ಎಚ್‌ಡಿ ಕೋಟೆಯಲ್ಲಿ ಮುಂದುವರೆದ ಹುಲಿ ಸೆರೆ ಕಾರ್ಯಾಚರಣೆ; ಶಾಂತಿಪುರ-ಬೋಚಿಕಟ್ಟೆ ಗ್ರಾಮಗಳಲ್ಲಿ ಹೈ ಅಲರ್ಟ್
ಎಚ್‌ಡಿ ಕೋಟೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹುಲಿ ಇರುವಿಕೆ ಖಚಿತಗೊಂಡಿರುವ ಸಲುವಾಗಿ ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ. WAAS ಮೂಲಕ ತುರ್ತು ಸಂದೇಶಗಳನ್ನು ಕಳುಹಿಸಿ ಜನರನ್ನು ಎಚ್ಚರಿಸಲಾಗುತ್ತಿದೆ. ಶಾಂತಿಪುರ, ಬೋಚಿಕಟ್ಟೆ ಚಾಕಹಳ್ಳಿ ಗ್ರಾಮಗಳಲ್ಲಿ ಅರಣ್ಯ ಅಧಿಕಾರಿಗಳು ಹೈ ಅಲರ್ಟ್ ಆಗಿದ್ದಾರೆ.
ಎಚ್‌ಡಿ ಕೋಟೆ ತಾಲೂಕಿನ ಶಾಂತಿಪುರ, ಬೋಚಿಕಟ್ಟೆ ಚಾಕಹಳ್ಳಿ ಗ್ರಾಮಗಳಲ್ಲಿ ಹುಲಿ ಕಾಣಿಸಿಕೊಂಡಿರುವ ಬೆನ್ನಲ್ಲೇ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಚಿರತೆ ಕಾರ್ಯಪಡೆಯೊಂದಿಗೆ ಹುಲಿ ಹಿಮ್ಮೆಟ್ಟಿಸುವ ಕಾರ್ಯಚರಣೆಯನ್ನು ಮುಂದುವರೆದಿದೆ. ಮೈಸೂರು ಅರಣ್ಯ ಸಂರಕ್ಷಣಾಧಿಕಾರಿಗಳು, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ಎಚ್‌ಡಿ ಕೋಟೆ ಮತ್ತು ಮೇಟಿಕುಪ್ಪೆ ವಲಯ ಅರಣ್ಯಾಧಿಕಾರಿಯವರು ಮತ್ತು ಸಿಬ್ಬಂದಿ ವಿಶೇಷ ಹುಲಿ ಸಂರಕ್ಷಣಾ ದಳ ಸಿಬ್ಬಂದಿ ಹುಲಿ ಹಿಮ್ಮೆಟ್ಟಿಸುವ ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದಾರೆ.
ಡಿಸೆಂಬರ್ 04ರ ಬುಧವಾರ ಬೆಳಗ್ಗೆ ಶಾಂತಿಪುರ, ಬೋಚಿಕಟ್ಟೆ ಗ್ರಾಮದ ಬಳಿ ಕೊಂಬಿಂಗ್ ಕಾರ್ಯಚರಣೆ ನಡೆಸಿದ್ದು, ಹುಲಿಯ ಹಳೆಯ ಹೆಜ್ಜೆ ಗುರುತುಗಳು ಪತ್ತೆಯಾಗಿದೆ. ಸಂಜೆ ಸುಮಾರು 4:30 ಗಂಟೆಗೆ ಕೆಜಿ ಹುಂಡಿ ಗ್ರಾಮದಲ್ಲಿ ಮೇಕೆಯನ್ನು ತಿಂದಿರುವ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ಬಂದಿದೆ. ಹೀಗಾಗಿ ಸಿಬ್ಬಂದಿ ಸಮೇತ ಸ್ಥಳಕ್ಕೆ ಹೋಗಿ ಸ್ಥಳವನ್ನು ಪರಿಶೀಲಿಸಲಾಗಿದೆ. ಮೇಲ್ನೋಟಕ್ಕೆ ಮೇಕೆ ಮೇಲೆ ಚಿರತೆ, ಹುಲಿ ಅಥವಾ ಯಾವುದೇ ವನ್ಯ ಪ್ರಾಣಿ ದಾಳಿ ಮಾಡಿರುವ ಕುರುಹು ಕಂಡು ಬಂದಿಲ್ಲ. ಹೆಚ್ಚಿನ ವಿವರಗಳು ಪಶುವೈದ್ಯಕೀಯ ಪರೀಕ್ಷೆ ವರದಿಯ ನಂತರ ಲಭಿಸಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ಹುಲಿ ಇರುವಿಕೆ ಖಚಿತಗೊಂಡಿರುವ ಸ್ಥಳಗಳ ಸುತ್ತಮುತ್ತಲಿನ ಗ್ರಾಮಗಳಲ್ಲಿ ಜನರು ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ. Wildlife Advance Alert System (WAAS) ಮೂಲಕ ತುರ್ತು ಸಂದೇಶಗಳನ್ನು ಕಳುಹಿಸಿ ಜನರನ್ನು ಎಚ್ಚರಿಸಲಾಗುತ್ತಿದೆ. ಹುಲಿ ಸೆರೆ ಕಾರ್ಯಾಚರಣೆ ಸ್ಥಳದಲ್ಲಿ ಹುಲಿ ಚಲನ-ವಲನ ಪತ್ತೆಗೆ ಟ್ರಾಪ್ ಕ್ಯಾಮರಾ, ನೆಟ್ವರ್ಕ್ ಕ್ಯಾಮೆರಾ, ಡೋನ್, ಬೋನುಗಳು, ಅವಶ್ಯಕತೆನುಸಾರವಾಗಿ ಆನೆಗಳನ್ನು ಇತ್ಯಾದಿ ಸಲಕರಣೆಗಳ ಜೊತೆಗೆ ಚಿರತೆ ಕಾರ್ಯಪಡೆ ತಂಡ, ಸಿಬ್ಬಂದಿ, ವಿಶೇಷ ಹುಲಿ ಸಂರಕ್ಷಣಾ ದಳ ಸಿಬ್ಬಂದಿ ಮತ್ತು ಎಚ್‌ಡಿ ಕೋಟೆ, ಮೇಟಿಕಪ್ಪೆ ವಲಯದ ಸಿಬ್ಬಂದಿ ಜೊತೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಸುಳ್ಳು ಸುದ್ದಿ ಹಬ್ಬದಂತೆ ಮನವಿ
ಸಾರ್ವಜನಿಕರು ಹುಲಿ ಚಲನವಲನ ಕಂಡಲ್ಲಿ ಕೂಡಲೇ ಸಹಾಯವಾಣಿ ಸಂಖ್ಯೆ: 9481996026 ಅಥವಾ 1926ಗೆ ಮಾಹಿತಿ ನೀಡುವಂತೆ ಕೋರಲಾಗಿದೆ. ಹುಲಿ ಕುರಿತಂತೆ ಯಾವುದೇ ಸುಳ್ಳು ಸುದ್ದಿ, ವದಂತಿ ಹಬ್ಬಿಸಬಾರದು. ಯಾವುದೇ ಮಾಹಿತಿ, ಪೋಟೋ ವಿಡಿಯೋವನ್ನು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಬಾರದು, ಸುಳ್ಳು ವದಂತಿಗಳನ್ನು ಕೇಳಿ ಭಯಬೀತರಾಗದೇ ಸಹಾಯವಾಣಿಗೆ ಕರೆ ಮಾಡಿ ಹುಲಿ ಇರುವಿಕೆಯ ಬಗ್ಗೆ ಖಚಿತಪಡಿಸಿಕೊಳ್ಳಬಹುದು. ರೈತರು ಜಮೀನಿಗೆ ತೆರಳುವಾಗ ಎಚ್ಚರ ವಹಿಸುವುದು ಹಾಗೂ ಸಾರ್ವಜನಿಕರು ಕಾರ್ಯಾಚರಣೆಯಲ್ಲಿರುವ ಇಲಾಖಾ ಸಿಬ್ಬಂದಿಗೆ ಸಂಪೂರ್ಣ ಸಹಕಾರ ನೀಡುವಂತೆ ಮೈಸೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಮನವಿ ಮಾಡಿಕೊಳ್ಳಲಾಗಿದೆ.