ನಾಗರಹೊಳೆ ಸಂರಕ್ಷಿತ ಅರಣ್ಯ ಭಾಗದ ಹಾರಂಗಿ ನಾಲೆ ಕೆಳ ಭಾಗದಲ್ಲಿ ಭಾರೀ ಗಾತ್ರದ ಗಂಡು ಹುಲಿ ಸಾವು, ಕಾರಣ ಏನು
ಮೈಸೂರು ಜಿಲ್ಲೆ ವ್ಯಾಪ್ತಿಯ ಹುಣಸೂರು ತಾಲ್ಲೂಕಿನ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ನಾಲೆ ಭಾಗದಲ್ಲಿ ಭಾರೀ ಗಾತ್ರದ ಹುಲಿಯೊಂದು ಮೃತಪಟ್ಟಿದೆ. ಕಾರಣ ಇನ್ನೂ ತಿಳಿದುಬಂದಿಲ್ಲ.

ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಹಾರಂಗಿ ನಾಲೆ ಕೆಳ ಭಾಗದಲ್ಲಿ ಭಾರೀ ಗಾತ್ರದ ಹುಲಿಯೊಂದು ಮೃತಪಟ್ಟಿದೆ. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗಿರುವ ನಾಲೆಯಲ್ಲಿ ನಾಲ್ಕು ವರ್ಷ ಪ್ರಾಯದ ಗಂಡು ಹುಲಿ ಜೀವ ಬಿಟ್ಟಿದೆ. ನಾಗರಹೊಳೆ ಭಾಗದಲ್ಲಿ ಆಗಾಗ ಬೇಟೆಗಾರರ ಸದ್ದು ಕೇಳಿ ಬರುತ್ತಿದ್ದು. ಇದು ಕೂಡ ಬೇಟೆಗಾರರ ದಾಳಿಗೆ ಬಲಿಯಾಗಿದೆಯೋ ಅಥವಾ ಬೇರೆ ಕಾರಣಕ್ಕೆ ಸಾವು ಆಗಿದೆಯೋ ಎನ್ನುವ ಮಾಹಿತಿ ಇನ್ನಷ್ಟೇ ಲಭಿಸಬೇಕಿದೆ. ಅರಣ್ಯ ಇಲಾಖೆ ಈಗಾಗಲೇ ಹುಲಿಯ ಮರಣೋತ್ತರ ಪರೀಕ್ಷೆ ನಡೆಸಿದೆ.ಮರಣೋತ್ತರ ಪರೀಕ್ಷೆಗೆ ಕಾಯಲಾಗುತ್ತಿದ್ದು, ನಂತರ ನಿಖರ ಕಾರಣ ತಿಳಿದು ಬರಲಿದೆ ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಖಚಿತಪಡಿಸಿದರು.
ನಾಗರಹೊಳೆಯ ಹುಣಸೂರು ವನ್ಯಜೀವಿ ವಲಯ ವ್ಯಾಪ್ತಿಯ ಮುದ್ದನಹಳ್ಳಿ ಮೀಸಲು ಅರಣ್ಯ ಪ್ರದೇಶದಲ ಆನೆಚೌಕೂರು ಎರಡನೇ ಶಾಖೆಯ ಶೆಟ್ಟಿಹಳ್ಳಿ ಲಕ್ಕಪಟ್ಟಣ ಗಸ್ತಿನಲ್ಲಿ ಅರಣ್ಯ ಸಿಬ್ಬಂದಿ ಶನಿವಾರ ಗಸ್ತು ಹೊರಟಿದ್ದಾಗ ಭಾರೀ ಗಾತ್ರದ ಹುಲಿ ಹಾರಂಗಿ ನಾಲೆ ಬಳಿ ಮಲಗಿರುವುದು ಕಂಡು ಬಂದಿದೆ. ಹತ್ತಿರ ಹೋಗಿ ನೋಡಿದಾಗ ಅದು ಅಲ್ಲಿಯೇ ಮೃತಪಟ್ಟಿರುವುದು ಗೊತ್ತಾಗಿದೆ.
ಕೂಡಲೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರಿಂದ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕಿ ಪಿ.ಎ.ಸೀಮಾ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎನ್.ಲಕ್ಷ್ಮಿಕಾಂತ್, ಹುಣಸೂರು ವನ್ಯಜೀವಿ ವಲಯ ಅರಣ್ಯಾಧಿಕಾರಿ ಸುಬ್ರಹ್ಮಣ್ಯ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿದರು. ನಂತರ ಹುಲಿ ಮಹಜರು ನಡೆದು ವನ್ಯಜೀವಿ ಪಶು ವೈದ್ಯಾಧಿಕಾರಿ ಡಾ.ರಮೇಶ್ ಅವರು ಮರಣೋತ್ತರ ಪರೀಕ್ಷೆ ನಡೆಸಿದರು. ಎನ್‌ಟಿಸಿಎ ಪ್ರತಿನಿಧಿ ವಿನಯ್ ಕೃಷ್ಣ ಮತ್ತಿತರರು ಈ ವೇಳೆ ಹಾಜರಿದ್ದರು.
ನಾಗರಹೊಳೆಯಲ್ಲಿ ಭಾರೀ ಮಳೆಯ ನಡುವೆಯೂ ಹುಲಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸುಟ್ಟು ಹಾಕಿದರು.
ವಿಷ ಪ್ರಾಶನ ಶಂಕೆ
ಮೃತಪಟ್ಟಿರುವ ಹುಲಿ ಸುಮಾರು ನಾಲ್ಕು ವರ್ಷದ ಪ್ರಾಯದ್ದಾಗಿದ್ದು, ದಷ್ಟಪುಷ್ಟವಾಗಿದೆ. ಆದರೆ ಆರೇಳು ತಿಂಗಳಿನಿಂದ ಈ ಭಾಗದಲ್ಲಿ ದನಗಳ ಮೇಲೆ ದಾಳಿ ಮಾಡಿ ತೊಂದರೆ ನೀಡುತ್ತಿತ್ತು. ಈ ಭಾಗದಲ್ಲಿ ಸಂಚರಿಸುತ್ತಿದ್ದ ಹುಲಿ ಇದೇ ಇರಬೇಕು ಎನ್ನುವ ಶಂಕೆ ಅರಣ್ಯ ಇಲಾಖೆಯವರದ್ದು.
ಹುಲಿ ತೊಂದರೆ ನೀಡುತ್ತಿದ್ದರಿಂದ ಅದನ್ನು ಸೆರೆ ಹಿಡಿಯುವಂತೆ ಸ್ಥಳೀಯರು ಅರಣ್ಯ ಇಲಾಖೆ ಮೇಲೆ ಒತ್ತಾಯಿಸುತ್ತಲೇ ಇದ್ದರು. ಆದರೂ ಅದನ್ನು ಸೆರೆ ಹಿಡಿಯಲು ಆಗಿರಲಿಲ್ಲ.ದಾಳಿಯೂ ನಿಂತಿರಲಿಲ್ಲ.
ಇದರಿಂದ ರೋಸಿ ಹೋದ ನಾಗರಹೊಳೆ ಅರಣ್ಯದಂಚಿನ ಗ್ರಾಮದ ಯಾರಾದರೂ ಹುಲಿಗೆ ವಿಷ ಪ್ರಾಶನ ಮಾಡಿಸಿರಬಹುದಾ ಎನ್ನುವ ಅನುಮಾನ ವ್ಯಕ್ತವಾಗಿದೆ. ದನದ ದೇಹದ ಭಾಗಕ್ಕೆ ವಿಷವನ್ನು ಹಾಕಿ ಹುಲಿ ತಿಂದಾಗ ಅದು ಮೃತಪಟ್ಟಿರುವ ಸಾಧ್ಯತೆಗಳೂ ಇವೆ. ಈ ಕುರಿತು ಅರಣ್ಯ ಇಲಾಖೆಯವರು ವಿಚಾರಣೆಯನ್ನೂ ನಡೆಸುತ್ತಿದ್ದಾರೆ.
ಅಧಿಕಾರಿ ಹೇಳೋದು ಏನು
ಹುಲಿ ಯಾವ ರೀತಿ ಮೃತಪಟ್ಟಿದೆ ಎನ್ನುವುದು ಗೊತ್ತಿಲ್ಲ. ವಿಷ ಹಾಕಿರುವ ಕುರಿತೂ ಮಾಹಿತಿ ಕಲೆ ಹಾಕಲಾಗುತ್ತಿದೆ. ದೇಹದ ಕೆಲ ಭಾಗ ಊದಿಕೊಂಡಿತ್ತು. ಈಗಾಗಲೇ ಮರಣೋತ್ತರ ಪರೀಕ್ಷೆ ವೇಳೆ ದೇಹದ ಭಾಗವನ್ನು ಸಂಗ್ರಹಿಸಿ ಪರೀಕ್ಷೆಗೆ ಬೆಂಗಳೂರಿನ ಹೆಬ್ಬಾಳ ಪಶುವೈದ್ಯಕೀಯ ಸಂಶೋಧನಾಲಯಕ್ಕೆ ಕಳುಹಿಸಲಾಗುತ್ತಿದೆ. ಅಲ್ಲಿಂದ ವರದಿ ಬಂದ ನಂತರ ಕಾರಣ ತಿಳಿಯಬಹುದು ಎನ್ನುವುದು ಹುಣಸೂರು ಉಪವಿಭಾಗದ ಎಸಿಎಫ್ ಲಕ್ಷ್ಮಿಕಾಂತ ಅವರು ನೀಡುವ ವಿವರಣೆ.
ಹಿಂದೆಯೂ ವಿಷ ಪ್ರಾಶನ
ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಹೊಂದಿಕೊಂಡಿರುವ ಎಚ್‌ಡಿಕೋಟೆ ತಾಲ್ಲೂಕಿನ ಮೇಟಿಕುಪ್ಪೆ ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ಇದೇ ರೀತಿ ಹುಲಿ ದಾಳಿಯಿಂದ ರೋಸಿ ಹೋಗಿ ರೈತರೇ ವಿಷ ಇಟ್ಟು ಎರಡು ಹುಲಿ ಮೃತಪಟ್ಟ ಘಟನೆ ನಡೆದಿದ್ದವು. ಆಗ ಕೆಲವರನ್ನು ಸಿಐಡಿ ಅರಣ್ಯ ವಿಭಾಗದ ಬಂಧಿಸಿದ್ದರು.