Forest News: ನಾಗರಹೊಳೆ ಕಾಡಿನೊಳಗೆ ಹಂದಿ ಬೇಟೆಯಾಡಿ ಸಿಕ್ಕಿಬಿದ್ದ ಇಬ್ಬರು ಆನೆ ಮಾವುತರ ಅಮಾನತು
ಕನ್ನಡ ಸುದ್ದಿ  /  ಕರ್ನಾಟಕ  /  Forest News: ನಾಗರಹೊಳೆ ಕಾಡಿನೊಳಗೆ ಹಂದಿ ಬೇಟೆಯಾಡಿ ಸಿಕ್ಕಿಬಿದ್ದ ಇಬ್ಬರು ಆನೆ ಮಾವುತರ ಅಮಾನತು

Forest News: ನಾಗರಹೊಳೆ ಕಾಡಿನೊಳಗೆ ಹಂದಿ ಬೇಟೆಯಾಡಿ ಸಿಕ್ಕಿಬಿದ್ದ ಇಬ್ಬರು ಆನೆ ಮಾವುತರ ಅಮಾನತು

Forest News: ನಾಗರಹೊಳೆ ರಾಷ್ಟ್ರೀಯ ಅಭಯಾರಣ್ಯದಲ್ಲಿ ಆನೆ ಮಾವುತರಿಬ್ಬರು ಕಾಡು ಹಂದಿ ಬೇಟೆಯಾಗಿ ಸಿಕ್ಕಿಬಿದ್ದಿದ್ದು ಇಬ್ಬರನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ನಾಗರಹೊಳೆಯಲ್ಲಿ ಕಾಡು ಹಂದಿ ಬೇಟೆಯಾಡಿದ ಇಬ್ಬರು ಆನೆ ಮಾವುತರನ್ನು ಅಮಾನತುಪಡಿಸಲಾಗಿದೆ.
ನಾಗರಹೊಳೆಯಲ್ಲಿ ಕಾಡು ಹಂದಿ ಬೇಟೆಯಾಡಿದ ಇಬ್ಬರು ಆನೆ ಮಾವುತರನ್ನು ಅಮಾನತುಪಡಿಸಲಾಗಿದೆ.

Forest News: ನಾಗರಹೊಳೆ ಅರಣ್ಯದಲ್ಲಿ ಸಾಕಾನೆ ಮಾವುತರಿಬ್ಬರು ಸ್ಥಳೀಯರೊಂದಿಗೆ ಸೇರಿಕೊಂಡು ಕಾಡು ಹಂದಿ ಬೇಟೆಯಾಡಿ ಸಿಕ್ಕಿಬಿದ್ದಿದ್ದಾರೆ. ಇಬ್ಬರು ಆನೆ ಮಾವುತರ ವಿರುದ್ದ ಪ್ರಕರಣ ದಾಖಲಾಗಿದ್ದು, ಮತ್ತೊಬ್ಬ ಆರೋಪಿ ತಲೆ ಮರೆಸಿಕೊಂಡಿದ್ದಾನೆ. ಅರಣ್ಯ ಇಲಾಖೆಯಲ್ಲಿ ಸೇವೆ ಮಾಡಿಕೊಂಡೇ ಕಾಡು ಪ್ರಾಣಿ ಬೇಟೆಯಾಡಿ ಸಿಕ್ಕಿಬಿದ್ದಿರುವ ಇಬ್ಬರು ಮಾವುತರನ್ನು ಅಮಾನತುಪಡಿಸಲಾಗಿದೆ. ಇಬ್ಬರು ಮಾವುತರ ವಿರುದ್ದ ವಿಚಾರಣೆ ನಡೆಯುತ್ತಿದ್ದು ಬಂಧಿಸಲೂ ಅರಣ್ಯ ಇಲಾಖೆಯವರು ಸಿದ್ದತೆ ಮಾಡಿಕೊಂಡಿದ್ದಾರೆ. ತಲೆ ಮರೆಸಿಕೊಂಡಿರುವ ಆರೋಪಿ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ನಾಗರಹೊಳೆಯಲ್ಲಿ ಕೆಲವು ದಿನಗಳಿಂದ ಈ ರೀತಿ ಪ್ರಾಣಿ ಬೇಟೆಯಂತಹ ಚಟುವಟಿಕೆಗಳು ನಡೆಯುತ್ತಿದ್ದು, ಹಿರಿಯ ಅಧಿಕಾರಿಗಳ ಗಮನಕ್ಕೆ ಹೋಗುತ್ತಿದಂತೆ ಈ ಪ್ರಕರಣ ಬೆಳಕಿಗೆ ಬಂದಿದೆ.

ನಾಗರಹೊಳೆ ಬಫರ್‌ ವನ್ಯಜೀವಿ ವಲಯದಲ್ಲಿರುವ ಆನೆ ಶಿಬಿರಗಳಲ್ಲಿ ಮಾಸ್ತಿ ಆನೆ ಮಾವುತನಾಗಿದ್ದ ಎಚ್‌ಎನ್‌ ಮಂಜು, ರಾಮಯ್ಯ ಎನ್ನುವ ಆನೆ ಮಾವುತ ಜೆಡಿ ಮಂಜು ಅಮಾನತುಗೊಂಡವರು. ಬೇಟೆಗೆ ಬೇಕಾದ ಬಂದೂಕು ನೀಡಿದ್ದ ಪಿರಿಯಾಪಟ್ಟಣ ತಾಲ್ಲೂಕು ನೇರಳಕೊಪ್ಪೆ ಗ್ರಾಮದ ಶಿವಣ್ಣ ಎಂಬುವವರ ಪುತ್ರ ಮಂಜು ಎಂಬಾತ ತಲೆ ಮರೆಸಿಕೊಂಡಿದ್ದಾನೆ. ಇಬ್ಬರು ಆನೆ ಮಾವುತದಾರ ಎಚ್‌ಎನ್‌ ಮಂಜು ಹಾಗೂ ಜೆಡಿ ಮಂಜು ಅಮಾನತುಗೊಂಡಿದ್ದಾರೆ ಎಂದು ನಾಗರಹೊಳೆ ಹುಲಿ ಯೋಜನೆ ನಿರ್ದೇಶಕಿ ಪಿ.ಎ.ಸೀಮಾ ತಿಳಿಸಿದ್ದಾರೆ.

ಕಳೆದ ತಿಂಗಳು ನೇರಳಕುಪ್ಪೆ ಮಂಜು ಎಂಬಾತ ತನ್ನ ಬಂದೂಕನ್ನು ಮಾವುತ ಎಚ್‌ಎನ್‌ ಮಂಜುಗೆ ನೀಡಿದ್ದ. ಐದಾರು ತಿಂಗಳಿನಿಂದ ಇದು ಆತನ ಬಳಿಯೇ ಇತ್ತು. ಆತನ ಬಳಿ ಬಂದೂಕು ಇದ್ದು ಬೇಟೆಯಾಡುವ ಉದ್ದೇಶ ಹೊಂದಿರುವುದನ್ನು ಗಮನಿಸಿ ಪ್ರಮುಖ ಆರೋಪಿ ಎಚ್‌ ಎನ್‌ ಮಂಜುಗೆ ಬುದ್ದಿವಾದ ಹೇಳಿದ್ದ. ಆಗ ಸುಮ್ಮನಾದ ಮಂಜು ತಿಂಗಳ ಹಿಂದೆ ಮತ್ತೊಬ್ಬ ಆನೆ ಮಾವುತ ಜೆಡಿ ಮಂಜು ಜತೆ ಸೇರಿಕೊಂಡು ಕಾಡು ಹಂದಿ ಬೇಟೆಯಾಡಿದ್ದರು. ಆನಂತರ ಆನೆ ಕಾರ್ಯಾಚರಣೆಗೆ ಹೋಗಿದ್ದ ರಾಜು ಮನೆಯಲ್ಲಿ ಬಂದೂಕು ಇರಿಸಿದ್ದ.

ಮೂವರು ಮಂಜು ಎನ್ನುವವರು ಕಾಡು ಹಂದಿ ಬೇಟೆಯಾಡಿದ ಮಾಹಿತಿ ಹಿರಿಯ ಅಧಿಕಾರಿಗಳಿಗೆ ಸಿಕ್ಕ ನಂತರ ದಾಳಿ ನಡೆಸಿ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಈ ವೇಳೆ ಇಬ್ಬರೂ ಮಾವುತರು ರಜೆ ಮೇಲೆ ತೆರಳಿ ವಿಚಾರಣೆಗೆ ಸಿಕ್ಕಿರಲಿಲ್ಲ. ಕೊನೆಗೆ ಪತ್ತೆ ಮಾಡಿದಾಗ ಆಗ ಇಬ್ಬರು ಆನೆ ಮಾವುತರು ಇದನ್ನು ಒಪ್ಪಿಕೊಂಡಿದ್ದರು. ಮುಖ್ಯ ಸೂತ್ರಧಾರಿ ಎಚ್‌ಎನ್‌ ಮಂಜು ಸ್ಥಳಕ್ಕೆ ಕರೆದೊಯ್ದು ಘಟನೆ ವಿವರಿಸಿದ್ದ. ಒಂದು ತಿಂಗಳಿನಿಂದಲೂ ಪ್ರಕರಣದ ವಿಚಾರಣೆ ನಡೆಯುತ್ತಲೇ ಇತ್ತು. ಪ್ರಕರಣ ಕೂಡ ದಾಖಲಾಗಿತ್ತು. ಆದರೆ ಈ ವಿಚಾರ ಮೇಲಾಧಿಕಾರಿಗಳ ಗಮನಕ್ಕೆ ಬಂದ ನಂತರ ಈಗ ಇಬ್ಬರನ್ನೂ ಅಮಾನತುಪಡಿಸಲಾಗಿದೆ.

ಈ ಕುರಿತು ಆದೇಶ ಹೊರಡಿಸಿರುವ ನಾಗರಹೊಳೆ ಹುಲಿ ಯೋಜನೆ ನಿರ್ದೇಶಕಿ ಪಿ.ಎ. ಸೀಮಾ, ಹುಣಸೂರು ವನ್ಯಜೀವಿ ವಲಯದ ಆರ್‌ಎಫ್‌ಒ ನೀಡಿದ ದೂರು ಆಧರಿಸಿ ಎಸಿಎಫ್‌ ಲಕ್ಷ್ಮಿಕಾಂತ ಅವರ ನೇತೃತ್ವದಲ್ಲಿ ತನಿಖೆ ನಡೆದಿದೆ. ಇಬ್ಬರು ಆನೆ ಮಾವುತರಾದ ಆನೆಚೌಕೂರು ವನ್ಯಜೀವಿ ವಲಯದಲ್ಲಿದ್ದ ಸದ್ಯ ದೊಡ್ಡಹರವೆ ಕಾವೇರಿ ಸಾಕಾನೆ ಶಿಬಿರದಲ್ಲಿ ನಿಯೋಜನೆ ಮೇಲಿರುವ ಎಚ್‌ಎನ್‌ ಮಂಜು, ಇದೇ ಆನೆ ಶಿಬಿರದ ಜೆಡಿ ಮಂಜು ಅವರ ಹೇಳಿಕೆ. ಸಾಕ್ಷ್ಯಗಳನ್ನು ಆಧರಿಸಿ ಅಮಾನತುಪಡಿಸಲಾಗಿದೆ. ಇದಲ್ಲದೇ ಮರೆಸಿಕೊಂಡಿರುವ ನೇರಳಕುಪ್ಪೆ ಮಂಜು ಬಂಧನಕ್ಕೆ ಕ್ರಮ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.

ನಾಗರಹೊಳೆಯಲ್ಲಿ ಬೇಟೆ ಪ್ರಕರಣಗಳು ಆಗಾಗ ವರದಿಯಾಗುತ್ತಲೇ ಇದ್ದರೂ ಬೆಳಕಿಗೆ ಬರುವುದು ಕಡಿಮೆ. ಅದರಲ್ಲೂ ಅರಣ್ಯ ಇಲಾಖೆಯ ಸಿಬ್ಬಂದಿಯೇ ಹೊರಗಿನವರೊಂದಿಗೆ ಸೇರಿ ಬೇಟೆಯಾಡಿ ಸಿಕ್ಕಿ ಬಿದ್ದಿರುವುದು ಕಡಿಮೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.
Whats_app_banner