Kabini Dam: ಕಬಿನಿ ಜಲಾಶಯ ತುಂಬಲು 7 ಅಡಿ ಮಾತ್ರ ಬಾಕಿ, ಬೇಗನೇ ಭರ್ತಿಯಾಗುವ ನಿರೀಕ್ಷೆ, ಎಷ್ಟಿದೆ ನೀರಿನ ಮಟ್ಟ?
Rain Updates ಕೇರಳದಲ್ಲಿ ಸುರಿಯುತ್ತಿರುವ ಮಳೆ( Kerala Rain) ಯಿಂದಾಗಿ ಮೈಸೂರಿನ ಕಬಿನಿ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬಂದಿದೆ.
![ಮೈಸೂರು ಜಿಲ್ಲೆಯ ಕಬಿನಿ ಜಲಾಶಯದ ನೋಟ. ಮೈಸೂರು ಜಿಲ್ಲೆಯ ಕಬಿನಿ ಜಲಾಶಯದ ನೋಟ.](https://images.hindustantimes.com/kannada/img/2024/07/01/550x309/kabini_dam_1719830796488_1719830803520.jpeg)
ಮೈಸೂರು: ಕೇರಳದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಮೈಸೂರು ಜಿಲ್ಲೆಯ ಕಬಿನಿ ಜಲಾಶಯವು ತುಂಬಲು ಇನ್ನು ಏಳು ಅಡಿ ಮಾತ್ರ ಬಾಕಿಯಿದೆ. ಎರಡು ದಿನದಿಂದ ಕೇರಳದ ವಯನಾಡು ಭಾಗದಲ್ಲಿ ಮಳೆ ಕಡಿಮೆಯಾಗಿತ್ತು. ಈಗ ಮತ್ತೆ ಮುಂಗಾರು ಚುರುಕುಗೊಂಡಿರುವುದರಿಂದ ಕಬಿನಿ ಜಲಾಶಯಕ್ಕೆ ಮತ್ತೆ ಒಳ ಹರಿವು ಹೆಚ್ಚಿ ಈ ವಾರದಲ್ಲಿಯೇ ತುಂಬುವ ಲಕ್ಷಣಗಳು ಕಾಣುತ್ತಿವೆ. ಜುಲೈ ಮೊದಲ ವಾರದಲ್ಲಿಯೇ ಜಲಾಶಯದಲ್ಲಿ ಇಷ್ಟು ಪ್ರಮಾಣದ ನೀರು ಸಂಗ್ರಹವಾಗಿರುವುದು ಇದೇ ಮೊದಲು. ಅಲ್ಲದೇ ಈ ವಾರದಲ್ಲಿಯೇ ಜಲಾಶಯ ತುಂಬಿದರೆ ಅದು ಕೂಡ ದಾಖಲೆಯೇ ಆಗಲಿದೆ. ಅಷ್ಟರ ಮಟ್ಟಿಗೆ ಕೇರಳದಲ್ಲಿ ಸುರಿದ ಭಾರೀ ಮಳೆಯು ಕಬಿನಿ ಜಲಾಶಯಕ್ಕೆ ಜೀವ ಕಳೆಯನ್ನು ತಂದಿದೆ.
ಕಬಿನಿ ಜಲಾಶಯಕ್ಕೆ ಕೆಲ ದಿನಗಳಿಂದ ನಿರಂತರವಾಗಿ ನೀರು ಹರಿದು ಬರುತ್ತಿದೆ. ಅದರಲ್ಲೂ ಕೇರಳದ ವಯನಾಡು ಜಿಲ್ಲೆಯ ಕೆಲವು ಭಾಗ ಕಬಿನಿ ಜಲಾಶಯದ ನೀರಿನ ಮೂಲ. ಆ ಪಾತ್ರದಲ್ಲಿ ಮಳೆಯಾದರೆ ಸಹಜವಾಗಿಯೇ ಕಬಿನಿಗೆ ನೀರು ಹರಿದು ಬರಲಿದೆ. ಕಬಿನಿ ಹಿನ್ನೀರು ಕೂಡ ತುಂಬಲಿದೆ. ಜಲಾಶಯಕ್ಕೆ ಸೋಮವಾರದಂದು 5560 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದ ಮಟ್ಟವು 2277.00 ಅಡಿ ತಲುಪಿದೆ. ಗರಿಷ್ಠ ಮಟ್ಟವು 2284 ಅಡಿಯಷ್ಟಿದೆ. ಜಲಾಶಯದಲ್ಲಿ 15.36 ಟಿಎಂಸಿ ನೀರನ್ನು ಸಂಗ್ರಹಿಸಲಾಗಿದೆ. ಜಲಾಶಯವು 19.52 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿದೆ.
ಜಲಾಶಯದಿಂದ ಎರಡು ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿತ್ತು.ಸೋಮವಾರಕ್ಕೆ ಇದನ್ನು ಒಂದು ಸಾವಿರ ಕ್ಯೂಸೆಕ್‌ಗೆ ಇಳಿಸಲಾಗಿದೆ.
ಕಬಿನಿ ಜಲಾಶಯದಲ್ಲಿ ಕಳೆದ ವರ್ಷ ಇದೇ ದಿನ 2251.54 ಅಡಿ ನೀರಿತ್ತು. ಒಳಹರಿವಿನ ಪ್ರಮಾಣ 1115 ಕ್ಯೂಸೆಕ್ ಇತ್ತು. ಅಂದರೆ ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಜಲಾಶಯದಲ್ಲಿ ಸುಮಾರು 27 ಅಡಿ ನೀರು ಹೆಚ್ಚು ಸಂಗ್ರಹವಾಗಿದೆ. ಒಳ ಹರಿವಿನ ಪ್ರಮಾಣವೂ ಗಣನೀಯವಾಗಿ ಹೆಚ್ಚಿಕೆಯಾಗಿದೆ.
ಕಬಿನಿ ಜಲಾಶಯವೂ ಹಿಂದಿನ ವರ್ಷಗಳಲ್ಲಿ ಜುಲೈನಲ್ಲಿ ತುಂಬಿದ ಉದಾಹರಣೆಯಿದೆ. ಆಗಸ್ಟ್ ನಲ್ಲೂ ಕೆಲ ವರ್ಷ ತುಂಬಿದೆ. ಆದರೆ ಜಲಾಶಯ ನಿರ್ಮಾಣಗೊಂಡ ಐವತ್ತು ವರ್ಷಗಳ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಜೂನ್ ಅಂತ್ಯಕ್ಕೆ 2277 ಅಡಿಗೆ ತಲುಪಿದೆ. ಇಷ್ಟು ಬೇಗ ನೀರು ಬಂದಿರುವುದು ಕೇರಳದಲ್ಲಿನ ಉತ್ತಮ ಮಳೆಯಿಂದಲೇ. ಹಿಂದಿನ ವರ್ಷ ಮಳೆ ಕೊರತೆಯಿಂದ ಜಲಾಶಯದ ನೀರಿನ ಮಟ್ಟ 2241 ಅಡಿಗೂ ಕುಸಿದು ಹೋಗಿತ್ತು. ಈ ಬಾರಿ ಜಲಾಶಯವೂ ಎರಡು ಬಾರಿ ಮಾತ್ರ ತುಂಬಿತ್ತು. ಆದರೂ ನಿರ್ವಹಣೆಯಿಂದ ಜಲಾಶಯದಲ್ಲಿ 2256 ಅಡಿವರೆಗೂ ಇತ್ತು. ಈಗ ಮಳೆಯೂ ಚೆನ್ನಾಗಿ ಆಗಿರುವುದರಿಂದ 20 ಅಡಿ ಬೇಗನೇ ಬಂದಿದೆ. ಹೀಗೆಯೇ ಮಳೆಯಾದರೆ ತುಂಬುವ ಸಮಯವೂ ಹೆಚ್ಚು ಬೇಕಾಗಲಾರದು. ಮೂರು ದಿನದಿಂದ ಕೇರಳದಲ್ಲಿ ಮಳೆ ಪ್ರಮಾಣ ತಗ್ಗಿದ್ದರಿಂದ ಒಳ ಹರಿವು ಕಡಿಮೆಯಾಗಿತ್ತು. ಈಗ ಮತ್ತೆ ವಯನಾಡಿನಲ್ಲಿ ಮಳೆ ಚುರುಕಾಗಿದೆ. ಉತ್ತಮ ಮಳೆಯಾದರೆ ವಾರದೊಳಗೆ ಜಲಾಶಯ ತುಂಬಿ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗಬಹುದು. ಅದರಲ್ಲೂ ಕರ್ನಾಟಕ ಹಾಗೂ ತಮಿಳುನಾಡಿನ ನೀರು ಹಂಚಿಕೆ ವಿವಾದಕ್ಕೆ ಮೊದಲಿನಿಂದಲೂ ಕಬಿನಿಯೇ ಆಸರೆಯಾಗಿರುವುದರಿಂದ ಆ ಸಮಸ್ಯೆಗೂ ತಣ್ಣಗಾಗಬಹುದು ಎಂದು ಕಬಿನಿ ಜಲಾಶಯದ ಕುರಿತು ನಿಖರವಾಗಿ ಎರಡೂವರೆ ದಶಕದಿಂದ ಬರೆಯುತ್ತಿರುವ ಹಿರಿಯ ಪತ್ರಕರ್ತ ಎಂ.ಎಲ್.ರವಿಕುಮಾರ್ ಹೇಳುತ್ತಾರೆ.
ಈ ನಡುವೆ ಜಲಾಶಯ ನಿರ್ಮಾಣವಾಗಿ ಈ ವರ್ಷಕ್ಕೆ 50 ವರ್ಷ ತುಂಬಲಿದೆ. ಸರ್ಕಾರವೂ ಈ ಕಾರ್ಯಕ್ರಮ ಆಚರಿಸಲು ಯೋಜಿಸುತ್ತಿದೆ. ಉತ್ತಮ ಮಳೆಯಾಗಿ ಜಲಾಶಯ ತುಂಬುವ ಹಂತಕ್ಕೆ ಬರುತ್ತಿರುವುದರಿಂದ ಬೇಗನೇ ಕಾರ್ಯಕ್ರಮ ರೂಪಿಸಬಹುದು ಎನ್ನುವ ಮಾತುಗಳು ಕೇಳಿ ಬರುತ್ತಿವೆ.
![Whats_app_banner Whats_app_banner](https://kannada.hindustantimes.com/static-content/1y/wBanner.png)