ಕನ್ನಡ ಸುದ್ದಿ  /  ಕರ್ನಾಟಕ  /  Dasara Elephants: ಬಲರಾಮ, ಅರ್ಜುನ ನಂತರ ಅಶ್ವತ್ಥಾಮ ಆನೆ ದುರ್ಮರಣ, ದಸರಾ ಆನೆಗಳ ನಿರಂತರ ಸಾವಿಗೆ ಹೊಣೆ ಯಾರು

Dasara Elephants: ಬಲರಾಮ, ಅರ್ಜುನ ನಂತರ ಅಶ್ವತ್ಥಾಮ ಆನೆ ದುರ್ಮರಣ, ದಸರಾ ಆನೆಗಳ ನಿರಂತರ ಸಾವಿಗೆ ಹೊಣೆ ಯಾರು

Forest News ಕರ್ನಾಟಕದ ಅರಣ್ಯ ಇಲಾಖೆ( Karnataka Forest Department) ಆನೆ ಶಿಬಿರಗಳಲ್ಲಿ( Elephant Camps) ಯಾಕೋ ವಾತಾವರಣ ಸರಿ ಇದ್ದಂತೆ ಕಾಣುತ್ತಿಲ್ಲ.ನಿರಂತರವಾಗಿ ಆನೆಗಳು ಸಾಯುತ್ತಿವೆ. ಅದರಲ್ಲೂ ನಾಗರಹೊಳೆಯಲ್ಲಿ ಈ ಪ್ರಮಾಣ ಹೆಚ್ಚಿದೆ.

ನಾಗರಹೊಳೆಯಲ್ಲಿ ಮೃತಪಟ್ಟ ದಸರಾ ಆನೆ ಅಶ್ವತ್ಥಾಮ
ನಾಗರಹೊಳೆಯಲ್ಲಿ ಮೃತಪಟ್ಟ ದಸರಾ ಆನೆ ಅಶ್ವತ್ಥಾಮ

ಮೈಸೂರು: ವರ್ಷದ ಅಂತರದಲ್ಲಿಯೇ ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಪಾಲ್ಗೊಂಡ ಮೂರು ಪ್ರಮುಖ ಆನೆಗಳು ಜೀವಬಿಟ್ಟವು. ಅದರಲ್ಲೂ ಕರ್ನಾಟಕ ಅರಣ್ಯ ಇಲಾಖೆಯ ನೋಡಿಕೊಳ್ಳುತ್ತಿರುವ ಆನೆಗಳ ಶಿಬಿರದಲ್ಲಿಯೇ ಅನಾಹುತದಿಂದ ಪ್ರಮುಖ ಆನೆಗಳು ಜೀವ ಬಿಡುತ್ತಿರುವುದು ಅಲ್ಲಿನ ನಿರ್ವಹಣೆ, ವ್ಯವಸ್ಥೆ ಹಾಗೂ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯಕ್ಷಮತೆಯನ್ನೇ ಪ್ರಶ್ನಿಸುವ ಸ್ಥಿತಿ ಎದುರಾಗಿದೆ. ಈಗಾಗಲೇ ಬೇರೆ ಬೇರೆ ರೂಪದಲ್ಲಿ ಐದಕ್ಕೂ ಹೆಚ್ಚು ದಸರಾದಲ್ಲಿ ಪಾಲ್ಗೊಳ್ಳುವ ದಸರಾ ಆನೆಗಳು ಮೃತಪಟ್ಟಿವೆ. ಇದರೊಟ್ಟಿಗೆ ಇತರೆ ಆನೆಗಳೂ ನಿಷ್ಕಾಳಜಿಯಿಂದ ಜೀವ ಕಳೆದುಕೊಂಡಿವೆ. ಇದಕ್ಕೆ ಹೊಸ ಸೇರ್ಪಡೆ ನಾಗರಹೊಳೆಯ ಆನೆ, ದಸರಾದಲ್ಲಿ ಭಾಗಿಯಾಗಿದ್ದ ಅಶ್ವತ್ಥಾಮನ ಸಾವು.

ಅಶ್ವತ್ಥಾಮ ಸಾವು

ನಾಗರಹೊಳೆಯ ಹುಣಸೂರು ತಾಲ್ಲೂಕಿನ ಮತ್ತಿಗೋಡು ಅನೆ ಶಿಬಿರಕ್ಕೆ ಹೊಂದಿಕೊಂಡಂತೆ ಇರುವ ಭೀಮನಕಟ್ಟೆ ಅನೆ ಶಿಬಿರದಲ್ಲಿದ್ದ ಅಶ್ವತ್ಥಾಮ ಆನೆ ಸೋಲಾರ್‌ ವಿದ್ಯುತ್‌ ತಂತಿ ಸ್ಪರ್ಶದಿಂದ ಜೀವ ಕಳೆದುಕೊಂಡಿದೆ. ಶಿಬಿರದಲ್ಲಿದ್ದ ಆನೆಯನ್ನು ಕಾಡಿಗೆ ಮೇಯಲೆಂದು ಬಿಡಲಾಗಿತ್ತು. ಈ ವೇಳೆ ಆನೆ ಸೋಲಾರ್‌ ತಂತಿಗೆ ಸಿಲುಕಿ ಪ್ರಾಣ ಕಳೆದುಕೊಂಡಿದೆ. ರಾತ್ರಿಯಿಡೀ ಆನೆ ಬಾರದೇ ಇದ್ದಾಗ ಶಿಬಿರದ ಸಿಬ್ಬಂದಿ ಹಾಗೂ ಆನೆ ಮಾವುತ, ಕವಾಡಿ ಹುಡುಕಾಟ ನಡೆಸಿದಾಗ ಆನೆ ಮೃತಪಟ್ಟಿರುವುದು ಪತ್ತೆಯಾಗಿದೆ. ಆನೆಯ ಬೆನ್ನು ಭಾಗಕ್ಕೆ ಸೋಲಾರ್‌ ತಂತಿ ತಗುಲಿ ಮೃತಪಟ್ಟಿರುವುದು ಕಂಡು ಬಂದಿದೆ. ಅದೂ ಆನೆ ಶಿಬಿರಕ್ಕೆ ಅಳವಡಿಸಲಾಗಿದ್ದ ಸೋಲಾರ್‌ ತಂತಿಗೆ ಸಿಲುಕಿರುವುದು ಕಂಡು ಬಂದಿದೆ. ಸುಮಾರು 39 ವರ್ಷದ ಅಶ್ವತ್ಥಾಮ ಆನೆಯನ್ನು 2017ರಲ್ಲಿ ಸಕಲೇಶಪುರದಲ್ಲಿ ಸೆರೆ ಹಿಡಿಯಲಾಗಿತ್ತು. ಆನಂತರ ಪಳಗಿಸಿ ಎರಡು ವರ್ಷ ದಸರೆಗೂ ಕರೆ ತರಲಾಗಿತ್ತು. ಆನೆಗಳ ಸೆರೆ ಕಾರ್ಯಾಚರಣೆಗೂ ಬಳಕೆ ಮಾಡಲಾಗುತ್ತಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಸಿಬ್ಬಂದಿ ನಿರ್ಲಕ್ಷ್ಯದ ಆರೋಪ

ಅಶ್ವತ್ಥಾಮ ಆನೆ ಸಾವಿನ ಹಿಂದೆ ಸಿಬ್ಬಂದಿ ನಿರ್ಲಕ್ಷ್ಯವೂ ಕೇಳಿ ಬಂದಿದೆ. ಸ್ಥಳೀಯ ಅಧಿಕಾರಿಗಳು ಆನೆಯ ಮೇಲುಸ್ತುವಾರಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕಿತ್ತು. ಆನೆ ನೋಡಲೆಂದೇ ಒಬ್ಬ ಮಾವುತ, ಕವಾಡಿ ಇದ್ದಾರೆ. ಅವರೂ ಕೂಡ ನಿರ್ಲಕ್ಷ್ಯ ವಹಿಸಿರುವ ಆರೋಪ ಕೇಳಿ ಬಂದಿದೆ. ಆನೆ ಬಿಟ್ಟ ಮೇಲೆ ಅದು ಎಲ್ಲಿ ಹೋಗಿದೆ ಎನ್ನುವುದನ್ನು ಒಬ್ಬರಾದರೂ ನೋಡಿಕೊಳ್ಳಬೇಕು. ಶಿಬಿರದಲ್ಲಿರುವ ಸಾಕಾನೆಗಳನ್ನು ಕಾಡಿಗೆ ಅಟ್ಟಿ ಸುಮ್ಮನೇ ಕುಳಿತುಕೊಳ್ಳುತ್ತಾರೆ. ಇದೇ ರೀತಿ ಕುಮಾರಸ್ವಾಮಿ ಎಂಬ ಆನೆಯೂ ಕಾಣೆಯಾಗಿ ಮೂರು ದಿನದ ನಂತರ ಶವ ಪತ್ತೆಯಾಗಿತ್ತು.ಆನೆ ಶಿಬಿರಗಳಲ್ಲಿ ಬಿಗಿ ಕ್ರಮ ಆಗದೇ ಇದ್ದರೆ ಇನ್ನಷ್ಟು ಆನೆ ಕಳೆದುಕೊಳ್ಳಬೇಕಾಗುತ್ತದೆ ಎನ್ನುವುದು ಪರಿಸರ ಪ್ರಿಯರ ಆರೋಪ.

ತನಿಖೆಗೆ ಸಚಿವರ ಸೂಚನೆ

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಧಾನ ಆಕರ್ಷಣೆಯಾದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುತ್ತಿದ್ದ ಅಶ್ವತ್ಥಾಮ (38) ಆನೆಯ ನಿಧನಕ್ಕೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸಂತಾಪ ಸೂಚಿಸಿದ್ದಾರೆ.ದಸರಾ ಮಹೋತ್ಸವದಲ್ಲಿ 2 ಬಾರಿ ಭಾಗಿಯಾಗಿದ್ದ ನಾಗರಹೊಳೆ ಅರಣ್ಯ ವ್ಯಾಪ್ತಿಯ ಭೀಮನಕಟ್ಟೆ ಶಿಬಿರದಲ್ಲಿದ್ದ ಅಶ್ವತ್ಥಾಮ ಸೌರ ವಿದ್ಯುತ್ ಬೇಲಿಯ ಮೇಲೆ ಬಿದ್ದು ಸಾವಿಗೀಡಾಗಿರುವುದಾಗಿ ವರದಿಯಾಗಿದ್ದು, ಈ ಆಕಸ್ಮಿಕ ಸಾವಿನ ಬಗ್ಗೆ ಬಗ್ಗೆ ಸೂಕ್ತ ತನಿಖೆ ನಡೆಸಿ ವರದಿ ನೀಡಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಸಿಎಂ ಸಂತಾಪ

ಮೈಸೂರು ದಸರಾದಲ್ಲಿ ಪಾಲ್ಗೊಂಡು ಲಕ್ಷಾಂತರ ಜನರ ಮೆಚ್ಚುಗೆ ಗಳಿಸಿದ್ದ ಆನೆ ಅಶ್ವತ್ಥಾಮನ ಸಾವು ನೋವುಂಟುಮಾಡಿದೆ. ತನ್ನ ಶಾಂತ ಸ್ವಭಾವ ಮತ್ತು ಗಾಂಭೀರ್ಯದಿಂದಾಗಿ ಬಹುಬೇಗನೇ ವಿಶ್ವವಿಖ್ಯಾತ ದಸರಾದ ಭಾಗವಾಗಿ ತಾಯಿ ಚಾಮುಂಡೇಶ್ವರಿಯ ಸೇವೆಗೈದಿದ್ದ. ಅಶ್ವತ್ಥಾಮನ ನೆನಪು ನಮ್ಮ ಮನದಲ್ಲಿ ಶಾಶ್ವತವಾಗಿರಲಿದೆ ಎಂದು ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ

ಈವರೆಗೂ ಮೃತಪಟ್ಟ ಆನೆಗಳು

  • ನಾಗರಹೊಳೆಯ ಮತ್ತೀಗೋಡು ಆನೆ ಶಿಬಿರದಲ್ಲಿದ್ದ ಅಂಬಾರಿ ಹೊತ್ತ ಬಲರಾಮ ಕಳೆದ ವರ್ಷದ ಫೆಬ್ರವರಿಯಲ್ಲಿ ಆನೆ ಮೇಯಲು ಹೋಗಲು ಗುಂಡೇಟು ತಿಂದು ನಂತರ ಮೃತಪಟ್ಟಿತ್ತು
  • ನಾಗರಹೊಳೆಯ ಬಳ್ಳೆ ಆನೆ ಶಿಬಿರದಲ್ಲಿದ್ದ ಅಂಬಾರಿ ಹೊತ್ತ ಅರ್ಜುನ ಆನೆ ಏಳು ತಿಂಗಳ ಹಿಂದೆ ಹಾಸನ ಯಸಳೂರು ಬಳಿ ಆನೆ ಸೆರೆ ಕಾರ್ಯಾಚರಣೆಗೆ ಹೋದಾಗ ಜೀವ ಕಳೆದುಕೊಂಡಿತು.
  • ಎರಡು ತಿಂಗಳ ಹಿಂದೆಯಷ್ಟೇ ನಾಗರಹೊಳೆಯ ಬಳ್ಳೆ ಶಿಬಿರದಲ್ಲಿದ್ದ ಕುಮಾರಸ್ವಾಮಿ ಎಂಬ ಆನೆ ಕಾಣೆಯಾಗಿ ಶವವಾಗಿ ಪತ್ತೆಯಾಗಿತ್ತು. ಆನೆ ಕಾಣೆಯಾದರೂ ಅಧಿಕಾರಿ, ಸಿಬ್ಬಂದಿ ತಲೆ ಕೆಡಿಸಿಕೊಂಡಿರಲಿಲ್ಲ ಎನ್ನುವ ಆರೋಪಗಳು ಕೇಳಿ ಬಂದಿದ್ದವು,
  • ನಾಗರಹೊಳೆ ಮತ್ತಿಗೋಡು ಆನೆ ಶಿಬಿರದಲ್ಲಿ ಕೃಷ್ಣ ಎನ್ನುವ ಆನೆ ಕೆಲ ದಿನಗಳ ಹಿಂದೆ ಮೃತಪಟ್ಟಿದೆ. ಈ ಆನೆಯನ್ನು ವರ್ಷದ ಹಿಂದೆಯಷ್ಟೇ ಸೆರೆ ಹಿಡಿದು ತರಲಾಗಿತ್ತು.
  • ವರ್ಷದ ಹಿಂದೆ ಸೆರೆ ಸಿಕ್ಕಿದ್ದ ವಿರಾಟ್‌ ಎನ್ನುವ ಆನೆಯೂ ನಾಗರಹೊಳೆಯ ಮತ್ತಿಗೋಡು ಆನೆ ಶಿಬಿರದಲ್ಲಿ ಜೀವ ಕಳೆದುಕೊಂಡಿದೆ. ಈ ಆನೆಯ ಆರೋಗ್ಯವನ್ನು ನೋಡಿಕೊಳ್ಳುವಲ್ಲಿ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ ಆರೋಪಗಳಿವೆ.
  • ದಕ್ಷಿಣ ಕನ್ನಡದಿಂದ ನಾಗರಹೊಳೆಯ ಮತ್ತಿಗೋಡು ಆನೆ ಶಿಬಿರಕ್ಕೆ ತರಲಾಗಿದ್ದ ಸುಬ್ರಮಣಿ ಎನ್ನುವ ಗಟ್ಟಿಮುಟ್ಟಾಗಿದ್ದರೂ ಕಳೆದ ವರ್ಷ ಜೀವ ಕಳೆದುಕೊಂಡಿತ್ತು.
  • ತಮಿಳುನಾಡು ಹಾಗೂ ಕರ್ನಾಟಕ ತೀವ್ರ ಗದ್ದಲ ಮಾಡುತ್ತ ಸೆರೆ ಸಿಕ್ಕಿದ್ದ ಅಕ್ಕಿರಾಜಾ ಎನ್ನುವ ಆನೆ ಬಂಡೀಪುರದ ರಾಮಪುರ ಆನೆ ಶಿಬಿರದಲ್ಲಿ ಕಳೆದ ವರ್ಷ ಸತ್ತು ಹೋಯಿತು,. ಹಿಡಿದು ತಂದ ತಿಂಗಳೊಳಗೆ ಆನೆ ಪ್ರಾಣ ಕಳೆದುಕೊಂಡಿತು,
  • ದಾವಣಗೆರೆಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಸುಪರ್ದಿಯಲ್ಲಿದ್ದ ಗಣೇಶ ಎನ್ನುವ ಆನೆಯನ್ನು ಶಿವಮೊಗ್ಗದ ಸಕ್ರೆ ಬೈಲ್‌ ಆನೆ ಶಿಬಿರಕ್ಕೆ ತಂದರೂ ಅನಾರೋಗ್ಯದಿಂದ ಮೃತಪಟ್ಟಿತು.