ಕನ್ನಡ ಸುದ್ದಿ  /  Karnataka  /  Namma Metro: Iisc Team Deployed For The Safety Of Construction Of Upcoming Three Metro Lines

Namma Metro: ಮುಂಬರುವ ಮೂರು ನಮ್ಮ ಮೆಟ್ರೋ ಮಾರ್ಗಗಳ ನಿರ್ಮಾಣದ ಸುರಕ್ಷತೆಗೆ ಐಐಎಸ್​​ಸಿ ತಂಡದ ನಿಯೋಜನೆ

ಮುಂಬರುವ ಮೂರು ಮಾರ್ಗಗಳ ನಿರ್ಮಾಣ ಸ್ಥಳಗಳಲ್ಲಿ ಸುರಕ್ಷತೆಗೆ ಸಂಬಂಧಿಸಿದ ಎಲ್ಲಾ ಅಂಶಗಳನ್ನು ಮೇಲ್ವಿಚಾರಣೆ ಮಾಡಲು ನಮ್ಮ ಮೆಟ್ರೋ ಸಂಸ್ಥೆ ( ಬಿ.ಎಂ.ಆರ್.ಸಿ.ಎಲ್) ಭಾರತೀಯ ವಿಜ್ಞಾನ ಸಂಸ್ಥೆಯ ( ಐ.ಐ.ಎಸ್.ಸಿ) ತಂಡವೊಂದನ್ನು ನಿಯೋಜಿಸಿದೆ.

ನಮ್ಮ ಮೆಟ್ರೋ ರೈಲು (ಸಂಗ್ರಹ ಚಿತ್ರ)
ನಮ್ಮ ಮೆಟ್ರೋ ರೈಲು (ಸಂಗ್ರಹ ಚಿತ್ರ)

ಬೆಂಗಳೂರು: ಮುಂಬರುವ ಮೂರು ಮಾರ್ಗಗಳ ನಿರ್ಮಾಣ ಸ್ಥಳಗಳಲ್ಲಿ ಸುರಕ್ಷತೆಗೆ ಸಂಬಂಧಿಸಿದ ಎಲ್ಲಾ ಅಂಶಗಳನ್ನು ಮೇಲ್ವಿಚಾರಣೆ ಮಾಡಲು ನಮ್ಮ ಮೆಟ್ರೋ ಸಂಸ್ಥೆ ( ಬಿ.ಎಂ.ಆರ್.ಸಿ.ಎಲ್) ಭಾರತೀಯ ವಿಜ್ಞಾನ ಸಂಸ್ಥೆಯ ( ಐ.ಐ.ಎಸ್.ಸಿ) ತಂಡವೊಂದನ್ನು ನಿಯೋಜಿಸಿದೆ.

ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಜೆ.ಎಂ.ಚಂದ್ರ ಕಿಶನ್, ಸುಸ್ಥಿರ ತಂತ್ರಜ್ಞಾನಗಳ ಕೇಂದ್ರದ ಸಹ ಪ್ರಾಧ್ಯಾಪಕ ಲಕ್ಷ್ಮೀನಾರಾಯಣ ರಾವ್ ಮತ್ತು ಮೂಲಸೌಕರ್ಯ, ಸುಸ್ಥಿರ ಸಾರಿಗೆ ಮತ್ತು ನಗರ ಯೋಜನೆ ಕೇಂದ್ರದಲ್ಲಿ ಈ ಹಿಂದೆ ಕೆಲಸ ಮಾಡಿದ ರಮೇಶ್ ಬಾಬು ನಾರಾಯಣಪ್ಪ ಪರಿಶೀಲನೆ ನಡೆಸಲಿದ್ದಾರೆ.

ಕಳೆದ ಬುಧವಾರದಿಂದಲೇ ಕೆಲಸ ಆರಂಭಿಸಿರುವ ತಂಡ 75 ದಿನಗಳಲ್ಲಿ ವರದಿ ನೀಡುವ ಸಾಧ್ಯತೆ ಇದೆ. ನಿರ್ಮಾಣ ಹಂತದಲ್ಲಿರುವ ಹೊರ ವರ್ತುಲ ರಸ್ತೆ ಮಾರ್ಗ (ಕೆಆರ್ ಪುರಂನಿಂದ ಸಿಲ್ಕ್ ಬೋರ್ಡ್), ವಿಮಾನ ನಿಲ್ದಾಣ ಮಾರ್ಗ (ಕೆಆರ್ ಪುರಂನಿಂದ ಕೆ.ಐ.ಎ) ಹಾಗೂ ಕಾಳೇನ ಅಗ್ರಹಾರದಿಂದ ನಾಗವಾರದವರೆಗಿನ ಸುರಂಗ ಕಾರಿಡಾರ್‌ಗಳನ್ನು ಮೂವರು ಸದಸ್ಯರ ತಂಡ ಪರಿಶೀಲಿಸಲಿದೆ ಎಂದು ಬಿ.ಎಂ.ಆರ್.ಸಿ.ಎಲ್ ಅಧಿಕಾರಿಗಳು ಹೇಳಿದ್ದಾರೆ.

ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳ ಪ್ರತಿಕ್ರಿಯೆ:

ಈ ಕುರಿತು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಪ್ರತಿಕ್ರಿಯಿಸಿ ಮೆಟ್ರೊ ನಿರ್ಮಾಣದ ಸ್ಥಳಗಳಲ್ಲಿ ಬ್ಯಾರಿಕೇಡಿಂಗ್ ಸೇರಿದಂತೆ ಎಲ್ಲ ಸುರಕ್ಷತಾ ಅಂಶಗಳನ್ನು ಪರಿಶೀಲಿಸುತ್ತೇವೆ. ನಾವು ಒದಗಿಸಿದ ಮಾರ್ಗಸೂಚಿಗಳನ್ನು ಅಧ್ಯಯನ ಮಾಡುತ್ತೇವೆ ಮತ್ತು ಗುತ್ತಿಗೆದಾರರು ಅವುಗಳನ್ನು ಅನುಸರಿಸುತ್ತಿದ್ದಾರೆಯೇ ಎಂದು ಚೆಕ್ ಮಾಡುತ್ತಿದ್ದೇವೆ. ಸೈಟ್‌ಗಳಲ್ಲಿ ಟ್ರಾಫಿಕ್ ದೃಶ್ಯ ಮತ್ತು ಹತ್ತಿರದ ಜಂಕ್ಷನ್‌ಗಳನ್ನು ಸಹ ವಿವರವಾಗಿ ಪರಿಶೀಲಿಸಲಾಗುವುದು ಎಂದಿದ್ದಾರೆ.

ಅವಘಡಕ್ಕೆ ಬಿ.ಎಂ.ಆರ್‌.ಸಿ.ಎಲ್‌ ಅಲರ್ಟ್:

ಕಳೆದ ಜನವರಿ 10ರಂದು ನಾಗವಾರದ ಬಳಿ ನಿರ್ಮಾಣ ಹಂತದಲ್ಲಿದ್ದ ಮೆಟ್ರೋ ಪಿಲ್ಲರ್ ವೊಂದು ಮಹಿಳೆ ಮತ್ತು ಆಕೆಯ ಮಗನ ಮೇಲೆ ಬಿದ್ದು ಸಾವನ್ನಪ್ಪಿದ್ದರು. ಅಲ್ಲದೆ ಬಿ.ಎಂ.ಆರ್‌.ಸಿ.ಎಲ್‌ನ ಬ್ಯಾರಿಕೇಡ್‌ಗಳು ಮತ್ತು ಸಿಂಕ್‌ಹೋಲ್‌ಗಳನ್ನು ಒಳಗೊಂಡ ಸಣ್ಣ ಅಪಘಾತಗಳು ಕಳೆದ ತಿಂಗಳು ಸಂಭವಿಸಿತ್ತು. ಇದು ಸಾರ್ವಜನಿಕವಾಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಬಿ.ಎಂ.ಆರ್.ಸಿ.ಎಲ್ ಈ ಉಪಕ್ರಮವನ್ನು ಕೈಗೊಂಡಿದೆ.

ಮೆಜೆಸ್ಟಿಕ್‌ ಮೆಟ್ರೊ ರೈಲು ನಿಲ್ದಾಣಕ್ಕೆ ಇನ್ನೂ ನಾಲ್ಕು ಮಹಡಿ ಸೇರ್ಪಡೆ

ಮೆಜೆಸ್ಟಿಕ್‌ಲ್ಲಿರುವ ಕೆಂಪೇಗೌಡ ಮೆಟ್ರೊ ನಿಲ್ದಾಣ ಇನ್ನಷ್ಟು ಆಕರ್ಷಕವಾಗಲಿದೆ. ಮೆಜೆಸ್ಟಿಕ್‌ ಮೆಟ್ರೊ ನಿಲ್ದಾಣದ ಮೇಲೆ ಇನ್ನೂ ಹೊಸ ನಾಲ್ಕು ಮಹಡಿಗಳನ್ನು ನಿರ್ಮಿಸಲು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್‌ ಲಿಮಿಟೆಡ್‌ (ಬಿಎಂಆರ್‌ಸಿಎಲ್‌) ನಿರ್ಧರಿಸಿದೆ ಎಂದು ವರದಿಗಳು ತಿಳಿಸಿವೆ. ಸಾರ್ವಜನಿಕ-ಖಾಸಗಿ ಪಾಲುದಾರಿಕೆಯಲ್ಲಿ ನಾಲ್ಕು ಹೆಚ್ಚುವರಿ ಮಹಡಿಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಬೆಂಗಳೂರಿನಲ್ಲಿ 55 ಕಿ.ಮೀ. ಮೆಟ್ರೊ ಲೈನ್‌ ಹೊಂದಿರುವ ಬಿಎಂಆರ್‌ಸಿಎಲ್‌ ಇದೀಗ ಮೆಜೆಸ್ಟಿಕ್‌ ಮೆಟ್ರೊ ನಿಲ್ದಾಣಕ್ಕೆ ನಾಲ್ಕು ಹೆಚ್ಚುವರಿ ಮಹಡಿಗಳನ್ನು ನಿರ್ಮಿಸಲಿದೆ. ಈ ಮೂಲಕ ವಾಣಿಜ್ಯ ಆದಾಯ ಹೆಚ್ಚಿಸಿಕೊಳ್ಳಲು ಉದ್ದೇಶಿಸಿದೆ. ಹೊಸ ನಾಲ್ಕು ಮಹಡಿಗಳಲ್ಲಿ ಆಫೀಸ್‌ ಸ್ಥಳಾವಕಾಶ, ಮಾಲ್‌ಗಳು, ಥಿಯೇಟರ್‌ಗಳು, ವಾಣಿಜ್ಯ ಮಳಿಗೆಗಳು ಇರಲಿವೆ. ಈ ಮೂಲಕ ಆದಾಯ ಬಾಚಿಕೊಳ್ಳಲು ಬಿಎಂಆರ್‌ಸಿಎಲ್‌ ನಿರ್ಧರಿಸಿದೆ.

IPL_Entry_Point