ಕನ್ನಡ ಸುದ್ದಿ  /  ಕರ್ನಾಟಕ  /  Mysuru News: ಇಂದಿನಿಂದ ಸೋಸಲೆ ಶ್ರೀ ವ್ಯಾಸರಾಜ ಮಠದ ಸುಧಾಮಂಗಳ ಮಹೋತ್ಸವ, ಮೈಸೂರಲ್ಲಿ ಸಂತರ ಸಮಾಗಮ

Mysuru News: ಇಂದಿನಿಂದ ಸೋಸಲೆ ಶ್ರೀ ವ್ಯಾಸರಾಜ ಮಠದ ಸುಧಾಮಂಗಳ ಮಹೋತ್ಸವ, ಮೈಸೂರಲ್ಲಿ ಸಂತರ ಸಮಾಗಮ

ಮೈಸೂರಿನ ಸೋಸಲೆ ವ್ಯಾಸರಾಜ ಮಠ(Sosle vyasaraj mut) ನ್ಯಾಯ ಸುಧಾಮಂಗಳ ಮಹೋತ್ಸವವನ್ನು ಎಂಟು ದಿನಗಳ ಕಾಲ ಹಮ್ಮಿಕೊಂಡಿದ್ದು, ಜೂನ್‌ 2ರ ಭಾನುವಾರ ಶುರುವಾಗಲಿದೆ. ಈ ಕುರಿತ ಮಾಹಿತಿ ಇಲ್ಲಿದೆ.

ಮೈಸೂರು ವ್ಯಾಸರಾಜ ಮಠದ ಸುಧಾಮಂಗಳದಲ್ಲಿ ಭಾಗಿಯಾಗಲಿರುವ ವಿವಿಧ ಮಠಾಧೀಶರು.
ಮೈಸೂರು ವ್ಯಾಸರಾಜ ಮಠದ ಸುಧಾಮಂಗಳದಲ್ಲಿ ಭಾಗಿಯಾಗಲಿರುವ ವಿವಿಧ ಮಠಾಧೀಶರು.

ಮೈಸೂರು: ಜಗದ್ಗುರು ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಸೋಸಲೆ ಶ್ರೀ ವ್ಯಾಸರಾಜ ಮಠ ಮತ್ತು ಶ್ರೀ ವ್ಯಾಸತೀರ್ಥ ವಿದ್ಯಾಪೀಠ ಹಮ್ಮಿಕೊಂಡಿರುವ ಶ್ರೀಮನ್ ನ್ಯಾಯ ಸುಧಾ ಮಂಗಳ ಮಹೋತ್ಸವ ಕಾರ್ಯಕ್ರಮ ಜೂನ್ 2 ರಿಂದ 9ರವರೆಗೆ ಮೈಸೂರಿನಲ್ಲಿ ವಿಜೃಂಭಣೆಯಿಂದ ನೆರವೇರಲಿದೆ. ಸೋಸಲೆ ಶ್ರೀ ವ್ಯಾಸರಾಜ ಮಠದ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ನಾಡಿನ ಹಲವು ಮಠಾಧೀಶರು, ಸಂತರು, ವಿವಿಧ ರಂಗದ ಗಣ್ಯರು ಭಾಗವಹಿಸಲಿರುವುದು ವಿಶೇಷ. ಇದೇ ಸಂದರ್ಭ ಸೋಸಲೆ ಶ್ರೀಗಳ ಸಹಸ್ರ ಚಂದ್ರದರ್ಶನ ಶಾಂತಿ ಮಹೋತ್ಸವವೂ ಸಂಪನ್ನಗೊಳ್ಳಲಿದೆ.

ಟ್ರೆಂಡಿಂಗ್​ ಸುದ್ದಿ

ಸುಧಾ ಪಂಡಿತ ಮನ್ನಣೆ ಪ್ರದಾನ

ಜೂನ್ 2ರಂದು ಸಂಜೆ 4ಕ್ಕೆ ಕೃಷ್ಣಮೂರ್ತಿಪುರಂನ ಶ್ರೀ ವ್ಯಾಸತೀರ್ಥ ವಿದ್ಯಾಪೀಠದಲ್ಲಿ ವ್ಯಾಸತ್ರಯ ಸಹಿತ ಶ್ರೀ ಜಯತೀರ್ಥ ವಿರಚಿತ ಮಹಾನ್ ಗ್ರಂಥ ಶ್ರೀ ನ್ಯಾಯಸುಧಾ ಗ್ರಂಥದ ಅಂತಿಮ ಹಂತದ ಪರೀಕ್ಷೆಗಳು ಆರಂಭವಾಗಲಿವೆ. ಮಂತ್ರಾಲಯ ಮಠದ ಶ್ರೀ ಸುಬುಧೇಂದ್ರ ತೀರ್ಥರು, ಮುಳಬಾಗಿಲು ಶ್ರೀಪಾದರಾಜರ ಮಠದ ಶ್ರೀ ಸುಜಯ ನಿಧಿ ತೀರ್ಥರು ಸಾನ್ನಿಧ್ಯ ವಹಿಸಲಿದ್ದಾರೆ. ಸೋಸಲೆ ಶ್ರೀಗಳಿಂದ 12 ವರ್ಷಗಳಿಂದ ಪಾಠ ಹೇಳಿಸಿಕೊಂಡ ಹಿರಿಯ ವಿದ್ಯಾರ್ಥಿಗಳಾದ ಸೌಮಿತ್ರಿ ಆಚಾರ್ಯ, ಸುಘೋಷ ಆಚಾರ್ಯ, ಪ್ರಣವ ಆಚಾರ್ಯ ಮತ್ತು ಹೊನ್ನಾಳಿ ಆಯಾಚಿತ ಶ್ರೀಶ ಆಚಾರ್ಯ ಅವರು ನ್ಯಾಯ ಸುಧಾ ಗ್ರಂಥಕ್ಕೆ ವ್ಯಾಖ್ಯಾನ, ಅರ್ಥ, ವಿವರ ನೀಡಲಿದ್ದಾರೆ. ವಿದ್ವತ್ ಸಭೆಯಲ್ಲಿ ವಿವಿಧ ಮಠಾಧೀಶರು, ಪಂಡಿತರು ಮತ್ತು ವೇದ ಪಾರಂಗತರು ಕೇಳುವ ಪ್ರಶ್ನೆಗೆ ಮೌಖಿಕ ಉತ್ತರ ನೀಡಿ ಪ್ರಶಂಸೆ ಗಳಿಸಲಿದ್ದಾರೆ. ಇವರಿಗೆ ಸಮಾರೋಪದಲ್ಲಿ ‘ಸುಧಾ ಮಂಗಳ ಮಾಡಿದ ಪಂಡಿತ’ ಎಂಬ ಮನ್ನಣೆ ನೀಡಿ, ಸನ್ಮಾನಪತ್ರ, ಗೌರವ ಸಂಭಾವನೆ ಸಹಿತ ಸನ್ಮಾನಿಸಲಾಗುತ್ತದೆ.

3ರಂದು ದಿನಪೂರ್ಣ ಸುಧಾ ಪರೀಕ್ಷೆ ನಡೆಯಲಿದೆ. ಸಂಜೆ 6ಕ್ಕೆ ವಿದ್ವಾನ್ ಸಮೀರಾಚಾರ್ಯರಿಂದ ದಾಸವಾಣಿ ಸಂಗೀತ ಕಚೇರಿ ನಡೆಯಲಿದೆ.

ಜೂನ್ 4 ಮತ್ತು 5 ರಂದು ಬೆಳಗಿನ ಅವಧಿಯಲ್ಲಿ ವಿವಿಧ ಪೀಠಾಧೀಶರಿಂದ ಸಂಸ್ಥಾನ ಪೂಜೆ, ಮಧ್ಯಾಹ್ನದ ಅವಧಿಯಲ್ಲಿ ವಿವಿಧ ವಿದ್ವಾಂಸರಿಂದ ಉಪನ್ಯಾಸವಿದೆ. ಸಂಜೆ ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥರಿಂದ ಅನುಗ್ರಹ ಸಂದೇಶವಿದೆ. 6ರಂದು ಬೆಳಗ್ಗೆ 6ಕ್ಕೆ ವಿವಿಧ ಮಠಾಧಿಪತಿಗಳು ಸಂಸ್ಥಾನ ಪೂಜೆ ನೆರವೇರಿಸಲಿದ್ದಾರೆ. ಕೃಷ್ಣಮೂರ್ತಿಪುರಂನ ವ್ಯಾಸತೀರ್ಥ ವಿದ್ಯಾಪೀಠದಲ್ಲಿ ದಿನಪೂರ್ಣ ನ್ಯಾಯಸುಧಾ ಪರೀಕ್ಷೆ ನಡೆಯಲಿದೆ.

ಭವ್ಯ ಶೋಭಾಯತ್ರೆ

ಜೂ. 7ರಂದು ಜೆಪಿ ನಗರದಲ್ಲಿರುವ ವಿಠಲ ಧಾಮ ಆವರಣದ ವ್ಯಾಸ ಮಂಟಪದಲ್ಲಿ ಬೆಳಗ್ಗೆ 9ರಿಂದ 12ರ ವರೆಗೆ ನ್ಯಾಯಸುಧಾ ಪರೀಕ್ಷೆ ನಡೆಯಲಿದೆ. ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥರು, ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥರು, ಮುಳಬಾಗಿಲು ಶ್ರೀ ಸುಜಯನಿಧಿ ತೀರ್ಥರು ಸಾನ್ನಿಧ್ಯ ವಹಿಸಲಿದ್ದಾರೆ. ಸಂಜೆ 4. 30ಕ್ಕೆ ನಾದಸ್ವರ, ವೇದಘೋಷ, ವಿವಿಧ ಕಲಾತಂಡಗಳ ಕಲಾ ಪ್ರದರ್ಶನದೊಂದಿಗೆ ಭವ್ಯ ಶೋಭಾಯತ್ರೆ ನೆರವೇರಲಿದೆ. ಅಕ್ಕಮಾದೇವಿ ರಸ್ತೆ ಟ್ರಾಫಿಕ್ ಸಿಗ್ನಲ್ನಿಂದ - ಜೆಪಿ ನಗರದ ವಿಠಲ ಧಾಮದವರೆಗೆ ಮೆರವಣಿಗೆ ನಡೆಯಲಿದೆ. ಸಂಜೆ 6ಕ್ಕೆ ರಜತ ಸಿಂಹಾಸನದಲ್ಲಿ ಶ್ರೀ ವ್ಯಾಸರಾಜ ಗುರುಸಾರ್ವಭೌಮರಿಗೆ ಸಾಂಪ್ರದಾಯಿಕ ದರ್ಬಾರ್ ಸಂಪನ್ನಗೊಳ್ಳಲಿದೆ. ವಿವಿಧ ಮಠಾಧೀಶರು ವ್ಯಾಸರಾಜರಿಗೆ ರತ್ನಾಭಿಷೇಕ ಸಮರ್ಪಣೆ ಮಾಡಲಿದ್ದಾರೆ. ನಿವೃತ್ತ ಮುಖ್ಯ ನ್ಯಾಯಮೂರ್ತಿ ಪಿ.ಎಸ್. ದಿನೇಶ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ರಾತ್ರಿ 8ಕ್ಕೆ ವಿದ್ವಾನ್ ಮೈಸೂರು ರಾಮಚಂದ್ರಾಚಾರ್ ಮತ್ತು ಸಂಗಡಿಗರಿಂದ ದಾಸವಾಣಿ ರಂಜಿಸಲಿದೆ.

ಶ್ರೀ ವೇದವ್ಯಾಸ ಪೂಜೆ - ವಾಕ್ಯಾರ್ಥ ಗೋಷ್ಠಿ

ಜೂ. 8ರಂದು ಬೆಳಗ್ಗೆ 6ಕ್ಕೆ ವಿಠಲ ಧಾಮ ಆವರಣದ ಯಜ್ಞ ವರಾಹ ಮಂಟಪದಲ್ಲಿ ಅರಣಿ ಮಥನ, ಗಣಹೋಮ, ನವಗ್ರಹ ಹೋಮ ಚಾಲನೆ ಪಡೆಯಲಿದೆ. ಬೆಳಗ್ಗೆ 9ಕ್ಕೆ ಸೋಸಲೆ ಶ್ರೀ ವಿದ್ಯಾಶ್ರೀಶರಿಂದ ಸುಧಾ ಅನುವಾದ, ಶ್ರೀ ವೇದವ್ಯಾಸ ಪೂಜೆ ನೆರವೇರಲಿದೆ.

ಭಂಡಾರಕೇರಿ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ, ಕುಕ್ಕೆ ಸುಬ್ರಹ್ಮಣ್ಯದ ಶ್ರೀ ವಿದ್ಯಾಪ್ರಸನ್ನ ತೀರ್ಥರು, ಭೀಮನಕಟ್ಟೆ ಶ್ರೀ ರಘುವರೇಂದ್ರ ತೀರ್ಥರು ಸೇರಿ ಹಲವು ಮಠಾಧೀಶರು ಸಮಾಗಮಗೊಳ್ಳಲಿದ್ದಾರೆ. ಮಧ್ಯಾಹ್ನ 3. 30 ರಿಂದ ವಾಕ್ಯಾರ್ಥ ಗೋಷ್ಠಿ ನಡೆಯಲಿದೆ. ಮಂತ್ರಾಲಯದ ವಿದ್ವಾನ್ ರಾಜ ಎಸ್. ಗಿರಿ ಆಚಾರ್ಯ ಅಧ್ಯಕ್ಷತೆ ವಹಿಸಲಿದ್ದಾರೆ.

8 ರಂದು ಸಂತರ ಸಮಾಗಮ

8ರಂದು ಸಂಜೆ ವಿಠಲ ಧಾಮದಲ್ಲಿ 5:30ಕ್ಕೆ ಭವ್ಯ ರಜತ ಸಿಂಹಾಸನದಲ್ಲಿ ಶ್ರೀ ವ್ಯಾಸರಾಜರಿಗೆ ಸಾಂಪ್ರದಾಯಿಕ ದರ್ಬಾರ್ ನಡೆಯಲಿದೆ. ನಂತರ ನಡೆಯುವ ಸಂತರ ಸಮಾಗಮದಲ್ಲಿ ಮಂತ್ರಾಲಯ ಶ್ರೀಗಳು, ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥರು, ಮುಳಬಾಗಿಲು ಶ್ರೀ ಸುಜಯನಿಧಿ ತೀರ್ಥರು, ಸೋದೆ ಶ್ರೀ ವಿಶ್ವವಲ್ಲಭ ತೀರ್ಥರು, ಬಾಳಗಾರು ಶ್ರೀ ರಾಮಪ್ರಿಯ ತೀರ್ಥರು,

ಭೀಮನ ಕಟ್ಟೆ ಶ್ರೀ ರಘು ವರೇಂದ್ರ ತೀರ್ಥರು, ಅದಮಾರು ಕಿರಿಯ ಶ್ರೀ ಈಶಪ್ರಿಯ ತೀರ್ಥರು ಸಾನ್ನಿಧ್ಯ ವಹಿಸಲಿದ್ದಾರೆ.

ಸುತ್ತೂರು ಶ್ರೀ ಶಿವರಾತ್ರಿ ದೇಶಕೇಂದ್ರ ಸ್ವಾಮೀಜಿ, ಪರಕಾಲ ಮಠದ ಬ್ರಹ್ಮತಂತ್ರ ಸ್ವತಂತ್ರ ಪರಕಾಲ ಸ್ವಾಮೀಜಿ, ಕಾಗಿನೆಲೆ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಅವಧೂತ ದತ್ತಪೀಠದ ಕಿರಿಯ ಶ್ರೀ ದತ್ತ ವಿಜಯಾನಂದ ತೀರ್ಥರು ಉಪಸ್ಥಿತರಿರಲಿದ್ದಾರೆ. ತಿರುಮಲ ತಿರುಪತಿ ದೇವಸ್ಥಾನಂ ಇಒ ಧರ್ಮಾ ರೆಡ್ಡಿ, ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ವಿ. ಶ್ರೀಶಾನಂದ, ನಿವೃತ್ತ ಐಎಎಸ್ ಅಧಿಕಾರಿ ಕೆ. ಜೈರಾಜ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ ಭಾಗವಹಿಸಲಿದ್ದಾರೆ.

9ರಂದು ಸೋಸಲೆ ಶ್ರೀ ಗಳ ದರ್ಬಾರ್

ಜೂ. 9ರಂದು ಬೆಳಗ್ಗೆ 6ಕ್ಕೆ ವಿಠಲ ಧಾಮದಲ್ಲಿ ವಿವಿಧ ಪೀಠಾಧೀಶರಿಂದ ಸಂಸ್ಥಾನ ಪೂಜೆ, 72 ಪ್ರತ್ಯೇಕ ಕುಂಡಗಳಲ್ಲಿ ತಂತ್ರ ಸಾರೋಕ್ತ ಮಂತ್ರಗಳಿಂದ ಹೋಮ, ಸಹಸ್ರ ಚಂದ್ರ ದರ್ಶನ ಶಾಂತಿ ಹೋಮದ ಪೂರ್ಣಾಹುತಿ ನೆರವೇರಲಿದೆ. ಸಂಜೆ 5 ನಾದಸ್ವರ, ವಿವಿಧ ವಾದ್ಯಗಳ ಮೇಳ, ವೇದಘೋಷ, ಭಜನೆ ಸಹಿತ ಶ್ರೀ ಸೋಸಲೆ ಶ್ರೀ ವಿದ್ಯಾಶ್ರೀಶ ತೀರ್ಥರಿಗೆ ದರ್ಬಾರ್ ನೆರವೇರಲಿದೆ. ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ವಿಜಯನಗರ ರಾಜವಂಶಸ್ಥ ಕೃಷ್ಣದೇವರಾಯ, ಶಾಸಕರಾದ ಶ್ರೀವತ್ಸ, ಜಿ.ಟಿ. ದೇವೇಗೌಡ, ಹರೀಶ ಗೌಡ, ರಾಜ್ಯ ವಸತಿ ಯೋಜನಾ ಅಧ್ಯಕ್ಷ ಯತೀಂದ್ರ ಸಿದ್ದರಾಮಯ್ಯ, ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಪ್ರಕಾಶ, ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಅಸಗೋಡು ಜಯಸಿಂಹ ಇತರರು ಭಾಗವಹಿಸಲಿದ್ದಾರೆ. ವಿವಿಧ ರಂಗದ ಗಣ್ಯರಿಗೆ ಪ್ರಶಸ್ತಿ ಪ್ರದಾನ ನೆರವೇರಲಿದೆ ಎಂದು ವ್ಯಾಸತೀರ್ಥ ವಿದ್ಯಾಪೀಠದ ಗೌರವ ಕಾರ್ಯದರ್ಶಿ ಡಾ. ಡಿ.ಪಿ. ಮಧುಸೂದನಾಚಾರ್ಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಟಿ20 ವರ್ಲ್ಡ್‌ಕಪ್ 2024

ವಿಭಾಗ