ನಂದಿ ಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶಕ್ಕೆ ನಿಷೇಧ; ಬೆಟ್ಟದ ಬುಡದಿಂದ ಬಸ್‌ ಸಂಚಾರ ವ್ಯವಸ್ಥೆಗೆ ಚಿಂತನೆ
ಕನ್ನಡ ಸುದ್ದಿ  /  ಕರ್ನಾಟಕ  /  ನಂದಿ ಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶಕ್ಕೆ ನಿಷೇಧ; ಬೆಟ್ಟದ ಬುಡದಿಂದ ಬಸ್‌ ಸಂಚಾರ ವ್ಯವಸ್ಥೆಗೆ ಚಿಂತನೆ

ನಂದಿ ಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶಕ್ಕೆ ನಿಷೇಧ; ಬೆಟ್ಟದ ಬುಡದಿಂದ ಬಸ್‌ ಸಂಚಾರ ವ್ಯವಸ್ಥೆಗೆ ಚಿಂತನೆ

ನಂದಿ ಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶವನ್ನು ನಿಷೇಧಿಸಿ, ಬೆಟ್ಟದ ಬುಡದಿಂದ ಬಸ್‌ ಸಂಚಾರ ವ್ಯವಸ್ಥೆಗೆ ಯೋಜನೆ ರೂಪಿಸಲಾಗುತ್ತಿದೆ. ಈ ಮಧ್ಯೆ ರೋಪ್‌ ವೇ ಯೋಜನೆ ಭರದಿಂದ ಸಾಗಿದೆ. (ವರದಿ: ಎಚ್.ಮಾರುತಿ)

ನಂದಿ ಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶಕ್ಕೆ ನಿಷೇಧ
ನಂದಿ ಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶಕ್ಕೆ ನಿಷೇಧ

ಚಿಕ್ಕಬಳ್ಳಾಪುರ: ನಂದಿ ಗಿರಿಧಾಮಕ್ಕೆ ರೋಪ್ ವೇ ಯೋಜನೆ ಭರದಿಂದ ಸಾಗಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಕೆಲವೇ ತಿಂಗಳಲ್ಲಿ ನಂದಿ ಬೆಟ್ಟಕ್ಕೆ ಖಾಸಗಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗುತ್ತದೆ. ನಂದಿ ಬೆಟ್ಟದ ಮೇಲಿನ ಎರಡು ಎಕರೆ ಭೂಮಿಯನ್ನು ರೋಪ್‌ ವೇನ ಯುಟಿಪಿ (ಅಪ್ಪರ್ ಟರ್ಮಿನಲ್ ಪಾಯಿಂಟ್‌) ನಿರ್ಮಾಣಕ್ಕೆ ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸಲು ತೋಟಗಾರಿಕಾ ಇಲಾಖೆ ಸಿದ್ದವಾಗಿದೆ. ಯುಟಿಪಿ ನಿರ್ಮಾಣ ಆರಂಭವಾದರೆ ಖಾಸಗಿ ವಾಹನಗಳ ಪಾರ್ಕಿಂಗ್‌ ಗೆ ಸ್ಥಳಾವಕಾಶ ಇಲ್ಲವಾಗುತ್ತದೆ.

ಒಮ್ಮೆ ಎರಡು ಎಕರೆ ಭೂಮಿ ಹಸ್ತಾಂತರವಾದರೆ ಪಾರ್ಕಿಂಗ್‌ ಸ್ಥಳಾವಕಾಶ ಮೂರನೇ ಒಂದು ಭಾಗಕ್ಕೆ ಕುಸಿಯುತ್ತದೆ. ಇದರಿಂದ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ಬೆಟ್ಟದ ಬುಡದಿಂದ ಕರೆತರಲು ಮತ್ತು ಬಿಡಲು ಬಸ್‌ ವ್ಯವಸ್ಥೆ ಕಲ್ಪಿಸಲು ಚಿಂತನೆ ನಡೆಸಲಾಗಿದೆ ಎಂದರು.

ನಾನು ಭಾನುವಾರ ಬೆಳಗ್ಗೆ 5.15 ಕ್ಕೆ ಭೇಟಿ ನೀಡಿದಾಗ ಸುಮಾರು 1,100 ದ್ವಿಚಕ್ರ ಮತ್ತು 500 ಕಾರುಗಳಿದ್ದವು. ಕೆಲವು ಪ್ರವಾಸಿಗರು ತಡರಾತ್ರಿ 2.30 ಕ್ಕೆ ಆಗಮಿಸಲು ಆರಂಭಿಸುತ್ತಾರೆ. ಚಳಿಗಾಲದಲ್ಲೂ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಆದ್ದರಿಂದ ವಾಹನಗಳ ಪಾರ್ಕಿಂಗ್‌ ಗೆ ನಂದಿ ಬೆಟ್ಟದಿಂದ ನಾಲ್ಕು ಕಿಮೀ ದೂರದಲ್ಲಿ 20 ಎಕರೆ ಭೂಮಿಯನ್ನು ಗುರುತಿಸಲಾಗಿದೆ. ಈ ಭೂಮಿ ದೇವನಹಳ್ಳಿ ಮುಖ್ಯ ರಸ್ತೆಯಲ್ಲೇ ಇದೆ. ಅಲ್ಲಿ ವಾಹನಗಳನ್ನು ನಿಲ್ಲಿಸಿ ಬಸ್‌ ಗಳಲ್ಲಿ ಬೆಟ್ಟದ ಮೇಲಕ್ಕೆ ಬರಬಹುದು ಎಂದು ಸಚಿವರು ಹೇಳಿದ್ದಾರೆ.

ಚಾಮರಾಜನಗರ ಜಿಲ್ಲೆಯ ಹಿಮವದ್‌ ಗೋಪಾಲಸ್ವಾಮಿ ಬೆಟ್ಟದಲ್ಲೂ ಇದೇ ಮಾದರಿಯನ್ನು ಅನುಸರಿಸಲಾಗುತ್ತಿದೆ. ಮುಳ್ಳಯ್ಯನಗಿರಿ ಬೆಟ್ಟಕ್ಕೂ ಇದೇ ವ್ಯವಸ್ಥೆಯನ್ನು ಕಲ್ಪಿಸಲು ಚಿಕ್ಕಮಗಳೂರು ಜಿಲ್ಲಾಡಳಿತ ನಿರ್ಧರಿಸಿದೆ. ಶೀಘ್ರದಲ್ಲೇ ಮುಖ್ಯ ಕಾರ್ಯದರ್ಶಿಗಳು ಮತ್ತು ಪ್ರವಾಸೋದ್ಯಮ ಸಚಿವರನ್ನು ಭೇಟಿಯಾಗಿ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.

ನಂದಿ ಗಿರಿಧಾಮಕ್ಕೆ ರೂಪಿಸುತ್ತಿರುವ ರೋಪ್ ವೇ ಕಾಮಗಾರಿಯನ್ನು ಸಚಿವರು ಪರಿಶೀಲಿಸಿದರು. ಎಲ್‌ಟಿಪಿ (ಲೋಯರ್ ಟರ್ಮಿನಲ್ ಪಾಯಿಂಟ್), ಯುಟಿಪಿ (ಅಪ್ಪರ್ ಟರ್ಮಿನಲ್ ಪಾಯಿಂಟ್‌) ಗಳ ಪ್ರಗತಿ ಕುರಿತು ಮಾಹಿತಿ ಪಡೆದರು.

ಮುಂದಿನ ದಿನಗಳಲ್ಲಿ ಬೆಂಗಳೂರು ವಿಭಾಗದ ಸಚಿವ ಸಂಪುಟ ಸಭೆಯು ನಂದಿಗಿರಿಧಾಮದಲ್ಲಿ ನಡೆಯಲಿದೆ. ಆಗ ಇಲ್ಲಿ ಯಾವ ರೀತಿಯ ವ್ಯವಸ್ಥೆಗಳನ್ನು ಮಾಡಿಕೊಳ್ಳಬಹುದು. ಎಲ್ಲಿ ಸಭೆ ಮಾಡಬಹುದು ಎನ್ನುವ ಬಗ್ಗೆಯೂ ಸಚಿವ ಸುಧಾಕರ್‌ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ವಿಶೇಷವಾಗಿ ವಾರಾಂತ್ಯದ ದಿನಗಳಲ್ಲಿ ಬೆಟ್ಟದಲ್ಲಿ ಸಂಚಾರ ದಟ್ಟಣೆ ಎದುರಾಗುತ್ತದೆ. ಈ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಯಾವ ಕ್ರಮಗಳನ್ನು ಕೈಗೊಳ್ಳಬಹುದು ಎನ್ನುವುದನ್ನು ಪ್ರಮುಖವಾಗಿ ಚರ್ಚಿಸಿದರು.

ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ರಾಜೇಂದ್ರ, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ಪಂಚಾಯಿತಿ ಸಿಇಒ ಪ್ರಕಾಶ್ ನಿಟ್ಟಾಲಿ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಯಶವಂತ್ ಹಾಗೂ ಅಧಿಕಾರಿಗಳು ಹಾಜರಿದ್ದರು.

ನಂದಿ ಬೆಟ್ಟಕ್ಕೆ ವಾಹನಗಳ ನಿಷೇಧ ಹೇರುತ್ತಿರುವುದು ಇದೇ ಮೊದಲೇನಲ್ಲ. ಹಲವು ವರ್ಷಗಳಿಂದ ವಿಶೇಷವಾಗಿ ವಾರಾಂತ್ಯ ಮತ್ತು ರಜಾ ದಿನಗಳಲ್ಲಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರುತ್ತಾ ಬರಲಾಗಿದೆ. ಬೆಟ್ಟಕ್ಕೆ ಕೇಬಲ್‌ ಕಾರ್‌ ವ್ಯವಸ್ಥೆ ಕುರಿತೂ ಚಿಂತನೆ ನಡೆದಿತ್ತು. ಬೆಂಗಳೂರಿಗೆ ಕೇವಲ 60 ಕಿಮೀ ದೂರದಲ್ಲಿರುವ ಈ ಪ್ರವಾಸಿ ತಾಣಕ್ಕೆ ಸಹಜವಾಗಿಯೇ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುತ್ತದೆ.

ವರದಿ: ಎಚ್.ಮಾರುತಿ

ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in