರು ಒಬ್ಬೊಬ್ಬರಿಂದ 3 ರಿಂದ 5 ಲಕ್ಷದವರೆಗೂ ಹಣ ಪಡೆದು ಮೋಸ ಮಾಡಿದೆ. ಇದೇ ರೀತಿ 30ಕ್ಕೂ ಹೆಚ್ಚು ಜನರಿಗೆ ವಂಚನೆ ಮಾಡಿದ್ದಾರೆ ಎನ್ನಲಾಗಿದೆ. ಈ ಉದ್ಯೋಗ ಕೊಡಿಸುವ ಭರವಸೆ ನೀಡಿ ಲಕ್ಷ ಲಕ್ಷ ಪೀಕುವವರ ಮಧ್ಯೆ, ನಕಲಿ ಸರ್ಕಾರದ ಆದೇಶಗಳನ್ನು ಸಿದ್ಧಪಡಿಸಿ ಸರ್ಕಾರವೇ ನೀಡಿದ ರೀತಿ ನಂಬಿಸಿ ಲಕ್ಷ ಲಕ್ಷ ಪಡೆದಿದ್ದ ಗ್ಯಾಂಗ್ ಇದೀಗ ಜೈಲು ಸೇರಿದೆ.