ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಕ್ಕು ಸ್ಥಾಪನೆ; ಜೇನುಕುರುಬರು- ಅರಣ್ಯ ಇಲಾಖೆ ನಡುವೆ ಸಂಘರ್ಷ, ಮುಂದೇನಾಗಲಿದೆ
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಅತ್ತೂರು ಕೊಲ್ಲಿಯಲ್ಲಿ ಜೇನುಕುರುಬರ ಅರಣ್ಯ ಪ್ರವೇಶವು ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿದೆ. ಮುಂದೆ ಏನಾಗಲಿದೆ ಎನ್ನುವ ವಿವರಣೆ ಇಲ್ಲಿದೆ.

ಅತ್ತೂರು ಕೊಲ್ಲಿ( ಕೊಡಗು): ಕರ್ನಾಟಕ ಹಾಗೂ ಕೇರಳ ಗಡಿ ಭಾಗದಲ್ಲಿರೆಉವ ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ಅತ್ತೂರು ಕೊಲ್ಲಿ ಪ್ರದೇಶದಲ್ಲಿ ದಶಕಗಳ ಹಿಂದೆ ವಾಸವಿದ್ದೆವು ಎನ್ನುವ ಕಾರಣ ನೀಡಿ ಈಗ 53 ಕುಟುಂಬಗಳ ಸುಮಾರು 200ಕ್ಕೂ ಅಧಿಕ ಜೇನುಕುರುಬ ಸಮುದಾಯದವರು ಅರಣ್ಯ ಪ್ರವೇಶಿಸಿ ಒಂದು ತಿಂಗಳಿನಿಂದ ವಾಸವಾಗಿದ್ದು, ನಮಗೆ ಇಲ್ಲಿಯೇ ಕಾಯಂ ನೆಲೆ ಕೊಡಿ ಎಂದು ಪಟ್ಟು ಹಿಡಿದಿದ್ದಾರೆ. ನೀವು ಈಗ ಹೇಳುತ್ತಿರುವುದರಿಂದ ಇಲ್ಲಿ ಯಾವುದೇ ಹಾಡಿ ಇರಲಿಲ್ಲ. ಇದಕ್ಕೆ ದಾಖಲೆಗಳು ಅರಣ್ಯ ಇಲಾಖೆ ಮಾತ್ರವಲ್ಲದೇ ಇತರೆ ಇಲಾಖೆಗಳಲ್ಲೂ ಇಲ್ಲ. ನೀವು ಮೂಲ ನಿವಾಸಿಗಳು ಆಗಿರಬಹುದು. ಆದರೆ ಆ ಪ್ರದೇಶದಲ್ಲಿ ನಿಮ್ಮ ಇರುವಿಕೆಗೆ ಯಾವುದೇ ದಾಖಲೆಗಳು ಇರದ ಕಾರಣಕ್ಕೆ ಇಲ್ಲಿ ಯಾವುದೇ ಕಾರಣಕ್ಕೂ ವಾಸಕ್ಕೆ ಅವಕಾಶ ಇಲ್ಲವೇ ಇಲ್ಲ. ಅಲ್ಲಿಂದ ನೀವು ತೆರವು ಮಾಡಿ ಎಂದು ಅರಣ್ಯ ಇಲಾಖೆಯವರು ಒಂದು ತಿಂಗಳಿನಿಂದ ಮನ ಒಲಿಸುತ್ತಲೇ ಇದ್ದಾರೆ. ಜೀವ ಹೋದರೂ ನಾವು ಅಲ್ಲಿಂದ ಹೋಗುವುದೇ ಇಲ್ಲ ಎಂದು ಜೇನುಕುರುಬರ ಕುಟುಂಬದವರು ಪಟ್ಟು ಹಿಡಿದಿದ್ದರೆ, ಹೊರಕ್ಕೆ ಬಾರದೇ ಇದ್ದರೆ ಒತ್ತಾಯಪೂರ್ವಕವಾಗಿ ತೆರವು ಮಾಡುವ ಸನ್ನಿವೇಶವೂ ಬರಬಹುದು ಎಂದು ಅರಣ್ಯ ಇಲಾಖೆಯವರು ಕಟ್ಟು ನಿಟ್ಟಿನ ಸೂಚನೆ ನೀಡುತ್ತಿದ್ದಾರೆ. ಇದು ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿದೆ.
ಮೈಸೂರಿನಿಂದ ಸುಮಾರು 100, ಮಡಿಕೇರಿಯಿಂದ 85 ಕಿ.ಮಿ, ನಾಗರಹೊಳೆಯಿಂದ 10 ಕಿ.ಮಿ ದೂರದಲ್ಲಿರುವ, ಕೇರಳದ ಗಡಿಗೆ ಒಂದೇ ಕಿ.ಮಿ ನಷ್ಟು ದೂರದಲ್ಲಿ ಹೊಂದಿಕೊಂಡಿರುವ ಬಾಳೆಕೋವು ಶಾಖೆಯ ಅತ್ತೂರು ಕೊಲ್ಲಿ ಅರಣ್ಯ ಪ್ರದೇಶ ಈಗ ವಿವಾದದ ಕೇಂದ್ರವಾಗಿದೆ. ಈ ಭಾಗದಲ್ಲಿ ಮಳೆಯ ಪ್ರಮಾಣವೂ ಅಧಿಕ.ಜತೆಗೆ ಆನೆ ಸಹಿತ ವನ್ಯಜೀವಿಗಳ ಪ್ರಮಾಣವೂ ಹೆಚ್ಚಿದೆ. ಇಲ್ಲಿ 40 ಕ್ಕೂ ಅಧಿಕ ಮಕ್ಕಳು, 50 ರಷ್ಟು ಹೆಣ್ಣು ಮಕ್ಕಳು, ವಯಸ್ಸಾದವರ ಸಹಿತ 53 ಕುಟುಂಬಗಳ ಮಂದಿ ಒಂದು ತಿಂಗಳಿನಿಂದ ಬೀಡು ಬಿಟ್ಟಿದಾರೆ. ಅಲ್ಲಿಯೇ ಮೂರ್ನಾಲ್ಕು ಟೆಂಟ್‌ಗಳನ್ನು ಹಾಕಿಕೊಂಡು ಸಾಮೂಹಿಕ ಬದುಕು ನಡೆಸುತ್ತಿದ್ದಾರೆ. ಒಟ್ಟಾಗಿ ಅಡುಗೆ, ಊಟ. ಮಕ್ಕಳಿಗೆ ಶಾಲೆಯೂ ಇಲ್ಲ. ಮಹಿಳೆಯರಿಗೆ ಕೆಲಸವೂ ಇಲ್ಲ. ಆದರೆ ಅವರು ಈ ಭಾಗದಲ್ಲಿ ನಾಲ್ಕು ದಶಕದ ಹಿಂದೆ ಇಲ್ಲಿ ವಾಸವಿದ್ದರು. ಆಗ ವಲಯ ಅರಣ್ಯಾಧಿಕಾರಿಯಾಗಿದ್ದ, ಕಳೆದ ವರ್ಷ ವಿಧಿವಶರಾದ ಕೆ.ಎಂ.ಚಿಣ್ಣಪ್ಪ ಅವರ ಸೂಚನೆಯಂತೆ ಅರಣ್ಯದಿಂದ ಹೊರ ಬಂದು ಕೊಡಗಿನ ಹಲವು ಭಾಗಗಳಲ್ಲಿ ಕೆಲಸ ಮಾಡಿಕೊಂಡು ಇದ್ದುದಾಗಿ ಹೇಳುತ್ತಾರೆ. ನಮಗೆ ಪುನರ್ವಸತಿ ಕಲ್ಪಿಸಿ ಎನ್ನುವ ಬೇಡಿಕೆಯನ್ನು ದಶಕದಿಂದ ಕೇಳುತ್ತಲೇ ಬಂದಿದ್ದಾರೆ.ಅರ್ಜಿ ಸ್ವೀಕರಿಸಿದ ಅರಣ್ಯ ಇಲಾಖೆಯವರು ಮಾತ್ರ ನೀವು ಇಲ್ಲಿ ಇದ್ದುದಕ್ಕೆ ಯಾವುದೇ ದಾಖಲೆಗಳು ಇಲ್ಲ. ಅಲ್ಲದೇ ಇಲ್ಲಿ ಹಾಡಿ ಇದ್ದ ಬಗ್ಗೆಯೂ ಎಲ್ಲೂ ದಾಖಲೆಗಳಿಲ್ಲ. ಅರಣ್ಯ ಇಲಾಖೆ ಮಾತ್ರವಲ್ಲ ಸಮಾಜ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ, ಸಮಗ್ರ ಗಿರಿಜನ ಅಭಿವೃದ್ದಿ ಇಲಾಖೆ, ಪಂಚಾಯತ್‌ರಾಜ್ ಇಲಾಖೆಯ ಬಳಿಯೂ ಯಾವುದೇ ಪುರಾವೆಗಳಿಲ್ಲ. ಈ ಕುರಿತು ಈ ಹಿಂದೆ ನಡೆಸಲಾದ ಸಮೀಕ್ಷೆಗಳ ವರದಿಗಳಲ್ಲೂ ಹಾಡಿ ಇರುವಿಕೆ ಮಾಹಿತಿ ಇಲ್ಲ. ಯಾವುದೇ ದಾಖಲೆಗಳಿಲ್ಲದೇ ನಿಮಗೆ ಪುನವರ್ಸತಿ ಕಷ್ಟ ಎಂದೇ ಅರಣ್ಯ ಇಲಾಖೆ ಹೇಳಿಕೊಂಡು ಬರುತ್ತಿದೆ. ಹೋರಾಟ ನಡೆಸುತ್ತಲೇ ಬಂದ ಜೇನುಕುರುಬರು ಕೊನೆಗೆ ತಿಂಗಳ ಹಿಂದೆ ತಮ್ಮ ಕುಟುಂಬದ ಸದಸ್ಯರು, ಸರಂಜಾಮುಗಳೊಂದಿಗೆ ಅರಣ್ಯ ಪ್ರವೇಶಿಸಿದ್ದಾರೆ. ಅಲ್ಲಿಯೇ ಸಮೀಕ್ಷೆ ನಡೆಸಿಕೊಂಡು ಸುಮಾರು ಐದು ನೂರು ಎಕರೆ ಪ್ರದೇಶವನ್ನು ಗುರುತು ಮಾಡಿಕೊಂಡು ಇಲ್ಲಿಯೇ ಬದುಕುತ್ತೇವೆ ಎಂದು ಹೇಳುತ್ತಿದ್ಧಾರೆ. ಇದು ಅರಣ್ಯ ಇಲಾಖೆಗೆ ತಲೆನೋವು ತಂದಿದೆ. ಸಂಘರ್ಷಕ್ಕೂ ದಾರಿಯಾಗಿದೆ.
ಈ ಕುರಿತು ಮಾಹಿತಿ ನೀಡುವ ನಾಗರಹೊಳೆ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜೆ.ಅನನ್ಯಕುಮಾರ್, ಹಲವು ವರ್ಷದಿಂದ ಇದು ನಡೆದುಕೊಂಡು ಬಂದಿದೆ. ಆರು ವರ್ಷದ ಹಿಂದೆ ಸುಪ್ರೀಂಕೋರ್ಟ್ ಸೂಚನೆ ನೀಡಿ ಪರಿಶಿಷ್ಟ ಪಂಗಡದವರ ಅರ್ಜಿಗಳನ್ನು ಅರಣ್ಯ ಹಕ್ಕುಗಳ ಕಾಯಿದೆಯಡಿ ಪುನರ್‌ಪರಿಶೀಲಿಸಿ ಎನ್ನುವ ಸೂಚನೆ ನೀಡಿತ್ತು. ಇದರಡಿ ಅತ್ತೂರು ಕೊಲ್ಲಿ ಭಾಗದವರು ನೀಡಿದ್ದ 44 ಕ್ಲೇಮುದಾರರ ಅರ್ಜಿ ಪರಿಶೀಲನೆ ಶುರು ಮಾಡಲಾಗಿತ್ತು. ಇದರಲ್ಲಿ ಒಬ್ಬರು ತೀರಿಕೊಂಡಿದ್ದರಿಂದ 43 ಕ್ಲೇಮುದಾರರಿಗೆ ದಾಖಲೆ ಸಲ್ಲಿಸಲು ಸೂಚಿಸಲಾಗಿತ್ತು. ಅವರು ನೀಡಿದ ದಾಖಲೆಯಲ್ಲಿ ಹಾಡಿ ಮಾಹಿತಿ, ಅಲ್ಲಿ ಇದ್ದ ಬಗ್ಗೆ ವಿವರಗಳೇ ಇರಲಿಲ್ಲ. ಇದನ್ನು ತಿರಸ್ಕರಿಸಿ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಅದರಂತೆ ಮಡಿಕೇರಿಯ ಉಪವಿಭಾಗೀಯ ಮಟ್ಟದಲ್ಲಿ ಮೇಲ್ಮನವಿ ಸಲ್ಲಿಸಿ ಅಲ್ಲಿಯೂ ತಿರಸ್ಕಾರವಾಗಿದೆ. ಇದರ ನಡುವೆ ಕಳೆದ ವರ್ಷ ಭೂಮಾಪನಾ ಇಲಾಖೆ ಹೊಸ ಅರ್ಜಿಗಳನ್ನು ಸೇರಿಸಿಕೊಂಡು ಅತ್ತೂರು ಕೊಲ್ಲಿಯಲ್ಲಿ ಸರ್ವೇ ನಡೆಸಿತ್ತು. ಅರಣ್ಯ ಇಲಾಖೆಯ ಈ ಸಂಬಂಧ ನಾಗರಹೊಳೆ ಮ್ಯಾನೇಜ್‌ಮೆಂಟ್ ಪ್ಲಾನ್, ಮೈಸೂರು ಕಾರ್ಯಯೋಜನೆ ವರದಿ, ಮೈಸೂರು ವಿವಿಯ ಪ್ರೊ.ರಮಣಯ್ಯ, ಡಾ.ನಾಗರಾಜು, ಅಶೋಕ ಅವರು ನಡೆಸಿದ್ದ ಸಮೀಕ್ಷೆಯಲ್ಲಿ ಎಲ್ಲೂ ಈ ಹಾಡಿಯ ಮಾಹಿತಿ ಇಲ್ಲ. ಇದರಿಂದ ಇಲ್ಲಿ ವ್ಯವಸಾಯ ನಡೆದಿಲ್ಲ.ಜನವಸತಿಯೂ ಇರಲಿಲ್ಲ ಎನ್ನುವ ವರದಿಯನ್ನು ನೀಡಲಾಗಿತ್ತು. ಇದರ ನಡುವೆಯೇ ಕುಟುಂಬದವರು ಅರಣ್ಯ ಪ್ರವೇಶಿಸಿ ಅಲ್ಲಿ ಟೆಂಟ್‌ಗಳನ್ನು ನಿರ್ಮಿಸಿಕೊಂಡು ವಿವಾದ ಉಂಟಾಗಿತ್ತು. ವೀರಾಜಪೇಟೆ ಶಾಸಕರಾದ ಎ.ಎಸ್.ಪೊನ್ನಣ್ಣ ಅವರ ಸೂಚನೆ ಮೇರೆಗೆ ಉಪವಿಭಾಗೀಯ ಹಂತದ ಸಮಿತಿ( SDLC) ಸಭೆ ನಡೆಸಲಾಗಿತ್ತು. ಅಲ್ಲಿಯೂ ಅರ್ಜಿ ತಿರಸ್ಕೃತಗೊಂಡು ಈಗ ಜಿಲ್ಲಾ ಮಟ್ಟದ ಸಮಿತಿಗೆ ಮೇಲ್ಮನವಿ ಸಲ್ಲಿಕೆಯಾಗಿದೆ. ಈ ವಾರವೇ ಸಮಿತಿ ಸಭೆಯೂ ಇರುವುದರಿಂದ ಅಲ್ಲಿ ತೀರ್ಮಾನವಾಗಿದೆ ಎಂದು ವಿವರಿಸುತ್ತಾರೆ.
ಇದರ ನಡುವೆ ಇದು ಹೋರಾಟದ ಸ್ವರೂಪ ಪಡೆದಿದೆ. ಜೇನುಕುರುಬರ ಜತೆಗೆ ಹೊರಗಡೆಯ ಕೆಲವು ಸ್ವಯಂ ಸೇವಾ ಸಂಘಟನೆಗಳವರು ಅತಿಕ್ರಮವಾಗಿ ಅರಣ್ಯ ಪ್ರವೇಶಿಸಿದ ಆರೋಪದ ಮೇಲೆ ಐವರ ವಿರುದ್ದ ಪ್ರಕರಣ ದಾಖಲಾಗಿದೆ. ಈ ವಿಚಾರವನ್ನು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಡಿಸಿಎಫ್ ಪಿ.ಎ.ಸೀಮಾ ಅವರು ಅರಣ್ಯ ಇಲಾಖೆ ಉನ್ನತ ಅಧಿಕಾರಿಗಳ ಗಮನಕ್ಕೂ ತಂದಿದ್ದಾರೆ. ಸರ್ಕಾರದ ನಿರ್ದೇಶನಕ್ಕಾಗಿ ಕಾಯಲಾಗುತ್ತಿದೆ ಎಂದು ಹೇಳುತ್ತಾರೆ.
ಆದರೆ ಅತ್ತೂರು ಕೊಲ್ಲಿ ಹಾಡಿಗೆ ಹೋಗಿ ಅಲ್ಲಿ ನೆಲೆಗೊಂಡಿರುವವರನ್ನು ವಿಚಾರಿಸಿದರೆ, ಅವರು ತಮ್ಮ ಕಷ್ಟಗಳನ್ನು ಹೇಳಿಕೊಳ್ಳುತ್ತಾರೆ. ಹಿಂದೆ ಬಿಟ್ಟು ಹೋದೆವು. ಲೈನ್ ಮನೆಗಳಲ್ಲಿದ್ದು ಕಾಫಿ ತೋಟಗಳಲ್ಲಿ ಕೆಲಸ ಮಾಡುತ್ತಿದ್ದವು. ಅಲ್ಲಿದ್ದುಕೊಂಡೇ ನಮ್ಮ ಹಕ್ಕು ಕೇಳುತ್ತಿದ್ದೆವು. ಅರ್ಜಿ ತಿರಸ್ಕಾರಗೊಂಡು ಏನೂ ಆಗದೇ ಇದ್ದಾಗ ನಮಗೆ ಬೇರೆಯೇ ದಾರಿ ಇಲ್ಲದೇ ಅರಣ್ಯ ಪ್ರವೇಶಿಸಿ ಇಲ್ಲಿಯೇ ಟೆಂಟ್ ಹಾಕಿಕೊಂಡು ಬದುಕುತ್ತಿದ್ದೇವೆ. ನಮ್ಮ ಭೂಮಿ ಹಂಚಿಕೊಂಡು ಮನೆ ಕಟ್ಟಿಕೊಂಡು ಇಲ್ಲಿಯೇ ಬದುಕುತ್ತೇವೆ. ಜೀವ ಹೋದರೂ ಇಲ್ಲಿಂದ ಹೋಗೋಲ್ಲ. ಇದು ನಮ್ಮದೇ ಕಾಡು. ನಮಗೆ ಇಲ್ಲಿ ಬದುಕುವ ಹಕ್ಕಿದೆ ಎಂದು ಸುಶೀಲಾ, ಸುಧಾ ಸಹಿತ ಹಲವರು ಹೇಳಿಕೊಳ್ಳುತ್ತಾರೆ.
ಎಲ್ಲ ರೀತಿಯಲ್ಲೂ ನಾವು ತಿಳುವಳಿಕೆ ನೀಡಿದ್ದೇವೆ. ಜಿಲ್ಲಾ ಹಂತದ ಸಮಿತಿ ಸಭೆಯಲ್ಲಿ ಈ ಕುರಿತು ಚರ್ಚೆಯಾಗಲಿದೆ. ಸದ್ಯದ ಮಟ್ಟಿಗೆ ಈಗ ಅವರನ್ನು ಅಲ್ಲಿಂದ ತೆರವು ಮಾಡುವುದೊಂದೇ ದಾರಿ ನಮ್ಮ ಮುಂದೆ ಇರುವುದು. ಅವರಿಗೆ ಬೇರೆಡೆ ಪುನರ್ವಸತಿ ಕಲ್ಪಿಸುವುದು, ಪರ್ಯಾಯ ಕ್ರಮ ಕೈಗೊಳ್ಳುವುದು ನಮ್ಮ ಹಂತದಲ್ಲಿ ಇಲ್ಲ.ಅದೇನಿದ್ದರೂ ಸರ್ಕಾರದ ಹಂತದಲ್ಲಿ ತೀರ್ಮಾನ ಆಗಬೇಕಿದೆ ಎನ್ನುತ್ತಾರೆ ನಾಗರಹೊಳೆ ಹುಲಿ ಯೋಜನೆ ನಿರ್ದೇಶಕಿ ಪಿ.ಎ.ಸೀಮಾ.