Kannada News  /  Karnataka  /  Mysuru News Mango Mela At Kuppanna Garden, King Of Fruits Mysore District Horticulture Department Pcp
Mysuru News: ಮೈಸೂರಿನ ಕುಪ್ಪಣ್ಣ ಉದ್ಯಾನದಲ್ಲಿ ಮಾವು ಮೇಳ
Mysuru News: ಮೈಸೂರಿನ ಕುಪ್ಪಣ್ಣ ಉದ್ಯಾನದಲ್ಲಿ ಮಾವು ಮೇಳ

Mysuru News: ಮೈಸೂರಿನ ಕುಪ್ಪಣ್ಣ ಉದ್ಯಾನದಲ್ಲಿ ಮಾವು ಮೇಳ, ರಾಜರೂರಿನಲ್ಲಿ ಹಣ್ಣುಗಳ ರಾಜನ ದರ್ಬಾರ್

26 May 2023, 18:59 ISTHT Kannada Desk
26 May 2023, 18:59 IST

Mysuru Mango Mela: ಮೇ 26 ರಿಂದ 28ರವರೆಗೆ ಮಾವು ಮೇಳ ನಡೆಯಲಿದೆ. ಮೇಳದಲ್ಲಿ 24 ಮಳಿಗೆಗಳನ್ನು ತೆರೆಯಲಾಗಿದ್ದು, ನೈಸರ್ಗಿಕವಾಗಿ ಮಾಗಿಸಿದ ವಿವಿಧ ತಳಿಯ ಮಾವಿನ ಹಣ್ಣುಗಳು ದೊರೆಯುತ್ತಿದೆ.

ಮೈಸೂರು: ಬೇಸಿಗೆ ಕಾಲ ಎಲ್ಲರನ್ನೂ ಬೆವರಿಳಿಸುತ್ತಿದೆ. ಈ ಹವಾಮಾನದಲ್ಲಿ ತಂಪಾಗಿರಲು ತಂಪು ಪಾನೀಯಗಳು, ದ್ರವ ಪದಾರ್ಥಗಳನ್ನು ಸೇವಿಸುವುದು ಒಳ್ಳೆಯದು. ಅದರ ಜೊತೆಜೊತೆಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಹಣ್ಣುಗಳ ರಾಜನನ್ನು ಸವಿಯದಿದ್ದರೆ ಹೇಗೆ? ಬೇಸಿಗೆ ಕಾಲದಲ್ಲಿ ಹೆಚ್ಚು ಖುಷಿ ಕೊಡುವ ಸಂಗತಿಗಳಲ್ಲಿ ಮಾವಿನಹಣ್ಣು ಪ್ರಮುಖವಾದುದು. ಎಲ್ಲರನ್ನೂ ತನ್ನತ್ತ ಸೆಳೆಯುವ ಈ ಬೇಸಿಗೆಯ ಹಣ್ಣಿಗೆ ತನ್ನದೇ ಆದ ವೈಶಿಷ್ಟ್ಯ ಇದೆ. ಮಾವು ಪ್ರಿಯರಿಗಾಗಿ ಮೈಸೂರಿನಲ್ಲಿ ಜಿಲ್ಲಾ ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯಿತಿ, ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ವತಿಯಿಂದ ಕುಪ್ಪಣ್ಣ ಉದ್ಯಾನದಲ್ಲಿ ಇಂದಿನಿಂದ ಮಾವು ಮೇಳ ನಡೆಯುತ್ತಿದೆ.

ಮೇ 26 ರಿಂದ 28ರವರೆಗೆ ಮಾವು ಮೇಳ ನಡೆಯಲಿದೆ. ಮೇಳದಲ್ಲಿ 24 ಮಳಿಗೆಗಳನ್ನು ತೆರೆಯಲಾಗಿದ್ದು, ನೈಸರ್ಗಿಕವಾಗಿ ಮಾಗಿಸಿದ ವಿವಿಧ ತಳಿಯ ಮಾವಿನ ಹಣ್ಣುಗಳು ದೊರೆಯುತ್ತಿದೆ. ಮೈಸೂರು, ಮಂಡ್ಯ, ರಾಮನಗರ, ಕನಕಪುರ ಜಿಲ್ಲೆಯ ರೈತರು ಮೇಳದಲ್ಲಿ ಪಾಲ್ಗೊಂಡಿದ್ದಾರೆ. ಮೇ 26 ರಂದು ಬೆಳಗ್ಗೆ 11ಕ್ಕೆ ಮೇಳಕ್ಕೆ ಚಾಲನೆ ಸಹ ದೊರೆತಿದೆ. ಮೇಳದಲ್ಲಿ ಪ್ರತಿ ರೈತರು 3 ರಿಂದ 4 ಟನ್‌ನಷ್ಟು ಮಾವು ಮಾರಾಟ ಮಾಡುವ ನಿರೀಕ್ಷೆಯನ್ನು ಹೊಂದಿದ್ದಾರೆ. ರೈತರಿಗೆ ಸೂಕ್ತ ಮಾರುಕಟ್ಟೆ ಒದಗಿಸುವುದು ಹಾಗೂ ಗ್ರಾಹಕರಿಗೆ ಉತ್ತಮವಾದ ಮಾವು ದೊರೆಯುವಂತೆ ಮಾಡುವುದು ಮೇಳದ ಮುಖ್ಯ ಉದ್ದೇಶವಾಗಿದೆ.

ಮಾವು ಪ್ರಿಯರ ಆರೋಗ್ಯದ ಹಿತದೃಷ್ಟಿಯಿಂದ ಕ್ಯಾಲ್ಸಿಯಂ ಕಾರ್ಬೈಡ್ ಮುಕ್ತ ನೈಸರ್ಗಿಕವಾಗಿ ಮಾಗಿಸಿದ ಉತ್ತಮ ದರ್ಜೆಯ ವಿವಿಧ ತಳಿಯ ಹಣ್ಣುಗಳು ಮೇಳದಲ್ಲಿ ಗ್ರಾಹಕರಿಗೆ ದೊರೆಯುವಂತೆ ನೋಡಿಕೊಳ್ಳಲಾಗುತ್ತಿದೆ. ಜೊತೆಗೆ ಉತ್ತಮ ಬೆಲೆ ನಿಗದಿ ಮಾಡಲಾಗುತ್ತಿದೆ. ʻಮೇಳಕ್ಕೂ ಮುನ್ನ ತೋಟಗಾರಿಕೆ ಇಲಾಖೆ ವತಿಯಿಂದ ಮಾವು ಬೆಳೆಗಾರರು, ವರ್ತಕರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳಿಗೆ ಮಾವು ಮಾಗಿಸುವ ಸಂಬಂಧ ತರಬೇತಿ ಕಾರ್ಯಕ್ರಮ ನಡೆಸಲಾಗಿದೆ. ಈ ಬಾರಿ ಮಾವಿನ ಇಳುವರಿ ಶೇ.60 ರಷ್ಟು ಕಡಿಮೆಯಾಗಿದ್ದು, ಹೀಗಾಗಿ ಮಾವು ಬೆಳೆದ ರೈತರಿಗೆ ಉತ್ತಮ ಬೆಲೆ ದೊರೆಯುತ್ತಿದೆ. ಪ್ರತಿ ವರ್ಷ ಜ್ಯೂಸ್ ಕಂಪನಿಗಳು ರೈತರಿಂದ ಕೆ.ಜಿ.ಗೆ 20 ರಿಂದ 30 ರೂ.ನೀಡಿ ಮಾವು ಖರೀದಿಸುತ್ತಿದ್ದವು. ಈ ಬಾರಿ 50 ರೂ. ನೀಡಿ ಮಾವು ಖರೀದಿಸುತ್ತಿವೆ. ಅದೇ ರೀತಿ ಮಾರುಕಟ್ಟೆಯಲ್ಲೂ ಉತ್ತಮ ದರ ದೊರೆಯುತ್ತಿದೆʼ ಎನ್ನುತ್ತಾರೆ ಮೈಸೂರಿನ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ರುದ್ರೇಶ್.‌

ಕೊಡಗಿನಲ್ಲೂ ಮಾವು, ಹಲಸು ಮೇಳ

ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ಸಹ ಮೇ ೨೬ ರಿಂದ ೨೮ ರವರೆಗೆ ಮೂರು ದಿನಗಳ ಕಾಲ ನಗರದ ಹಾಪ್‌ಕಾಮ್ಸ್ ಆವರಣದಲ್ಲಿ ಮಾವು ಮತ್ತು ಹಲಸು ಮೇಳ ನಡೆಯುತ್ತಿದೆ. ಮಾವು ಮತ್ತು ಹಲಸು ಮೇಳದಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಮೈಸೂರು ಹೀಗೆ ವಿವಿಧ ಜಿಲ್ಲೆಗಳಿಂದ ಮಾವು ಮತ್ತು ಹಲಸು ಬೆಳೆಗಾರರು ಪಾಲ್ಗೊಂಡಿದ್ದಾರೆ. ಹಾಪ್‌ಕಾಮ್ಸ್ ಆವರಣದಲ್ಲಿ ಎರಡನೇ ಬಾರಿಗೆ ಮಾವು ಮತ್ತು ಹಲಸು ಮೇಳ ನಡೆಯುತ್ತಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ʼಕಳೆದ ಬಾರಿ ಗ್ರಾಹಕರಿಂದ ಉತ್ತಮ ಸ್ಪಂದನೆ ದೊರೆತಿತ್ತು. ಮಾವು ಮತ್ತು ಹಲಸನ್ನು ಗ್ರಾಹಕರಿಗೆ ಪರಿಚಯಿಸುವುದು, ಉತ್ತಮ ಗುಣಮಟ್ಟದ ಮಾವು ಮತ್ತು ಹಲಸನ್ನು ಗ್ರಾಹಕರಿಗೆ ಕೊಳ್ಳಲು ಅವಕಾಶ ಮಾಡುವುದು ಪ್ರಮುಖ ಉದ್ದೇಶವಾಗಿದೆ. ವಿವಿಧ ಜಿಲ್ಲೆಗಳಿಂದ ಆಗಮಿಸುವ ಮಾವು ಮತ್ತು ಹಲಸು ಬೆಳೆಗಾರರಿಗೂ ನಷ್ಟವಾಗದೆ, ಗ್ರಾಹಕರಿಗೂ ಹೊರೆಯಾಗದೆ ಮಾವು ಮತ್ತು ಹಲಸು ಮೇಳವನ್ನು ಹಮ್ಮಿಕೊಳ್ಳಲಾಗಿದೆʼ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ತಿಳಿಸಿದ್ದಾರೆ.

ವರದಿ: ಧಾತ್ರಿ ಭಾರದ್ವಾಜ್‌

ವಿಭಾಗ