Mysuru news:ಶಸ್ತ್ರಚಿಕಿತ್ಸೆಗೆ ಲಂಚ, ಮೈಸೂರು ವೈದ್ಯನಿಗೆ 4 ವರ್ಷ ಜೈಲು ಶಿಕ್ಷೆ
Doctor jailed ಮೈಸೂರಿನ ಕೃಷ್ಣರಾಜೇಂದ್ರ ಸರ್ಕಾರಿ ಆಸ್ಪತ್ರೆ( KR Hospital) ವೈದ್ಯರೊಬ್ಬರು ಲಂಚ ಪಡೆದ ಆರೋಪದ ಮೇಲೆ ಜೈಲು ಶಿಕ್ಷೆಗೆ ಒಳಗಾಗಿದ್ದಾರೆ.

ಮೈಸೂರು: ಮೈಸೂರಿನ ದೊಡ್ಡಾಸ್ಪತ್ರೆ ಎಂದೇ ಹೆಸರುವಾಸಿಯಾಗಿರುವ ಕೃಷ್ಣರಾಜೇಂದ್ರ ಸರ್ಕಾರಿ ಆಸ್ಪತ್ರೆ( KR Hospital) ನ ವೈದ್ಯರೊಬ್ಬರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ಶಸ್ತ್ರ ಚಿಕಿತ್ಸೆಗೆಂದು ಬಂದ ರೋಗಿಯವರ ಕಡೆಯಿಂದ ಹಣ ಪಡೆದ ಆರೋಪದ ಮೇಲೆ ಸಿಕ್ಕಿಬಿದ್ದಿದ್ದ ವೈದ್ಯಾಧಿಕಾರಿ ಡಾ.ಪುಟ್ಟಸ್ವಾಮಿ ಅವರಿಗೆ 4 ವರ್ಷ ಜೈಲು ಶಿಕ್ಷೆ ಹಾಗೂ 50 ಸಾವಿರ ರೂ. ದಂಡವನ್ನು ವಿಧಿಸಲಾಗಿದೆ. ಮೈಸೂರಿನ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಈ ಸಂಬಂಧ ಅಂತಿಮ ಆದೇಶವನ್ನು ಬುಧವಾರ ಪ್ರಕಟಿಸಿದ್ದಾರೆ.
ಎಸ್.ಆರ್.ದೇವರಾಜು ಎಂಬುವವರು ಏಳು ವರ್ಷದ ಹಿಂದೆ 2017ರ ಏಪ್ರಿಲ್ 12ರಂದು ತಮ್ಮ ಸಂಬಂಧಿಕರೊಬ್ಬರನ್ನು ಕೆಆರ್‌ಆಸ್ಪತ್ರೆಗೆ ಶಸ್ತ್ರಚಿಕಿತ್ಸೆಗೆಂದು ಕರೆದುಕೊಂಡು ಬಂದಿದ್ದರು. ಈ ವೇಳೆ ಮೂಳೆ ಶಸ್ತ್ರಚಿಕಿತ್ಸಕರಾದ ಡಾ.ಪುಟ್ಟಸ್ವಾಮಿ ಅವರು ಶಸ್ತ್ರ ಚಿಕಿತ್ಸೆಗೆ 40 ಸಾವಿರ ರೂ. ಲಂಚದ ಬೇಡಿಕೆಯಿಟ್ಟಿದ್ದರು.
ಕೊನೆಗೆ 26 ಸಾವಿರ ರೂ.ಗೆ ಒಪ್ಪಿದ್ದರು. ಈ ಹಣವನ್ನು ನೀಡುವಾಗ ಭ್ರಷ್ಟಾಚಾರ ನಿಗ್ರಹ ದಳದ( acb) ಅಧಿಕಾರಿಗಳು ದಾಳಿ ನಡೆಸಿ ಹಣದ ಸಮೇತ ಡಾ.ಪುಟ್ಟಸ್ವಾಮಿ ಅವರನ್ನು ಬಂಧಿಸಿದ್ದರು.
ಈ ಪ್ರಕರಣದ ತನಿಖಾಧಿಕಾರಿಯಾಗಿದ್ದ ಎಸಿಬಿ ಇನ್ಸ್‌ಪೆಕ್ಟರ್ ಶೇಖರ್ ಅವರು ಆರೋಪಿ ಡಾ.ಪುಟ್ಟಸ್ವಾಮಿ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು. ಈ ಕುರಿತು ಆರು ವರ್ಷದಿಂದ ಪ್ರಕರಣದ ವಿಚಾರಣೆ ನಡೆದಿತ್ತು. ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಭಾಗ್ಯ ಅವರು ಡಾ.ಪುಟ್ಟಸ್ವಾಮಿ ಅವರ ಲಂಚ ಪ್ರಕರಣ ಸಾಬೀತಾಗಿದ್ದರಿಂದ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿದ್ದಾರೆ.
ಅಲ್ಲದೇ 50 ಸಾವಿರ ರೂ. ದಂಡವನ್ನು ಪಾವತಿಸುವಂತೆ ಆದೇಶಿಸಿದ್ದಾರೆ. ಲೋಕಾಯುಕ್ತ ವಿಶೇಷ ಅಭಿಯೋಜಕರಾದ ಕಲಿಯಂಡ ಮುತ್ತಮ್ಮ ಅವರು ಈ ಪ್ರಕರಣದಲ್ಲಿ ವಾದ ಮಂಡಿಸಿದ್ದರು. ಕರ್ನಾಟಕ ಲೋಕಾಯುಕ್ತದ ಮೈಸೂರು ವಿಭಾಗ ಎಸ್ಪಿ ವಿ.ಜೆ.ಸಜೀತ್ ಅವರು ಉಸ್ತುವಾರಿ ಹೊತ್ತಿದ್ದರು.
ಇತ್ತೀಚಿನ ದಿನಗಳಲ್ಲಿ ಸರ್ಕಾರಿ ವೈದ್ಯರೊಬ್ಬರು ಲಂಚಕ್ಕಾಗಿ ಬೇಡಿಕೆ ಇಟ್ಟು ಸಿಕ್ಕಿಬಿದ್ದಿದ್ದು. ಜೈಲು ಶಿಕ್ಷೆಗೆ ಗುರಿಯಾಗಿರುವ ಪ್ರಕರಣವಿದು.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ)

ವಿಭಾಗ