ಬೆಂಗಳೂರು: ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ಪ್ರಸ್ತಾವನೆ, ಶೇ 15 ರಿಂದ 25ರ ತನಕ ಪ್ರಯಾಣ ದರ ಹೆಚ್ಚಳಕ್ಕೆ ಒಲವು
Namma Metro Fare Hike: ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್ ಪ್ರಯಾಣ ದರ ಏರಿಕೆ ಭಾನುವಾರ (ಜನವರಿ 5) ದಿಂದಲೇ ಜಾರಿಗೆ ಬರುತ್ತಿದೆ. ಇದರ ಬೆನ್ನಿಗೆ ಬೆಂಗಳೂರಿನ ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ಪ್ರಸ್ತಾವನೆ ಗಮನಸೆಳೆದಿದೆ. ಶೇ 15 ರಿಂದ 25ರ ತನಕ ಪ್ರಯಾಣ ದರ ಹೆಚ್ಚಳಕ್ಕೆ ಬಿಎಂಆರ್‌ಸಿಎಲ್ ಒಲವು ತೋರಿಸಿದ್ದಾಗಿ ಮೂಲಗಳು ತಿಳಿಸಿವೆ.
Namma Metro Fare Hike: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳು ಬಸ್ ಪ್ರಯಾಣ ದರ ಶೇಕಡ 15 ಏರಿಕೆ ಮಾಡಲು ತೀರ್ಮಾನ ತೆಗೆದುಕೊಂಡ ಬೆನ್ನಿಗೆ ಈಗ ಬೆಂಗಳೂರು ಮೆಟ್ರೋ ಪ್ರಯಾಣ ದರ ಏರಿಕೆಯ ಸುಳಿವು ಸಿಕ್ಕಿದೆ. ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ನಮ್ಮ ಮೆಟ್ರೋ ರೈಲು ಸೇವೆಯಲ್ಲಿ ಪ್ರಯಾಣ ದರ ಹೆಚ್ಚಳಕ್ಕೆ ಒಲವು ತೋರಿಸಿದೆ. ಶೀಘ್ರವೇ ಬೆಂಗಳೂರು ಮೆಟ್ರೋ ಸಂಚಾರವೂ ದುಬಾರಿಯಾಗಲಿದೆ. ವರದಿಗಳ ಪ್ರಕಾರ, ನಮ್ಮ ಮೆಟ್ರೋ ಶುಲ್ಕ ನಿಗದಿ ಸಮಿತಿ (ಎಫ್‌ಎಫ್‌ಸಿ) ಕೆಲವೇ ದಿನಗಳಲ್ಲಿ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ. ಶುಲ್ಕ ರಚನೆ ಮತ್ತು ಪರಿಷ್ಕರಣೆ ಹೊಣೆ ಹೊತ್ತುಕೊಂಡಿರುವ ಸಮಿತಿ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದು ಬಿಎಂಆರ್‌ಸಿಎಲ್ ಮೂಲಗಳು ತಿಳಿಸಿವೆ.
ನಮ್ಮ ಮೆಟ್ರೋ ಟಿಕೆಟ್ ದರ ಶೇ 15 ರಿಂದ 25ರ ತನಕ ಪ್ರಯಾಣ ದರ ಹೆಚ್ಚಳಕ್ಕೆ ಒಲವು
ನಮ್ಮ ಮೆಟ್ರೋ ಟಿಕೆಟ್ ದರವನ್ನು ಶೇಕಡ 15 ರಿಂದ ಶೇಕಡ 25 ರಷ್ಟು ಏರಿಸಬೇಕು ಎಂಬ ಆಲೋಚನೆಯಲ್ಲಿದೆ ಬಿಎಂಆರ್‌ಸಿಎಲ್. ಇದಕ್ಕೂ ಮೊದಲು 2017ರಲ್ಲಿ ನಮ್ಮ ಮೆಟ್ರೋ ಟಿಕೆಟ್ ದರ ಶೇಕಡ 10 ರಿಂದ ಶೇಕಡ 15ರಷ್ಟು ಹೆಚ್ಚಳವಾಗಿತ್ತು. ಅದಾದ ಬಳಿಕ ಟಿಕೆಟ್ ದರ ಪರಿಷ್ಕರಣೆ ಮಾಡಿರಲಿಲ್ಲ.
ಬಿಎಂಆರ್‌ಸಿಎಲ್ 15-25 ಪ್ರತಿಶತದಷ್ಟು ದರ ಏರಿಕೆಯನ್ನು ಆಲೋಚಿಸುತ್ತಿದೆ. ಇದು 2017 ರಲ್ಲಿ 10-15 ಶೇಕಡಾ ಹೆಚ್ಚಳದ ನಂತರ ಮೊದಲನೆಯದು. ಪ್ರಸ್ತುತ, ನಮ್ಮ ಮೆಟ್ರೋ ಟೋಕನ್ ದರವು ಕನಿಷ್ಠ 10 ರೂಪಾಯಿ, ಗರಿಷ್ಠ 60 ರೂಪಾಯಿ ಆಗಿದೆ. ಸ್ಮಾರ್ಟ್ ಕಾರ್ಡ್ ಬಳಕೆದಾರರಿಗೆ 5 ಪ್ರತಿಶತದಷ್ಟು ರಿಯಾಯಿತಿ ಲಭ್ಯವಿದೆ. ಈ ಹಿಂದೆ ಇದು ಶೇಕಡಾ 15 ಇತ್ತು. ಹೆಚ್ಚುತ್ತಿರುವ ಕಾರ್ಯಾಚರಣೆಯ ವೆಚ್ಚಗಳನ್ನು ಪರಿಹರಿಸಲು 2020 ರಲ್ಲಿ ರಿಯಾಯಿತಿಯನ್ನು ಶೇಕಡ 10 ಇಳಿಸಲಾಯಿತು ಎಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ಮೂಲಗಳು ತಿಳಿಸಿವೆ.
ಶುಲ್ಕ ನಿಗದಿ ಸಮಿತಿ (ಎಫ್‌ಎಫ್‌ಸಿ) ಭಾರತದಾದ್ಯಂತ ಮೆಟ್ರೋ ರೈಲು ಸೇವೆಯ ದರಗಳನ್ನು ನಿರ್ಧರಿಸುವ ಶಾಸನಬದ್ಧ ಸಂಸ್ಥೆಯಾಗಿದೆ. ಇದು ಅರೆ-ನ್ಯಾಯಾಂಗ ಅಧಿಕಾರವನ್ನು ಹೊಂದಿದ್ದು, ವಿಶೇಷವಾಗಿ ಮೆಟ್ರೋ ಕಾರ್ಯಾಚರಣೆಗಳು, ನಿರ್ವಹಣೆ ಮತ್ತು ಸಿಬ್ಬಂದಿಗೆ ಸಂಬಂಧಿಸಿದ ಹೆಚ್ಚುತ್ತಿರುವ ವೆಚ್ಚಗಳನ್ನು ಪರಿಗಣಿಸಿ ದರ ಪರಿಷ್ಕರಿಸುವ ಕೆಲಸ ಮಾಡುತ್ತದೆ. ಶುಲ್ಕ ನಿಗದಿ ಸಮಿತಿ (ಎಫ್‌ಎಫ್‌ಸಿ) ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಎಲ್ಲಾ ಪಾಲುದಾರರ ಸಲಹೆ ಸೂಚನೆಗಳನ್ನು ಪರಿಗಣಿಸುತ್ತದೆ. ಮೆಟ್ರೋ ಸೇವೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದಕ್ಕಾಗಿ, ಅದರ ನಿರ್ವಹಣೆ, ಸಿಬ್ಬಂದಿ ವೆಚ್ಚಗಳನ್ನೂ ಗಮನಿಸುತ್ತದೆ ಎಂದು ಮೂಲಗಳು ತಿಳಿಸಿವೆ.
ದರ ಪರಿಷ್ಕರಣೆ ಶಿಫಾರಸಿಗೆ ತ್ರಿಸದಸ್ಯ ಸಮಿತಿ
ಬೆಂಗಳೂರು ಮೆಟ್ರೋದ ಪ್ರಯಾಣ ದರವನ್ನು ಪರಿಶೀಲಿಸಲು ಮದ್ರಾಸ್ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರಾದ ನ್ಯಾಯಮೂರ್ತಿ ಆರ್.ಧರಣಿ ಅವರ ನೇತೃತ್ವದಲ್ಲಿ ಮೂವರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯಲ್ಲಿ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಸತ್ಯೇಂದ್ರ ಪಾಲ್ ಸಿಂಗ್ ಮತ್ತು ಕರ್ನಾಟಕದ ಮಾಜಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ. ರಮಣ ರೆಡ್ಡಿ ಇದ್ದಾರೆ. ಮೆಟ್ರೋ ರೈಲು ದರ ನಿಗದಿ ಸಮಿತಿಯೊಂದಿಗೆ ಶುಲ್ಕ ಪರಿಷ್ಕರಣೆಗಾಗಿ ತಮ್ಮ ಸಲಹೆಗಳನ್ನು ಹಂಚಿಕೊಳ್ಳುವಂತೆ ಬಿಎಂಆರ್‌ಸಿಎಲ್ ಅಕ್ಟೋಬರ್‌ನಲ್ಲಿ ನಾಗರಿಕರಲ್ಲಿ ಮನವಿ ಮಾಡಿತ್ತು. ಇದರ ಅಂತಿಮ ಗಡುವು ಅಕ್ಟೋಬರ್ 21 ಆಗಿತ್ತಾದರೂ ನಂತರ ವಾರದ ತನಕ ಅಂದರೆ ಅಕ್ಟೋಬರ್ 28ರ ತನಕ ವಿಸ್ತರಿಸಿತ್ತು.
ಬಿಎಂಆರ್‌ಸಿಎಲ್ ಅಧಿಕಾರಿಗಳ ಪ್ರಕಾರ, ತ್ರಿಸದಸ್ಯ ಸಮಿತಿಯು ಭಾರತದ ವಿವಿಧ ನಗರಗಳಲ್ಲಿ ಮತ್ತು ಅಂತರಾಷ್ಟ್ರೀಯವಾಗಿ ಪ್ರಯಾಣ ದರ ಪರಿಷ್ಕರಣೆಗೆ ಸಮರ್ಪಕ ವಿಧಾನವನ್ನು ಖಚಿತಪಡಿಸಿಕೊಳ್ಳಲು ಮೆಟ್ರೋ ದರಗಳ ಆಳ ಅಧ್ಯಯನವನ್ನು ನಡೆಸಿದೆ. ಸಮಿತಿಯ ಸಂಶೋಧನೆಗಳು ಮತ್ತು ಶಿಫಾರಸುಗಳನ್ನು ಸಮಗ್ರ ವರದಿಯಲ್ಲಿ ಪ್ರಸ್ತುತಪಡಿಸಲಿದ್ದು, ಶೀಘ್ರದಲ್ಲೇ ಸಲ್ಲಿಸುವ ನಿರೀಕ್ಷೆಯಿದೆ.
ವಿಭಾಗ