ಮೈಸೂರಿನಲ್ಲಿ ವ್ಯಕ್ತಿಯ ಬರ್ಬರ ಹತ್ಯೆ ಕೇಸ್: ಪೊಲೀಸರಿಗೆ ತಲೆನೋವಾದ ಕೊಲೆ ಪ್ರಕರಣ
ಮೈಸೂರು ತಾಲೂಕಿನ ಜಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ ಈಗ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಮೈಸೂರು : ಮೈಸೂರಿನಲ್ಲಿ ನಡೆದಿರುವ ವ್ಯಕ್ತಿಯ ಬರ್ಬರ ಹತ್ಯೆ ಕೇಸ್ ಈಗ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಮೈಸೂರು ತಾಲೂಕಿನ ಜಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೊಲೆ ನಡೆದಿದ್ದು, ಮೃತ ವ್ಯಕ್ತಿಯ ದೇಹದ ಭಾಗಗಳಿಗಾಗಿ ಹುಡುಕಾಟ ಮುಂದುವರಿದಿದೆ. ಜತೆಗೆ ಕೈ, ಕಾಲು, ತಲೆ, ರುಂಡ ಪ್ರತ್ಯೇಕಿಸಿ ಕತ್ತರಿಸಿ ಕೆರೆಗೆ ಎಸೆದಿರುವ ದುಷ್ಕರ್ಮಿಗಳಿಗಾಗಿ ಹುಡುಕಾಟ ಮುಂದುವರಿದಿದೆ.
ಜಯಪುರ ಠಾಣೆ ವ್ಯಾಪ್ತಿಯಲ್ಲಿ ಕೆರೆಯಲ್ಲಿ ಅಪರಿಚಿತ ವ್ಯಕ್ತಿಯ ದೇಹದ ಭಾಗಗಳು ಪತ್ತೆಯಾಗಿದ್ದವು. ಕೆರೆಯಲ್ಲಿ ತೇಲುತ್ತಿದ್ದ ಮನುಷ್ಯನ ದೇಹದ ಭಾಗಗಳನ್ನು ಕಂಡು ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದಾದ ನಂತರ ಕೆರೆಯಲ್ಲಿ ಈಜು ತಜ್ಞರಿಂದ ವ್ಯಕ್ತಿಯ ದೇಹದ ಭಾಗಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಮೈಸೂರು ತಾಲೂಕಿನ ಕೆ ಹೆಮ್ಮನಹಳ್ಳಿಯ ಚಿಕ್ಕೆರೆಯಲ್ಲಿ ಸುಮಾರು 30 ರಿಂದ 40 ವರ್ಷ ವಯಸ್ಸಿನ ವ್ಯಕ್ತಿಯ ದೇಹದ ಭಾಗಗಳು ಪತ್ತೆಯಾಗಿದ್ದವು. ಪುರುಷನ ತಲೆ, ಎಡಮುಂಗೈ, ಬಲ ಮೊಣಕಾಲು ಹಾಗೂ ಒಂದು ತೊಡೆಯ ಭಾಗ ಪತ್ತೆಯಾಗಿದ್ದವು. ಹೀಗಾಗಿ ಪ್ರಕರಣದ ಬಗ್ಗೆ ಹೆಚ್ಚಿನ ವಿಚಾರಣೆಗಾಗಿ ದೇಹದ ಉಳಿದ ಭಾಗಗಳನ್ನು ಹುಡುಕಲು ಪೊಲೀಸರು ಮುಂದಾಗಿದ್ದಾರೆ. ಕೊಲೆ ಮಾಡಿ ದೇಹದ ಭಾಗಗಳನ್ನು ತುಂಡು ತುಂಡಾಗಿ ಕತ್ತರಿಸಿ ಎಸೆದಿರುವುದರಿಂದ, ಇದುವರೆಗೂ ಮೃತ ವ್ಯಕ್ತಿಯ ಗುರುತು ಸಿಕ್ಕಿಲ್ಲ. ಹೀಗಾಗಿ ಪೊಲೀಸರಿಗೆ ಈ ಪ್ರಕರಣ ಕಗ್ಗಂಟಾಗಿ ಪರಿಣಮಿಸಿದೆ.