Holiday Declared: ಶ್ರೀನಿವಾಸಪ್ರಸಾದ್ ನಿಧನ, ಮೈಸೂರು, ಚಾಮರಾಜನಗರ ಜಿಲ್ಲೆಯಲ್ಲಿ ನಾಳೆ ಸರ್ಕಾರಿ ಕಚೇರಿಗಳಿಗೆ ರಜೆ
ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ಮಂಗಳವಾರದಂದು ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಲಾಗಿದೆ. ಸಂಸದ ಶ್ರೀನಿವಾಸಪ್ರಸಾದ್ ಗೌರವಾರ್ಥ ಈ ಆದೇಶ ಜಾರಿಯಾಗಿದೆ.

ಮೈಸೂರು: ಮಾಜಿ ಸಚಿವ ಹಾಗೂ ಹಿರಿಯ ನಾಯಕ ವಿ.ಶ್ರೀನಿವಾಸಪ್ರಸಾದ್ ಅವರ ಗೌರವಾರ್ಥವಾಗಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಎಲ್ಲಾ ಸರ್ಕಾರಿ ಕಛೇರಿಗಳಿಗೂ ಹಾಗೂ ಎಲ್ಲಾ ಶಾಲಾ ಕಾಲೇಜುಗಳಿಗೆ ಏ.30ರ ಮಂಗಳವಾರ ರಜೆ ಘೋಷಣೆಯಾಗಿದೆ.
ಪೂರ್ವ ನಿಗಧಿಯಾಗಿರುವ ಪರೀಕ್ಷೆಗಳನ್ನು ಹೊರತುಪಡಿಸಿ ಸರ್ಕಾರಿ, ಅನುದಾನ ಪಡೆಯುವ ಎಲ್ಲಾ ವಿದ್ಯಾ ಸಂಸ್ಥೆಗಳಿಗೂ 2024 ರ ಏ. 30ರಂದು ರಜೆ ನೀಡಲಾಗಿದೆ. ಸದರಿ ಆದೇಶವು ನೆಗೋಷಿಯೇಬಲ್ ಇನ್ಸ್‌ಸ್ಟ್ರುಮೆಂಟ್ ಆಕ್ಟ್ 1881ರ ಪ್ರಕಾರವು ಕೂಡ ಸಾರ್ವಜನಿಕ ರಜೆ ಎಂದು ಘೋಷಿಸಲಾಗಿದೆ ಎಂದು ಸರ್ಕಾರ ಅಧಿಕೃತ ಆಧಿಸೂಚನೆ ಹೊರಡಿಸಿದೆ.
ಈ ಕುರಿತು ಕರ್ನಾಟಕ ಸರ್ಕಾರದ ಸಿಬ್ಬಂದಿ ಆಡಳಿತ ಮತ್ತು ಸುಧಾರಣೆ ಇಲಾಖೆಯ ಶಿಷ್ಟಾಚಾರ ವಿಭಾಗದ ಅಧೀನ ಕಾರ್ಯದರ್ಶಿ ಎಚ್.ಬಿ. ವಿಜಯಕುಮಾರ್ ಅವರು ಆದೇಶವನ್ನು ಹೊರಡಿಸಿದ್ದಾರೆ.
ಇದಲ್ಲದೇ ವಿ.ಶ್ರೀನಿವಾಸಪ್ರಸಾದ್ ಅವರ ಅಂತಿಮ ಕ್ರಿಯೆಯನ್ನು ಮಂಗಳವಾರದಂದು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸುವಂತೆಯೂ ಆದೇಶ ಹೊರಡಿಸಲಾಗಿದೆ.
ಪ್ರಸಾದ್ ಅವರು ಮೈಸೂರು ಭಾಗದ ಹಿರಿಯ ರಾಜಕಾರಣಿ. ನಾಲ್ಕು ಬಾರಿ ಕಾಂಗ್ರೆಸ್, ಒಮ್ಮೆ ಲೋಕಶಕ್ತಿ ಹಾಗೂ ಮತ್ತೊಮ್ಮೆ ಬಿಜೆಪಿಯಿಂದ ಸೇರಿ ಆರು ಬಾರಿ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ, ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ಸಚಿವರಾಗಿ, ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ, ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಕಂದಾಯ ಸಚಿವರಾಗಿ ಕೆಲಸ ಮಾಡಿದವರು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಲೋಕಶಕ್ತಿ, ಸಮತಾ ಪಕ್ಷದಲ್ಲಿಯೂ ಕೆಲಸ ಮಾಡಿದ ಅನುಭವ ಹೊಂದಿದವರು. ಸದ್ಯ ಅವರು ಚಾಮರಾಜನಗರ ಲೋಕಸಭಾ ಕ್ಷೇತ್ರದ ಸದಸ್ಯರು.
ಪ್ರಸಾದ್ ಅವರ ಪಾರ್ಥಿವ ಶರೀರವನ್ನು ಅವರ ನಿವಾಸಕ್ಕೆ ತರಲಾಗಿತ್ತು. ಆನಂತರ ಮಹಾರಾಣಿ ಎನ್‌ಟಿಎಂಎಸ್ ಶಾಲೇ ಆವರಣ, ಅಶೋಕಪುರಂನಲ್ಲಿ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿತ್ತು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸಹಿತ ಹಲವರು ಅಂತಿಮ ದರ್ಶನಕ್ಕೆ ಆಗಮಿಸುವ ನಿರೀಕ್ಷೆಯಿದೆ. ಮಂಗಳವಾರ ಬೆಳಿಗ್ಗೆ ಅವರ ಪಾರ್ಥಿವ ಶರೀರರ ಅಂತ್ಯಕ್ರಿಯೆ ಮೈಸೂರಿನಲ್ಲಿ ನಡೆಯಲಿದೆ.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
(This copy first appeared in Hindustan Times Kannada website. To read more like this please logon to kannada.hindustantimes.com)
