ಕನ್ನಡ ಸುದ್ದಿ  /  ಕರ್ನಾಟಕ  /  Gh Nayak: ನಾಯಕರೆಂಬ ಅಧ್ಯಾಪಕ ವಿಮರ್ಶಕರೊಂದಿಗಿನ ಘನ ನೆನಪು

GH Nayak: ನಾಯಕರೆಂಬ ಅಧ್ಯಾಪಕ ವಿಮರ್ಶಕರೊಂದಿಗಿನ ಘನ ನೆನಪು

ವಿಚಾರ ಭಿನ್ನತೆ ಇದ್ದರೂ ಎಲ್ಲರೊಂದಿಗೆ ಬೆರೆಯುತ್ತಾ ಸಾತ್ವಿಕವಾಗಿಯೇ ಅಭಿಪ್ರಾಯ ಹೇಳುತ್ತಿದ್ದ, ಸಾಮಾಜಿಕ ಹೋರಾಟ, ಸಮಸ್ಯೆಗಳಿಗೆ ಬರೀ ಬಾಯಿಮಾತಿನ ಬೆಂಬಲ ನೀಡದೇ ನೈತಿಕವಾಗಿ ನಿಲ್ಲುತ್ತಿದ್ದರಿಂದಲೇ ಜಿ.ಎಚ್‌. ನಾಯಕರ ವ್ಯಕ್ತಿತ್ವ ಉನ್ನತಕ್ಕೇರಿತು.

ಜಿ.ಎಚ್‌.ನಾಯಕ್‌
ಜಿ.ಎಚ್‌.ನಾಯಕ್‌

ನಾಯಕರೆಂಬ ಅಧ್ಯಾಪಕ ವಿಮರ್ಶಕರೊಂದಿಗಿನ ಘನ ನೆನಪು

ಟ್ರೆಂಡಿಂಗ್​ ಸುದ್ದಿ

ಮೈಸೂರು ಸಾಹಿತ್ಯತೋಟ. ಅಲ್ಲಿ ಭಿನ್ನ ಸಾಹಿತಿಗಳ ಗಣವೇ ಇದೆ. ಅದಕ್ಕೊಂದು ದೀರ್ಘ ಪರಂಪರೆಯೂ ಇದೆ. ಎಡ-ಬಲ, ಬಂಡಾಯ, ನವ್ಯ, ನವ್ಯೋತ್ತರ ಕಾಲಘಟ್ಟದ ಹಿರಿ-ಕಿರಿಯ ಸಾಹಿತಿಗಳ ಪಟ್ಟಿಯೇ ಸಿಗುತ್ತದೆ. ಅದರಲ್ಲಿ ಮುಂಚೂಣಿ ಹೆಸರು ಜಿ.ಎಚ್‌.ನಾಯಕರದ್ದು. ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಾಪನ ಸಂಸ್ಥೆಯಲ್ಲಿ ಸಾಹಿತಿ ಅಧ್ಯಾಪಕರ ಸಂಖ್ಯೆ ದೊಡ್ಡದು. ಅದರಲ್ಲಿ ಜಿ.ಎಚ್‌.ನಾಯಕ ಹಾಗೂ ಹಾ.ಮಾ.ನಾಯಕ್‌ ಭಿನ್ನ ವ್ಯಕ್ತಿತ್ವದವರು. ಹಾ.ಮಾ.ನಾಯಕರು ಸಾಹಿತ್ಯದ ಜತೆಗೆ ಆಡಳಿತದಲ್ಲೂ ಗುರುತಿಸಿಕೊಂಡಟು ಪ್ರಭಾವಳಿ ಹೊಂದಿದವರು. ಆದರೆ ಜಿ.ಎಚ್‌.ನಾಯಕರು ಮೆಲು ಮಾತಿನ ನಡುವೆ ನಿಷ್ಠುರತೆ ತೋರಿದವರು. ಬರವಣಿಗೆಯೂ ಅಷ್ಟೇ ನಿಖರ ಹಾಗೂ ಸ್ಪಷ್ಟ. ಆಡಳಿತಕ್ಕಿಂತ ಸಮಾಜಮುಖಿ ಚಟುವಟಿಕೆಗಳಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡು ಬಂದವರು ಜಿ.ಎಚ್‌.ನಾಯಕರು. ಅದೊಂದು ಕಾಲವಿತ್ತು. ಜಿ.ಎಚ್‌.ನಾಯಕರು ತರಗತಿಗೆ ಬಂದರೆ ಅದೊಂದು ಪ್ರಭಾವಳಿ. ಬಂಡಾಯ, ನವ್ಯ, ನವ್ಯೋತ್ತರದ ವಿಚಾರವಾಗಿ ಏನನ್ನಾದರೂ ಮಾತನಾಡಿದರೆ ಅದಕ್ಕೆ ಕಿವಿಯಾಗುವವರೇ ಅಧಿಕ.

ಉತ್ತರ ಕನ್ನಡ ಜಿಲ್ಲೆಯವರಾದ ಜಿ.ಎಚ್‌.ನಾಯಕರಿಗೆ ಧಾರವಾಡ ಹತ್ತಿರವಾದರೂ ಆಕರ್ಷಿಸಿದ್ದು ಮೈಸೂರು. ಏಕೆಂದರೆ ಮೈಸೂರಿನ ಶೈಕ್ಷಣಿಕ, ಸಾಮಾಜಿಕ, ಸಾಹಿತ್ಯಕ ವಾತಾವರಣ ಆಕರ್ಷಿಸಿತ್ತು ಸಂಬಂಧಿಯೂ ಆಗಿರುವ ರಾಜ್ಯ ಕಾನೂನು ಸೇವಾ ಆಯೋಗದ ಅಧ್ತಕ್ಷರೂ ಆಗಿದ್ದ ಎಸ್‌ಆರ್‌ ನಾಯಕ್‌ ಅವರೊಂದಿಗೆ ಟ್ರಂಕ್‌ ಹೊತ್ತು ಮೈಸೂರಿಗೆ ಬಂದೇ ಬಿಟ್ಟರು. ಸುಬ್ಬಣ್ಣನವರ ಹಾಸ್ಟೆಲ್‌ನಲ್ಲಿ ಆಸರೆ ಸಿಕ್ಕಿತು. ಇಲ್ಲಿಯೇ ಪದವಿಪೂರ್ವ ಶಿಕ್ಷಣ ಮುಗಿಸಿ ಮಹಾರಾಜ ಕಾಲೇಜು ವಿದ್ಯಾರ್ಥಿಯಾಗಿ ಚಿನ್ನದ ಪದಕದೊಂದಿಗೆ ಎಂಎ ಪದವಿ ಪೂರೈಸಿದರು. ಯುವರಾಜ ಕಾಲೇಜಿನಲ್ಲಿ ಅಧ್ಯಾಪನ ಆರಂಭಿಸಿ ಮಹಾರಾಜ ಕಾಲೇಜಿನಲ್ಲೂ ಕೆಲ ಕಾಲ ಇದ್ದರು. ಹತ್ತಾರು ಪ್ರಭಾವಳಿಗಳ ನಡುವೆಯೂ ಪ್ರತಿಭೆಗೆ ಅವಕಾಶ ಇದ್ದೇ ಇರುತ್ತದೆ ಎನ್ನುವ ಹಾಗೆ ಮಾನಸಗಂಗೋತ್ರಿಗೆ ಬಂದರು. ವಿದ್ಯಾರ್ಥಿ ದೆಸೆಯಲ್ಲಿಯೇ ಸಾಹಿತ್ಯವನ್ನು ಎಲ್ಲಾ ಆಯಾಮದಲ್ಲಿ ವಿಮರ್ಶೆ ಮಾಡುವ ಗುಣವನ್ನು ರೂಢಿಸಿಕೊಂಡಿದ್ದು ಇಷ್ಟು ಎತ್ತರಕ್ಕೆ ಬೆಳೆಯಲು ಕಾರಣವಾಯಿತು. ವಿಚಾರ ಭಿನ್ನತೆ ಇದ್ದರೂ ಎಲ್ಲರೊಂದಿಗೆ ಬೆರೆಯುತ್ತಾ ಸಾತ್ವಿಕವಾಗಿಯೇ ಅಭಿಪ್ರಾಯ ಹೇಳುತ್ತಿದ್ದ, ಸಾಮಾಜಿಕ ಹೋರಾಟ, ಸಮಸ್ಯೆಗಳಿಗೆ ಬರೀ ಬಾಯಿಮಾತಿನ ಬೆಂಬಲ ನೀಡದೇ ನೈತಿಕವಾಗಿ ನಿಲ್ಲುತ್ತಿದ್ದರಿಂದಲೇ ನಾಯಕರ ವ್ಯಕ್ತಿತ್ವ ಉನ್ನತಕ್ಕೇರಿತು.

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅವರೊಂದಿಗೆ ಅಧ್ಯಾಪಕರಾಗಿದ್ದ ಹಿರಿಯ ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ಅವರು ನಾಯಕರೊಂದಿಗಿನ ಒಡನಾಟವನ್ನು ನೆನಪಿಸಿಕೊಳ್ಳುತ್ತಾರೆ . ಅವರೊಬ್ಬ ಗಂಭೀರವಾದ ಅಧ್ಯಾಪಕರು.ಮಾತು ಮೃದು. ನಿಲುವು ಮಾತ್ರ ನಿಷ್ಠುರ. ಅವರನ್ನು ವಿನಯ ವಿಮರ್ಶಕರು ಎಂದೇ ಸಾಹಿತ್ಯ ವಲಯ ಗುರುತಿಸುತ್ತಿತ್ತು. ಇನ್ನೊಬ್ಬರ ಮನಸಿಗೆ ನೋವಾಗದಂತೆ ವಿಷಯವನ್ನು ಧನಾತ್ಮಕ ರೀತಿಯಲ್ಲೇ ಹೇಳುತ್ತಾ ಮನದಟ್ಟು ಆಗುವ ರೀತಿ ಅವರು ವಿಮರ್ಶೆ ಮಾಡುತ್ತಿದ್ದರು. ಇದರಿಂದಲೇ ಅವರನ್ನು ವಿನಯ ವಿಮರ್ಶಕರು ಎಂದೇ ಸಾಹಿತ್ಯ ವಲಯ ಗುರುತಿಸುತ್ತಿತ್ತು. ಬೌದ್ಧಿಕ ಪ್ರೌಢಿಮೆ ಜತೆಗೆ ಭಾಷಾ ಹಿಡಿತ, ಜನಪ್ರತಿಯ ಅಧ್ಯಾಪನದಿಂದ ಅವರನ್ನು ಭಿನ್ನವಾಗಿಯೇ ನೋಡುವಂತೆ ಮಾಡಿತು. ಪ್ರಗತಿಪರ ಹೋರಾಟಗಳಲ್ಲಿ ಅವರು ಮುಂಚೂಣಿಯಲ್ಲಿದ್ದರು. ದಲಿತ, ಮಹಿಳಾ, ಸಾಮಾಜಿಕ ವಿಷಯಗಳಲ್ಲಿ ಒಡನಾಡುತ್ತಾ ಮೌಲ್ಯ ಹೆಚ್ಚಿಸಿದ ದೊಡ್ಡ ವ್ಯಕ್ತಿ ಅವರು. ಜನಪದ ವಿದ್ವಾಂಸ ಡಾ.ಪಿ.ಕೆ.ರಾಜಶೇಖರ ಅವರೂ ನಾಯಕರ ವ್ಯಕ್ತಿತ್ವವನ್ನು ತೆರದಿಡುತ್ತಾರೆ. ಅವರು ವಿದ್ವತ್‌ ಲೋಕದ ಶಿಖರಪ್ರಾಯರು. ಅವರೊಂದಿಗೆ ಬೇರೆ ಅಧ್ಯಾಕರೊಂದಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ನವ್ಯ ವಿಮರ್ಶಕರಲ್ಲಿ ಅವರದ್ದು ದೊಡ್ಡ ಹೆಸರು. ಅಚ್ಚುಕಟ್ಟು ಹಾಗೂ ಸ್ಪಷ್ಟವಾಗಿ ಬರೆಯುತ್ತಿದ್ದರು.ಪೂರ್ಣಚಂದ್ರ ತೇಜಸ್ವಿ ಸಹಿತ ಹಲವರೊಂದಿಗೆ ಒಡನಾಟ ಹೊಂದಿದ್ದ ಪ್ರಬುದ್ದರು. ಮೈಸೂರಿನ ಹಿರಿಯ ಸಾಹಿತಿ ಚದುರಂಗ ಕುಟುಂಬದ ಜತೆಗೆ ನಾಯಕರಿಗೆ ಒಡನಾಟ. ವಾರದಲ್ಲಿ ಮೂರ್ನಾಲ್ಕು ದಿನವಾದರೂ ನಮ್ಮ ಮನಗೆ ಬಂದು ಮಾತನಾಡುತ್ತಿದ್ದರು. ಅವರೊಂದಿಗೆ ಸಂಜೆ ವಾಕ್‌ ಮಾಡುತ್ತಿದ್ದದೂ ಹಸುರಾಗಿದೆ. ಅವರ ನಿಷ್ಕಳಂಕ ಪ್ರೀತಿಯನ್ನೇ ಮರೆಯಲಾದೀತೆ ಎಂದು ಭಾವುಕರಾದರು ಸಾಹಿತಿ ವಿಕ್ರಂ ಚದುರಂಗ.

ಇದನ್ನೂ ಓದಿರಿ…

GH Nayak: ಖ್ಯಾತ ಕನ್ನಡ ಸಾಹಿತ್ಯ ವಿಮರ್ಶಕ ಜಿಎಚ್ ನಾಯಕ ನಿಧನ

ಟಿ20 ವರ್ಲ್ಡ್‌ಕಪ್ 2024

ವಿಭಾಗ