ಮೈಸೂರು: ಹೊಸ ವರ್ಷಕ್ಕೆ ತಂದಿದ್ದ ಕೇಕ್ ತಿಂದು 30ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ; ಹುಣಸೂರಿನ ಬೋಳನಹಳ್ಳಿಯ ಶಾಲೆಯಲ್ಲಿ ಘಟನೆ
ಕೇಕ್ ತಿಂದು 30ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾದ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಬೋಳನಹಳ್ಳಿ ಗ್ರಾಮದ ಶ್ರೀ ಮಂಜುನಾಥ ವಿದ್ಯಾಸಂಸ್ಥೆಯಲ್ಲಿ ನಡೆದಿದೆ.
ಮೈಸೂರು: ಹೊಸ ವರ್ಷಾಚರಣೆಯ ಹಳಸಲು ಕೇಕ್ ತಿಂದು 30ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾದ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಬೋಳನಹಳ್ಳಿ ಗ್ರಾಮದ ಶ್ರೀ ಮಂಜುನಾಥ ವಿದ್ಯಾಸಂಸ್ಥೆಯಲ್ಲಿ ನಡೆದಿದೆ. ಮಕ್ಕಳು ಅಸ್ವಸ್ಥರಾದ ಬೆನ್ನಲ್ಲೇ ಶಾಲೆಯ ಮುಖ್ಯ ಶಿಕ್ಷಕರಿಗೆ ಬಿಇಓ ಕ್ಲಾಸ್ ತೆಗೆದುಕೊಂಡಿದ್ದಾರೆ.
ಹೊಸ ವರ್ಷದ ಮೊದಲ ದಿನದಂದು ಕೇಕ್ ತರಲಾಗಿತ್ತು. ಕಟ್ ಮಾಡಿ ಉಳಿದಿದ್ದ ಕೇಕ್ ಅನ್ನು ಎರಡು ದಿನದ ಬಳಿಕ ಮಕ್ಕಳು ತಿಂದಿದ್ದಾರೆ ಎಂದು ಹೇಳಲಾಗಿದೆ. ಕೇಕ್ ಸೇವಿಸಿದ ನಂತರ ಮಕ್ಕಳಲ್ಲಿ ವಾಂತಿ-ಭೇದಿ ಕಾಣಿಸಿಕೊಂಡು ಅಸ್ವಸ್ಥರಾಗಿದ್ದಾರೆ. ಹೀಗಾಗಿ ಬೋಳನಹಳ್ಳಿಯ ಆಯುಷ್ಮಾನ್ ಆರೋಗ್ಯ ಕೇಂದ್ರಕ್ಕೆ ಮಕ್ಕಳನ್ನು ದಾಖಲಿಸಲಾಗಿದೆ.
ಆರೋಗ್ಯ ಕೇಂದ್ರದಲ್ಲಿ ಸೂಕ್ತ ಚಿಕಿತ್ಸೆ ನೀಡಿದ ನಂತರ ವಿದ್ಯಾರ್ಥಿಗಳು ಚೇತರಿಸಿಕೊಂಡಿದ್ದಾರೆ. ಕೇಕ್ ತಿಂದು ಅಸ್ವಸ್ಥರಾಗಿದ್ದ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಸುದ್ದಿ ತಿಳಿದ ನಂತರ ಆಸ್ಪತ್ರೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ್ ಭೇಟಿ ನೀಡಿ ಮಕ್ಕಳ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ.
ಮುಖ್ಯ ಶಿಕ್ಷಕರಿಗೆ ಕಾರಣ ಕೇಳಿ ನೋಟಿಸ್
ಮಕ್ಕಳ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಿದ ಶಾಲೆಯ ಮುಖ್ಯೋಪಾಧ್ಯಾಯ ಅಶ್ವತ್ಥ್ ಅವರನ್ನು ಬಿಇಓ ತರಾಟೆಗೆ ತೆಗೆದುಕೊಂಡಿದ್ದಾರೆ. ಮಕ್ಕಳ ಅಸ್ವಸ್ಥ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಮುಖ್ಯ ಶಿಕ್ಷಕರಿಗೆ ಶೋಕಾಸ್ ನೋಟಿಸ್ ನೀಡಲಾಗುವುದೆಂದು ಬಿಇಒ ಮಹದೇವ್ ತಿಳಿಸಿದ್ದಾರೆ.
ಘಟನೆ ಕುರಿತು ಮಾತನಾಡಿದ ಶಾಲೆಯ ವಿದ್ಯಾರ್ಥಿನಿಯೊಬ್ಬಳು, 8 ಮತ್ತು 9 ತರಗತಿ ಮಕ್ಕಳಿಗೆ ಮಾತ್ರ ಭೇದಿಯಾಗಿದೆ. ಹೊರಗಡೆಯ ಕೇಕ್ ತಿಂದು ವಾಂತಿ-ಭೇದಿಯಾಗಿದೆ. ಶಾಲೆಯಿಂದ ನಮ್ಮನ್ನು ಹೊರಗೆ ಹೋಗಲು ಬಿಟ್ಟಿಲ್ಲ. ತರಗತಿಯಲ್ಲೇ ಕಟ್ ಮಾಡಿ ತಿಂದಿದ್ದೇವೆ. ತಿಂದ ನಂತರ ಏನಾಯ್ತು ಗೊತ್ತಿಲ್ಲ ಎಂದು ಬಾಲಕಿ ಹೇಳಿದ್ದಾಳೆ.
ಕೇಕ್ ಸ್ಯಾಂಪಲ್ ಲ್ಯಾಬ್‌ಗೆ
ಭೇದಿಯಾಗಿದ್ದ 36 ಮಕ್ಕಳಲ್ಲಿ 6 ಮಕ್ಕಳು ತಕ್ಷಣವೇ ಚೇತರಿಸಿಕೊಂಡಿದ್ದಾರೆ. ಹೀಗಾಗಿ ಅವರನ್ನು ಮನೆಗೆ ಕಳುಹಿಸಲಾಗಿದೆ. ಉಳಿದ ಮಕ್ಕಳನ್ನು ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. ಚೇತರಿಸಿಕೊಂಡ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತಿದೆ.
ಕೇಕ್ ಸ್ಯಾಂಪಲ್ ಅನ್ನು ಲ್ಯಾಬ್‌ಗೆ ಕಳುಹಿಸಿ ವರದಿ ಬಂದ ನಂತರ ನಿಖರ ಕಾರಣ ತಿಳಿಯಲಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಮೈಸೂರಿನ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ