ಪಿರಿಯಾಪಟ್ಟಣ: ಎಲ್‌ಐಸಿ ಹಣಕ್ಕಾಗಿ ತಂದೆಯನ್ನೇ ಕೊಂದ ಮಗ, ಅಪಘಾತದ ಕಥೆ ಕಟ್ಟಿದ, ಪೊಲೀಸ್ ವಿಚಾರಣೆ ವೇಳೆ ಸತ್ಯ ಬಯಲು
Piriyapatna Crime: ಮೈಸೂರು ಜಿಲ್ಲೆ ಪಿರಯಾಪಟ್ಟಣ ತಾಲೂಕು ಬೈಲುಕುಪ್ಪೆ ವ್ಯಾಪ್ತಿಯಲ್ಲಿ ಅಪಘಾತದಲ್ಲಿ ತಂದೆ ಮೃತಪಟ್ಟರು ಎನ್ನುತ್ತಿದ್ದ ಪುತ್ರ, ಪೊಲೀಸ್ ವಿಚಾರಣೆ ವೇಳೆ ಅಸಲಿ ಕಥೆ ಬಾಯ್ಬಿಟ್ಟಿದ್ದಾನೆ. ಅದರ ವಿವರ ಇಲ್ಲಿದೆ.
Periyapatna Crime: ಪಿರಿಯಾಪಟ್ಟಣದ ಬೈಲುಕುಪ್ಪೆ ಸಮೀಪ ಅಪ್ಪ ಅಪಘಾತದಲ್ಲಿ ಮೃತಪಟ್ಟರು ಎಂದು ಮಗ ಪೊಲೀಸ್ ದೂರು ದಾಖಲಿಸಿದ. ಪೊಲೀಸರು ವಿಚಾರಣೆ ನಡೆಸಿದ ವೇಳೆ ಅಪಘಾತದ ಕಥೆಯನ್ನು ಬಹಳ ಸುಂದರವಾಗಿ ನಿರೂಪಿದ್ದ. ಆದರೆ ವಿಚಾರಣೆ ತೀವ್ರಗೊಂಡ ಕೂಡಲೇ, ಅದು ಅಪಘಾತವಲ್ಲ ಎನ್ನುತ್ತ ಅಸಲಿ ಕಥೆಯನ್ನು ಪೊಲೀಸರಿಗೆ ಹೇಳಿದ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕೊಪ್ಪ ಗ್ರಾಮದ ಗೆರೋಸಿ ಕಾಲೋನಿಯ ಪಾಂಡು ಆರೋಪಿ. ಕೊಲೆಗೀಡಾದ ದುರ್ದೈವಿ ತಂದೆ ಅಣ್ಣಪ್ಪ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದಲ್ಲಿ ತಂದೆ ಮೃತಪಟ್ಟರು ಎನ್ನುತ್ತಿದ್ದ ಪುತ್ರ; ಪೊಲೀಸ್ ವಿಚಾರಣೆ ವೇಳೆ ಬಾಯ್ಬಿಟ್ಟ ಅಸಲಿ ಕಥೆ
ಪಿರಿಯಾಪಟ್ಟಣದ ಬೈಲುಕುಪ್ಪೆ ಬಳಿ ಬುಧವಾರ (ಡಿಸೆಂಬರ್ 25) ಅಣ್ಣಪ್ಪ ಅವರ ಕೊಲೆ ನಡೆದಿದೆ. ಅವರ ಪುತ್ರ ಪಾಂಡು ಈ ಕೊಲೆ ನಡೆಸಿದಾತ. ಪೊಲೀಸ್ ವಿಚಾರಣೆ ವೇಳೆ ಬಾಯ್ಬಿಟ್ಟ ಅಸಲಿ ಕಥೆ ಇದು. ತಂದೆ ಅಣ್ಣಪ್ಪನ ಹೆಸರಲ್ಲಿ ವಿಮೆ ಮಾಡಿಸಿದ್ದ ಪಾಂಡು, ಆ ಹಣ ಪಡೆಯುವುದಕ್ಕಾಗಿ ಕೊಲೆ ಮಾಡಿದ್ದ.
ಬೈಲ್‌ಕುಪ್ಪೆ ಟಿಬೆಟಿಯನ್ ಮೊದಲನೇ ಕ್ಯಾಂಪ್‌ನಲ್ಲಿ ನಿಮಗೆ ಕೆಲಸ ಇದೆ. ಹೋಗಿ ಎಂದು ಅಣ್ಣಪ್ಪ ಅವರನ್ನು ಪುತ್ರ ಪಾಂಡು ಕಳುಹಿಸಿದ್ದ. ಅಣ್ಣಪ್ಪ ಹೊರಟು ಹೋದ ಬಳಿಕ ಅವರನ್ನು ಹಿಂಬಾಲಿಸಿದ್ದ ಪಾಂಡು. ದಾರಿ ಮಧ್ಯೆ ನಿರ್ಜನ ಪ್ರದೇಶದಲ್ಲಿ ಅಣ್ಣಪ್ಪ ಅವರ ತಲೆಗೆ ದೊಣ್ಣೆಯಿಂದ ಬಲವಾಗಿ ಹೊಡೆದಿದ್ದಾನೆ. ತೀವ್ರಗಾಯಗೊಂಡ ಅಣ್ಣಪ್ಪ ಸ್ಥಳದಲ್ಲೇ ಬಿದ್ದು ಮೃತಪಟ್ಟಿದ್ದಾರೆ. ಇದಾದ ಬಳಿಕ ಆರೋಪಿ ಪಾಂಡು, ಶವವನ್ನು ಬಿಎಂ ರಸ್ತೆಯ ಮಂಚದೇವನಹಳ್ಳಿ ಸಮೀಪ ಬಿಸಾಡಿದ್ದಾನೆ. ಬಳಿಕ ಪೊಲೀಸ್ ಠಾಣೆಗೆ ಹೋಗಿ ತನ್ನ ತಂದೆಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಮೃತಪಟ್ಟಿದ್ಧಾರೆ ಎಂದು ದೂರು ದಾಖಲಿಸಿದ ಎಂದು ಪೊಲೀಸರು ತಿಳಿಸಿದ್ದಾರೆ.
ಅಪರಿಚಿತ ವಾಹನ ಡಿಕ್ಕಿ ವ್ಯಕ್ತಿ ಸಾವು; ದೂರು ದಾಖಲಿಸಿದ ಪೊಲೀಸರಿಂದ ತನಿಖೆ ಶುರು
ಪಾಂಡು ನೀಡಿದ ದೂರು ಸ್ವೀಕರಿಸಿದ ಬೈಲುಕುಪ್ಪೆ ಪೊಲೀಸರು, ಎಫ್‌ಐಆರ್ ದಾಖಲಿಸಿದರು. ಬಳಿಕ ಸಬ್‌ಇನ್‌ಸ್ಪೆಕ್ಟರ್ ಅಜಯ್ ಕುಮಾರ್ ಮತ್ತು ತಂಡ ತನಿಖೆ ನಡೆಸಿದಾಗ, ದೂರು ನೀಡಿದ ಪಾಂಡು ಬಗ್ಗೆ ಅನುಮಾನ ಮೂಡಿತು. ಆತನನ್ನು ಬಲವಾಗಿ ವಿಚಾರಣೆ ನಡೆಸಿದಾಗ ಅಸಲಿ ಕಥೆಯನ್ನು ಬಹಿರಂಗಪಡಿಸಿದ್ದಾನೆ. ತನ್ನ ತಂದೆ ಅಣ್ಣಪ್ಪ ಅವರ ಹೆಸರಲ್ಲಿ ಇನ್ಶೂರೆನ್ಸ್ ಮಾಡಿಸಿದ್ದೆ. ಅವರು ಮೃತಪಟ್ಟರೆ ಡಬ್ಬಲ್ ಹಣ ಸಿಗುತ್ತದೆ ಎಂಬ ಆಸೆಗೆ ಹೀಗೆ ಮಾಡಿದೆ ಎಂದು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಸಹೋದರ ಅಣ್ಣಪ್ಪ ಮೃತಪಟ್ಟ ಕಾರಣ ಅವರ ಅಣ್ಣ ಧರ್ಮ ಬಹಳ ದುಃಖಿತನಾಗಿದ್ದ. ಇದೇ ದುಃಖದಲ್ಲಿ ಧರ್ಮ ಆತ್ಮಹತ್ಯೆ ಮಾಡಿಕೊಂಡರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತ ಕೇಸ್ ಕೂಡ ದಾಖಲಾಗಿದ್ದು, ತನಿಖೆ ನಡೆದಿದೆ.
ಗಮನಿಸಿ: ಖಿನ್ನತೆ, ಆತ್ಮಹತ್ಯೆಯ ಆಲೋಚನೆಗಳು ಬಾಧಿಸುತ್ತಿದ್ದರೆ ನಿಮ್ಮ ಗೆಳತಿ / ಗೆಳೆಯರೊಂದಿಗೆ, ಹೆತ್ತವರೊಂದಿಗೆ, ಸಂಬಂಧಿಕರು, ಆಪ್ತರೊಂದಿಗೆ ಮುಕ್ತವಾಗಿ ಮಾತನಾಡಿ. ಪೊಲೀಸರ, ಆಪ್ತಸಮಾಲೋಚಕರ, ವೈದ್ಯರ ನೆರವು ಪಡೆಯಿರಿ. ಮಾನಸಿಕ ಆರೋಗ್ಯ ಕಾಪಾಡುವ ಕಡೆಗೆ ಗಮನಕೊಡಿ. ಕರ್ನಾಟಕದಲ್ಲಿ ಆರೋಗ್ಯ ಸಹಾಯವಾಣಿ 104, ವೃದ್ಧರ ಸಹಾಯವಾಣಿ 1090, ಮಕ್ಕಳ ಸಹಾಯವಾಣಿ 1098 ಮತ್ತು ಸ-ಮುದ್ರ ಸಹಾಯವಾಣಿ 98803 96331 ಮೂಲಕ ಟೆಲಿ ಕೌನ್ಸೆಲಿಂಗ್ ನೆರವು ಪಡೆದುಕೊಳ್ಳಿ. ಕೊನೇ ನಿರ್ಧಾರಕ್ಕೆ ಮೊದಲು ನಿಮ್ಮವರ ಬಗ್ಗೆ ಒಂದು ಕ್ಷಣ ಯೋಚಿಸಿ.