ಕನ್ನಡ ಸುದ್ದಿ  /  Karnataka  /  Nada Devathe New Photograph Is Now Official, Government Of Karnataka Order

Karnataka Nada Devathe: ನಾಡದೇವತೆಯ ಹೊಸ ಭಾವಚಿತ್ರ ಅಧಿಕೃತ, ಶಿಕ್ಷಣ ಸಂಸ್ಥೆಗಳಲ್ಲಿ, ಸರಕಾರಿ ಕಾರ್ಯಕ್ರಮಗಳಲ್ಲಿ ಬಳಸುವುದು ಕಡ್ಡಾಯ

ರಾಜ್ಯದ ನಾಡದೇವತೆಯ ಪರಿಪೂರ್ಣವಾದ ಚಿತ್ರವನ್ನು ಅಧಿಕೃತಗೊಳಿಸಿ ಸರಕಾರ ಆದೇಶ ಹೊರಡಿಸಿದೆ. ಅಧಿಕೃತಗೊಂಡ ನಾಡದೇವತೆಯ ಪರಿಪೂರ್ಣ ಚಿತ್ರವನ್ನು ಇನ್ಮುಂದೆ ಶಾಲಾಕಾಲೇಜುಗಳಲ್ಲಿ, ಸರಕಾರಿ ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ಬಳಸಬೇಕು.

Karnataka Nada Devathe: ನಾಡದೇವತೆಯ ಹೊಸ ಭಾವಚಿತ್ರ ಅಧಿಕೃತ, ಸರಕಾರದ ಆದೇಶ
Karnataka Nada Devathe: ನಾಡದೇವತೆಯ ಹೊಸ ಭಾವಚಿತ್ರ ಅಧಿಕೃತ, ಸರಕಾರದ ಆದೇಶ

ಬೆಂಗಳೂರು: ರಾಜ್ಯದ ನಾಡದೇವತೆಯ ಪರಿಪೂರ್ಣವಾದ ಚಿತ್ರವನ್ನು ಅಧಿಕೃತಗೊಳಿಸಿ ಸರಕಾರ ಆದೇಶ ಹೊರಡಿಸಿದೆ. ಕಲಾವಿದ ಕೆ. ಸೋಮಶೇಖರ್ ಅವರು ಈ ನಾಡದೇವತೆಯ ಪರಿಪೂರ್ಣವಾದ ಚಿತ್ರವನ್ನು ರಚಿಸಿದ್ದಾರೆ. ಈ ಹಿಂದೆ ಇದ್ದ ನಾಡದೇವತೆಯ ಚಿತ್ರವನ್ನು ಕಲಾವಿದ ಬಿ.ಕೆ.ಎಸ್. ವರ್ಮ ರಚಿಸಿದ್ದರು. ಅವರು ನಿನ್ನೆ ನಿಧನರಾಗಿದ್ದು, ಅದೇ ಸಮಯದಲ್ಲಿ ಹೊಸ ಚಿತ್ರ ಅಧಿಕೃತಗೊಂಡಿರುವುದು ಸೋಜಿಗ.

ಅಧಿಕೃತಗೊಂಡ ನಾಡದೇವತೆಯ ಪರಿಪೂರ್ಣ ಚಿತ್ರವನ್ನು ಇನ್ಮುಂದೆ ಶಾಲಾಕಾಲೇಜುಗಳಲ್ಲಿ, ಸರಕಾರಿ ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ಬಳಸಬೇಕಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೇಮಿಸಿದ್ದ ಐವರು ಸದಸ್ಯರ ತಜ್ಞರ ಸಮಿತಿಯ ಶಿಫಾರಸ್ಸಿನ ಮೇರೆಗೆ ಖ್ಯಾತ ಕಲಾವಿದ ಕೆ.ಸೋಮಶೇಖರ್ ಅವರು ಬಿಡಿಸಿದ ಭಾವಚಿತ್ರವನ್ನು ನಾಡ ದೇವತೆ ಚಿತ್ರಕ್ಕೆ ಆಯ್ಕೆ ಮಾಡಲಾಗಿತ್ತು.

ರಾಜ್ಯದ ಸಾಂಸ್ಕೃತಿಕ, ಐತಿಹಾಸಿಕ ಮತ್ತು ಭಾಷಾ ವಿಶಿಷ್ಟತೆಯನ್ನು ಒಳಗೊಂಡಿರುವ ಕರ್ನಾಟಕದ ಭೂಪಟದ ಹಿನ್ನೆಲೆಯಲ್ಲಿ ಭುವನೇಶ್ವರಿ ದೇವಿಯನ್ನು ರಚಿಸಲಾಗಿದೆ.

ಹಿಂದಿನ ನಾಡದೇವಿ ಭುವನೇಶ್ವರಿ ಭಾವಚಿತ್ರದಲ್ಲಿ ಕರ್ನಾಟಕದ ವೈಶಿಷ್ಟ್ಯತೆ ಕಡಿಮೆ ಇತ್ತು ಎನ್ನುವ ಕಾರಣಕ್ಕಾಗಿ ಹೊಸ ಭಾವಚಿತ್ರ ರಚಿಸಲು ಸರಕಾರ ನಿರ್ಧರಿಸಿತ್ತು. ಹಿಂದಿನ ಚಿತ್ರವು ಶರೀರ ಶಾಸ್ತ್ರದ ಪ್ರಕಾರ ಪೂರ್ಣ ಪ್ರಮಾಣದಲ್ಲಿಇರಲಿಲ್ಲ. ಭುವನೇಶ್ವರಿ ದೇವಿಯ ಕಿರೀಟವು ಕರ್ನಾಟಕದ ರಾಜಮನೆತನದ ಶೈಲಿಯಲ್ಲಿ ಇರಲಿಲ್ಲ ಎನ್ನುವ ಕಾರಣವನ್ನೂ ನೀಡಲಾಗಿತ್ತು.

ಇದೇ ರೀತಿ ಭುವನೇಶ್ವರಿ ದೇವಿಯ ಆಭರಣಗಳು ಕೂಡ ಕರ್ನಾಟಕ ಶಾಸ್ತ್ರದ ರೀತಿ ವಿನ್ಯಾಸಗೊಂಡಿಲ್ಲ ಎಂದು ಸಮಿತಿಯಲ್ಲಿ ಚರ್ಚಿಸಲಾಗಿತ್ತು. ಕರ್ನಾಟಕಕ್ಕೆ ಪೂರ್ಣ ಪ್ರಮಾಣದ ನಾಡದೇವಿಯ ಭಾವಚಿತ್ರ ಬೇಕೆನ್ನುವ ನಿಟ್ಟಿನಲ್ಲಿ ಹೊಸ ಭಾವ ಚಿತ್ರ ರಚನೆಗೆ ನಿರ್ಧರಿಸಲಾಗಿತ್ತು.

ಇದಕ್ಕಾಗಿ ವಿವಿಧ ಕಲಾವಿದರು ರಚಿಸಿದ ಭಾವಚಿತ್ರಗಳನ್ನು ಪರಿಶೀಲಿಸಲಾಗಿತ್ತು. ಬೆಂಗಳೂರಿನ ಕಲಾವಿದ ಕೆ. ಸೋಮಶೇಖರ್ ಅವರು ಬಿಡಿಸಿಕೊಟ್ಟ ಚಿತ್ರದ ಕುರಿತು ಸಮಿತಿಯಲ್ಲಿ ಒಮ್ಮತ ಮೂಡಿತ್ತು. ಇದನ್ನು ಸರಕಾರಕ್ಕೆ ಶಿಫಾರಸು ಮಾಡಲಾಗಿತ್ತು. ಇದೀಗ ಸಮಿತಿ ಸೂಚಿಸಿದ ಚಿತ್ರವವನ್ನು ಅಂತಿಮಗೊಳಿಸಲಾಗಿದೆ.

ಬಿ.ಕೆ.ಎಸ್. ವರ್ಮ, ಗಿರೀಶ್ ಹಂಪಣ್ಣನವರ್, ವಿ.ಟಿ. ಕಾಳೆ, ಚಂದ್ರನಾಥ ಆಚಾರ್ಯ, ಶೇಖರ್ ಬಳ್ಳಾರಿ, ರಮೇಶ್ ಸಾಸನೂರು, ನಾರಾಯಣ ಕುಂಬಾರ, ಕೆ. ಸೋಮಶೇಖರ್ ಮುಂತಾದ ಕಲಾವಿದರ ಮೂಲಕ ಹೊಸ ಚಿತ್ರ ರಚಿಸಲು ಸಮಿತಿ ಪ್ರಯತ್ನಿಸಿತ್ತು. ಬಿ.ಕೆ.ಎಸ್‌. ವರ್ಮ ಅವರು ಸಮಯದ ಅಭಾವದ ಕಾರಣದಿಂದ ಚಿತ್ರ ಬಿಡಿಸಲು ಮುಂದಾಗಿರಲಿಲ್ಲ.

ನೂತನ ಹೊಸ ಭಾವಚಿತ್ರವು ಶರೀರ ಶಾಸ್ತ್ರದ ಪ್ರಕಾರ ಪ್ರಮಾಣ ಬದ್ಧವಾಗಿದ್ದು, ಚಾಲುಕ್ಯರು, ಹೊಯ್ಸಳ ಕಾಲದ ಕಿರೀಟ, ಆಭರಣಗಳು ಇವೆ. ಹಸಿರು ಬಣ್ಣದ ಇಳಕಲ್‌ ಸೀರೆ, ಕರುನಾಡಿನ ಭೂಪಟ, ಕನ್ನಡ ಭಾಷೆ ಸಾರುವ ತಾಳೆಗಿರಿಯ ಪುಸ್ತಕ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ವಿಭಾಗ