ನಂಜನಗೂಡು ರಸ್ತೆಗಳಲ್ಲಿ ಒಕ್ಕಣೆಯಿಂದ ವಾಹನಗಳಿಗೆ ಅಪಾಯ: ಇದು ಪ್ರತಿವರ್ಷದ ಗೋಳು, ಆಂಬುಲೆನ್ಸ್‌ಗಳಿಗೂ ತಪ್ಪದ ಪರದಾಟ
ಆಂಬ್ಯುಲೆನ್ಸ್ ಸೇರಿದಂತೆ ಸಾಕಷ್ಟು ವಾಹನಗಳು ಸತ್ತೆಯ ಉರುಳಿಗೆ ಸಿಲುಕಿ ಗಂಟೆಗಟ್ಟಲೆ ಪರದಾಡುವಂತಹ ಘಟನೆಗಳು ದಿನನಿತ್ಯ ನಡೆಯತ್ತಿವೆ. ಈಗ ಒಕ್ಕಣೆ ಮಾಡುವ ಸೀಸನ್ ಶುರುವಾಗಿದೆ. ಅಧಿಕಾರಿಗಳು ಶೀಘ್ರ ಇತ್ತ ಗಮನಹರಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ.
ನಂಜನಗೂಡು: ರಾಜ್ಯ ಹೆದ್ದಾರಿ ಮತ್ತು ಪ್ರಮುಖ ರಸ್ತೆಗಳಲ್ಲಿ ಕೆಲ ರೈತರು ರಾಗಿ, ಹುರುಳಿ, ಭತ್ತದ ಒಕ್ಕಣೆ ಆರಂಭಿಸಿದ್ದಾರೆ. ಇದರಿಂದ ರಸ್ತೆಗಳು ಒಕ್ಕಣೆ ಕಣಗಳಾಗಿ ಮಾರ್ಪಾಡಾಗಿವೆ. ವಾಹನಗಳು ಇದರಿಂದ ಅಪಾಯದಲ್ಲಿ ಸಿಲುಕುತ್ತಿವೆ. ಪ್ರಯಾಣಿಕರು ಪರದಾಡಬೇಕಾಗಿದೆ. ದ್ವಿಚಕ್ರ ವಾಹನ ಸವಾರರು ಅಲ್ಲಲ್ಲಿ ಬೀಳುವುದು ಸರ್ವೇಸಾಮಾನ್ಯ ಎನಿಸಿದೆ. ವಾಹನಗಳ ಸುಗಮ ಸಂಚಾರಕ್ಕಾಗಿ ಅಭಿವೃದ್ದಿಪಡಿಸಿರುವ ರಾಜ್ಯ ಹೆದ್ದಾರಿಗಳು ಹಾಗೂ ರಸ್ತೆಗಳಲ್ಲಿ ಸಂಚರಿಸುವುದು ದುಸ್ವಪ್ನದಂತೆ ಭಾಸವಾಗುತ್ತಿದೆ.
ಒಕ್ಕಣೆಗಾಗಿ ಸುರಿದ ರಾಗಿ ಹುರುಳಿ ಸೆತ್ತೆ ಜಾಲಕ್ಕೆ ಸಿಲುಕಿದ ವಾಹನಗಳು ಮುಂದೆ ಹೋಗಲು ಸಾಧ್ಯವಾಗದೆ ವಾಹನ ಸವಾರರು, ಪ್ರಯಾಣಿಕರು ಪಡಿಪಾಟಲು ಅನುಭವಿಸುವಂತಾಗಿದೆ. ಪ್ರಯಾಣಿಕರಂತೂ ನಿಗದಿತ ಸಮಯಕ್ಕೆ ತಲುಪಲಾಗದೆ ಬವಣೆ ಅನುಭವಿಸುತ್ತಿದ್ದಾರೆ. ಸಾರ್ವಜನಿಕ ರಸ್ತೆಗಳಲ್ಲಿ ಒಕ್ಕಣೆ ಮಾಡಬಾರದೆಂಬ ನಿಯಮ ಇದ್ದರೂ ಸಹ ಕ್ಯಾರೇ ಎನ್ನದ ರೈತರು ಒಕ್ಕಣೆಗೆ ಮುಂದಾಗುವ ಮೂಲಕ ವಾಹನ ಸಂಚಾರಕ್ಕೆ ಅಡಚಣೆ ಉಂಟು ಮಾಡುತ್ತಿದ್ದಾರೆ.
ಎಚ್‌ಡಿ ಕೋಟೆ ಮಾರ್ಗವಾಗಿ ಹೆಡಿಯಾಲ ಗ್ರಾಮದಿಂದ ಬೇಗೂರು ಮೂಲಕ ಊಟಿಗೆ ತೆರಳುತ್ತಿದ್ದ ಸಂಶೋಧನಾ ವಿಧ್ಯಾರ್ಥಿಗಳ ಟೆಂಪೋ ಟ್ರಾವೆಲ್ಸ್ ವಾಹನವು ಶುಕ್ರವಾರ ಹುರುಳಿ ಸೆತ್ತೆ ನಡುವೆ ಸಿಲುಕಿತ್ತು. ಸುಮಾರು 5 ಗಂಟೆಗಳ ಸತತ ಶ್ರಮದ ವಾಹನ ಸಿಬ್ಬಂದಿಗಳು ಸೆತ್ತೆ ಬೇರ್ಪಡಿಸಿ ಬಹಳ ಬೇಸರದಿಂದಲೇ ತಮ್ಮ ಮುಂದಿನ ದಾರಿ ಹಿಡಿದರು.
ಹೆಡಿಯಾಲ-ಬೇಗೂರು ಮಾರ್ಗವಾಗಿ ನಂಜನಗೂಡು, ಗುಂಡ್ಲುಪೇಟೆಗೆ ತೆರಳುವ ರಾಜ್ಯ ಹೆದ್ದಾರಿ ಹಾಗೂ ಹೆಡಿಯಾಲ-ಹುರ ಮಾರ್ಗವಾಗಿ ಹುಲ್ಲಹಳ್ಳಿ-ನಂಜನಗೂಡು ಮತ್ತು ಮೈಸೂರಿಗೆ ತೆರಳುವ ರಾಜ್ಯ ಹೆದ್ದಾರಿಗಳಲ್ಲೂ ಸಹ ಒಕ್ಕಣೆ ಮಾಡುವ ದೃಶ್ಯಗಳು ಸಾಮಾನ್ಯವಾಗಿ ಕಂಡು ಬರುತ್ತಿವೆ. ಆಂಬ್ಯುಲೆನ್ಸ್ ಸೇರಿದಂತೆ ಸಾಕಷ್ಟು ವಾಹನಗಳು ಸತ್ತೆಯ ಉರುಳಿಗೆ ಸಿಲುಕಿ ಗಂಟೆಗಟ್ಟಲೆ ಪರದಾಡುವಂತಹ ಘಟನೆಗಳು ದಿನನಿತ್ಯ ನಡೆಯತ್ತಿವೆ. ಈಗ ಒಕ್ಕಣೆ ಮಾಡುವ ಸೀಸನ್ ಶುರುವಾಗಿದೆ.
ಹೆದ್ದಾರಿಗಳಲ್ಲೇ ರಾಜಾರೋಷವಾಗಿ ಒಕ್ಕಣೆ ಮಾಡಲು ಇವರಿಗೆ ಅನುಮತಿ ನೀಡಿದವರು ಯಾರು? ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ಏಕೆ? ಸ್ಥಳೀಯ ಆಡಳಿತ ಯಂತ್ರ ಸಹ ಅಸಹಾಯಕತೆ ಪ್ರದರ್ಶಿಸುತ್ತಿರುವುದು ಏಕೆ? ಈ ರೀತಿ ಅಪಾಯಕ್ಕೆ ಎಡೆ ಮಾಡಿಕೊಟ್ಟಿರುವ ರೈತರನ್ನು ಪ್ರಶ್ನಿಸುವರೇ ಇಲ್ಲವೇ ಎಂದು ವಾಹನ ಮಾಲೀಕರು ಅಧಿಕಾರಿಗಳನ್ನು ಪ್ರಶ್ನಿಸುತ್ತಿದ್ದಾರೆ.
ಪ್ರತಿವರ್ಷದ ಗೋಳು: ಕುಸುಮಾ ಫೇಸ್‌ಬುಕ್ ಪೋಸ್ಟ್
ಇದೇ ಸಮಸ್ಯೆಯ ಬಗ್ಗೆ ಬರಹಗಾರ್ತಿ ಕುಸುಮಾ ಫೇಸ್‌ಬುಕ್‌ನಲ್ಲಿ ಚಿತ್ರಸಹಿತ ಪೋಸ್ಟ್ ಹಾಕಿದ್ದಾರೆ. ಅವರ ಪೋಸ್ಟ್‌ನ ಒಕ್ಕಣೆ ಹೀಗಿದೆ.
'ಹೀಗೆ ಒಂದು ಸ್ಕೂಟರೂ ಹೋಗಲಾರದಂಗೆ ರಸ್ತೆ ತುಂಬಾ ರಸ್ತೆಯುದ್ದಕ್ಕೂ ಒಕ್ಕಣೆ ಮಾಡ್ತಿರ್ತಾರೆ ನಮ್ ಜನ. ಎಷ್ಟೋ ಟೂ ವೀಲರುಗಳು ಮಗುಚಿಕೊಳ್ತವೆ. ಕಾರುಗಳು ಬೆಂಕಿ ಹೊತ್ತಿಕೊಂಡದ್ದೂ ಇದೆ. ಮೊನ್ನೆ ನಾನೇ ಬಿದ್ದೆ ಸ್ಕೂಟರಿಂದ. (ಅಂತದೇನಾಗಿಲ್ಲ ಮೂಗೇಟು. ಆದರೆ ಅಕಸ್ಮಾತ್ ಸ್ಕೂಟರೇ ಹೊತ್ತಿಕೊಂಡರೆ?) ಕೇಳಿದರೆ ನಿಮ್ಮಪ್ಪಂದಾ ರೋಡು ಅನ್ನಬಹುದು ಅವರೂ. ನಿಮ್ಮಪ್ಪಂದಾ ಅಂತ ನಾವೂ ಅನ್ನಬಹುದು. ಯಾರಪ್ಪಂದೂ ಅಲ್ಲ. ಅಥವಾ ಎಲ್ಲರ ಅಪ್ಪನದೂ ಹೌದು. ಹಾಗಾಗಿಯೇ ಎಷ್ಟು ಮಾತಾಡಿದರೂ ವಾದವೇ ಆಗುತ್ತದೆ. ಈ ಈಸೀ ಒಕ್ಕಣೆ ಪದ್ದತಿ ಅಪಾಯಕಾರಿ. ಪ್ರತಿವರ್ಷದ ಗೋಳು. ಕಾಳಿನ ಒಕ್ಕಣೆಗೆ ಕಾಲು ಮುರಿದುಕೊಳ್ಳೋ, ಜೀವ ತೆಗೆಯೋ ರಿಸ್ಕು ಬೇಕಾ? ಈ ರಾಷ್ಟ್ರೀಯ ಸಮಸ್ಯೆಗೆ ಏನು ಪರಿಹಾರ' ಎಂದು ಅವರು ಪ್ರಶ್ನಿಸಿದ್ದಾರೆ.