ಕನ್ನಡ ಸುದ್ದಿ  /  Karnataka  /  Nada Prabhu Kempegowda Invention Award: Announcement Of Kempegowda Innovation Award In Bbmp Budget 2023

Kempegowda Invention Award: ಬಿಬಿಎಂಪಿಯಲ್ಲಿ ಸಮಸ್ಯೆ ನಿವಾರಣೆಗೆ ಸೂತ್ರ / ಆವಿಷ್ಕಾರ; ನಾಡಪ್ರಭು ಕೆಂಪೇಗೌಡ ಆವಿಷ್ಕಾರ ಪ್ರಶಸ್ತಿ ಘೋಷಣೆ

NadaPrabhu Kempegowda Invention Award: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿ-ಸಿಬ್ಬಂದಿಯಲ್ಲಿ ಗುಣಾತ್ಮಕ ಪರಿವರ್ತನೆಯ ಮನೋಭಾವವನ್ನು ಬೆಳೆಸುವ ಸದುದ್ದೇಶ ಇದರಲ್ಲಿ ಅಡಗಿದೆ. ಮುಂದಿನ ವರ್ಷದಿಂದ ಈ ಪ್ರಶಸ್ತಿ ನೀಡಲಾಗುತ್ತದೆ ಎಂದು ಪಾಲಿಕೆಯ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ್ ರಾಯಪುರ ಬಜೆಟ್‌ ಮಂಡನೆ ವೇಳೆ ಹೇಳಿದರು.

ಬಿಬಿಎಂಪಿ ಬಜೆಟ್‌ ಪುಸ್ತಕ ಪ್ರದರ್ಶಿಸಿದ ಅಧಿಕಾರಿಗಳ ತಂಡ
ಬಿಬಿಎಂಪಿ ಬಜೆಟ್‌ ಪುಸ್ತಕ ಪ್ರದರ್ಶಿಸಿದ ಅಧಿಕಾರಿಗಳ ತಂಡ (BBMP)

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಹೊಸ ವ್ಯವಸ್ಥೆ, ತಂತ್ರಾಂಶ, ವಿನ್ಯಾಸ, ಸಮಸ್ಯೆ ನಿವಾರಣೆಗೆ ಸೂತ್ರ ಅಥವಾ ಇನ್ಯಾವುದೇ ಆವಿಷ್ಕಾರವನ್ನು ಉತ್ತೇಜಿಸುವುದಕ್ಕಾಗಿ ಮುಂದಿನ ವರ್ಷದಿಂದ ಅನ್ವಯವಾಗುವಂತೆ “ನಾಡಪ್ರಭು ಕೆಂಪೇಗೌಡ ಆವಿಷ್ಕಾರ ಪ್ರಶಸ್ತಿ” ಯನ್ನು ಈ ಸಲದ ಬಿಬಿಎಂಪಿ ಬಜೆಟ್‌ನಲ್ಲಿ ಘೋಷಿಸಲಾಗಿದೆ.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿ-ಸಿಬ್ಬಂದಿಯಲ್ಲಿ ಗುಣಾತ್ಮಕ ಪರಿವರ್ತನೆಯ ಮನೋಭಾವವನ್ನು ಬೆಳೆಸುವ ಸದುದ್ದೇಶ ಇದರಲ್ಲಿ ಅಡಗಿದೆ. ಮುಂದಿನ ವರ್ಷದಿಂದ ಈ ಪ್ರಶಸ್ತಿ ನೀಡಲಾಗುತ್ತದೆ ಎಂದು ಪಾಲಿಕೆಯ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ್ ರಾಯಪುರ ಬಜೆಟ್‌ ಮಂಡನೆ ವೇಳೆ ಹೇಳಿದರು.

ಈ ಪ್ರಶಸ್ತಿಯು 2 ಲಕ್ಷ ರೂಪಾಯಿ ಮೊತ್ತದ್ದಾಗಿದೆ. ಇದಕ್ಕೆ ಪಾಲಿಕೆಯ ಯಾವುದೇ ಅಧಿಕಾರಿ, ಸಿಬ್ಬಂದಿ ಅಥವಾ ವಿಭಾಗ ಆಯ್ಕೆ ಆಗಬಹುದು. ಈ ಪ್ರಶಸ್ತಿಗೆ ಸಂಬಂಧಿಸಿದ ಅಗತ್ಯ ನಿಯಮ, ಮಾರ್ಗದರ್ಶಿ ಸೂತ್ರ, ಅರ್ಜಿ ಮತ್ತು ಆಯ್ಕೆ ಪ್ರಕ್ರಿಯೆ ವಿವರ ಶೀಘ್ರವೇ ಪ್ರಕಟಿಸಲಾಗುವುದು. ಇದು 2023-24ನೇ ಸಾಲಿನಲ್ಲೇ ಜಾರಿಯಾಗಲಿದೆ ಎಂದು ಅವರು ಹೇಳಿದರು.

ಇಲಾಖೆಗಳಿಗೆ ಕಾರ್ಯಯೋಜನೆಯ ಗುರಿ

ಪಾಲಿಕೆಯ ಕಂದಾಯ ಇಲಾಖೆಗೆ ನೀಡಲಾಗಿದ್ದ ತೆರಿಗೆ ಸಂಗ್ರಹದ ಗುರಿಯನ್ನು ಅವಧಿ ಬದ್ಧವಾಗಿ ಪರಿಶೀಲಿಸಲಾಗುತ್ತಿದೆ. ಮುಂದಿನ ಹಣಕಾಸು ವರ್ಷದಿಂದ ಎಲ್ಲ ಇಲಾಖೆಗಳಿಗೂ ಕಾರ್ಯ ಯೋಜನೆಯ ಗುರಿಯನ್ನು ನಿಗದಿ ಮಾಡಲಾಗುತ್ತಿದೆ.

ತೆರಿಗೆ ಸಂಗ್ರಹದ ಗುರಿಮುಟ್ಟುವ ಅಧಿಕಾರಿ-ಸಿಬ್ಬಂದಿ ವರ್ಗಕ್ಕೆ ಪುರಸ್ಕರಿಸುವ ಮತ್ತು ಉತ್ತೇಜನ ನೀಡುವ ಯೋಜನೆಯನ್ನು ಮುಂದಿನ ವರ್ಷದಿಂದ ಜಾರಿಗೊಳಿಸಲಾಗುತ್ತದೆ. ಇದಕ್ಕೆ ಬೇಕಾದ ಅನುದಾನವನ್ನು ಮುಂಗಡಪತ್ರದಲ್ಲಿ ಮೀಸಲಿಡಲಾಗಿದೆ ಎಂದು ಜಯರಾಮ್‌ ವಿವರಿಸಿದರು.

ಪಾಲಿಕೆಯ ಸಿಬ್ಬಂದಿಗೂ ಇ- ಆಫೀಸ್‌ ಸೌಲಭ್ಯ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿ ವರ್ಗ ಈಗಾಗಲೇ ಇ-ಆಫೀಸ್‌ ಸೌಲಭ್ಯವನ್ನು ಬಳಸುತ್ತಿದೆ. ಇದನ್ನು ಮುಂದಿನ ಹಣಕಾಸು ವರ್ಷದಿಂದ ಪಾಲಿಕೆಯ ಸಿಬ್ಬಂದಿಗೂ ವಿಸ್ತರಿಸಲಾಗುತ್ತದೆ.

ಇ- ಆಫೀಸ್‌ ಮೂಲಕ ಎಲ್ಲ ಕಡತಗಳನ್ನೂ ಆನ್‌ಲೈನ್‌ನಲ್ಲಿಯೇ ಕಡ್ಡಾಯವಾಗಿ ಪರಿಶೀಲನೆ ಮಾಡುವ ಉದ್ದೇಶ ಈ ಉಪಕ್ರಮದ್ದಾಗಿದೆ. ಈ ವರ್ಷ ಸಿಬ್ಬಂದಿಗೆ ಹಲವು ತರಬೇತಿಯನ್ನು ಆಯೋಜಿಸಲಾಗಿದೆ. ಮುಂದಿನ ಹಣಕಾಸು ವರ್ಷದಿಂದ ವಾರ್ಷಿಕವಾಗಿ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿಯೂ ಕನಿಷ್ಠ 5 ದಿನಗಳ ತರಬೇತಿಗೆ ಒಳಗಾಗುವುದು ಕಡ್ಡಾಯವಾಗಲಿದೆ ಎಂದು ಜಯರಾಮ್‌ ಹೇಳಿದರು.

ಬಿಬಿಎಂಪಿಯ ಆಡಳಿತ ಸುಧಾರಣೆಗೆ ಕ್ರಮ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಆಡಳಿತ ಸುಧಾರಣೆಗೆ ಸಂಬಂಧಿಸಿದ ವರದಿಯನ್ನು ರಾಜ್ಯದ ನಿವೃತ್ತ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ನೇತೃತ್ವದ ಸಮಿತಿ ಫೆ.9ರಂದು ಮುಖ್ಯಮಂತ್ರಿಗೆ ಸಲ್ಲಿಸಿದೆ. ಇದರಲ್ಲಿ ಪಾಲಿಕೆ ಸಿಬ್ಬಂದಿ ಹೆಚ್ಚಳ ಸೇರಿ ಹಲವು ಸಲಹೆ, ಶಿಫಾರಸುಗಳನ್ನು ನೀಡಲಾಗಿದೆ. ಈ ವರದಿಯು ಪಾಲಿಕೆ ಮತ್ತು ಸರ್ಕಾರದ ಪರೀಶೀಲನೆಯಲ್ಲಿದೆ. ಸರ್ಕಾರದ ಅನುಮೋದನೆ ಪಡೆದ ನಂತರ ಮುಂದಿನ ಹಣಕಾಸು ವರ್ಷದಲ್ಲಿ ಜಾರಿಗೆ ತರುವ ಉದ್ದೇಶವಿದೆ ಎಂದು ಜಯರಾಮ್‌ ವಿವರಿಸಿದರು.

ಬಿಬಿಎಂಪಿ ಬಜೆಟ್‌ ಹಿನ್ನೆಲೆ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಳೆದ ಎರಡೂವರೆ ವರ್ಷಗಳಿಂದ ಜನಪ್ರತಿನಿಧಿಗಳ ಆಡಳಿತ ಇಲ್ಲ. ಆದ್ದರಿಂದ ಕಳೆದ ಎರಡು ವರ್ಷವೂ ಅಧಿಕಾರಿಗಳೇ ಆಯ-ವ್ಯಯ ಮಂಡಿಸಿದ್ದರು. ಈ ವರ್ಷವೂ ಅದೇ ಸಂಪ್ರದಾಯ ಮುಂದುವರಿದಿದೆ.

ಕಳೆದ ಸಲ ಮಧ್ಯರಾತ್ರಿ ಬಜೆಟ್‌ ಮಂಡನೆ ಆಗಿತ್ತು. ಸಾರ್ವಜನಿಕ ವಲಯದಲ್ಲಿ ಈ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು. ಹೀಗಾಗಿ ಈ ಸಲ ಬಜೆಟ್‌ ಮಂಡನೆ ಪುರಭವನಕ್ಕೆ ಶಿಫ್ಟ್‌ ಆಗಿದೆ. ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ್ ರಾಯ್‌ಪುರ ಅವರು ಇಂದು ಪೂರ್ವಾಹ್ನ 11.30ಕ್ಕೆ ಬಜೆಟ್‌ ಮಂಡನೆ ಮಾಡಿದರು. ಬೆಂಗಳೂರಿನ ಸರ್.ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ಬಜೆಟ್‌ ಮಂಡನೆ ನಡೆಯಿತು. ಇದರ ಆನ್‌ಲೈನ್‌ ನೇರ ಪ್ರಸಾರವೂ ಇತ್ತು.

IPL_Entry_Point