ದಸರಾ ಗಜಪಡೆಯ ಮಾವುತರು, ಕಾವಾಡಿಗಳ ಮಕ್ಕಳಿಗೆ ತಾತ್ಕಾಲಿಕ ಶಾಲೆ ಆರಂಭ; ಆರೋಗ್ಯ ಶಿಬಿರವೂ ಆಯೋಜನೆ
Mysuru Dasara 2024: ಮೈಸೂರು ದಸರಾ ಗಜಪಡೆಯ ಮಾವುತರು, ಕಾವಾಡಿಗಳ ಮಕ್ಕಳಿಗೆ ಅರಮನೆ ಆವರಣದಲ್ಲೇ ತಾತ್ಕಾಲಿಕ ಶಾಲೆ ಆರಂಭಿಸಲಾಗಿದೆ. ಇದರ ಜೊತೆಗೆ ಆರೋಗ್ಯ ಶಿಬಿರವೂ ಆಯೋಜಿಸಲಾಗಿದೆ.
ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾಗೆ ಸಕಲ ಸಿದ್ದತೆ ನಡೆಯುತ್ತಿದೆ. ಇದೇ ವೇಳೆ ಮಾವುತರು, ಕಾವಾಡಿಗಳು ಹಾಗೂ ಅವರ ಕುಟುಂಬ ಸದಸ್ಯರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿದೆ. ಮೈಸೂರಿನ ಖಾಸಗಿ ಆಸ್ಪತ್ರೆಯ ವತಿಯಿಂದ ಅರಮನೆ ಆವರಣದಲ್ಲಿ ನಡೆದ ಆರೋಗ್ಯ ತಪಾಸಣೆ ಶಿಬಿರ ನಡೆಯಲಿದೆ. ಆರೋಗ್ಯ ತಪಾಸಣೆ ಶಿಬಿರಕ್ಕೆ ಡಿಸಿಎಫ್ ಡಾ ಐಬಿ ಪ್ರಭುಗೌಡ ಚಾಲನೆ ನೀಡಿದರು.
ಆರೋಗ್ಯ ತಪಾಸಣೆ ಶಿಬಿರದಲ್ಲಿ ಭಾಗಿಯಾದ ಮಾವುತರು, ಕಾವಾಡಿಗಳು ಹಾಗೂ ಕುಟುಂಬಸ್ಥರಿಗೆ ಬಿಪಿ, ಶುಗರ್, ಇಸಿಜಿ ಸೇರಿದಂತೆ ಇನ್ನಿತರ ಆರೋಗ್ಯ ಸಂಬಂಧಿ ತಪಾಸಣೆಗಳನ್ನು ಮಾಡಲಾಯಿತು. ಅಲ್ಲದೆ, ದಸರಾ ಗಜಪಡೆಯ ಮಾವುತರು ಕಾವಾಡಿಗಳ ಮಕ್ಕಳಿಗಾಗಿ ತಾತ್ಕಾಲಿಕ ಶಾಲೆಯ ವ್ಯವಸ್ಥೆ ಕಲ್ಪಿಸಲಾಗಿದೆ. ಮೈಸೂರು ಅರಮನೆ ಆವರಣದಲ್ಲೇ ಈ ತಾತ್ಕಾಲಿಕ ಶಾಲೆ ತಲೆ ಎತ್ತಿದೆ.
ಮಕ್ಕಳಿಗೆ ವಿದ್ಯಾಭ್ಯಾಸ ಆರಂಭ
ಮಾವುತರು ಕಾವಾಡಿಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ತಾತ್ಕಾಲಿಕ ಶಾಲೆಯ ವ್ಯವಸ್ಥೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ನಡೆಸಲಾಗುತ್ತಿದೆ. ಮಾವುವರು ಕಾವಾಡಿಗಳ ಇಪ್ಪತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಕೆಯಲ್ಲಿ ಭಾಗಿಯಾಗಿದ್ದಾರೆ. ಸರ್ಕಾರಿ ಶಾಲೆಗಳ ಶಿಕ್ಷಕಿಯರಾದ ದಿವ್ಯಪ್ರಿಯದರ್ಶಿನಿ, ನೂರ್ ಫಾತಿಮ, ಮೌಸೀನ್ ತಾಜ್ ರಿಂದ ಮಕ್ಕಳಿಗೆ ಅಭ್ಯಾಸ ನಡೆಸುತ್ತಿದ್ದಾರೆ.
ಇದೇ ವೇಳೆ ಕಂಜನ್ ಆನೆಯ ಜೊತೆ ಆಗಮಿಸಿರುವ ರಾಜು ಎಂಬ ವ್ಯಕ್ತಿ ಕೂಡ ಮಕ್ಕಳ ಜೊತೆ ಕಲಿಕೆಯಲ್ಲಿ ಭಾಗಿಯಾಗಿದ್ದು, ಅಕ್ಷರಾಭ್ಯಾಸದ ಮೂಲಕ ಗಮನ ಸೆಳೆಯುತ್ತಿದ್ದಾರೆ. ದಸರಾ ಮಹೋತ್ಸವದ ಉದ್ಘಾಟನೆಗೆ ದಿನಗಣನೆ ಹಿನ್ನೆಲೆ ಜಗತ್ಪ್ರಸಿದ್ಧ ಅರಮನೆ ಸೇರಿದಂತೆ ದೇಗುಲಗಳು, ಗೋಪುರಗಳಿಗೆ ಸುಣ್ಣ ಬಣ್ಣ ಹೊಡೆಯುವ ಕಾರ್ಯ ಪ್ರಗತಿಯಲ್ಲಿದೆ. ಅರಮನೆಯ ಆವರಣದ ಅಂದ ಹೆಚ್ಚಿಸಲು ಸಿಬ್ಬಂದಿ ಶ್ರಮಿಸುತ್ತಿದ್ದಾರೆ.