ಕನ್ನಡ ಸುದ್ದಿ  /  ಕರ್ನಾಟಕ  /  Cauvery Reservoirs: ಮಳೆ ಬಂದರೂ ಜಲಾಶಯಕ್ಕೆ ಬಾರದ ನೀರು, ಕಾವೇರಿ ಕೊಳ್ಳದ ಜಲಾಶಯಗಳ ಸ್ಥಿತಿ ಹೇಗಿದೆ

Cauvery Reservoirs: ಮಳೆ ಬಂದರೂ ಜಲಾಶಯಕ್ಕೆ ಬಾರದ ನೀರು, ಕಾವೇರಿ ಕೊಳ್ಳದ ಜಲಾಶಯಗಳ ಸ್ಥಿತಿ ಹೇಗಿದೆ

ಕಾವೇರಿ ಕೊಳ್ಳದ ಕೆಆರ್‌ಎಸ್(‌ Krs Dam) ಹಾಗೂ ಕಬಿನಿ( Kabini) ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿದೆ. ಮಳೆ ಬಂದರೂ ಜಲಾಶಯ ತನಕ ನೀರು ಹರಿದಿಲ್ಲ.

ಕೆಆರ್‌ ಎಸ್‌ ಜಲಾಶಯ ಹಾಗೂ ಕಬಿನಿ ಹಿನ್ನೀರಿನ ನೋಟ
ಕೆಆರ್‌ ಎಸ್‌ ಜಲಾಶಯ ಹಾಗೂ ಕಬಿನಿ ಹಿನ್ನೀರಿನ ನೋಟ

ಮೈಸೂರು: ಕೇರಳ, ಕೊಡಗಿನಲ್ಲೂ ಬೇಸಿಗೆಯಲ್ಲಿ ಮಳೆ ಸುರಿಯುತ್ತಲೇ ಇದೆ. ಕೊಡಗಿನ ಎಲ್ಲಾ ಭಾಗದಲ್ಲೂ ಮಳೆಯಾಗುತ್ತಿದೆ. ಆದರೆ ಕೇರಳ ಹಾಗೂ ಕೊಡಗು ಜಲಾನಯನ ಪ್ರದೇಶದ ಮೇಲೆ ಅವಲಂಬಿತವಾಗಿರುವ ಮೈಸೂರು ಜಿಲ್ಲೆ ಕಬಿನಿ ಜಲಾಶಯ ಹಾಗೂ ಮಂಡ್ಯ ಜಿಲ್ಲೆ ಕೃಷ್ಣರಾಜಸಾಗರ ಜಲಾಶಯದ ನೀರಿನ ಮಟ್ಟದಲ್ಲಿ ಏರಿಕೆ ಕಂಡು ಬಂದಿಲ್ಲ. ಈ ಬಾರಿ ಮಳೆ ಕೊರತೆಯಿಂದ ಕಾವೇರಿ ಕೊಳ್ಳದ ಜಲಾಶಯಗಳು ಪೂರ್ಣ ಪ್ರಮಾಣದಲ್ಲಿ ತುಂಬಲೇ ಇಲ್ಲ. ಬರಗಾಲದ ವಾತಾವರಣದ ನಡುವೆಯೇ ಕೃಷಿಗೆ ನೀರು ಹರಿಸದೇ ಜಲಾಶಯದಲ್ಲಿ ಉಳಿಸಿಕೊಂಡಿದ್ದರಿಂದ ಬೇಸಿಗೆಯಲ್ಲಿ ಭಾರೀ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗಿದೆ. ಇನ್ನೇನು ಮುಂಗಾರು ಮಳೆ ಆರಂಭವಾಗುವ ಸೂಚನೆಗಳು ಇರುವುದರಿಂದ ಈಗಾಗಲೇ ತಳ ಹಿಡಿದಿರುವ ಜಲಾಶಯ ಹಾಗೂ ಹಿನ್ನೀರು ಹೆಚ್ಚು ಪ್ರಮಾಣದಲ್ಲಿ ತುಂಬಬಹುದು ಎನ್ನುವ ನಿರೀಕ್ಷೆಯನ್ನಂತೂ ಇಟ್ಟುಕೊಳ್ಳಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಕೆಆರ್‌ಎಸ್‌ನಲ್ಲಿ 79 ಅಡಿಗೆ ಕುಸಿತ

ಬೆಂಗಳೂರು. ಮೈಸೂರು, ಮಂಡ್ಯ, ರಾಮನಗರ ಸೇರಿದಂತೆ ಹಲವು ಭಾಗಗಳ ಕುಡಿಯುವ ನೀರಿನ ಪ್ರಮುಖ ಜಲಾಶಯ ಕೃಷ್ಣರಾಜಸಾಗರದಲ್ಲೂ ಈ ಬಾರಿ ನೀರಿನ ಪ್ರಮಾಣ 79 ಅಡಿಗೆ ಕುಸಿದಿದೆ. ಜಲಾಶಯದಲ್ಲಿ ಸೋಮವಾರ ಬೆಳಿಗ್ಗೆ 79.62 ಅಡಿ ನೀರು ಸಂಗ್ರಹವಾಗಿದೆ. ಜಲಾಶಯದ ಗರಿಷ್ಠ ಮಟ್ಟ124.80 ಅಡಿ.

ಕೊಡಗು ಭಾಗದಲ್ಲಿ ನಿರಂತರ ಮಳೆಯಾಗುತ್ತಿದೆ. ಅದರ ಪರಿಣಾಮವೇನೂ ಕೃಷ್ಣರಾಜಸಾಗರ ಜಲಾಶಯದಲ್ಲಿ ಕಾಣುತ್ತಿಲ್ಲ. ಏಕೆಂದರೆ ಜಲಾಶಯಕ್ಕೆ ಹರಿದು ಬರುತ್ತಿರುವ ಒಳ ಹರಿವಿನ ಪ್ರಮಾಣ 250 ರಷ್ಟಿದೆ. ಒಳಹರಿವಿನ ಪ್ರಮಾಣದಲ್ಲಿ ಏರಿಕೆ ಕಂಡಿರುವುದು ಸ್ವಲ್ಪ ಮಾತ್ರ. ಕೊಡಗು ಭಾಗದಲ್ಲಿ ಯಥೇಚ್ಛ ಮಳೆ ಸುರಿದರೆ ಮಾತ್ರ ಜಲಾಶಯಕ್ಕೆ ನೀರು ಹೆಚ್ಚು ಹರಿದು ಬರಲಿದೆ. ಸದ್ಯಕ್ಕೆ ಜಲಾಶಯದ ಹೊರ ಹರಿವಿನ ಪ್ರಮಾಣ 541 ಕ್ಯೂಸೆಕ್‌ ನೀರನ್ನು ಕುಡಿಯುವ ನೀರಿಗೆಂದು ಹರಿ ಬಿಡಲಾಗುತ್ತಿದೆ.

ಜಲಾಯದ ಸಂಗ್ರಹ ಮಟ್ಟ49.45 ಟಿಎಂಸಿ. ಈಗ ಇರುವುದು 10.62 ಟಿಎಂಸಿ. ಇದರಲ್ಲಿ 2.24 ಟಿಎಂಸಿ ನೀರಿನ ಪ್ರಮಾಣ ಲೈವ್‌ ಸ್ಟೋರಜ್‌ ನದ್ದು. ಕೆಲ ವರ್ಷಗಳ ಹಿಂದೆ ತೀವ್ರ ಬರದ ವಾತಾವರಣ ಇದ್ದುದರಿಂದ ಲೈವ್‌ ಸ್ಟೋರೇಜ್‌ ನಂತರದ ನೀರನ್ನು ಸಂಗ್ರಹ ಬಳಕೆ ಮಾಡಲಾಗಿತ್ತು.

ಈ ಬಾರಿ ಕೆಆರ್‌ಎಸ್‌ ಜಲಾಶಯ ತುಂಬಲೇ ಇಲ್ಲ. ಹತ್ತು ಅಡಿ ಕಡಿಮೆ ಪ್ರಮಾಣದಲ್ಲಿ ನೀರು ಮಳೆಗಾಲದಲ್ಲಿ ಇತ್ತು. ಆನಂತರ ವ್ಯವಸ್ಥಿತ ಬಳಕೆಯಿಂದ ನೀರಿನ ಮಟ್ಟ ಈಗಲೂ ಉತ್ತಮವಾಗಿದೆ. ಅಂದರೆ ಬೇಸಿಗೆವರೆಗೂ ಆತಂಕಪಡುವ ಅಗತ್ಯವಿಲ್ಲ. ಬೇಸಿಗೆ ಕೃಷಿಗೆ ಈ ಬಾರಿ ನೀರು ಹರಿಸದ ತೀರ್ಮಾನ ಕೈಗೊಂಡಿದ್ದರಿಂದ ಜಲಾಶಯದಲ್ಲಿ ನೀರಿದೆ ಎನ್ನುವುದು ಅಧಿಕಾರಿಗಳ ವಿವರಣೆ.

ಕಬಿನಿಯಲ್ಲೂ ತಗ್ಗಿದ ಪ್ರಮಾಣ

ಕೇರಳದಲ್ಲಿ ಕೆಲವು ದಿನಗಳಲ್ಲಿ ಮಳೆಯಾಗಿದೆ. ಅದರಲ್ಲೂ ವಯನಾಡು ಭಾಗದಲ್ಲೂ ಮಳೆಯಾಗಿದೆ. ಹೀಗಿದ್ದರೂ ಕೇರಳದ ಮಳೆಯನ್ನೇ ನಂಬಿರುವ ಮೈಸೂರು ಜಿಲ್ಲೆಯ ಕಬಿನಿ ಜಲಾಶಯಕ್ಕೂ ನೀರು ಬಂದಿಲ್ಲ. ಒಳಹರಿವಿನ ಪ್ರಮಾಣವೂ ಕಡಿಮೆಯಾಗಿದ್ದು, ಜಲಾಶಯದ ಮಟ್ಟ ತೀವ್ರ ಪ್ರಮಾಣದಲ್ಲಿ ಕುಸಿದಿದೆ.

ಜಲಾಶಯಕ್ಕೆ ಸೋಮವಾರ ಬೆಳಿಗ್ಗೆ 42 ಕ್ಯೂಸೆಕ್‌ ನೀರು ಮಾತ್ರ ಹರಿದು ಬರುತ್ತಿದೆ. ಕಳೆದ ವರ್ಷ ಈ ಹೊತ್ತಿಗೆ ಕೇರಳ ಭಾಗದಲ್ಲಿ ಮಳೆಯಾಗಿದ್ದರಿಂದ ಜಲಾಶಯಕ್ಕೆ 779 ಕ್ಯೂಸೆಕ್‌ ನೀರು ಜಲಾಶಯಕ್ಕೆ ಹರಿದು ಬರುತ್ತಿತ್ತು. ಈ ವರ್ಷ ಕುಡಿಯುವ ನೀರಿಗೆಂದೇ ನಿತ್ಯ 500 ಕ್ಯೂಸೆಕ್‌ ನೀರು ಹೊರ ಬಿಡಲಾಗುತ್ತಿದೆ.

ಈ ಬಾರಿ ಜಲಾಶಯದ ಪೂರ್ಣ ಪ್ರಮಾಣದಲ್ಲಿ ತುಂಬಿದ್ದು ಕಡಿಮೆ ದಿನ. ಇದರ ನಡುವೆ ಬೆಂಗಳೂರು, ಮೈಸೂರು ಭಾಗಕ್ಕೆ ಇಲ್ಲಿಂದಲೇ ಕುಡಿಯುವ ನೀರು ಹರಿಸಲಾಗುತ್ತದೆ. ಮಧ್ಯೆ ತಮಿಳುನಾಡಿಗೂ ನೀರು ಹರಿಸಿದ್ದರಿಂದ ಕಬಿನಿ ಜಲಾಶಯದಲ್ಲಿ ನೀರಿನ ಮಟ್ಟ ಈ ಬಾರಿ ಕುಸಿತ ಕಂಡಿದೆ.

ಜಲಾಶಯದ ಗರಿಷ್ಠ ಮಟ್ಟ 2284 ಅಡಿ. ಸದ್ಯ 2257.51 ಅಡಿ ನೀರು ಜಲಾಶಯದಲ್ಲಿದೆ. ಕಳೆದ ವರ್ಷ ಇದೇ ದಿನ ಕಬಿನಿ ಜಲಾಶಯದಲ್ಲಿ 2252.46 ಅಡಿ ನೀರಿತ್ತು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕೊಂಚ ಹೆಚ್ಚೇ ನೀರು ಜಲಾಶಯದಲ್ಲಿದೆ. ಸದ್ಯ 6.43 ಟಿಎಂಸಿ ನೀರು ಮಾತ್ರ ಜಲಾಶಯದಲ್ಲಿದೆ. ಅಂದರೆ ಲೈವ್‌ ಹಂತಕ್ಕಿಂತ ಕೆಳ ಭಾಗದ ನೀರನ್ನು ಈಗಾಗಲೇ ಬಳಕೆ ಮಾಡಲಾಗುತ್ತಿದೆ. ಜಲಾಶಯದ ಒಟ್ಟು ಸಾಮರ್ಥ್ಯ 19.52 ಟಿಎಂಸಿ.

ಕಬಿನಿ ಹಿನ್ನೀರು ಕುಸಿತ

ಕಬಿನಿ ಹಿನ್ನೀರಿನಲ್ಲೂ ನೀರಿನ ಪ್ರಮಾಣ ತಗ್ಗಿದೆ. ಜಲಾಶಯದ ಪ್ರಮಾಣವೇ ತಳಮಟ್ಟಕ್ಕೆ ತಲುಪಿರುವಾಗ ಹಿನ್ನೀರಿನ ಪ್ರಮಾಣದಲ್ಲೂ ಕಡಿಮೆಯಾಗಿದೆ. ಈ ಬಾರಿ ಅರಣ್ಯ ಇಲಾಖೆ ಬೋಟಿಂಗ್‌ ಕೂಡ ನಡೆಯದೇ ತಿಂಗಳುಗಳೇ ಕಳೆದಿದೆ.

ಕೇರಳ ಭಾಗದಲ್ಲಿ ಒಂದು ವಾರ ನಿರಂತರ ಮಳೆಯಾದರೆ ಜಲಾಶಯಕ್ಕೆ ನೀರು ಹರಿದು ಬರಲಿದೆ. ಬೇಗನೇ ಜಲಾಶಯ ತುಂಬಲಿದೆ. ಇದು ಸಂಗ್ರಹ ಸಾಮರ್ಥ್ಯವು ಕಡಿಮೆ ಇರುವುದರಿಂದ ತುಂಬಿದ ತಕ್ಷಣವೇ ಕಪಿಲಾ ನದಿ ಮೂಲಕ ಹರಿ ಬಿಡಲಾಗುತ್ತದೆ. ಈ ಬಾರಿ ಬೇಗನೇ ಮುಂಗಾರು ಆರಂಭವಾಗುವ ಸೂಚನೆ ಇರುವುದರಿಂದ ಜಲಾಶಯಕ್ಕೂ ಯಥೇಚ್ಛ ನೀರು ಹರಿದು ಬರುವ ನಿರೀಕ್ಷೆಯಿದೆ ಎಂದು ಜಲಾಶಯದ ಅಧಿಕಾರಿಗಳು ಹೇಳುತ್ತಾರೆ.

IPL_Entry_Point