ತಿ ನರಸೀಪುರದಲ್ಲಿ ಫೆ 10, 11, 12 ಕುಂಭಮೇಳ: ಮಾಘಮಾಸದ ಪುಣ್ಯಸ್ನಾನಕ್ಕೆ ದಿನ ನಿಗದಿ, ಸಿದ್ಧತೆ ಆರಂಭ
ಕನ್ನಡ ಸುದ್ದಿ  /  ಕರ್ನಾಟಕ  /  ತಿ ನರಸೀಪುರದಲ್ಲಿ ಫೆ 10, 11, 12 ಕುಂಭಮೇಳ: ಮಾಘಮಾಸದ ಪುಣ್ಯಸ್ನಾನಕ್ಕೆ ದಿನ ನಿಗದಿ, ಸಿದ್ಧತೆ ಆರಂಭ

ತಿ ನರಸೀಪುರದಲ್ಲಿ ಫೆ 10, 11, 12 ಕುಂಭಮೇಳ: ಮಾಘಮಾಸದ ಪುಣ್ಯಸ್ನಾನಕ್ಕೆ ದಿನ ನಿಗದಿ, ಸಿದ್ಧತೆ ಆರಂಭ

ತ್ರಿವೇಣಿ ಸಂಗಮದಲ್ಲಿ ಫೆಬ್ರುವರಿ 10, 11, 12 ರಂದು ಕುಂಭಮೇಳ ಆಯೋಜಿಸುವ ಕುರಿತು ವಿವಿಧ ಮಠಾಧೀಶರು ಸಭೆ ನಡೆಸಿ ತೀರ್ಮಾನಿಸಿದ್ದಾರೆ. ಸರ್ಕಾರವೂ ಅಗತ್ಯ ಸಿದ್ಧತೆಗಾಗಿ ಕೈಜೋಡಿಸಿದೆ.

ತಿ ನರಸೀಪುರದಲ್ಲಿ ಫೆ 10, 11, 12 ಕುಂಭಮೇಳ ನಡೆಸಲು ವಿವಿಧ ಮಠಾಧೀಶರು ದಿನ ನಿಗದಿ ಮಾಡಿದ್ದಾರೆ. (ಸಂಗ್ರಹ ಚಿತ್ರ)
ತಿ ನರಸೀಪುರದಲ್ಲಿ ಫೆ 10, 11, 12 ಕುಂಭಮೇಳ ನಡೆಸಲು ವಿವಿಧ ಮಠಾಧೀಶರು ದಿನ ನಿಗದಿ ಮಾಡಿದ್ದಾರೆ. (ಸಂಗ್ರಹ ಚಿತ್ರ)

ಮೈಸೂರು: ಧಾರ್ಮಿಕ ಮಹತ್ವ ಪಡೆದಿರುವ ಮಾಘಮಾಸದ ಪುಣ್ಯಸ್ನಾನಕ್ಕೆ ಈ ವರ್ಷವೂ ತಿರುಮಕೂಡಲು ನರಸೀಪುರ (ತಿ ನರಸೀಪುರ) ಭಕ್ತರಿಗೆ ಸ್ವಾಗತ ಕೋರಲಿದೆ. ತ್ರಿವೇಣಿ ಸಂಗಮದಲ್ಲಿ ಫೆಬ್ರುವರಿ 10, 11, 12 ರಂದು ಕುಂಭಮೇಳ ಆಯೋಜಿಸುವ ಕುರಿತು ವಿವಿಧ ಮಠಾಧೀಶರು ಸಭೆ ನಡೆಸಿ ತೀರ್ಮಾನಿಸಿದ್ದಾರೆ. ಸರ್ಕಾರವೂ ಅಗತ್ಯ ಸಿದ್ಧತೆಗಾಗಿ ಕೈಜೋಡಿಸಿದೆ. ಈ ಸಂಬಂಧ ಗುರುವಾರ (ಡಿ 26) ನಗರದ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಸಭೆಯ ನಂತರ ಕಾರ್ಯಕ್ರಮದ ವಿವರಗಳನ್ನು ನೀಡಲಾಯಿತು.

ಫೆ 10 ರ ಸೋಮವಾರ ಬೆಳಿಗ್ಗೆ 9 ಗಂಟೆಗೆ ತಿ ನರಸೀಪುರದ ಅಗಸ್ತ್ಯೇಶ್ವರ ಸನ್ನಿಧಿಯಲ್ಲಿ ಅನುಜ್ಞೆ, ಪುಣ್ಯಾಹ, ಗಣಹೋಮ, ಪೂರ್ಣಾಹುತಿ, ಅಭಿಷೇಕ, ಮಹಾಮಂಗಳಾರತಿ ನಡೆಯಲಿದೆ. ಅಂದು ಸಂಜೆ 5 ಗಂಟೆಗೆ ಧರ್ಮಸಭೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಧ್ವಜಾರೋಹಣ ನಡೆಯಲಿದೆ.

ಫೆ 11 ರ ಮಂಗಳವಾರ ಆಶ್ಲೇಷ ನಕ್ಷತ್ರದಲ್ಲಿ ಪುಣ್ಯಾಹ, ನವಗ್ರಹ ಹೋಮ, ಸುದರ್ಶನ ಹೋಮ ನಡೆಯಲಿದೆ. ಬೆಳಿಗ್ಗೆ 11 ಗಂಟೆಗೆ ಧರ್ಮಸಭೆ. ಸಂಜೆ 4 ಗಂಟೆಗೆ ಮಹಾತ್ಮರ, ಸಂತರ, ಮಹಾಮಂಡಲೇಶ್ವರರ ಸಂಗಮ ಕ್ಷೇತ್ರ ಪ್ರವೇಶ. ಗುಂಜಾ ನರಸಿಂಹ ಸ್ವಾಮಿ ದೇವಸ್ಥಾನದಿಂದ ನರಸೀಪುರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಲಿದೆ. ಸಂಜೆ 6 ಗಂಟೆಗೆ ಶ್ರೀರುದ್ರಹೋಮ, ಪೂರ್ಣಾಹುತಿ ಇರಲಿದೆ. ನಂತರ ರಾತ್ರಿ 7 ಗಂಟೆಗೆ ಗಂಗಾ ಪೂಜೆ ಆಯೋಜಿಸಲಾಗಿದ್ದು, ವಾರಾಣಸಿ ಮಾದರಿಯಲ್ಲಿ ದೀಪಾರತಿ ಕಾರ್ಯಕ್ರಮ ನಡೆಯಲಿದೆ.

ಫೆ 12 ರ ಬುಧವಾರ ಹುಣ್ಣಿಮೆ, ಮಖಾ ನಕ್ಷತ್ರದಲ್ಲಿ ಚಂಡಿಹೋಮ, ಪೂರ್ಣಾಹುತಿ, ಕುಂಭೋಧ್ವಾಸನ ಹಾಗೂ ತ್ರಿವೇಣಿ ಸಂಗಮದಲ್ಲಿ ಸಪ್ತ ಪವಿತ್ರ ನದಿಗಳ ತೀರ್ಥ ಸಂಯೋಜನೆ, ಪುಣ್ಯ ಸ್ನಾನ, ಧರ್ಮಸಭೆಗಳು ನಡೆಯಲಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಮಹೋದಯ ಕಾಲದ ಮಹಾಮಾಘ ಪುಣ್ಯಸ್ನಾನಕ್ಕೆ ಮೀನ ಲಗ್ನ (ಬೆಳಿಗ್ಗೆ 9 ರಿಂದ 9.30) ಮತ್ತು ವೃಷಭ ಲಗ್ನ (ಮಧ್ಯಾಹ್ನ 12 ರಿಂದ 1) ಶ್ರೇಷ್ಠ ಎಂದು ಆಯೋಜಕರು ಹೇಳಿದ್ದಾರೆ.

ಸಚಿವರ ನೇತೃತ್ವದಲ್ಲಿ ಶೀಘ್ರ ಮತ್ತೊಂದು ಸಭೆ

ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಜಗತ್ತಿನ ಎಲ್ಲಾ ನಾಗರೀಕತೆಗಳು ಬೆಳೆದಿದ್ದು ನದಿ ಪಾತ್ರದಲ್ಲಿಯೇ. ಈ ಬಾರಿ 12ನೇ ಮಹಾ ಕುಂಭಮೇಳ ನಡೆಯುತ್ತಿದೆ. ನಮ್ಮ ಹಿರಿಯರು ದಾರ್ಶನಿಕರು ನಮಗೆ ದಾರಿ ಹಾಕಿ ಕೊಟ್ಟಿದ್ದಾರೆ. ಈ ಕುಂಭಮೇಳಕ್ಕೆ ಎಲ್ಲಾ ಸರ್ಕಾರಗಳು ಸಹಕಾರ ನೀಡುತ್ತಾ ಬಂದಿವೆ. ಕುಂಭಮೇಳಕ್ಕೆ ಆಗಮಿಸುವ ಜನರು, ದಾರ್ಶನಿಕರು ಹಾಗು ಸ್ವಾಮೀಜಿಗಳ ನುಡಿಗಳನ್ನು ಆಲಿಸಬೇಕು. ಎಲ್ಲರು ಭಕ್ತಿ ಮಾರ್ಗದಲ್ಲಿ ಸಾಗಬೇಕು ಎಂದರು.

ಸಭೆಯ ಬಳಿಕ ಸುತ್ತೂರು ಮಠಾಧಿಪತಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಮುಂಬರುವ ಕುಂಭಮೇಳಕ್ಕೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿದೆ. ಸಚಿವರ ನೇತೃತ್ವದಲ್ಲಿ ಮತ್ತೊಂದು ಸಭೆ ನಡೆಸಲಾಗುತ್ತದೆ. ಕುಂಭಮೇಳ ನಡೆಯುವ ಸ್ಥಳದಲ್ಲಿ ಶಾಶ್ವತ ಕಾಮಗಾರಿಗಳು ಆಗಬೇಕಾಗಿದೆ. ಇದರ ಬಗ್ಗೆ ಸರ್ಕಾರದ ಗಮನಕ್ಕೆ ತರಬೇಕಿದೆ.

ಕುಂಭಮೇಳ ಯಶಸ್ವಿಯಾಗಿ ನಡೆಯಲು ಅಧಿಕಾರಿಗಳ ಪಾತ್ರ ದೊಡ್ಡದು. ಸಾರ್ವಜನಿಕರು ಕೂಡ ಇದಕ್ಕೆ ಕೈ ಜೋಡಿಸಬೇಕಿದೆ ಎಂದು ಹೇಳಿದರು.

Whats_app_banner