Mysuru News: ಮೈಸೂರಿನಲ್ಲಿ ಸ್ವಾಮಿ ಕೊರಗಜ್ಜ ದೈವಸ್ಥಾನ ನೆಲಸಮ, ಕೇರ್ಗಳ್ಳಿಯಲ್ಲಿ ರಾಜಕಾಲುವೆ ಒತ್ತುವರಿ ಮಾಡಿದ್ದ ಆರೋಪ
ಕಾಂತಾರ ಸಿನಿಮಾ ತೆರೆಕಂಡ ನಂತರ ಕರ್ನಾಟಕದ ಹಲವೆಡೆ ದೈವಸ್ಥಾನಗಳು ಆರಂಭವಾಗಿವೆ. ಇಂಥ ದೈವಸ್ಥಾನಗಳಲ್ಲಿ ನಿಯಮಗಳ ಪಾಲನೆಯಾಗುತ್ತಿಲ್ಲ ಎನ್ನುವ ಆಕ್ಷೇಪಗಳನ್ನೂ ಹಲವರು ವ್ಯಕ್ತಪಡಿಸಿದ್ದರು.
ಮೈಸೂರು: ರಾಜ ಕಾಲುವೆ ಮೇಲೆ ನಿರ್ಮಿಸಿದ್ದ ಸ್ವಾಮಿ ಕೊರಗಜ್ಜ ದೈವಸ್ಥಾನವನ್ನು ಮೈಸೂರು ಜಿಲ್ಲಾಡಳಿತ ಮಂಗಳವಾರ (ಆಗಸ್ಟ್ 27) ನೆಲಸಮ ಮಾಡಿದೆ. ಈ ಸಂಬಂಧದ ದಾಖಲೆಗಳನ್ನು ಪರಿಶೀಲಿಸಿದ್ದ ಉಪವಿಭಾಗಾಧಿಕಾರಿ ಕೆ.ಆರ್.ರಕ್ಷಿತ್ ಅವರ ಆದೇಶದಂತೆ ತಹಸೀಲ್ದಾರ್ ಕೆ.ಎಂ.ಮಹೇಶ್ ಕುಮಾರ್ ಕಾರ್ಯಾಚರಣೆ ನಡೆಸಿ ದೇವಾಲಯವನ್ನು ನೆಲಸಮ ಮಾಡಿದ್ದಾರೆ.
ಕೇರ್ಗಳ್ಳಿ ಗ್ರಾಮದ ಸರ್ವೆ ನಂಬರ್ 60ರಲ್ಲಿ ಹಾದುಹೋಗಿದ್ದ ರಾಜ ಕಾಲುವೆ ಒತ್ತುವರಿ ಆಗಿದೆ ಎಂಬ ದೂರು ತಾಲೂಕು ಆಡಳಿತಕ್ಕೆ ಬಂದಿತ್ತು. ಅಕ್ರಮವಾಗಿ ದೇವಾಲಯ ನಿರ್ಮಿಸಲಾಗಿದೆ ಎಂಬ ಮಾಹಿತಿ ಇತ್ತು. ಈ ಸಂಬಂಧ ದಾಖಲೆಗಳನ್ನು ಪರಿಶೀಲಿಸಿದ ಉಪವಿಭಾಗಾಧಿಕಾರಿ ರಕ್ಷಿತ್ ಅವರು ಒತ್ತುವರಿಯಾಗಿರುವ ಬಗ್ಗೆ ಖಚಿತಪಡಿಸಿಕೊಂಡ ನಂತರ ಒತ್ತುವರಿ ತೆರುವುಗೊಳಿಸುವಂತೆ ಆದೇಶಿಸಿದ್ದರು.
ಅದರನ್ವಯ ತಹಸೀಲ್ದಾರ್ ಕೆ.ಎಂ.ಮಹೇಶ್ ಕುಮಾರ್ ಅವರು ಜಯಪುರ ಠಾಣೆ ಪೊಲೀಸರ ಭದ್ರತೆಯೊಂದಿಗೆ ಕಾರ್ಯಾಚರಣೆ ಮಾಡಿ ರಾಜ ಕಾಲುವೆಯನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿದ್ದ ಕೊರಗಜ್ಜ ದೈವಸ್ಥಾನವನ್ನು ನೆಲಸಮಗೊಳಿಸಿ ತೆರವುಗೊಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಜಯಪುರ ಹೋಬಳಿ ಉಪತಹಸೀಲ್ದಾರ್ ನಿಂಗಪ್ಪ, ರಾಜಸ್ವ ನಿರೀಕ್ಷಕ ಲೋಹಿತ್, ಹೋಬಳಿಯ ಗ್ರಾಮ ಆಡಳಿತ ಅಧಿಕಾರಿಗಳು, ಬೋಗಾದಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು, ಸಿಬಂದಿ ವರ್ಗದವರು, ನಗರಮಾಪನ ಯೋಜನಾಧಿಕಾರಿಗಳ ಕಚೇರಿ ಸಿಬ್ಬಂದಿ ಹಾಗೂ ಜಯಪುರ ಪೋಲೀಸ್ ಠಾಣೆ ಅಧಿಕಾರಿ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
ದೈವಸ್ಥಾನಕ್ಕೆ ಬೀಗ, ದೈವಾರಾಧಕ ನಾಪತ್ತೆ
ಮೈಸೂರಿನ ಕೊರಗಜ್ಜ ದೈವಸ್ಥಾನವು ಕಳೆದ ಕೆಲ ದಿನಗಳಿಂದ ಬಾಗಿಲು ತೆಗೆದಿರಲಿಲ್ಲ. ದೈವಸ್ಥಾನದ ಟ್ರಸ್ಟಿಗಳ ನಡುವಣ ವೈಮನಸ್ಸು ಮತ್ತು ಸಾಂಸಾರಿಕ ಕಾರಣಕ್ಕೆ ದೈವಾರಾಧಕ ತೇಜುಕುಮಾರ್ ದೈವಸ್ಥಾನಕ್ಕೆ ಬೀಗ ಹಾಕಿ, ನಾಪತ್ತೆಯಾಗಿದ್ದರು. ದೈವಾರಾಧಕ ತೇಜುಕುಮಾರ್ ಮತ್ತು ಅವರ ಪತ್ನಿ ನಡುವೆಯೂ ಆಗಾಗ ಜಗಳ ನಡೆಯುತ್ತಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.
ನೇಮ ಮೀರಿದರೆ ಅಪಾಯ ತಪ್ಪದು
ಕೊರಗಜ್ಜ ತುಂಬಾ ಶಕ್ತಿಯಿರುವ ದೈವ. ರಿಷಭ್ ಶೆಟ್ಟೆ ಅಭಿನಯದ ಕಾಂತಾರ ಸಿನಿಮಾ ತೆರೆಕಂಡ ನಂತರ ಕರ್ನಾಟಕದ ಹಲವೆಡೆ ದೈವಸ್ಥಾನಗಳು ತಲೆಎತ್ತಿವೆ. ಆದರೆ ಇಲ್ಲಿ ನೇಮ ಕಾಪಾಡುತ್ತಿಲ್ಲ ಎನ್ನುವ ಆಕ್ಷೇಪ ಆಸ್ತಿಕರದು. ಕೊರಗಜ್ಜ ಎಂದಿಗೂ ಮೋಸ ಸಹಿಸುವುದಿಲ್ಲ. ನೇಮ ಕಾಪಾಡದೆ ಭಕ್ತರಿಗೆ ಮೋಸ ಮಾಡಿದರೆ ಎಂಥವರನ್ನೂ ದೈವ ಭಸ್ಮ ಮಾಡಿಬಿಡುತ್ತದೆ ಎಂದು ಭಕ್ತರು ಹೇಳುತ್ತಾರೆ. ಮೈಸೂರಿನಲ್ಲಿ ಇತ್ತೀಚೆಗೆ ರಾಜಗುಳಿಗ ದೈವಸ್ಥಾನವೂ ತಲೆಯೆತ್ತಿದೆ.