ಬೆಂಗಳೂರು ಹಳದಿ ಲೈನ್ ಮೆಟ್ರೋ ರೈಲು ಮತ್ತಷ್ಟು ಲೇಟ್; ಜುಲೈ ಅಂತ್ಯಕ್ಕೂ ಕಾರ್ಯಾರಂಭ ಅನುಮಾನ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಹಳದಿ ಲೈನ್ ಮೆಟ್ರೋ ರೈಲು ಮತ್ತಷ್ಟು ಲೇಟ್; ಜುಲೈ ಅಂತ್ಯಕ್ಕೂ ಕಾರ್ಯಾರಂಭ ಅನುಮಾನ

ಬೆಂಗಳೂರು ಹಳದಿ ಲೈನ್ ಮೆಟ್ರೋ ರೈಲು ಮತ್ತಷ್ಟು ಲೇಟ್; ಜುಲೈ ಅಂತ್ಯಕ್ಕೂ ಕಾರ್ಯಾರಂಭ ಅನುಮಾನ

ಬೆಂಗಳೂರಿನ ಯೆಲ್ಲೋ ಲೈನ್ ಮೆಟ್ರೋ ಯೋಜನೆ ಮತ್ತಷ್ಟು ವಿಳಂಬವಾಗಿದ್ದು, ಜುಲೈ ಅಂತ್ಯದ ಮೊದಲು ತೆರೆಯುವ ಸಾಧ್ಯತೆಯಿಲ್ಲ ಎಂದು ವರದಿಗಳು ತಿಳಿಸಿವೆ.

ಬೆಂಗಳೂರಿನ ಯೆಲ್ಲೋ ಲೈನ್ ಮೆಟ್ರೋ ಯೋಜನೆ
ಬೆಂಗಳೂರಿನ ಯೆಲ್ಲೋ ಲೈನ್ ಮೆಟ್ರೋ ಯೋಜನೆ (X/MetroRailNews)

ಬೆಂಗಳೂರು: ಬಹುನಿರೀಕ್ಷಿತ ಬೆಂಗಳೂರು ನಮ್ಮ ಮೆಟ್ರೋ ಹಳದಿ ಲೈನ್ ಜುಲೈ ತಿಂಗಳಿನಲ್ಲಿಯೂ ಕಾರ್ಯಾರಂಭ ಮಾಡುವುದು ಅನುಮಾನ ಎಂದು ವರದಿಗಳು ಹೇಳಿವೆ. ರೈಲು ಸಿಗ್ನಲಿಂಗ್ ವ್ಯವಸ್ಥೆ ಮತ್ತು ಸುರಕ್ಷತಾ ಮೌಲ್ಯಮಾಪನಗಳೊಂದಿಗಿನ ಸಮಸ್ಯೆಗಳು, ಯೋಜನೆ ಮತ್ತಷ್ಟು ವಿಳಂಬಕ್ಕೆ ಕಾರಣವಾಗಿದೆ. ನಮ್ಮ ಮೆಟ್ರೋ ಯೆಲ್ಲೋ ಲೈನ್, ಜುಲೈ ಅಂತ್ಯ ಅಥವಾ ಆಗಸ್ಟ್ ಮೊದಲು ಕಾರ್ಯಾರಂಭ ಮಾಡುವ ನಿರೀಕ್ಷೆಯಿತ್ತು. ಡೆಕ್ಕನ್ ಹೆರಾಲ್ಡ್ ವರದಿಯ ಪ್ರಕಾರ, ಆರ್. ವಿ. ರಸ್ತೆಯಿಂದ ಬೊಮ್ಮಸಂದ್ರವನ್ನು ಸಂಪರ್ಕಿಸುವ 19.15 ಕಿ.ಮೀ ಮಾರ್ಗವು ರೈಲು ಸಿಗ್ನಲಿಂಗ್ ವ್ಯವಸ್ಥೆಯಲ್ಲಿನ ಸಮಸ್ಯೆಗಳಿಂದಾಗಿ ಮತ್ತಷ್ಟು ವಿಳಂಬವಾಗಲಿದೆ.

ಸಿಗ್ನಲಿಂಗ್ ವ್ಯವಸ್ಥೆಗಳಿಗೆ ಸ್ವತಂತ್ರ ಸುರಕ್ಷತಾ ಮೌಲ್ಯಮಾಪನ ಅನುಮೋದನೆಗಳು ಬಾಕಿ ಇರುವ ಕಾರಣ ವಿಳಂಬವಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದ ಅಧಿಕಾರಿಗಳು ತಿಳಿಸಿದ್ದಾರೆ. ಯೆಲ್ಲೋ ಲೈನ್ ಸಿಗ್ನಲಿಂಗ್ ಗುತ್ತಿಗೆದಾರ ಸಂಸ್ಥೆ ಸೀಮೆನ್ಸ್ ಇಂಡಿಯಾ ಲಿಮಿಟೆಡ್‌ನ ಪರಿಶೀಲನಾ ಪ್ರಕ್ರಿಯೆಯ ಸಮಯದಲ್ಲಿ ಸಾಫ್ಟ್‌ವೇರ್ ಡೇಟಾದಲ್ಲಿ ಕೆಲವೊಂದು ಸಮಸ್ಯೆಗಳು ಕಾಣಿಸಿಕೊಂಡ ಕಾರಣ, ಸಂಚಾರ ಮತ್ತಷ್ಟು ವಿಳಂಬವಾಗಲಿದೆ.

ನಮ್ಮ ಮೆಟ್ರೋ ರೈಲು ಚಲನೆಯನ್ನು ಸಂಪೂರ್ಣವಾಗಿ ಸಾಫ್ಟ್‌ವೇರ್‌ನಿಂದ ನಿಯಂತ್ರಿಸಲಾಗುತ್ತದೆ. ಸಣ್ಣ ತಪ್ಪು ಕೂಡ ರೈಲು ಸಂಚಾರ ವ್ಯವಸ್ಥೆಗೆ ಅಡ್ಡಿಪಡಿಸುತ್ತದೆ ಎಂದು ಬಿಎಂಆರ್‌ಸಿಎಲ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಿಗ್ನಲ್ ಸಮಸ್ಯೆ ಜತೆಗೆ, ರೈಲು ಕೋಚ್ ಲಭ್ಯತೆಯ ಸಮಸ್ಯೆಗಳಿಂದಾಗಿ ಸಂಚಾರ ಆರಂಭ ಮತ್ತಷ್ಟು ತಡವಾಗಲಿದೆ. ಹಳದಿ ಮಾರ್ಗಕ್ಕೆ ರೋಲಿಂಗ್ ಸ್ಟಾಕ್ ಪೂರೈಸುತ್ತಿರುವ ಟಿಟಾಘರ್ ರೈಲ್ ಸಿಸ್ಟಮ್ಸ್ ಲಿಮಿಟೆಡ್ ನಿಗದಿತ ಸಮಯಕ್ಕಿಂತ ಮತ್ತಷ್ಟು ತಡವಾಗಿದೆ. ಮೆಟ್ರೋ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಆರು ರೈಲುಗಳ ಅಗತ್ಯವಿದ್ದು, ಆ ಪೈಕಿ ಮೂರು ರೈಲುಗಳು ಬಂದಿದ್ದು, ಚೀನಾದಿಂದ ಪೂರೈಕೆಯಾಗಿದೆ. ಜತೆಗೆ ಯೆಲ್ಲೋ ಲೈನ್‌ ಸಂಚಾರ ಆರಂಭಕ್ಕೆ ಈಗಾಗಲೇ ಹಲವು ಗಡುವು ವಿಧಿಸಿದ್ದರೂ, ಸಂಚಾರಕ್ಕೆ ಇನ್ನೂ ಯೋಗ ಕೂಡಿಬಂದಿಲ್ಲ.

Kiran Kumar I G

TwittereMail
ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in