Mysore News:ಪ್ರಾಧ್ಯಾಪಕರ ಪ್ರತಿಷ್ಠೆ: ಮೈಸೂರು ವಿವಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಕಾರಿಡಾರ್‌ನಲ್ಲೇ ಪಾಠ
Mysore university News ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಕಟ್ಟಡ ಸ್ಥಳಾಂತರ ವಿಚಾರದಲ್ಲಿ ಪ್ರಾಧ್ಯಾಪಕರ ನಡುವೆ ಪ್ರತಿಷ್ಠೆ ಏರ್ಪಟ್ಟು ವಿದ್ಯಾರ್ಥಿಗಳು ಕಾರಿಡಾರ್‌ನಲ್ಲಿ ಪಾಠ ಕೇಳುವ ಸನ್ನಿವೇಶ ಎದುರಾಗಿದೆ.

ಮೈಸೂರು: ಸದಾ ಒಂದಿಲ್ಲೊಂದು ಕಾರಣದಿಂದ ಸುದ್ದಿಯಾಗುತ್ತಲೇ ಇರುವ ಶತಮಾನದ ಹಿನ್ನೆಲೆಯ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಈಗ ಪ್ರಾಧ್ಯಾಪಕರ ಪ್ರತಿಷ್ಠೆಯಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುವ ಸ್ಥಿತಿ ಎದುರಾಗಿದೆ.
ಟ್ರೆಂಡಿಂಗ್ ಸುದ್ದಿ
ಪ್ರಾಧ್ಯಾಪಕರ ನಡುವಿನ ಪ್ರತಿಷ್ಠೆಯ ಜಗಳದಿಂದಾಗಿ ಪತ್ರಿಕೋದ್ಯಮ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳು ಬಡವಾದ ಪ್ರಸಂಗವಿದು.ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ಪ್ರಾಧ್ಯಾಪಕರ ಆಂತರಿಕ ಕಚ್ಚಾಟದಿಂದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ನೆಲದಲ್ಲಿ ಕುಳಿತು ಪಾಠ ಕೇಳಬೇಕಾಗಿದೆ.
ಹೊಸ ಹಳೆ ಕಟ್ಟಡ ವಿವಾದ
ಐದು ದಶಕಕ್ಕೂ ಹಳೆಯದಾದ ಪತ್ರಿಕೋದ್ಯಮ ವಿಭಾಗವು ಮಾನವಿಕ ಸಭಾಂಗಣದಲ್ಲಿಯೇ ನಡೆದುಕೊಂಡು ಬರುತ್ತಿದೆ. ಇಲ್ಲಿಯೇ ತರಗತಿಗಳೂ ನಡೆಯುತ್ತಿವೆ. ವಿಭಾಗದ ಮುಖ್ಯಸ್ಥರು, ಅಧ್ಯಾಪಕರ ಕೊಠಡಿ, ಸ್ಟೂಡಿಯೋ ಕೂಡ ಇಲ್ಲಿಯೇ ಇದ್ದವು. ವಿಶ್ವವಿದ್ಯಾನಿಲಯದ ಶತಮಾನೋತ್ಸವದ ಸಂದರ್ಭದಲ್ಲಿ ಕೆಲವು ವಿಭಾಗಗಳಿಗೆ ಸ್ವಂತ ಕಟ್ಟಡ ನಿರ್ಮಿಸುವ ಯೋಜನೆ ರೂಪಿಸಲಾಯಿತು. ಇದರಲ್ಲಿ ಪತ್ರಿಕೋದ್ಯಮ ವಿಭಾಗವೂ ಒಂದು. ಮಾನಸಗಂಗೋತ್ರಿಯಲ್ಲಿ ಪತ್ರಿಕೋದ್ಯಮ ವಿಭಾಗದ ಕಟ್ಟಡವೂ ನಿರ್ಮಾಣವಾಗಿದೆ. ಅದು ಪೂರ್ಣವಾಗದೇ ಅಲ್ಲಿಗೆ ಸ್ಥಳಾಂತರವಾಗಿರಲಿಲ್ಲ. ಅಲ್ಲದೇ ಇನ್ನಷ್ಟು ಸೌಲಭ್ಯಗಳು ಬೇಕು ಎಂದು ಕೋರಲಾಗಿತ್ತು. ಅನುದಾನದ ಕೊರತೆ ಕಾರಣದಿಂದ ವಿಭಾಗ ಹೊಸ ಕಟ್ಟಡಕ್ಕೆ ಸ್ಥಳಾಂತರವಾಗದೇ ಇಲ್ಲಿಯೇ ಮುಂದುವರಿದಿತ್ತು.
ಚೀಟಿ ಅಂಟಿಸಿದ ಮುಖ್ಯಸ್ಥೆ
ಈ ಶೈಕ್ಷಣಿಕ ವರ್ಷದಿಂದ ಹೊಸ ಕಟ್ಟಡದಲ್ಲಿಯೇ ಪತ್ರಿಕೋದ್ಯಮ ವಿಭಾಗದ ಚಟುವಟಿಕೆಗಳು ಮುಂದುವರಿಯಬೇಕು. ಈಗಿರುವ ಕಟ್ಟಡದಿಂದ ಸ್ಥಳಾಂತರಿಸಿ ಎಂದು ವಿಶ್ವವಿದ್ಯಾನಿಲಯದ ಆಡಳಿತದಿಂದ ಸೂಚನೆ ಬಂದಿತ್ತು. ಈ ಹಿನ್ನೆಯಲ್ಲಿ ಸ್ಥಳಾಂತರ ಮಾಡಲಾಗಿತ್ತು. ಇದಕ್ಕೆ ಅಧ್ಯಾಪಕರು ಆಕ್ಷೇಪ ವ್ಯಕ್ತಪಡಿಸಿದ್ದರು.
ಪತ್ರಿಕೋದ್ಯಮ ವಿಭಾಗವನ್ನು ರಾತ್ರೋರಾತ್ರಿ ಹೊಸ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗಿದೆ. ವಿಭಾಗ ಮುಖ್ಯಸ್ಥೆ ಪ್ರೊ.ಎಂ.ಎಸ್.ಸಪ್ನಾ ಕಟ್ಟಡ ‘ಸ್ಥಳಾಂತರ ಮಾಡಲಾಗಿದೆ’ ಎಂದು ಬಾಗಿಲಿಗೆ ಚೀಟಿ ಅಂಟಿಸಿ ಹೋಗಿದ್ದಾರೆ. ನಮಗೆ ಮಾಹಿತಿಯೇ ಇಲ್ಲ ಎನ್ನುವುದು ಇತರೆ ಅಧ್ಯಾಪಕರ ಆಕ್ಷೇಪ.
ಪ್ರಾಧ್ಯಾಪಕರಾದ ಪ್ರೊ.ಸಿ.ಕೆ ಪುಟ್ಟಸ್ವಾಮಿ ಹಾಗೂ ಎನ್.ಮಮತ ಅವರು ಸದ್ಯ ಹಳೆ ಕಟ್ಟಡದಲ್ಲಿ ಉಳಿದುಕೊಂಡಿದ್ದಾರೆ. ನಮಗೆ ವಿಭಾಗ ಬದಲಾಗಿರುವ ಬಗ್ಗೆ ಮೈಸೂರು ವಿವಿಯಿಂದ ಅಧಿಕೃತ ಆದೇಶ ಬಂದಿಲ್ಲ. ಇದರಿಂದ ನಾವು ಇಲ್ಲಿ ಉಳಿದುಕೊಂಡಿದ್ದೇವೆ ಎಂದು ವಿಭಾಗದ ಪ್ರಾಧ್ಯಾಪಕರು ಹೇಳುತ್ತಿದ್ದಾರೆ.
ಕಾರಿಡಾರ್‌ನಲ್ಲಿ ತರಗತಿ
ವಿಭಾಗವನ್ನು ವಿವಿಯ ಅಧಿಕಾರಿಗಳ ಸಮ್ಮುಖದಲ್ಲಿ ಸ್ಥಳಾಂತರ ಮಾಡಬೇಕಾಗಿತ್ತು. 50 ವರ್ಷಗಳ ಹಳೆಯ ದಾಖಲಾತಿಗಳು ಇಲ್ಲಿ ಇದೆ. ದಾಖಲಾತಿಗಳ ಪಂಚನಾಮೆ ಮಾಡಿದ ಬಳಿಕ ಸ್ಥಳಾಂತರ ಮಾಡಬೇಕಿತ್ತು ಎಂದು ಪ್ರಾಧ್ಯಾಪಕರು ಹೇಳುತ್ತಿದ್ದಾರೆ. ಇದರಿಂದ ಹೊಸ ಕಟ್ಟಡಕ್ಕೆ ಹೋಗದೇ, ಹಳೆ ಕಟ್ಟಡದ ತರಗತಿಯ ಕೊಠಡಿಗಳಿಗೆ ಬೀಗ ಹಾಕಿರುವುದರಿಂದ ಪ್ರಾಧ್ಯಾಪಕರು ಕಾರಿಡಾರ್ ನಲ್ಲಿ ವಿದ್ಯಾರ್ಥಿಗಳನ್ನು ಕೂರಿಸಿ ಪಾಠ ಮಾಡುತ್ತಿದ್ದಾರೆ.
ಇವೆಲ್ಲವೂ ಆಡಳಿತಾತ್ಮಕ ವಿಷಯ. ಈ ಕುರಿತು ವಿಭಾಗದಲ್ಲಿಯೇ ಸಿಗುವ ಅಧ್ಯಾಪಕರು ಕುಳಿತುಕೊಂಡು ಮಾತನಾಡಿಕೊಳ್ಳಬೇಕು. ತಮ್ಮ ಪ್ರತಿಷ್ಠೆಗಾಗಿ ಮಕ್ಕಳನ್ನು ಕಾರಿಡಾರ್‌ನಲ್ಲಿ ಕುಳ್ಳರಿಸಿ ಪಾಠ ಮಾಡುವುದು ಸರಿಯಲ್ಲ. ಹೊಸ ಕಟ್ಟಡವೂ ಇದ್ದಾಗ ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು. ಅಧ್ಯಾಪಕರು ಘನತೆಯಿಂದ ನಡೆದುಕೊಳ್ಳಬೇಕು ಎನ್ನುವ ಅಭಿಪ್ರಾಯಗಳು ಕೇಳಿ ಬಂದಿವೆ.
ಅಧ್ಯಕ್ಷರ ಸ್ಪಷ್ಟನೆ
ಈ ಕುರಿತು ವಿವರಣೆ ನೀಡಿರುವ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಪ್ರೊ.ಎಂ.ಎಸ್.ಸಪ್ನಾ, ಇದು ನನ್ನ ವೈಯಕ್ತಿಕ ನಿರ್ಧಾರವಲ್ಲ. ವಿಶ್ವವಿದ್ಯಾನಿಲಯದ ಸೂಚನೆಯಂತೆ ನಿರ್ಧಾರ ಕೈಗೊಳ್ಳಲಾಗಿದೆ. ಎಲ್ಲರಿಗೂ ತಿಳಿಸಲಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದಲೇ ಇದನ್ನೆಲ್ಲಾ ಮಾಡಲಾಗಿದೆಯೇ ಹೊರತು ಬೇರೆನೂ ಇಲ್ಲ ಎಂದು ಹೇಳಿದ್ದಾರೆ.
(ವರದಿ: ಧಾತ್ರಿ ಭಾರದ್ವಾಜ್ ಮೈಸೂರು)