ಕನ್ನಡ ಸುದ್ದಿ  /  Karnataka  /  Mysuru News Mp Pratap Simha Inaugurated New Train Which Travelling Between Mysuru Manamadurai Rgs

Mysuru News: ಮೈಸೂರು-ಮನಮಧುರೈ ನಡುವೆ ಸಂಚರಿಸುವ ಹೊಸ ವಿಶೇಷ ರೈಲಿಗೆ ಚಾಲನೆ ನೀಡಿದ ಸಂಸದ ಪ್ರತಾಪ್ ಸಿಂಹ

Mysuru News: ಪ್ರಯಾಣಿಕರ ಬೇಡಿಕೆಯ ಮೇರೆಗೆ ಮೈಸೂರು ಮತ್ತು ತಮಿಳುನಾಡಿನ ಮಧುರೈ ನಿಲ್ದಾಣಗಳ ನಡುವೆ ಹೊಸ ರೈಲು ಸಂಚಾರ ಆರಂಭವಾಗಿದೆ. ಸೋಮವಾರ, ಸಂಜೆ ಸಂಸದ ಪ್ರತಾಪ್‌ ಸಿಂಹ ಈ ಹೊಸ ರೈಲಿಗೆ ಚಾಲನೆ ನೀಡಿದರು.

ಮೈಸೂರು-ಮನಮಧುರೈ ನಡುವೆ ಸಂಚರಿಸಲಿರುವ ರೈಲು
ಮೈಸೂರು-ಮನಮಧುರೈ ನಡುವೆ ಸಂಚರಿಸಲಿರುವ ರೈಲು

ಮೈಸೂರು: ರೈಲ್ವೆ ‌ನಿಲ್ದಾಣದಲ್ಲಿ ಮಾರ್ಚ್ 10ರಂದು ನಡೆದ ಕಾರ್ಯಕ್ರಮದಲ್ಲಿ ನೂತನ ರೈಲಿಗೆ ಸಂಸದ ಪ್ರತಾಪ್ ಸಿಂಹ ಚಾಲನೆ ನೀಡಿದರು. ಸೋಮವಾರ ಸಂಜೆ 6-30 ಗಂಟೆಯಿಂದ ಮೈಸೂರಿನಿಂದ ರಾಮೇಶ್ವರಕ್ಕೆ ರೈಲು ಸಂಚಾರ ಸೇವೆ ಆರಂಭವಾಯಿತು. ರಾಮೇಶ್ವರದಲ್ಲಿ ಇದೀಗ ಬ್ರಿಡ್ಜ್ ಕಾಮಗಾರಿ ನಡೆಯುತ್ತಿರುವುದರಿಂದ ಸದ್ಯಕ್ಕೆ ತಮಿಳುನಾಡಿನ ಮನ ಮಧುರೈವರೆಗೆ ಈ ರೈಲು ಸಂಚಾರ ಮಾಡಲಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.

ಕಳೆದ 10 ವರ್ಷಗಳಲ್ಲಿ ಮೈಸೂರಿಗೆ ತಂದಿರುವ 12ನೇ ರೈಲು ಇದಾಗಿದೆ. ಮೈಸೂರು ರೈಲು ನಿಲ್ದಾಣ ಚಿಕ್ಕದಾದ ಕಾರಣ ನಾಗನಹಳ್ಳಿ ಬಳಿ ಸ್ಯಾಟಲೈಟ್ ರೈಲು ನಿಲ್ದಾಣ ಪ್ರಾರಂಭವಾಗಿದೆ. ಮುಂದಿನ ದಿನಗಳಲ್ಲಿ ಮೈಸೂರು ರೈಲು ನಿಲ್ದಾಣವನ್ನು ವಿಮಾನ ನಿಲ್ದಾಣದ ರೀತಿಯಲ್ಲಿ ಕಾಣುವಂತೆ ಅಭಿವೃದ್ಧಿ ಮಾಡಲಾಗುತ್ತದೆ. ಇದಕ್ಕೆ ಎಲ್ಲಾ ಇಲಾಖೆಗಳ ಸಹಾಯ ಇದೆ ಹಾಗೂ ಎಲ್ಲರ ಸಹಕಾರ ಇದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.

ಮೈಸೂರು-ಮಧುರೈ ನಡುವೆ ನೂತನವಾಗಿ ಸಂಚರಿಸುವ ರೈಲು ಮಾರ್ಗ ಇಂತಿದೆ

ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ತೆರವುಗೊಳಿಸಲು, ಪ್ರಯಾಣಿಕರ ಬೇಡಿಕೆಯ ಮೇರೆಗೆ ಮೈಸೂರು ಮತ್ತು ತಮಿಳುನಾಡಿನ ಮಧುರೈ ನಿಲ್ದಾಣಗಳ ನಡುವೆ ಒಂದು ಟ್ರಿಪ್ ಈ ವಿಶೇಷ ರೈಲನ್ನು ಓಡಿಸಲು ನಿರ್ಧರಿಸಲಾಗಿದೆ. ಈ ವಿಶೇಷ ರೈಲು ಮೈಸೂರು ನಿಲ್ದಾಣದಿಂದ ಸಂಜೆ 6:35 ಗಂಟೆಗೆ ಹೊರಟು ಮರುದಿನ ಬೆಳಿಗ್ಗೆ 9 ಗಂಟೆ 10 ನಿಮಿಷಕ್ಕೆ ತಮಿಳುನಾಡಿನ ಮನ ಮಧುರೈ ನಿಲ್ದಾಣವನ್ನು ತಲುಪಲಿದೆ. ಇದೇ ರೈಲು ಮೈಸೂರಿಗೆ ವಾಪಸ್ ಬರಲಿದೆ. ಮಧ್ಯಾಹ್ನ 12 ಗಂಟೆಗೆ ಮನ ಮಧುರೈ ನಿಲ್ದಾಣದಿಂದ ಹೊರಟು ಮರುದಿನ ರಾತ್ರಿ 1 ಗಂಟೆ 55 ನಿಮಿಷಕ್ಕೆ ಮೈಸೂರು ನಿಲ್ದಾಣಕ್ಕೆ ಆಗಮಿಸಲಿದೆ.

ಈ ವಿಶೇಷ ರೈಲು ಎರಡೂ ದಿಕ್ಕುಗಳಲ್ಲಿ ಸಂಚರಿಸುವಾಗ ಮಂಡ್ಯ, ಮದ್ದೂರು, ರಾಮನಗರ, ಕೆಂಗೇರಿ, ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ನಿಲ್ದಾಣ, ಬಂಗಾರಪೇಟೆ, ತಿರುಪತ್ತೂರು, ಸೇಲಂ, ನಾಮಕ್ಕಲ್, ಕರೂರ್, ತಿರುಚ್ಚಿರಾಪಳ್ಳಿ, ದಿಂಡಿಗಲ್ ಮತ್ತು ಮಧುರೈ ನಿಲ್ದಾಣಗಳಲ್ಲಿ ನಿಲುಗಡೆ ಆಗಲಿದೆ.

ಈ ವಿಶೇಷ ರೈಲು ಎರಡನೇ ಹವಾ ನಿಯಂತ್ರಿತ ದರ್ಜೆಯ 2 ಬೋಗಿಗಳು, ಮೂರನೇ ಹವಾ ನಿಯಂತ್ರಿತ ದರ್ಜೆಯ 6 ಬೋಗಿಗಳು, ಸ್ಲೀಪರ್ ಕ್ಲಾಸ್‌ನ 9 ಬೋಗಿಗಳು, ಸಾಮಾನ್ಯ ದ್ವಿತೀಯ ದರ್ಜೆಯ 2 ಬೋಗಿಗಳು, ಬ್ರೇಕ್ ವ್ಯಾನ್ ಕಮ್ ಜನರೇಟರ್ ಕಾರಿನ 2 ಬೋಗಿಗಳು ಸೇರಿದಂತೆ ಒಟ್ಟು 21 ಬೋಗಿಗಳನ್ನು ಒಳಗೊಂಡಿದೆ.

IPL_Entry_Point