ಕರ್ನಾಟಕ ಹೈಕೋರ್ಟ್‌ನ ನಿವೃತ್ತ ಹಂಗಾಮಿ ನ್ಯಾಯಮೂರ್ತಿ, ನಾಡೋಜ ಎಸ್ ಆರ್‌ ನಾಯಕ್ ನಿಧನ, ಹೆಬ್ಬಾಳದಲ್ಲಿ ಇಂದು ಅಂತ್ಯಸಂಸ್ಕಾರ
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕ ಹೈಕೋರ್ಟ್‌ನ ನಿವೃತ್ತ ಹಂಗಾಮಿ ನ್ಯಾಯಮೂರ್ತಿ, ನಾಡೋಜ ಎಸ್ ಆರ್‌ ನಾಯಕ್ ನಿಧನ, ಹೆಬ್ಬಾಳದಲ್ಲಿ ಇಂದು ಅಂತ್ಯಸಂಸ್ಕಾರ

ಕರ್ನಾಟಕ ಹೈಕೋರ್ಟ್‌ನ ನಿವೃತ್ತ ಹಂಗಾಮಿ ನ್ಯಾಯಮೂರ್ತಿ, ನಾಡೋಜ ಎಸ್ ಆರ್‌ ನಾಯಕ್ ನಿಧನ, ಹೆಬ್ಬಾಳದಲ್ಲಿ ಇಂದು ಅಂತ್ಯಸಂಸ್ಕಾರ

ಕರ್ನಾಟಕ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ, ಛತ್ತೀಸಗಡ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ, ನಾಡೋಜ ಎಸ್ ಆರ್‌ ನಾಯಕ್ ಭಾನುವಾರ ಅಪರಾಹ್ನ ನಿಧನರಾದರು. ಅವರ ಅಂತ್ಯಸಂಸ್ಕಾರ ಇಂದು (ಮೇ 19) ಹೆಬ್ಬಾಳದಲ್ಲಿ ನಡೆಯಲಿದೆ.

ನಿವೃತ್ತ ನ್ಯಾಯಮೂರ್ತಿ ನಾಡೋಜ ಎಸ್ಆರ್‌ ನಾಯಕ್ ನಿಧನ
ನಿವೃತ್ತ ನ್ಯಾಯಮೂರ್ತಿ ನಾಡೋಜ ಎಸ್ಆರ್‌ ನಾಯಕ್ ನಿಧನ

ಬೆಂಗಳೂರು: ಕರ್ನಾಟಕ ಹೈಕೋರ್ಟ್‌ನ ನಿವೃತ್ತ ಹಂಗಾಮಿ ನ್ಯಾಯಮೂರ್ತಿ ಎಸ್‌.ಆರ್‌.ನಾಯಕ್‌ (80) ಅವರು ಭಾನುವಾರ ಬೆಂಗಳೂರು ನಗರದಲ್ಲಿ ನಿಧನರಾದರು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ನ್ಯಾಯಮೂರ್ತಿ ಎಸ್ ಆರ್‌ ನಾಯಕ್ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಮೃತರು ಪತ್ನಿ ಶಾಲಿನಿ ಎಸ್.ನಾಯಕ್, ಪುತ್ರ ಡಾ.ಎನ್.ಎಸ್.ರಾಹುಲ್‌, ಪುತ್ರಿ ನಿಶಾ ಗಾಂವ್ಕರ್ ಅವರನ್ನು ಅಗಲಿದ್ಧಾರೆ.

ನಿವೃತ್ತ ನ್ಯಾಯಮೂರ್ತಿ ನಾಡೋಜ ಎಸ್ಆರ್‌ ನಾಯಕ್ ನಿಧನ, ಇಂದು ಅಂತ್ಯಸಂಸ್ಕಾರ

ಆರ್‌ಎಂವಿ ಎರಡನೇ ಹಂತದ ಡಾಲರ್ಸ್ ಕಾಲೋನಿಯ ನಿವಾಸದಲ್ಲಿ ಮಧ್ಯಾಹ್ನ 1 ಗಂಟೆಯವರೆಗೂ ನ್ಯಾಯಮೂರ್ತಿ ಎಸ್ ಆರ್ ನಾಯಕ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನ್ಯಾಯಮೂರ್ತಿ ಎಸ್ ಆರ್‌ ನಾಯಕ್ ಅವರ ಅಂತ್ಯಕ್ರಿಯೆ ಇಂದು (ಮೇ 19) ಸಂಜೆ 4 ಗಂಟೆಗೆ ಹೆಬ್ಬಾಳ ಚಿತಾಗಾರದಲ್ಲಿ ನೆರವೇರಲಿದೆ’ ಎಂದು ಕುಟುಂಬ ಮೂಲಗಳು ತಿಳಿಸಿವೆ.

ನ್ಯಾಯಮೂರ್ತಿ ಎಸ್ ಆರ್ ನಾಯಕ್ ಅವರು ಕರ್ನಾಟಕ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ, ಛತ್ತೀಸಗಡ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿ, ಕಾನೂನು ಆಯೋಗದ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದರು.

ನಾಡೋಜ, ನ್ಯಾಯಮೂರ್ತಿ ಎಸ್ಆರ್‌ ನಾಯಕ್ ಬದುಕಿನ ಹಾದಿ

ಕುಮಟಾ ತಾಲೂಕು ನಾಡಮ್ಯಾಸಕೇರಿ ಗ್ರಾಮದಲ್ಲಿ ಕೃಷಿಕ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಲ್ಲಿ 1945ರ ಜನವರಿ 1 ರಂದು ಎಸ್‌ ಆರ್ ನಾಯಕ್ ಅವರು ಜನಿಸಿದರು.

ಮೈಸೂರು ವಿಶ್ವವಿದ್ಯಾಲಯದಿಂದ ಬಿಎಸ್‌ಸಿ ಪದವಿ, ಬೆಂಗಳೂರು ವಿಶ್ವವಿದ್ಯಾಲಯದಿಂದ ಕಾನೂನು ಮತ್ತು ಕಾನೂನು ವಿಭಾಗದಲ್ಲಿಯೇ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದ ಎಸ್ ಆರ್‌ ನಾಯಕ್ ಅವರು ಬಾಲ್ಯದಿಂದಲೇ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದರು. 1974ರಲ್ಲಿ ವಕೀಲಿಕೆ ಶುರು ಮಾಡಿದ ಅವರು ಎಂ.ಗೋಪಾಲಕೃಷ್ಣ ಶೆಟ್ಟಿ ನಂತರ ಎಲ್.ಜಿ.ಹಾವನೂರು ಅವರ ಬಳಿ ಕಿರಿಯ ವಕೀಲರಾಗಿ ವೃತ್ತಿ ಪ್ರಾವೀಣ್ಯ ಸಾಧಿಸಿದರು. ಬೆಂಗಳೂರಿನ ಬಿಎಂಎಸ್ ಮತ್ತು ಎಸ್‌ಎಲ್‌ಎಸ್‌ಆರ್‌ಸಿ ಹಾವನೂರು ಕಾನೂನು ಕಾಲೇಜುಗಳಲ್ಲಿ ಅರೆಕಾಲಿಕ ಪ್ರಾಧ್ಯಾಪಕರಾಗಿಯೂ ಎಸ್‌ ಆರ್ ನಾಯಕಜ್ ಅವರು ಕಾರ್ಯ ನಿರ್ವಹಿಸಿದ್ದರು‌.

ಎಸ್‌ ಆರ್ ನಾಯಕ್ ಅವರು 1994ರ ಫೆಬ್ರವರಿ 25 ರಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ನಂತರ ಆಂಧ್ರಪ್ರದೇಶ ಹೈಕೋರ್ಟ್‌ಗೆ ವರ್ಗಾವಣೆಗೊಂಡಿದ್ದರು. ಆಂಧ್ರಪ್ರದೇಶ ನ್ಯಾಯಾಂಗ ಅಕಾಡೆಮಿ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು. ನಂತರ ಛತ್ತೀಸಗಡ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನಿವೃತ್ತರಾಗಿದ್ದರು‌. ನ್ಯಾಯಾಂಗಕ್ಕೆ ಎಸ್ ಆರ್ ನಾಯಕ್ ಅವರ ಸೇವೆ ಪರಿಗಣಿಸಿ ಅವರಿಗೆ ‘ನಾಡೋಜ’ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.