ಅಯೋಧ್ಯೆ ರಾಮ ಮಂದಿರದ ಬಾಲರಾಮ ಮೂರ್ತಿ ಜೊತೆಗೆ ಶಿಲ್ಪಿ ಮೈಸೂರಿನ ಅರುಣ್ ಯೋಗಿರಾಜ್ ಸಂಬಂಧವೇನು, ಇಲ್ಲಿದೆ ವಿವರಣೆ
Ram Lalla Idol and Arun yogiraj: ಅಯೋಧ್ಯೆ ರಾಮ ಮಂದಿರ ಬಾಲರಾಮ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ಸೋಮವಾರ (ಜ.22) ನಡೆಯಲಿದೆ. ಶಿಲ್ಪಿ ಅರುಣ್ ಯೋಗಿರಾಜ್ ಕಂಕಣ ಕಟ್ಟಿಕೊಂಡು ಈ ಕಾರ್ಯದಲ್ಲಿ ಭಾಗವಹಿಸಿದ್ದಾರೆ. ರಾಮಮಂದಿರಕ್ಕೆ ಬಾಲರಾಮ ವಿಗ್ರಹ ತಂದಾಗ ಅರುಣ್ ಯೋಗಿರಾಜ್ ಕಾಣಿಸಿಕೊಂಡಿದ್ದರು. ಅವರ ಮುಖದಲ್ಲಿ ಕಾಣುತ್ತಿದ್ದ ಭಾವ ಯಾವುದು, ಇಲ್ಲಿದೆ ವಿವರಣೆ.
ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಕ್ಷಣಗಣನೆ ಶುರುವಾಗಿದೆ. ಬಾಲರಾಮ ಪ್ರಾಣ ಪ್ರತಿಷ್ಠೆಗೆ ಪೂರ್ವಭಾವಿ ಧಾರ್ಮಿಕ ವಿಧಿವಿಧಾನ ಕಾರ್ಯಕ್ರಮ ಪ್ರಗತಿಯಲ್ಲಿದೆ. ಈ ನಡುವೆ, ಬಾಲರಾಮ ಮೂರ್ತಿಯನ್ನು ಮಂದಿರದೊಳಗೆ ಕರೆತಂದ ಸಂದರ್ಭದಲ್ಲಿ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಜೊತೆಗೆ ಕಾಣಿಸಿಕೊಂಡಿದ್ದರು.
ಆ ಸಂದರ್ಭದಲ್ಲಿ ಕಂಕಣ ಧಾರಿಯಾಗಿದ್ದ ಶಿಲ್ಪಿ ಅರುಣ್ ಯೋಗಿರಾಜ್ ಅವರ ಭಾವ ಗಮನಸೆಳೆದಿತ್ತು. ಬಾಲರಾಮನ ಜೊತೆಗೆ ಶಿಲ್ಪಿ ಅರುಣ್ ಯೋಗಿರಾಜ್ ಅವರ ಸಂಬಂಧದ ವಿಚಾರವೂ ಚರ್ಚೆಗೆ ಒಳಗಾಗಿತ್ತು. ಮಾಧ್ಯಮಗಳಿಗೆ ನೀಡಿದ ಸಂದರ್ಶನಗಳಲ್ಲಿ ಅರುಣ್ ಯೋಗಿರಾಜ್ ಇದಕ್ಕೆ ಸಂಬಂಧಿಸಿದ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಶಿಲೆಯೊಂದಿಗೆ ನನ್ನ ಒಡನಾಟ, ಇದು ಶ್ರೀರಾಮನ ಆಶೀರ್ವಾದ; ಅರುಣ್ ಯೋಗಿರಾಜ್
“ನನ್ನದೇನಿದ್ದರೂ ಶಿಲೆಯೊಂದಿಗೆ ಒಡನಾಟವಿದ್ದು, ಅದೇ ಕೆಲಸವನ್ನು ಮುಂದುವರಿಸುವೆ. ರಾಷ್ಟ್ರೀಯ ಪ್ರಾಮುಖ್ಯದ ಕೆಲಸಗಳಿಗೆ ಪ್ರಾಧಾನ್ಯ ನೀಡುವೆ. ಕಳೆದ ಆರೇಳು ತಿಂಗಳು ಅಯೋಧ್ಯೆಯಲ್ಲೇ ಇದ್ದು, ಕೆಲಸ ಮಾಡುತ್ತಿದ್ದೇನೆ. ಇದು ಒಂದು ರೀತಿಯ ತಪಸ್ಸು. ನನ್ನದು ಶಿಲ್ಪಿಯ ಪಾತ್ರ. ರಾಮದೇವರು ಎಂಥವರು ಎಂದರೆ ಬಡವರ ಹೊಲದಲ್ಲಿ ಬಂಡೆಯ ರೂಪದಲ್ಲಿದ್ದರು. ಈಗ ನನ್ನ ಕೆಲಸದ ಮೂಲಕ ಬಾಲರಾಮನ ಮೂರ್ತಿಯಲ್ಲಿ ವ್ಯಕ್ತವಾಗಿದ್ದಾರೆ” ಎಂದು ಸುವರ್ಣ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ.
ಆರಂಭದಲ್ಲಿ ಇಲ್ಲಿ ಕೆಲಸಕ್ಕೆ ಬಂದಾಗ, ನನ್ನ ಅಗತ್ಯಗಳನ್ನು ಟ್ರಸ್ಟ್‌ಗೆ ಮನವರಿಕೆ ಮಾಡಿಕೊಟ್ಟಿದ್ದೆ. ಮಂದಿರದ ಈಶಾನ್ಯ ಮೂಲೆಯಲ್ಲಿ ಒಂದು ಮೂರ್ತಿ ಕೆತ್ತನೆಗೆ ಬೇಕಾದ ಚಿಕ್ಕ ಶೆಡ್ ಮಾಡಿ, ಸರಯೂ ನದಿಯ ಮರಳು ಹಾಕಿದ ನೆಲದ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡಿದ್ದೆ. ಅದರಂತೆ ವ್ಯವಸ್ಥೆ ಮಾಡಿದ್ದರು. ಅದರ ಮೇಲೆ ಕಲ್ಲು ಇಟ್ಟು ಕೆತ್ತನೆ ಶುರುಮಾಡಿದೆ. ಸಾತ್ತ್ವಿಕ ಆಹಾರ ಸೇವನೆ ಮಾಡುತ್ತ, ಶಾಂತ ಮನಸ್ಥಿತಿಯಲ್ಲಿ ಮೂರ್ತಿ ಕೆತ್ತನೆ ಮಾಡಲಾಗಿದೆ. ರಾಮಲಲಾನನ್ನು, ಬಾಲರಾಮನನ್ನು ಹುಡುಕುತ್ತಿದ್ದೆ. ನಮ್ಮ ಕೆಲಸದ ಮೂಲಕ ಜಗತ್ತಿಗೆ ದರ್ಶನ ಕೊಟ್ಟಿದ್ದಾರೆ. ಶಿಲ್ಪಿಯ ಪಾತ್ರವನ್ನಷ್ಟೇ ನಿರ್ವಹಿಸಿದ್ದೇನೆ.
ಈ ಶೆಡ್‌ನಿಂದ ಬಾಲರಾಮ ಹೊರಟಾಗ ಮನಸ್ಸು ತುಂಬಾ ಭಾರವಾಗಿತ್ತು. ನಮ್ಮ ಮನೆಯ ಸದಸ್ಯನೊಬ್ಬ ಹೋದ ಅನುಭವ ನನಗಷ್ಟೇ ಅಲ್ಲ. ನಾಲ್ಕು ದಿನ ಹಿಂದೆ ಬಂದ ಪುಟ್ಟ ಬಾಲಕನೊಬ್ಬ ಆತನ ಅಪ್ಪನ ಬಳಿ, "ಬಾಲರಾಮ ಇಲ್ಲಿ ಇಲ್ದೇ ಯಾಕೋ ಏನೋ ಬಿಕೋ ಎನ್ನುತ್ತಿದೆ" ಸನ್ನಿವೇಶವನ್ನು ಅರುಣ್ ಯೋಗಿರಾಜ್ ವಿವರಿಸಿದ್ದಾರೆ.
ಶಿಲ್ಪ ಹಾಗೂ ಶಿಲ್ಪಿಯ ಸಂಬಂಧವನ್ನು ವಿವರಿಸಿದ್ದಾರೆ ಶಿಲ್ಪಿ ಎಸ್ ಪಿ ಜಯಣ್ಣಾಚಾರ್
ಕರ್ನಾಟಕ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಚಿಕ್ಕಮಗಳೂರಿನ ಶಿಲ್ಪಿ ಎಸ್ ಪಿ ಜಯಣ್ಣಾಚಾರ್, ಶಿಲ್ಪ ಹಾಗೂ ಶಿಲ್ಪಿಯ ಸಂಬಂಧವನ್ನು ವಿವರಿಸಿದ ವಿಡಿಯೋ ಫೇಸ್‌ಬುಕ್‌ನಲ್ಲಿ ಮೂರು ವರ್ಷ ಹಿಂದೆ ವಿಶ್ವಕರ್ಮ ಆಚಾರ್ಯ ಶೇರ್ ಮಾಡಿದ್ದಾರೆ.
"ಶಿಲ್ಪಿಗೆ ಸ್ವಾತಂತ್ರ್ಯ ಇಲ್ಲ. ಅವನು ಕಲೆಗಾರಿಕೆಯನ್ನು ಮಾಡಬಹುದು. ಚಾಣಕ್ಷತೆಯನ್ನು ಕೆಲಸದಲ್ಲಿ ತೋರಿಸಬಹುದೇ ವಿನಾ ವಿಗ್ರಹವನ್ನು ಹೀಗೇ ಇರಬೇಕು ಎಂಬುದಕ್ಕೆ ನಿಬಂಧನೆಗಳಿವೆ. ಶಾಸ್ತ್ರವಿದೆ. ಒಂದು ವಿಗ್ರಹದ ಪ್ರಮಾಣಗಳು ಹೇಗಿರಬೇಕು ಎಂಬುದಕ್ಕೆ, ಇಂತಿಂತಹ ವಿಗ್ರಹಗಳನ್ನು ಹೇಗೆ ಮಾಡಬೇಕು ಎಂಬುದಕ್ಕೆ ನಿರ್ದಿಷ್ಟ ತಾಳಮಾನಗಳಿವೆ. ಪ್ರತಿಯೊಂದಕ್ಕೂ ಒಂದೊಂದು ಧ್ಯಾನ ಶ್ಲೋಕಗಳು ಅಂತ ಇರುತ್ತವೆ. ಯಾವ ವಿಗ್ರಹಗಳು ಯಾವ ರೀತಿ ಇರಬೇಕು. ಏನು ಆಯುಧಗಳನ್ನು ಕೈಗಳಿಗೆ ಕೊಡಬೇಕು, ಏನು ಲಕ್ಷಣಗಳಿರಬೇಕು ಎಂಬ ವಿವರಣೆಯೂ ಇರುತ್ತದೆ. ಶಿಲ್ಪಿಯಾದವನು ಇದನ್ನೆಲ್ಲವನ್ನೂ ತಿಳಿದುಕೊಳ್ಳಬೇಕಾಗುತ್ತದೆ.
ಇದೆಲ್ಲ ಮಾಡಿದ ಮೇಲೆ, ವಿಗ್ರಹ ಮಾಡುವುದಷ್ಟೇ ಕೆಲಸವಲ್ಲ. ಆ ವಿಗ್ರಹ ಪರಿಪೂರ್ಣವಾದ ಕೂಡಲೇ ಶಿಲ್ಪಿಯ ಕೆಲಸ ಮುಗಿಯುವುದಿಲ್ಲ. ಶಿಲ್ಪಿಯ ಸ್ಥಾನ ಮಾತೃ ಸ್ಥಾನವಾಗಿರುತ್ತದೆ. ಶಿಲ್ಪಿ ಮಾತಾ ಶಲಾ ಪುತ್ರಃ ದಾಸತ್ವಂ ಸರ್ವಪೂಜಕಃ ಎಂದು ಶಿಲ್ಪ ಶಾಸ್ತ್ರಗಳು ಹೇಳುತ್ತವೆ.
ಪೂರ್ವಂ ಶಿಲ್ಪಿ ಪ್ರತಿಷ್ಠಾಭ್ಯಾಂ, ದ್ವಿತೀಯಂ ಬ್ರಾಹ್ಮಣೇ ಕೃತಃ, ಅನ್ಯತಾ ಕೀರ್ತಿ ತಂ, ತತ್‌ರೂಪಂ ನಿರ್ಜೀವಂ ತಥಾ ಎಂದು ಶಾಸ್ತ್ರಗಳು ಹೇಳುತ್ತವೆ.
ಶಿಲ್ಪ ಶಾಸ್ತ್ರದಲ್ಲಿ ಶಿಲ್ಪಿಗಳಿಗೆ ಸಾಕಷ್ಟು ನಿಬಂಧನೆಗಳಿವೆ. ಅನೇಕ ಕರ್ತವ್ಯಗಳನ್ನು ಹೇಳಿದೆ. ಕೇವಲ ವಿಗ್ರಹಗಳನ್ನು ಕೆತ್ತುವುದಷ್ಟೇ ಅಲ್ಲ, ಮಾತೃ ಸ್ಥಾನದಲ್ಲಿರುವ ಶಿಲ್ಪಿಯ ಆ ಪ್ರತಿಮೆಯನ್ನು ಪ್ರತಿಷ್ಠೆ ಮಾಡಿ, ತಾನು ಪ್ರಥಮ ಪೂಜೆ ಸಲ್ಲಿಸಿ ತನ್ನಿಂದ ಆಗಿರಬಹುದಾದ ತಪ್ಪುಗಳಿಗೆ, ಆ ಪ್ರತಿಮೆಯಲ್ಲಿ ನೆಲೆಸುವಂತಹ ದೇವರಲ್ಲಿ ಕ್ಷಮೆಯನ್ನು ಕೇಳಿಕೊಳ್ಳಬೇಕು. ನೀನು ಈ ಪ್ರತಿಮೆಯಲ್ಲಿ ಬಂದು ನೆಲೆಸು ಎಂದು ಪ್ರಾರ್ಥಿಸಬೇಕು." ಎಂದು ಶಿಲ್ಪಿ ಎಸ್ ಪಿ ಜಯಣ್ಣಾಚಾರ್ ವಿವರಿಸಿದ್ದಾರೆ.
----------------------------