ಕನ್ನಡ ಸುದ್ದಿ  /  ಕರ್ನಾಟಕ  /  Krs Dam: ಕೊಡಗಲ್ಲಿ ಉತ್ತಮ ಮಳೆ, ಕೆಆರ್‌ಎಸ್ ಜಲಾಶಯಕ್ಕೆ ಬಂತು 2 ಅಡಿ ನೀರು

KRS Dam: ಕೊಡಗಲ್ಲಿ ಉತ್ತಮ ಮಳೆ, ಕೆಆರ್‌ಎಸ್ ಜಲಾಶಯಕ್ಕೆ ಬಂತು 2 ಅಡಿ ನೀರು

ಪೂರ್ವ ಮುಂಗಾರು ಉತ್ತಮವಾಗಿರುವುದರಿಂದ ಕೊಡಗಿನಲ್ಲಿ( Kodagu Rains) ಉತ್ತಮ ಮಳೆಯಾಗಿ ಕೃಷ್ಣರಾಜಸಾಗರ ಜಲಾಶಯಕ್ಕೂ ನೀರು ಬಂದಿದೆ.

ಕೆಆರ್‌ಎಸ್‌ ಜಲಾಶಯಕ್ಕೆ ನೀರು ಬಂದಿದೆ.
ಕೆಆರ್‌ಎಸ್‌ ಜಲಾಶಯಕ್ಕೆ ನೀರು ಬಂದಿದೆ.

ಮೈಸೂರು: ಮೈಸೂರು ಹಾಗೂ ಬೆಂಗಳೂರು ಭಾಗದವರ ಜೀವನಾಡಿ ಕೃಷ್ಣರಾಜಸಾಗರ ಜಲಾಶಯಕ್ಕೆ ಬೇಸಿಗೆಯಲ್ಲಿ ನೀರಿನ ಕಳೆ ಬಂದಿದೆ. ಈಗಾಗಲೇ ಬಿರು ಬೇಸಿಗೆಯಿಂದ ಸೊರಗಿ ಹೋಗಿದ್ದ ಕೃಷ್ಣರಾಜಸಾಗರ ಜಲಾಶಯಕ್ಕೆ ನೀರು ಹರಿದುಬರುತ್ತಿದೆ. ಪೂರ್ವ ಮುಂಗಾರು ಕೊಡಗಿನಲ್ಲಿ ಉತ್ತಮವಾಗಿರುವ ಕಾರಣದಿಂದ ಕಾವೇರಿ ನದಿ ಮೂಲಕ ನೀರು ಹರಿಯುತ್ತಿರುವುದರಿಂದ ಎರಡೇ ದಿನದಲ್ಲಿ ಎರಡು ಅಡಿಯಷ್ಟು ನೀರು ಜಲಾಶಯಕ್ಕೆ ಬಂದಿದೆ.ಕೊಡಗಲ್ಲಿ ಇನ್ನೂ ಐದು ದಿನ ಕಾಲ ಉತ್ತಮ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಮುಂಗಾರು ಮಳೆಗಿಂತ ಮುಂಚೆಯೇ ನೀರಿನ ಮಟ್ಟ ಇನ್ನೂ ಹೆಚ್ಚುವ ನಿರೀಕ್ಷೆಯಿದೆ.

ಟ್ರೆಂಡಿಂಗ್​ ಸುದ್ದಿ

ಶತಮಾನದಷ್ಟು ಹಳೆಯದಾದ ಕೃಷ್ಣರಾಜಸಾಗರ ಜಲಾಶಯಕ್ಕೆ ಕೊಡಗಿನ ಮಳೆಯೇ ಆಸರೆ. ಕೊಡಗಿನ ಜತೆಗೆ ಹೇಮಾವತಿ ಭಾಗ, ಮೈಸೂರು ಜಿಲ್ಲೆಯಲ್ಲಿ ಉತ್ತಮ ಮಳೆಯಾದರೆ ಕೃಷ್ಣರಾಜಸಾಗರ ಜಲಾಶಯ ತುಂಬುತ್ತದೆ. ಕೊಡಗಿನಲ್ಲಿ ನಾಲ್ಕೈದು ಉತ್ತಮ ಮಳೆಯಾಗಿ ನಿತ್ಯ 20 ಸಾವಿರಕ್ಕೂ ಅಧಿಕ ಕ್ಯೂಸೆಕ್‌ ನೀರು ಹರಿದು ಬಂದರೆ ಜಲಾಶಯಕ್ಕೆ ಕಳೆ ಬರುತ್ತದೆ.

ಅದರಲ್ಲೂ ಜುಲೈ ತಿಂಗಳ ಮಳೆಯಿಂದ ಆಗಸ್ಟ್‌ ಹೊತ್ತಿಗೆ ಜಲಾಶಯ ಭರ್ತಿಯಾಗುತ್ತದೆ. ಆದರೆ ಕಳೆದ ವರ್ಷ ಕೊಡಗಿನಲ್ಲಿ ಉತ್ತಮ ಮಳೆಯಾಗದೇ ಜಲಾಶಯ ತುಂಬಲೇ ಇಲ್ಲ. ಒಂದು ಬಾರಿ ನೂರು ಅಡಿ ದಾಟಿತ್ತು. ಇದೇ ಹೆಚ್ಚು ಎನ್ನುವ ಸ್ಥಿತಿಯಿತ್ತು. ಮುಂಗಾರು ಒಂದೂವರೆ ತಿಂಗಳ ಕಾಲ ವಿಸ್ತರಣೆಯಾಗಿದ್ದರಿಂದ ಜಲಾಶಯದ ನೀರಿನ ಮಟ್ಟ 116 ಅಡಿಗೆ ತಲುಪಿದ್ದು ಅದೇ ಅಧಿಕ ಎನ್ನುವಂತಾಯಿತು. ಈ ಬಾರಿ ಬರದ ವಾತಾವರಣವೂ ಇದ್ದುದರಿಂದ ಜಲಾಶಯದ ನೀರಿನ ಮಟ್ಟವೂ ಭಾರೀ ಕುಸಿದಿದೆ.

ಮಧ್ಯೆ ಮಧ್ಯೆ ತಮಿಳುನಾಡಿಗೂ ನೀರು ಹರಿಸಿದ ಫಲವಾಗಿ ಜಲಾಶಯದ ನೀರಿನ ಮಟ್ಟ ತಳ ಹಿಡಿದಿದೆ. ಬರ, ತಮಿಳುನಾಡು ಖ್ಯಾತೆಯ ನಡುವೆ ಮಂಡ್ಯ, ಮೈಸೂರು ಭಾಗದವರಿಗೆ ಬೇಸಿಗೆ ಬೆಳೆಗೆ ನೀರು ಕೊಡಲಿಲ್ಲ. ಇದರಿಂದ ನೀರಿನ ಮಟ್ಟ ಉಳಿದುಕೊಂಡಿತ್ತು. ಬೆಂಗಳೂರು, ಮಂಡ್ಯ. ಮೈಸೂರು ಭಾಗಕ್ಕೆ ಕುಡಿಯುವ ನೀರನ್ನು ಹರಿಸಲು ಸಾಧ್ಯವಾಯಿತು.

ಇದರ ನಡುವೆ ಕರ್ನಾಟಕದಲ್ಲಿ ಪೂರ್ವ ಮುಂಗಾರು ಚುರುಕುಗೊಂಡಿದೆ. ಕೊಡಗಿನಲ್ಲಿ ಬಹುತೇಕ ಎರಡು ವಾರದಿಂದ ಮಳೆಯಾಗಿ. ಸಂಪೂರ್ಣ ಒಣಗಿ ಹೋಗಿದ್ದ ಕಾವೇರಿ ನದಿಗೆ ನೀರು ಹರಿದು ಈಗ ಅದು ಕೃಷ್ಣರಾಜಸಾಗರಕ್ಕೂ ತಲುಪುತ್ತಿದೆ. ಸತತ ಮೂರು ದಿನದಿಂದ ಒಂದು ಸಾವಿರಕ್ಕೂ ಅಧಿಕ ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಶುಕ್ರವಾರ 1560 ಕ್ಯೂಸೆಕ್‌, ಶನಿವಾರ1153 ಕ್ಯೂಸೆಕ್ ಭಾನುವಾರ ಬೆಳಿಗ್ಗೆ ಒಂದು ಸಾವಿರ ಕ್ಯೂಸೆಕ್‌ ನೀರು ಬಂದಿದೆ.

ಜಲಾಶಯದ ಗರಿಷ್ಠ ಮಟ್ಟ 124.80 ಅಡಿ. ಸದ್ಯ 80.52 ಅಡಿ ನೀರು ಸಂಗ್ರಹವಾಗಿದೆ. ಕುಡಿಯುವ ನೀರಿಗಾಗಿ ಬಿಡುತ್ತಿರುವ ಹೊರ ಹರಿವಿನ ಪ್ರಮಾಣ 269 ಕ್ಯೂಸೆಕ್‌. ಟಿಎಂಸಿ ಮಟ್ಟ 11.017 ರಷ್ಟಿದೆ.

ಕೃಷ್ಣರಾಜಸಾಗರ ಹಿಂದೆಲ್ಲಾ ಭಾರೀ ಮಳೆಗೆ ಜುಲೈಗೆ ತುಂಬಿದ್ದಿದೆ. ಆಗಷ್ಟ್‌ನಲ್ಲಿಯೇ ಹೆಚ್ಚು ತುಂಬುವ ಸನ್ನಿವೇಶವಿದೆ. ಕಳೆದ ಬಾರಿ ತುಂಬಲೇ ಇಲ್ಲ. ಈಗ ಪೂರ್ವ ಮುಂಗಾರಿನಿಂದ ಕೊಂಚ ನೀರು ಹರಿದು ಬರುತ್ತಿದೆ. ಈ ಬಾರಿ ಮುಂಗಾರು ಉತ್ತಮವಾಗುವ ಸೂಚನೆಯಿದೆ. ಇದರಿಂದ ಬೇಗನೇ ಜಲಾಶಯ ತುಂಬಿ ರೈತಾಪಿ ಚಟುವಟಿಕೆಗಳು ಚುರುಕುಗೊಳ್ಳಲಿವೆ ಎನ್ನುವುದು ಕೃಷ್ಣರಾಜಸಾಗರ ಜಲಾಶಯ ವ್ಯಾಪ್ತಿ ಅಧಿಕಾರಿಗಳ ವಿವರಣೆ.

ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.

ಟಿ20 ವರ್ಲ್ಡ್‌ಕಪ್ 2024