ಚಾಮರಾಜನಗರ ಜಿಲ್ಲೆಯ ಜನರ ಭೂಮಿಯ ಬಗ್ಗೆ ರಾಜಮಾತೆ ಇಂಥ ಕೋರಿಕೆ ಮಾಡಬಾರದಿತ್ತು: ಓದುಗರ ಪತ್ರ
ಕನ್ನಡ ಸುದ್ದಿ  /  ಕರ್ನಾಟಕ  /  ಚಾಮರಾಜನಗರ ಜಿಲ್ಲೆಯ ಜನರ ಭೂಮಿಯ ಬಗ್ಗೆ ರಾಜಮಾತೆ ಇಂಥ ಕೋರಿಕೆ ಮಾಡಬಾರದಿತ್ತು: ಓದುಗರ ಪತ್ರ

ಚಾಮರಾಜನಗರ ಜಿಲ್ಲೆಯ ಜನರ ಭೂಮಿಯ ಬಗ್ಗೆ ರಾಜಮಾತೆ ಇಂಥ ಕೋರಿಕೆ ಮಾಡಬಾರದಿತ್ತು: ಓದುಗರ ಪತ್ರ

ಚಾಮರಾಜನಗರ ಜಿಲ್ಲೆಯ ಜನರಿಗೆ ಚಾಮರಾಜ ಒಡೆಯರು ನೀಡಿದ್ದ ಭೂಮಿಯಯನ್ನು ಖಾತೆ ಮಾಡಿಕೊಡಬೇಕು ಎಂದು ರಾಜಮಾತೆ ಪ್ರಮೋದಾದೇವಿ ಅಲ್ಲಿನ ಜಿಲ್ಲಾಧಿಕಾರಿಗೆ ಬರೆದಿದ್ದ ಪತ್ರದ ಕುರಿತು ಹಿರಿಯ ಸಾಹಿತಿ, ಜಾನಪದ ವಿದ್ವಾಂಸ ಡಾ ಬಿ.ಎಸ್‌.ತಲ್ವಾಡಿ ಈ ಬರಹದಲ್ಲಿ ಪ್ರತಿಕ್ರಿಯಿಸಿದ್ದಾರೆ.

ಚಾಮರಾಜನಗರ ಜಿಲ್ಲೆಯ ಜನರ ಭೂಮಿಯ ಬಗ್ಗೆ ರಾಜಮಾತೆ ಇಂಥ ಕೋರಿಕೆ ಮಾಡಬಾರದಿತ್ತು ಎಂಬ ಅಸಮಾಧಾನ ಆಕ್ರೋಶ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ಚಾಮರಾಜನಗರ ಜಿಲ್ಲೆಯ ಜನರ ಭೂಮಿಯ ಬಗ್ಗೆ ರಾಜಮಾತೆ ಇಂಥ ಕೋರಿಕೆ ಮಾಡಬಾರದಿತ್ತು ಎಂಬ ಅಸಮಾಧಾನ ಆಕ್ರೋಶ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ನಾಲ್ಕೈದು ದಿನಗಳ ಹಿಂದೆ ಸುದ್ದಿ ಮಾಧ್ಯಮದಲ್ಲಿ ಮೈಸೂರು ರಾಜಮನೆತನದ ರಾಜಮಾತೆ ಶ್ರೀಮತಿ ಪ್ರಮೋದಾದೇವಿ ಚಾಮರಾಜನಗರದ ಜಿಲ್ಲಾಧಿಕಾರಿಗಳಿಗೆ ಬರೆದ ಒಂದು ವಿಚಿತ್ರ ಪತ್ರ ನನ್ನನ್ನು ಸಖೇದಾಶ್ಚರ್ಯವಾಗಿಸಿತು. ಪ್ರಸಕ್ತ ರಾಜಮಾತೆ ಪ್ರಮೋದಾದೇವಿ, ಶ್ರೀ ಚಾಮರಾಜ ಒಡೆಯರು (28-07-1774 ರಿಂದ 14-04-1796) ಚಾಮರಾಜನಗರ ಜಿಲ್ಲೆಗೆ ಒಂದೂವರೆ ಸಾವಿರ ಎಕರೆ ಭೂಮಿಯನ್ನು ದಾನವಾಗಿ ನೀಡಿದ್ದರು. ಅದರ ಹಕ್ಕುದಾರರಾದ ನಮಗೆ ಅಷ್ಟೂ ಭೂಮಿಯನ್ನು ವಾಪಸ್ಸು ಕೊಡಬೇಕೆಂದು ಹಕ್ಕು ಮಂಡಿಸಿದ್ದಾರೆ.

ಈ ಬೆರಗಿನ ವಾರ್ತೆಯು ಚಾಮರಾಜನಗರ ತಾಲ್ಲೂಕಿನ ಜನರನ್ನು ಭಯಭೀತರನ್ನಾಗಿಸಿದೆ. ಚಾಮರಾಜ ಒಡೆಯರು ಅಲ್ಲಿನ ದೀನ ದುರ್ಬಲರಿಗೆ, ದಲಿತರಿಗೆ, ತುಳಿಯಲ್ಪಟ್ಟವರಿಗೆ ಎಂದು ಉದಾರವಾಗಿ ದಾನ ಮಾಡಿದ್ದ ಭೂಮಿಯನ್ನು ಇಂದು ಶ್ರೀಮತಿ ಪ್ರಮೋದಾದೇವಿ ಹಿಂದಿರುಗಿಸುವಂತೆ ತಕರಾರು ಮಂಡಿಸಿರುವುದನ್ನು ಕೇಳಿದಾಗ ಚಾರಿತ್ರಿಕ ದೃಷ್ಟಿಯಿಲ್ಲದ ದೀನ-ದಲಿತರ ಮೇಲೆ ಪ್ರೀತಿ-ವಿಶ್ವಾಸವಿಲ್ಲದ ರಾಜಮಾತೆಯ ಬಗ್ಗೆ ಜಿಗುಪ್ಸೆ ಉಂಟಾಯಿತು.

ನಿಜ ಹೇಳಬೇಕೆಂದರೆ ಚಾಮರಾಜ ಒಡೆಯರು 28-02-1774 ರಂದು ಚಾಮರಾಜನಗರದಲ್ಲಿ ಜನಿಸಿದಾಗ ಚಾಮರಾಜನಗರಕ್ಕೆ ಹರಿಕೊಠಾರವೆಂಬ ಸುಂದರವಾದ ಹೆಸರಿತ್ತು. ಆ ಹೆಸರನ್ನು ಚಾಮರಾಜನಗರದ ಜನರು ತ್ಯಾಗ ಮಾಡಿ ರಾಜರ ಗೌರವಾರ್ಥ ಚಾಮರಾಜನಗರ ಎಂದು ಹೆಸರಿಡಲು ಒಪ್ಪಿಕೊಂಡರು. ಇದು ಚಾಮರಾಜನಗರದ ಜನರ ಔಚಾರ್ಯ. ತಮ್ಮ ಮೂಲ ಪಟ್ಟಣದ ಹೆಸರನ್ನೇ ರಾಜಮನೆತನದ ಸಲುವಾಗಿ ತ್ಯಾಗ ಮಾಡಿದ ಈ ಜನರ ರಾಜಪ್ರೀತಿಯ ಮುಂದೆ ಚಾಮರಾಜ ಒಡೆಯರು ಜಿಲ್ಲೆಗೆ ನೀಡಿದ ಉಂಬಳಿ, ದಾನ, ದತ್ತಿ ಏನೇನೂ ಅಲ್ಲ!

ಐದಾರು ತಲೆಮಾರುಗಳಿಂದ ಒಡೆಯರು ನೀಡಿದ ಜಾಗದಲ್ಲಿ ಇಂದು ದಲಿತರು ವಿಶೇಷವಾಗಿ ಬದುಕನ್ನು ಕಟ್ಟಿಕೊಂಡಿದ್ದಾರೆ. ಈ ಜಾಗವನ್ನು ರಾಜಮಾತೆ ಪ್ರಮೋದಾದೇವಿ ಮರಳಿ ಕೇಳುವುದರಿಂದ ಚಾಮರಾಜನಗರದ ಹತ್ತಾರು ಊರುಗಳ ದಲಿತರಿಗೆ, ದೀನರಿಗೆ, ದುರ್ಬಲರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಮೈಸೂರಿನ ಅರಮನೆಗೆ ದೀನ-ದಲಿತರ ಸೇವೆ ನಿಸ್ವಾರ್ಥದಿಂದ ಸಂದಿದೆ.

ಮೈಸೂರಿನ ಮೊದಲ ಅರಮನೆ ಬೆಂಕಿಗೆ ಆಹುತಿ ಆದಾಗ ಆ ಬೆಂಕಿಯನ್ನು ನಂದಿಸಿದವರು ಅಶೋಕಪುರದ ದಲಿತರು ಎಂಬುದನ್ನು ರಾಣಿ ಮರೆತಂತಿದೆ. ಸರ್ಕಾರ ಮತ್ತು ಸಂಸ್ಥಾನದ ನಡುವೆ ನಡೆಯುತ್ತಿರುವ ಆಸ್ತಿ ವಿಚಾರದ ಮನಸ್ತಾಪಕ್ಕೆ ದಲಿತರು ಬಡವಾಗಬೇಕಾದ ಹಾಸ್ಯಾಸ್ಪದ ನೈಜಸ್ಥಿತಿಯನ್ನು ರಾಜಮಾತೆ ಪ್ರಮೋದಾದೇವಿ ಇನ್ನಾದರೂ ತಿಳಿದುಕೊಂಡು ಚಾಮರಾಜನಗರ ಜಿಲ್ಲೆಗೆ ಸುಮಾರು ಎರಡು ಶತಮಾನಗಳ ಹಿಂದೆ ಚಾಮರಾಜ ಒಡೆಯರು ನೀಡಿದ ತಾಂಬೂಲಕ್ಕೆ ಕೈಯೊಡ್ಡುವ ಮೂಲಕ ರಾಜಮನೆತನದ ಗೌರವವನ್ನು ಮಣ್ಣು ಮಾಡಬಾರದು ಎಂದು ವಿನಯದಿಂದ ವಿಜ್ಞಾಪಿಸುತ್ತೇನೆ.

ಬರಹ: ಡಾ ಬಿ.ಎಸ್.ತಲ್ವಾಡಿ, ಚಾಮರಾಜನಗರ

(ಗಮನಿಸಿ: ಇಲ್ಲಿರುವುದು ಲೇಖಕರ ವೈಯಕ್ತಿಕ ಅಭಿಪ್ರಾಯ. 'ಎಚ್‌ಟಿ ಕನ್ನಡ' ಸಿಬ್ಬಂದಿ ಈ ಬರಹವನ್ನು ತಿದ್ದುಪಡಿ ಮಾಡಿಲ್ಲ. 'ಓದುಗರ ಪತ್ರ' ವಿಭಾಗಕ್ಕೆ ನೀವೂ ಪತ್ರ ಬರೆಯಬಹುದು, ಪ್ರತಿಕ್ರಿಯಿಸಬಹುದು. ಇಮೇಲ್: dm.ghanashyam@htdigital.in)

D M Ghanashyam

TwittereMail
ಡಿ.ಎಂ.ಘನಶ್ಯಾಮ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸಂಪಾದಕ. ಊರು ಸುತ್ತುವುದು, ಜನರ ಒಡನಾಟ, ಪುಸ್ತಕಗಳನ್ನು ಓದುವುದು ಇಷ್ಟ. ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ, ಪ್ರಜಾವಾಣಿ ದಿನಪತ್ರಿಕೆಗಳ ವಿವಿಧ ವಿಭಾಗಗಳು ಹಾಗೂ ಟಿವಿ9 ಜಾಲತಾಣದಲ್ಲಿ ಒಟ್ಟು 20 ವರ್ಷ ಕಾರ್ಯನಿರ್ವಹಿಸಿದ ಅನುಭವ. ಫೀಚರ್ ರೈಟಿಂಗ್ ಇಷ್ಟದ ಪ್ರಕಾರ. ಆರ್ಥಿಕ ವಿದ್ಯಮಾನ, ಕದನ ಕಥನ, ಅಧ್ಯಾತ್ಮ, ಗ್ರಾಮೀಣ ಅಭಿವೃದ್ಧಿ ಕುರಿತು ಆಸ್ಥೆಯಿಂದ ಬರೆಯುತ್ತಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಸ್ವಂತ ಊರು. ಸಮಾಜದಲ್ಲಿ ಒಳಿತಿನ ಕನಸು, ಆಕಾಂಕ್ಷೆ, ಮೌಲ್ಯ ಬಿತ್ತುವುದೇ ಪತ್ರಿಕೋದ್ಯಮದ ಮೂಲ ಉದ್ದೇಶ ಎಂದು ನಂಬಿದವರು. ಇಮೇಲ್: dm.ghanashyam@htdigital.in
Whats_app_banner