Mysuru Crime: ನಿಶ್ಚಿತಾರ್ಥದ ಬಳಿಕ 25 ಲಕ್ಷ ರೂ ಪಡೆದು ವಂಚಿಸಿದ ಯುವತಿ ಮನೆಯವರು; ಹುಣಸೂರಿನ 30 ವರ್ಷದ ಯುವಕನಿಂದ ದೂರು ದಾಖಲು
Mysuru Crime: ನಿಶ್ಚಿತಾರ್ಥದ ಬಳಿಕ 25 ಲಕ್ಷ ರೂ ಪಡೆದು ವಂಚಿಸಿದ ಯುವತಿ ಮನೆಯವರ ವಿರುದ್ಧ ಹುಣಸೂರಿನ 30 ವರ್ಷದ ಯುವಕ ದೂರು ದಾಖಲಿಸಿದ್ದಾನೆ. ಇದಕ್ಕೂ ಮೊದಲು ಯುವತಿ ಮತ್ತುಮನೆಯವರು 850ಕ್ಕೂ ಹೆಚ್ಚು ಅಡಕೆ ಗಿಡ ನಾಶಮಾಡಿದ್ದಾಗಿ ಯುವಕನ ವಿರುದ್ಧ ದೂರು ದಾಖಲಿಸಿದ್ದರು. ಈ ಕೇಸ್‌ನಲ್ಲಿ ಬಂಧನದ ಬಳಿಕ ಜಾಮೀನು ಪಡೆದು ಹೊರ ಬಂದ ಯುವಕ ಪ್ರತಿದೂರು ದಾಖಲಿಸಿದ್ದಾನೆ.
ಮೈಸೂರು: ನಿಶ್ಚಿತಾರ್ಥವಾದ ನಂತರ, ಒಂದು ವರ್ಷದ ಬಳಿಕ ಮದುವೆ ಎನ್ನುತ್ತ ನಾನಾ ಆರ್ಥಿಕ ಸಂಕಷ್ಟದ ಹೆಸರಲ್ಲಿ 25 ಲಕ್ಷ ರೂಪಾಯಿ ಪಡೆದು ಯುವತಿ ಮತ್ತು ಆಕೆಯ ಮನೆಯವರು ವಂಚಿಸಿದರು ಎಂದು ಹುಣಸೂರಿನ 30 ವರ್ಷದ ಯುವಕ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದಕ್ಕೂ ಮೊದಲು, 2023ರ ಆಗಸ್ಟ್ 10 ರಂದು ಇದೇ ಯುವತಿ ಮತ್ತು ಆಕೆಯ ಕುಟುಂಬ ಅಶೋಕ್ ವಿರುದ್ಧ 850ಕ್ಕೂ ಹೆಚ್ಚು ಅಡಕೆ ಸಸಿ ಕಡಿದು ಹಾಳುಮಾಡಿದ ಆರೋಪದ ಮೇಲೆ ಕೇಸ್ ದಾಖಲಿಸಿದ್ದರು.
ಹುಣಸೂರು ತಾಲೂಕು ಕಡೆಮನುಗನಹಳ್ಳಿಯ ಅಶೋಕ್ (30) ವಂಚನೆಗೆ ಒಳಗಾದ ಯುವಕ. ಅಶೋಕ್ ಬಿಜಿನೆಸ್ ಕರೆಸ್ಪಾಂಡಿಂಗ್ಸ್ ಮತ್ತು ವ್ಯವಸಾಯ ಮಾಡಿಕೊಂಡಿದ್ದಾರೆ. ಆತನ ತಂದೆ ತಾಯಿ ಕಡೆಮನುಗನಹಳ್ಳಿ ಗ್ರಾಮದಲ್ಲಿ ಒಟ್ಟಿಗೆ ವಾಸವಿದ್ದಾರೆ.
ವಂಚನೆಯೆಸಗಿದ ಯುವತಿ ಸಿಂಚನಾ, ಆಕೆಯ ತಂದೆ ವೆಂಕಟೇಶ್ ಮತ್ತು ತಾಯಿ ಲಕ್ಷ್ಮಿ ಎಂದು ಅಶೋಕ್ ದೂರಿನಲ್ಲಿ ಆರೋಪಿಸಿದ್ದಾರೆ. 2022ರ ಜನವರಿ ತಿಂಗಳಲ್ಲಿ ಸಿಂಚನಾ ಮನೆಗೆ ಹೋಗಿದ್ದ ಅಶೋಕ್ ಮತ್ತು ಅವರ ಪಾಲಕರು ಅಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆಗ, ಸಿಂಚನಾ ತನಗೆ ಇನ್ನೂ ಒಂದು ವರ್ಷ ಕಲಿಕೆ ಬಾಕಿ ಇದ್ದು, ಅದಾದ ಬಳಿಕ ಮದುವೆಯಾಗೋಣ ಎಂಬ ಷರತ್ತು ವಿಧಿಸಿದ್ದಳು. ಇದಕ್ಕೆ ಒಪ್ಪಿದ ಅಶೋಕ್ ಮತ್ತು ಮನೆಯವರು ನಿಶ್ಚಿತಾರ್ಥ ಮುಗಿಸಿ ಹಿಂದಿರುಗಿದ್ದರು.
ನಂತರ ಅಶೋಕ್ ಮತ್ತು ಸಿಂಚನಾ ನಿರಂತರ ಸಂಪರ್ಕದಲ್ಲಿದ್ದು, ಸಿಂಚನಾ ತನ್ನ ಮನೆಯ ವಿಚಾರಗಳನ್ನು ಅಶೋಕ್ ಜೊತೆಗೆ ಹಂಚಿಕೊಂಡಿದ್ದು ಹಣಕಾಸಿನ ಸಂಕಷ್ಟಗಳನ್ನೂ ಹೇಳಿ ಪರಿಹರಿಸುವಂತೆ ಕೋರಿದ್ದಳು. ಸಿಂಚನಾ ತಂದೆ ಮತ್ತು ತಾಯಿ ಕೂಡ ಸಂಕಷ್ಟಗಳನ್ನು ತೋಡಿಕೊಂಡಿದ್ದರು.
ಶುಂಠಿ ಬೆಳೆ, 8 ಎಕರೆ ಜಮೀನಲ್ಲಿ ಮುಸುಕಿನ ಜೋಳ, ಅಡಕೆ ಬೆಳೆಯಲು 15 ಲಕ್ಷ ರೂಪಾಯಿ ಖರ್ಚಾಗಿದೆ. ಎಲ್ಲವೂ ಸಾಲ ಮಾಡಿದ್ದು ಅದನ್ನು ತೀರಿಸಲು ದುಡ್ಡುಬೇಕು ಎಂದು ಸಿಂಚನಾ ತಂದೆ ವೆಂಟಕೇಶ್ 15 ಲಕ್ಷ ರೂಪಾಯಿ ಪಡೆದಿದ್ದರು. ಜಮೀನು ಮಾರಾಟ ಮಾಡಿ ಹಣ ಹಿಂದಿರುಗಿಸುವುದಾಗಿ ಭರವಸೆ ನೀಡಿದ್ದರು. ಇದೇ ವೇಳೆ ಸಿಂಚನಾ ತಾಯಿ ಲಕ್ಷ್ಮಿ ಕೂಡ 8 ಲಕ್ಷ ರೂಪಾಯಿ ಪಡೆದಿದ್ದರು. ಸಿಂಚನಾ 2 ಲಕ್ಷ ರೂಪಾಯಿ ಪಡೆದಿದ್ದಳು. ಹೀಗೆ ಒಟ್ಟು 25 ಲಕ್ಷ ರೂಪಾಯಿ ಹಣ ಪಡೆದು, ವಾಪಸ್ ಕೊಟ್ಟಿಲ್ಲ. ಸಿಂಚನಾಳನ್ನು ಮದುವೆ ಕೂಡ ಮಾಡಿಕೊಟ್ಟಿಲ್ಲ ಎಂದು ಯುವಕ ಅಶೋಕ್ ದೂರಿನಲ್ಲಿ ತಿಳಿಸಿದ್ದಾರೆ.
850ಕ್ಕೂ ಹೆಚ್ಚು ಅಡಕೆ ಗಿಡ ಕತ್ತರಿಸಿದ ಆರೋಪದ ಮೇಲೆ ಜೈಲಿಗೆ ಹೋಗಿದ್ದ ಅಶೋಕ್
ಸಿಂಚನಾ ಮತ್ತು ಕುಟುಂಬ ಅಶೋಕ್ ವಿರುದ್ಧ 2023ರ ಆಗಸ್ಟ್‌ನಲ್ಲಿ 850ಕ್ಕೂ ಹೆಚ್ಚು ಅಡಕೆ ಗಿಡ ಕತ್ತರಿಸಿ ಹಾಳು ಮಾಡಿದ ಆರೋಪ ಹೊರಿಸಿ ಕೇಸ್ ದಾಖಲಿಸಿದ್ದರು. ಈ ಕೇಸ್‌ನಲ್ಲಿ ಪೊಲೀಸರು ಅಶೋಕ್‌ನನ್ನು ಬಂಧಿಸಿದ್ದರು.
ಇದನ್ನೂ ಓದಿ| ಗರ್ಭಕೋಶದ ಕ್ಯಾನ್ಸರ್ನಿಂದ ಮಾದಕ ನಟಿ ಪೂನಂ ಪಾಂಡೆ ನಿಧನ
ಅಶೋಕ್ ಕೊಟ್ಟ 25 ಲಕ್ಷ ರೂಪಾಯಿ ಹಿಂದಿರುಗಿಸುವಂತೆ ಕೇಳಿದ ಬಳಿಕ, ಸಿಂಚನಾ ಮತ್ತು ಆಕೆಯ ಕುಟುಂಬ ಈ ಕೇಸ್ ದಾಖಲಿಸಿತ್ತು. ಜೈಲಿನಿಂದ ಹೊರಬಂದ ಅಶೋಕ್, ಯುವತಿ ಸಿಂಚನಾ ಮತ್ತು ಆಕೆಯ ಪಾಲಕರ ವಂಚನೆಯನ್ನು ಬಹಿರಂಗಗೊಳಿಸುವುದಕ್ಕೆ ಮುಂದಾದ. ತಾನು ಹಣ ನೀಡಿದ್ದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒಟ್ಟುಗೂಡಿಸಿದ್ದಲ್ಲದೆ, ಸಿಂಚನಾ ಮತ್ತು ಆಕೆಯ ತಂದೆ, ತಾಯಿ ವಿರುದ್ಧ ವಂಚನೆ ಕೇಸ್ ದಾಖಲಿಸಿದ್ದಾರೆ.
ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕೇಸ್ ದಾಖಲಾಗಿದ್ದು, ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ಶುರುಮಾಡಿದ್ದಾರೆ.