Mysuru News: ಬಿಸಿಲಬೇಗೆ ನಾಗರಹೊಳೆಯಿಂದ ಹೊರ ಬಂದು ತೋಟದ ಮನೆಯಲ್ಲಿ ಗಡದ್ದಾಗಿ ಮಲಗಿದ ಹುಲಿರಾಯ
ನಾಗರಹೊಳೆಯಿಂದ ಹೊರ ಬಂದ ಹುಲಿಯೊಂದು ತೋಟದ ಮನೆಯಲ್ಲಿ ಮಲಗಿದ್ದು. ಇದನ್ನು ಕಂಡ ಮಾಲೀಕರು ಹೌಹಾರಿ ಅರಣ್ಯ ಇಲಾಖೆಗೆಮಾಹಿತಿ ನೀಡಿದ್ದಾರೆ.
ಮೈಸೂರು: 12 ಗಂಟೆ ಮೊದಲಷ್ಟೇ ಒಂದು ಹುಲಿಯನ್ನು ಅದೇ ಪ್ರದೇಶದಿಂದ ಹಿಡಿದಿದ್ದರು. ಮೂರ್ನಾಲ್ಕು ದಿನಗಳ ಕಾಲ ಒಂದೇ ಪ್ರದೇಶದಲ್ಲಿ ಸುತ್ತಾಡುತ್ತಿದ್ದ ಹುಲಿಯನ್ನು ಬೆಂಗಳೂರಿನ ಬನ್ನೇರಘಟ್ಟ ರಾಷ್ಟ್ರೀಯ ಉದ್ಯಾವನದ ವನ್ಯಜೀವಿಗಳ ಪುನರ್ವಸತಿ ಕೇಂದ್ರದಲ್ಲಿ ಬಿಡಲಾಗಿತ್ತು. ಜನ ನಿಟ್ಟುಸಿರು ಬಿಟ್ಟಿದ್ದರು. ಆದರೆ ಮರು ದಿನವೇ ಮತ್ತೆ ಅಲ್ಲಿಯೇ ಹುಲಿ ಕಂಡರೆ ಹೇಗಿರಬೇಡ. ಅದು ತೋಟದ ಮನೆಯ ಆವರಣದಲ್ಲಿ ಗಡದ್ದಾಗಿ ನಿದ್ದೆ ಹೊಡೆಯುತ್ತಿದ್ದರೆ ಏನಿಸುವುದಿಲ್ಲ. ಬಿಸಿಲ ಬೇಗೆಯಿಂದ ಕಾಡಿನಿಂದ ಹೊರ ಬಂದ ಹುಲಿ ರಾಯ ಭಯ ಹುಟ್ಟಿಸಿದ್ದಾನೆ. ಹುಲಿ ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಈಗಾಗಲೇ ಪ್ರಯತ್ನ ಕೂಡ ನಡೆಸಿದ್ದಾರೆ.
ಇದು ನಡೆದಿರುವುದು ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲ್ಲೂಕಿನ ಮಳಲಿ ಗ್ರಾಮದಲ್ಲಿ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿ ಅಂಚಿನಲ್ಲಿ ಬರುವ ಈ ಗ್ರಾಮದಲ್ಲಿ ಭಾರೀ ಗಾತ್ರದ ಹುಲಿ ನಿದ್ದೆಗೆ ಜಾರಿದೆ. ಆನೆ ಸಹಕಾರದಿಂದ ಹುಲಿ ಸೆರೆ ಕಾಡಿಗೆ ಮರಳಿಸುವ ಇಲ್ಲವೇ ಹಿಡಿಯುವ ಚಟುವಟಿಕೆ ಇನ್ನಷ್ಟೇ ಆರಂಭವಾಗಬೇಕಾಗಿದೆ.
ಸ್ಥಳಕ್ಕೆ ಬಂದ ಸಿಬ್ಬಂದಿ
ಎಚ್‌ಡಿಕೋಟೆಯಿಂದ ಮಾನಂದವಾಡಿಗೆ ಹೋಗುವ ರಸ್ತೆಯಲ್ಲಿ ಮಳಲಿ ಗ್ರಾಮವಿದೆ. ಪಕ್ಕದಲ್ಲಿಯೇ ನಾಗರಹೊಳೆ ಅರಣ್ಯ ಹಾಗೂ ಕಬಿನಿ ಹಿನ್ನೀರು. ಹಲವಾರು ಖಾಸಗಿ ರೆಸಾರ್ಟ್‌ಗಳು. ತೋಟಗಳು ಇಲ್ಲಿವೆ. ಪಕ್ಕದಲ್ಲಿಯೇ ಹಿನ್ನೀರು ಇರುವ ಕಾರಣಕ್ಕೆ ಹಲವರ ತೋಟದಮನೆಗಳು ಇಲ್ಲಿವೆ. ಸೋಮವಾರ ಬೆಳಿಗ್ಗೆ ಗ್ರಾಮದ ಸುಬ್ರಹ್ಮಣ್ಯಸ್ವಾಮಿ ಎಂಬುವವರ ತೋಟದಲ್ಲಿ ಏನೋ ಶಬ್ದ ಬಂದಿದ್ದು ಕೇಳಿದೆ. ದೂರದಿಂದ ನೋಡಿದರೆ ಭಾರೀ ಗಾತ್ರದ ಹುಲಿ. ತೋಟದ ಹಸಿರು ವಾತಾವರಣದ ನಡುವೆ ಹುಲಿ ಇದ್ದುದನ್ನು ಮನೆಯವರು ಗಮನಿಸಿದ್ದಾರೆ. ಕೂಡಲೇ ಅರಣ್ಯ ಇಲಾಖೆಯವರಿಗೂ ಮಾಹಿತಿ ನೀಡಿದ್ದಾರೆ. ಹುಲಿ ಅಲ್ಲಿಯೇ ಮಲಗಿಕೊಂಡಿದೆ. ಸುಮಾರು ಮೂರ್ನಾಲ್ಕು ಗಂಟೆಯಾದರೂ ಹುಲಿ ಅಲ್ಲಿಯೇ ಗಡದ್ದಾಗಿ ನಿದ್ದೆ ಹೊಡೆದಿದೆ. ವಿಷಯ ತಿಳಿದು ಅಕ್ಕಪಕ್ಕದವರು ಹುಲಿ ನೋಡಲು ಆಗಮಿಸಿದರಾದರೂ ಅರಣ್ಯ ಇಲಾಖೆಯವರು ಅವಕಾಶ ಮಾಡಿಕೊಡಲಿಲ್ಲ.
ವಿಷಯ ತಿಳಿದು ಅಂತರಸಂತೆ ವಲಯ ಅರಣ್ಯಾಧಿಕಾರಿ ಭರತ್‌ಕುಮಾರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಹುಲಿ ಸ್ಥಿತಿ ಏನಿದೆ ಎನ್ನುವ ಮಾಹಿತಿಯನ್ನು ಮೊದಲು ಅಧಿಕಾರಿಗಳು ಹಾಗು ಸಿಬ್ಬಂದಿ ಪಡೆಯುತ್ತಿದ್ದಾರೆ. ಸಾಕಾನೆಗಳನ್ನು ತರಿಸಿ ಹುಲಿಯನ್ನು ಕಾಡಿಗೆ ಅಟ್ಟಬೇಕೋ ಅಥವಾ ಸೆರೆ ಹಿಡಿಯಬೇಕೋ ಎನ್ನುವ ಕುರಿತು ಚರ್ಚೆ ನಡೆಸಿದ್ದಾರೆ.
ಹೆಚ್ಚಿದ ಹುಲಿಗಳು
ಈ ಭಾಗದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿದೆ. ಬಿಸಿಲು ಇರುವ ಕಾರಣದಿಂದಲೂ ಹುಲಿಗಳು ಕಬಿನಿ ಹಿನ್ನೀರ ಪ್ರದೇಶಕ್ಕೆ ಬರುತ್ತಿವೆ.ಅಕ್ಕಪಕ್ಕದ ತೋಟ ಪ್ರದೇಶದಲ್ಲೂ ಸುತ್ತುತ್ತಿವೆ. ಈ ಹುಲಿಯೂ ಅದೇ ರೀತಿ ಕಾಡಿನಿಂದ ಹೊರ ಬಂದಿದೆ ಎನ್ನುವುದು ಅಧಿಕಾರಿಗಳ ವಿವರಣೆ.
ಸೆರೆ ಸಿಕ್ಕಿದ್ದ ಇನ್ನೊಂದು ಹುಲಿ
ಭಾನುವಾರ ಸಂಜೆಯಿನ್ನೂ ಭಾರೀ ಗಾತ್ರದ ಹುಲಿಯನ್ನು ಅರಣ್ಯ ಇಲಾಖೆಯವರು ಸೆರೆ ಹಿಡಿದಿದ್ದರು. ಕಬಿನಿ ಹಿನ್ನೀರಿನ ಸಮೀಪದ ಡಿಸ್ಕವರಿ ವಿಲೇಜ್ ರೆಸಾರ್ಟ್ ಪಕ್ಕದಲ್ಲಿ ಕಾಣಿಸಿಕೊಂಡ ಹುಲಿ ಮಳಲಿ, ಮಗ್ಗೆ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಸುತ್ತಿತ್ತು. ನಂತರ ಬೆಳ್ತೂರು ಬಳಿ ಕಾಣಿಸಿಕೊಂಡ ಗಂಡು ಹುಲಿಯನ್ನು ಸೆರೆ ಹಿಡಿಯಲಾಗಿತ್ತು. ಆದರೆ ಈ ಹುಲಿ ಯಾರ ಮೇಲೂ ದಾಳಿ ಮಾಡಿರಲಿಲ್ಲ.
ಅರಣ್ಯ ಇಲಾಖೆಯವರು ಅದನ್ನು ಬೆಂಗಳೂರಿನ ಬನ್ನೇರಘಟ್ಟಕ್ಕೆ ತಗೆದುಕೊಂಡು ಹೋಗಿದ್ಧಾರೆ. ಸುಮಾರು ಎಂಟು ವರ್ಷದ ಗಾಯಗೊಂಡ ಹುಲಿ ಅದಾಗಿತ್ತು. ದವಡೆ ಹಲ್ಲುಗಳೂ ಸವೆದಿದ್ದರಿಂದ ಕಾಡಿನಲ್ಲಿ ಇದು ಉಳಿಯುವುದಿಲ್ಲ ಎನ್ನುವ ಕಾರಣಕ್ಕೆ ಪುನರ್ ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಜನ ಕೂಡ ಹುಲಿ ಸ್ಥಳಾಂತರಿಸಿದ್ದನ್ನು ನೋಡಿದ್ಧಾರೆ.ಸತತ ಎರಡನೇ ದಿನ ಹುಲಿ ಕಾಣಿಸಿಕೊಂಡಿರುವುದು ಈ ಭಾಗದ ಜನರ ಆತಂಕಕ್ಕೆ ಕಾರಣವಾಗಿದೆ.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
(This copy first appeared in Hindustan Times Kannada website. To read more like this please logon to kannada.hindustantimes.com)